ನ.11, 12, 13ರಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನ
Team Udayavani, Oct 7, 2022, 3:37 PM IST
ದಾವಣಗೆರೆ: ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ನಡೆಯಬೇಕಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕವನ್ನು ಪದೇ ಪದೇ ಮುಂದೂಡುತ್ತಿರುವುದು ಹಾಗೂ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತದೆಯೋ ಇಲ್ಲವೋ ಎಂದು ಪರಿಷತ್ ಅಧ್ಯಕ್ಷ ಡಾ|ಮಹೇಶ್ ಜೋಶಿ ಅವರೇ ಸ್ವತಃ ಸಂಶಯ ವ್ಯಕ್ತಪಡಿಸಿದ್ದರಿಂದ ಉಂಟಾಗಿರುವ ಅನಿಶ್ಚಿತತೆ ದೂರ ಮಾಡಲು ಕಸಾಪ ಮುಂದಾಗಿದ್ದು ಇದಕ್ಕಾಗಿ ಅ.7ರಂದು ಬೆಂಗಳೂರಿನ ಕಸಾಪ ಕಚೇರಿಯಲ್ಲಿ ಕೇಂದ್ರ ಸಮಿತಿ ಸಭೆ ಆಯೋಜಿಸಿದೆ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೇಕಾದ ಸಿದ್ಧತೆ ಪೂರ್ಣ ಪ್ರಮಾಣದಲ್ಲಿ ಆಗದೇ ಇರುವುದರಿಂದ ಹಾಗೂ ಈವರೆಗೂ ಮಳೆ ಕೂಡ ಬೀಳುತ್ತಲೇ ಇರುವುದರಿಂದ ಈಗಾಗಲೇ ನಿಗದಿಪಡಿಸಿರುವ ನ.11, 12 ಹಾಗೂ 13ರಂದು ಸಮ್ಮೇಳನ ಮಾಡಲು ಸಾಧ್ಯವೇ ಇಲ್ಲ. ಈ ಬಾರಿ ಮತ್ತೆ ಸಮ್ಮೇಳನ ದಿನಾಂಕ ಮುಂದೂಡುವುದು ಅನಿವಾರ್ಯವಾಗಿದೆ. ಸಮ್ಮೇಳನದ ದಿನಾಂಕವನ್ನು ಹೀಗೆಯೇ ಮುಂದೂಡಲು ಬಿಡದೆ ಶತಾಯಗತಾಯ ಪ್ರಸಕ್ತ ವರ್ಷದಲ್ಲಿಯೇ ಸಮ್ಮೇಳನ ನಡೆಸುವಂತಾಗಬೇಕು. ಡಿಸೆಂಬರ್ ಅಂತ್ಯದಲ್ಲಾದರೂ ಎಲ್ಲ ಸಿದ್ಧತೆ ಮಾಡಿಕೊಂಡು, ಯಶಸ್ವಿ ಸಮ್ಮೇಳನ ನಡೆಸುವಂತಾಗಬೇಕು. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಬೇಕು ಎಂಬ ಬಗ್ಗೆ ಕಸಾಪ ಕೇಂದ್ರ ಸಮಿತಿ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.
ಸಮ್ಮೇಳನ ವಿಳಂಬದ ಬಗ್ಗೆ ಕಸಾಪ ಅಧ್ಯಕ್ಷರು ಮಾಧ್ಯಮಗಳಿಗೆ ನೀಡಿದ ಹೇಳಿಕೆ ಬಗ್ಗೆಯೂ ಕಸಾಪ ಕೇಂದ್ರ ಸಮಿತಿ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿ, ಬಹಿರಂಗ ಹೇಳಿಕೆ ನೀಡಿದ್ದು ಸರಿಯೋ ಅಥವಾ ತಪ್ಪೋ ಎಂಬ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ.
ಏನೇನು ಆಗಬೇಕು?: ಸಮ್ಮೇಳನ ಡಿಸೆಂಬರ್‌ಅಂತ್ಯದಲ್ಲಿ ನಡೆಸುವುದಾದರೆ ಎರಡೂವರೆ ತಿಂಗಳಲ್ಲಿ ಸಮ್ಮೇಳನಕ್ಕೆ ಬೇಕಾದ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಮೊದಲು ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಸಮಿತಿಯ ಸಭೆ ಕರೆದು ಸಮ್ಮೇಳನ ಸಿದ್ಧತೆ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದೆ. ಈ ಸಭೆಯಲ್ಲಿ ಈಗಾಗಲೇ ರಚಿಸಿರುವ 19 ಉಪಸಮಿತಿಗಳಿಗೆ ಅನುಮೋದನೆ ನೀಡಿ, ಜವಾಬ್ದಾರಿ ನಿರ್ವಹಣೆಗೆ ನಿರ್ದೇಶನ ನೀಡಬೇಕಾಗಿದೆ. ಸಮ್ಮೇಳನಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ 20 ಕೋಟಿ ರೂ. ಅನುದಾನ ಘೋಷಿಸಿದ್ದು ಹಂತ ಹಂತವಾಗಿಯಾದರೂ ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕಾಗಿದೆ. ಜತೆಗೆ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಬೇಕಿದೆ.
