ಕನಸಲ್ಲಿ ಬಂದ ಅಮ್ಮ, ಖುಷಿಯಿಂದ ಹರಸಿದಳು!
Team Udayavani, Oct 9, 2022, 6:15 AM IST
ಕೆಲವರು ಅವನನ್ನು ವಲಿ ಅನ್ನುತ್ತಿದ್ದರು. ಇನ್ನೊಂದಷ್ಟು ಜನ ವಾಲಿ ಎಂದು ಕರೆಯುತ್ತಿದ್ದರು. ಯಾವ ಹೆಸರಿಂದ ಕರೆದರೂ ಆತ ಓಗೊಡುತ್ತಿದ್ದ. ವಿಪರ್ಯಾಸವೆಂದರೆ, ಹೆಚ್ಚಿನವರು ಅವನೊಂದಿಗೆ ಮಾತಾಡುತ್ತಿರಲಿಲ್ಲ. ಅವನನ್ನು ಅಷ್ಟು ದೂರದಲ್ಲಿ ಕಂಡಾಗಲೇ ಮುಖ ಕಿವುಚುತ್ತಿದ್ದರು. “ಆ ಮನುಷ್ಯ ಕೊಳಕ ಕಣ್ರೀ, ವಾಸ್ನೆ ಹೊಡಿತಾನೆ’ ಅನ್ನುತ್ತಿದ್ದರು.
ಇಷ್ಟಾದರೂ ವಾರಕ್ಕೆ ಒಮ್ಮೆಯಾದರೂ ಅವನನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದೇ ಬರುತ್ತಿತ್ತು. ಕಾರಣ, ನಾವು ವಾಸವಿದ್ದ ಏರಿಯಾದಲ್ಲಿ ಒಮ್ಮೊಮ್ಮೆ ಮ್ಯಾನ್‌ಹೋಲ್‌ಗಳು ಇದ್ದಕ್ಕಿದ್ದಂತೆ “ಓಪನ…’ ಆಗಿ ಬಿಡುತ್ತಿದ್ದವು. ಅಥವಾ ಚರಂಡಿ ಕಟ್ಟಿಕೊಂಡು ನೀರು ಮುಂದಕ್ಕೆ ಹೋಗುತ್ತಲೇ ಇರಲಿಲ್ಲ. ಪರಿಣಾಮ, ಸಹಿಸಲಾಗದಂಥ ದುರ್ನಾತ ಇಡೀ ಪರಿಸರವನ್ನು ಆವರಿಸಿಕೊಳ್ಳುತ್ತಿತ್ತು. ಸಮಸ್ಯೆ ಪರಿಹಾರಕ್ಕೆಂದು ಕಾರ್ಪೋ ರೆಶನ್‌ನವರಿಗೆ ಫೋನ್ ಮಾಡಿದರೆ ದಾರಿಯಲ್ಲಿದ್ದ ಒಂದು ಕಡ್ಡಿಯೂ ಅಲುಗಾಡುತ್ತಿರಲಿಲ್ಲ. ಆಗ ಐದಾರು ಮಂದಿ ಹಿರಿಯರು ಪ್ರತೀ ಮನೆ ಯಿಂದಲೂ ಇಂತಿಷ್ಟು ಎಂದು ಹಣ ಸಂಗ್ರಹಿಸಿ, ಯಾರ ಮೂಲಕವಾದರೂ ವಲಿಗೆ ಹೇಳಿ ಕಳುಹಿಸುತ್ತಿದ್ದರು.
