ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮೊದಲ ಕೇಂದ್ರ
ಬೋಳ್ಳೋಡಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣ ಕೇಂದ್ರ
Team Udayavani, Oct 8, 2022, 12:13 PM IST
ಸಾಂದರ್ಭಿಕ ಚಿತ್ರ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮೊತ್ತಮೊದಲ ಸಮಗ್ರ ಘನ ತ್ಯಾಜ್ಯ ನಿರ್ವಹಣ ಕೇಂದ್ರ ಪುತ್ತೂರು ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿದೆ. ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಿಂಗಳಾಡಿ ಸಮೀಪದ ಬೋಳ್ಳೋಡಿ ಎಂಬಲ್ಲಿ 5 ಟನ್ ಸಾಮರ್ಥ್ಯದ ಘಟಕ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ. ಮುಂದಿನ 6 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳಿಸುವ ಗುರಿ ಇರಿಸಲಾಗಿದೆ.
ಮೂರು ತಾಲೂಕಿನ ವ್ಯಾಪ್ತಿ
ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳ ಪ್ರತೀ ಗ್ರಾ.ಪಂ.ಗಳಿಂದ ಒಣ ಕಸವನ್ನು ಸಂಗ್ರಹಿಸಿ ಮರುಬಳಕೆ ಮಾದರಿಗೆ ಪರಿವರ್ತಿಸಿ ಬೇರೆ ಬೇರೆ ಕಡೆಯ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಘಟಕದಿಂದಾಗಿ ಯಾವುದೇ ರೀತಿಯ ಪರಿಸರ ಮಾಲಿನ್ಯವಾಗಲಿ, ವಾಸನೆ ಸಮಸ್ಯೆ ಇಲ್ಲದೆ ಇರುವ ಕಾರಣ ಯಾವುದೇ ಆಕ್ಷೇಪಣೆ ಬಂದಿಲ್ಲ. ಕಾರ್ಕಳದ ನಿಟ್ಟೆಯಲ್ಲಿ ನಿರ್ಮಾಣವಾಗಿರುವ ಘಟಕವನ್ನು ಕೆದಂಬಾಡಿ ಗ್ರಾ.ಪಂ. ನಿಯೋಗ ಮತ್ತು ಬೋಳ್ಳೋಡಿ ಪರಿಸರದ ಜನ ಖುದ್ದಾಗಿ ಪರಿಶೀಲಿಸಿರುವ ಕಾರಣ ಕೇಂದ್ರ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ.
2 ಕೋಟಿ ರೂ.ಯೋಜನೆ
1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಎಂಆರ್‌ಎಫ್‌ನಲ್ಲಿ 5 ಟನ್ ಒಣ ಕಸವನ್ನು ಮರುಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸಿದ್ಧಗೊಳಿಸಲಾಗುತ್ತದೆ. ಕೇಂದ್ರ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬೋಳ್ಳೋಡಿಯಲ್ಲಿ 1 ಎಕರೆ ಜಾಗವನ್ನು ಕೆದಂಬಾಡಿ ಗ್ರಾ.ಪಂ. ಇದಕ್ಕಾಗಿ ನೀಡಿದೆ.