ಸಮ್ಮೇಳನಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದ್ದು ಅದನ್ನು ಸ್ವತ್ಛಗೊಳಿಸಿ, ಸಮತಟ್ಟು ಮಾಡಿ ಅಲ್ಲಿ ಕುಡಿಯುವ ನೀರಿಗಾಗಿ 10ಕ್ಕೂ ಹೆಚ್ಚು ಕೊಳವೆಬಾವಿ, ಮೂರು ಭವ್ಯ ವೇದಿಕೆ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಬೇಕಾಗಿದೆ. ಇನ್ನು ಸಮ್ಮೇಳನ ನಡೆಯುವ ಹಾವೇರಿ ಸಂಪರ್ಕಿಸುವ ಎಲ್ಲ ದಿಕ್ಕುಗಳ ಐದು ಕಿಮೀ ವ್ಯಾಪ್ತಿಯ ರಸ್ತೆ ಹಾಗೂ ವಸತಿ ವ್ಯವಸ್ಥೆ ಮಾಡಿದ ಹಾಸ್ಟೆಲ್ ಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಬೀದಿ ದೀಪದ ವ್ಯವಸ್ಥೆಗೆ ಕ್ರಮ ವಹಿಸಬೇಕಾಗಿದೆ. ಸಮ್ಮೇಳನಕ್ಕೆ ಬರುವವರಿಗಾಗಿ ಕಳೆದ ವರ್ಷವೇ ಹಾವೇರಿ ನಗರ, ಹಾವೇರಿ ಜಿಲ್ಲೆಯ ತಾಲೂಕು ಕೇಂದ್ರಗಳು ಸೇರಿದಂತೆ ಪಕ್ಕದ ದಾವಣಗೆರೆ, ಹುಬ್ಬಳ್ಳಿಗಳಲ್ಲಿಯೂ ಹೋಟೆಲ್, ಪ್ರವಾಸಿಗೃಹ, ವಿದ್ಯಾರ್ಥಿನಿಲಯ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ಅಲ್ಲಿಂದ ಗಣ್ಯರನ್ನು ಸಕಾಲಕ್ಕೆ ಕರೆತರಲು ವಾಹನ ವ್ಯವಸ್ಥೆ ಮಾಡಲು ಸಹ ಆಲೋಚಿಸಲಾಗಿದೆ. ಈ ಕುರಿತು ಮತ್ತೂಮ್ಮೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಅಂತಿಮಗೊಳಿಸುವುದು ಬಾಕಿ ಇದೆ.
ಈವರೆಗೆ ಆಗಿದ್ದೇನು?: ಸಮ್ಮೇಳನವನ್ನು ಕಳೆದ ವರ್ಷ ಫೆಬ್ರುವರಿಯಲ್ಲಿಯೇ ನಡೆಯಬಹುದು ಎಂಬ ಕಾರಣಕ್ಕಾಗಿ ಆಗಲೇ ಅಗತ್ಯ ಎಲ್ಲ ಯೋಜನೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಅದರ ಅನುಷ್ಠಾನಕ್ಕೆ ಚಾಲನೆ ಸಿಕ್ಕಿಲ್ಲ. ಈಗಾಗಲೇ ಸಮ್ಮೇಳನಕ್ಕಾಗಿ ಸ್ಥಳ ಗುರುತಿಸುವ ಕಾರ್ಯ ಆಗಿದೆ.
ಇದು 86ನೇ ಸಮ್ಮೇಳನವಾಗಿರುವುದರಿಂದ ಸಮ್ಮೇಳನದಲ್ಲಿ 86 ಪುಸ್ತಕಗಳನ್ನು ಬಿಡುಗಡೆ ಮಾಡಲು ಕಸಾಪ ಈಗಾಗಲೇ ನಿರ್ಧರಿಸಿದೆ. ಆ ಪ್ರಕಾರ ಈಗಾಗಲೇ 50 ಸಾಹಿತ್ಯ ಪುಸ್ತಕಗಳ ಮರು ಮುದ್ರಣ ಹಾಗೂ ಎಲ್ಲ ಜಿಲ್ಲೆಯ ಸಾಹಿತ್ಯ ಕುರಿತ ಪುಸ್ತಕ ರಚಿಸುವ ಕಾರ್ಯ ಪ್ರಗತಿಯಲ್ಲಿದ್ದು, ಇದರಲ್ಲಿ 20 ಪುಸ್ತಕಗಳು ಸಿದ್ಧವಾಗಿವೆ. ಅದೇ ರೀತಿ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳುವ ಸಂಪುಟ ರಚನೆ ಹಾಗೂ ಸ್ಮರಣಸಂಚಿಕೆ ತಯಾರಿ ಕಾರ್ಯವೂ ನಡೆದಿದೆ. ಸಮ್ಮೇಳನದಲ್ಲಿ ಒಂದು ಮುಖ್ಯ ವೇದಿಕೆ, ಎರಡು ಸಮಾನಾಂತರ ವೇದಿಕೆಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು ಅಂದಾಜು ವಿವಿಧ 40 ಗೋಷ್ಠಿ ನಡೆಸಲು ಹಾಗೂ ಅದಕ್ಕೆ ಬೇಕಾದ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ಆಗಿದೆ.
ಹಾವೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಇನ್ನಷ್ಟು ವಿಳಂಬ ಬೇಡ ಎಂದು “ಉದಯವಾಣಿ’ ಅ.4ರ ಸಂಪಾದಕೀಯದ ಮೂಲಕ ಆಶಯ ವ್ಯಕ್ತಪಡಿಸಿತ್ತು. ಇದಕ್ಕೆ ಪೂರಕ ಎಂಬಂತೆ ಕಸಾಪ ಸಮಿತಿ ಸಭೆ ನಡೆಯುತ್ತಿದ್ದು, ಇಲ್ಲಿಯ ಚರ್ಚೆ, ನಿರ್ಣಯಗಳು ಭಾರೀ ಕುತೂಹಲ ಕೆರಳಿಸಿವೆ.
ಕುತೂಹಲ ಕೆರಳಿಸಿದ ಸಿಎಂ ನಡೆ
ಕಸಾಪ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ|ಮಹೇಶ್ ಜೋಶಿ ಸಮ್ಮೇಳನ ವಿಳಂಬದ ಹಿನ್ನೆಲೆಯಲ್ಲಿ ನೀಡಿದ ಹೇಳಿಕೆ ಸಿಎಂ ಹಾಗೂ ರಾಜ್ಯ ಸರ್ಕಾರಕ್ಕೆ ಮುಜುಗರಕ್ಕೀಡು ಮಾಡಿರುವ ಬಗ್ಗೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಸಮ್ಮೇಳನ ಸಿಎಂ ತವರು ಜಿಲ್ಲೆಯಲ್ಲೇ ನಡೆಯುವುದರಿಂದ ಜೋಶಿ ಅವರ ಹೇಳಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಯಾವ ರೀತಿ ಸೀÌಕರಿಸುತ್ತಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಆರೋಪ ಮುಕ್ತಕ್ಕೂ ಪ್ರಯತ್ನ
ಮುಂದಿನ 2023ನೇ ವರ್ಷ ಚುನಾವಣಾ ವರ್ಷವಾಗಿದ್ದು ಆ ವರ್ಷಕ್ಕೆ ಸಮ್ಮೇಳನ ಮುಂದೂಡಿದರೆ ಸಾಹಿತ್ಯ ಸಮ್ಮೇಳನ ರಾಜಕೀಯ ಸಮ್ಮೇಳನದ ಆರೋಪಕ್ಕೆ ಗುರಿ ಆಗಬೇಕಾಗುತ್ತದೆ. ಆದ್ದರಿಂದ ಸಾಹಿತ್ಯ ಸಮ್ಮೇಳನವನ್ನು ಪ್ರಸಕ್ತ ವರ್ಷ ಡಿಸೆಂಬರ್ ಒಳಗೇ ನಡೆಸಲು ಪ್ರಯತ್ನ ಪಡಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಹಾವೇರಿ ಸಾಹಿತ್ಯ ಸಮ್ಮೇಳನ ಕುರಿತು ಚರ್ಚಿಸಲು ಅ.7ರಂದು ಬೆಳಗ್ಗೆ 10.30ಕ್ಕೆ ಕಸಾಪ ಕೇಂದ್ರ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಸಮ್ಮೇಳನ ನಡೆಸಲು ಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ. –ಎಚ್.ಬಿ. ಲಿಂಗಯ್ಯ, ಜಿಲ್ಲಾಧ್ಯಕ್ಷರು, ಕಸಾಪ, ಹಾವೇರಿ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.