ನಿರ್ವಹಣೆ ವಿಧಾನ
ಗುತ್ತಿಗೆದಾರ ಕಂಪೆನಿ ಘಟಕ ನಿರ್ಮಿಸಿದ ಬಳಿಕ ಇದರ ನಿರ್ವಹಣೆಗೆ ಪ್ರತ್ಯೇಕ ಟೆಂಡರ್ ಆಹ್ವಾನಿಸಲಾಗುತ್ತದೆ. ವಹಿಸಿಕೊಂಡ ಸಂಸ್ಥೆಯವರು ಒಪ್ಪಂದದ ಆಧಾರದಲ್ಲಿ ನಿರ್ವಹಣೆ ಮಾಡಬೇಕಾಗುತ್ತದೆ. ಈಗಾಗಲೇ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಒಣ ಕಸ ಸಂಗ್ರಹಣಾ ಕೇಂದ್ರ ಸಿದ್ಧವಾಗಿದೆ. ಗ್ರಾಮೀಣ ಮಟ್ಟದಲ್ಲಿ ಹಸಿ ಕಸವನ್ನು ಮನೆಮನೆಗಳವರೇ ವಿಲೇವಾರಿ ಮಾಡುತ್ತಿದ್ದು, ಪ್ಲಾಸ್ಟಿಕ್ ಕಸ, ಮೆಡಿಕಲ್ ಕಸ ಮತ್ತು ಇ-ವೇಸ್ಟ್‌ಗಳನ್ನು ಗ್ರಾ.ಪಂ.ಗಳು ಸಂಗ್ರಹಿಸುತ್ತಿವೆ. ಸಂಗ್ರಹಿಸಿದ ಬಳಿಕ ಮುಂದಿನ ನಿರ್ವಹಣೆ ಮಾಡುವುದು ಎಲ್ಲ ಗ್ರಾ.ಪಂ.ಗಳಿಗೆ ಕಷ್ಟವಾದ ಕಾರಣ ಕೆದಂಬಾಡಿ ಗ್ರಾಪಂನಲ್ಲಿ 3 ತಾಲೂಕಿಗಳಿಗೆ ಸೇರಿದಂತೆ ಒಂದು ಘಟಕ ನಿರ್ಮಿಸಲಾಗುತ್ತಿದೆ.
ಕಾರ್ಯವಿಧಾನ ಹೇಗೆ ?
3 ತಾಲೂಕುಗಳ ಎಲ್ಲ ಗ್ರಾ.ಪಂ.ಗಳಿಂದ ಸಂಸ್ಥೆಯವರು ಒಣ ಕಸಗಳನ್ನು ಸಂಗ್ರಹಿಸುತ್ತಾರೆ. ಕಸ ಕೊಡುವುದರ ಜತೆಗೆ ನಿಗದಿ ಪಡಿಸಿದ ಮೊತ್ತವನ್ನು ಕೂಡ ಆಯಾ ಪಂಚಾಯತ್ ನವರು ಸಂಸ್ಥೆಗೆ ನೀಡಬೇಕಾಗುತ್ತದೆ. ಸಂಗ್ರಹಗೊಂಡ ಒಣ ಕಸವನ್ನು ತಿಂಗಳಾಡಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಸಮಗ್ರವಾಗಿ ವಿಂಗಡಿಸಲಾಗುತ್ತದೆ. ಬಳಿಕ ಪ್ಲಾಸ್ಟಿಕ್ ಕಸಗಳನ್ನು ಕೂಡ ಪ್ರತ್ಯೇಕಿಸಿ ನಿರ್ದಿಷ್ಟ ಯಂತ್ರದ ಮೂಲಕ ಅವುಗಳನ್ನು ಬಂಡಲ್ ಮಾದರಿಗೆ ಪರಿವರ್ತಿ ಸಲಾಗುತ್ತದೆ. ಮರುಬಳಕೆಗೆ ಯೋಗ್ಯವಾಗುವ ರೀತಿಯಲ್ಲಿ ಸಂಸ್ಕರಿಸಿದ ಬಳಿಕ ಕಾರ್ಖಾನೆಗಳಿಗೆ ಮಾರಲಾಗುತ್ತದೆ.
ಗ್ರಾಮಾಂತರ ಪ್ರದೇಶದ ಮೊದಲನೆಯದು
ತಿಂಗಳಾಡಿ ಸಮೀಪ ನಿರ್ಮಾಣವಾಗಲಿರುವ ಕೇಂದ್ರ ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮೊದಲನೆಯದು. ಮಂಗಳೂರಿನಲ್ಲೂ ಇಂಥದೇ ಘಟಕ ನಿರ್ಮಾಣವಾಗಲಿದೆ. ಕೆದಂಬಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಂಆರ್‌ಎಫ್ ನಿರ್ಮಾಣವಾಗುವ ಕಾರಣ ನಮ್ಮ ಗ್ರಾ.ಪಂ.ನ ತ್ಯಾಜ್ಯಗಳನ್ನು ಸಂಸ್ಥೆಯವರು ಉಚಿತವಾಗಿ ಸಂಗ್ರಹಿಸುತ್ತಾರೆ. -ರತನ್ ರೈ ಕುಂಬ್ರ, ಅಧ್ಯಕ್ಷ, ಕೆದಂಬಾಡಿ ಗ್ರಾ.ಪಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.