ಇಂಥ ಸಂದರ್ಭಗಳಲ್ಲಿ ಆತ ತಡ ಮಾಡುತ್ತಿರಲಿಲ್ಲ. ಎರಡು ಬಿದಿರಿನ ಗಳುಗಳು, ಗುದ್ದಲಿಯಂಥ ಸಲಕರಣೆ, ಫಾರೆಸ್ಟ್ ಡಿಪಾರ್ಟ್‌ಮೆಂಟಿನವರು ಧರಿಸುವಂಥ ಶೂ ಹಾಕಿಕೊಂಡು ಬಂದುಬಿಡುತ್ತಿದ್ದ. ಮನೆಯಿಂದ ಹೊರಟಾಗಲೇ ಕುಡಿದಿರುತ್ತಿದ್ದನೇನೋ; ಅವನ ಕಣ್ಣುಗಳು ಕೆಂಪಗೆ ಕಾಣುತ್ತಿದ್ದವು. ಬಂದವನು, ಎಲ್ಲಿ ಕಸ ಕಟ್ಟಿಕೊಂಡಿರಬಹುದು ಎಂದು ಕಣ್ಣಳತೆಯಲ್ಲೇ ನೋಡುತ್ತಿದ್ದ. ಅನಂತರ ಪುಸಪುಸನೆ ಒಂದು ಬೀಡಿ ಸೇದಿ, ಸುತ್ತಲಿನ ಜನರನ್ನು ತೋರಿಕೆಗೂ ನೋಡದೆ, ನಿರ್ಭಾವುಕನಾಗಿ ಚರಂಡಿಗೆ ಇಳಿದು ಬಿಡುತ್ತಿದ್ದ. ಅಥವಾ ಮ್ಯಾನ್‌ಹೋಲ್ ಸ್ವತ್ಛಗೊಳಿಸಲು ಮುಂದಾ ಗುತ್ತಿದ್ದ. ಆಗಲೂ ಅಷ್ಟೇ; ಜನ ಅವನಿಂದ ಮಾರು ದೂರವೇ ಇರುತ್ತಿದ್ದರು. ಕೆಲವರು ತಮ್ಮತಮ್ಮೊಳಗೆ- “ನೋಡಿದ್ರಲ್ಲ, ಅವನ ಕಣ್ಣು ಕೆಂಡದ ಥರ ಇವೆ. ಕುಡಿದಿದಾನೆ ಅನ್ಸುತ್ತೆ…’ ಎಂದು ಪಿಸುಗುಡುತ್ತಿದ್ದರು. ಮತ್ತೆ ಕೆಲವರು-“ಪಾಪ ಕಣ್ರೀ, ಅವನಾದ್ರೂ ಏನ್ಮಾಡ್ತಾನೆ? ಆ ಗಬ್ಬು ವಾಸನೆ ತಡ್ಕೊಂಡು ಚರಂಡಿಯೊಳಗೆ, ಮ್ಯಾನ್‌ಹೋಲ್‌ನಲ್ಲಿ ಕೆಲಸ ಮಾಡೋಕೆ ಆಗುತ್ತಾ? ನಾವೇನಾದ್ರೂ ಆ ಕೆಲಸಕ್ಕೆ ಹೋದ್ರೆ ಎರಡೇ ನಿಮಿಷಕ್ಕೆ ಉಸಿರು ಕಟ್ಟಿ ಸತ್ತು ಹೋಗ್ತೀವೆ. ಅಂಥಾ ಜಾಗದಲ್ಲಿ ಕೆಲಸ ಮಾಡುವಾಗ ಡ್ರಿಂಕ್ಸ್ ಮಾಡಿಕೊಂಡೇ ಹೋಗೋದು ಅನಿವಾರ್ಯ’ ಎಂದು ವಾದಿಸುತ್ತಿದ್ದರು.
ಇಂಥ ಮಾತುಗಳನ್ನು ವಲಿ ಕೇಳಿಸಿಕೊಂಡಿದ್ದನಾ? ಗೊತ್ತಿಲ್ಲ. ಆತ ಯಾವತ್ತೂ, ಯಾರೊಂದಿಗೂ ಹೆಚ್ಚಾಗಿ ಮಾತೇ ಆಡುತ್ತಿರಲಿಲ್ಲ. ಕರೆದ ದಿನ ಬಂದು, ಹೇಳಿದ ಕೆಲಸ ಮುಗಿಸಿ, ಕೊಟ್ಟಷ್ಟು ಹಣ ಪಡೆದು ಹೋಗಿ ಬಿಡುತ್ತಿದ್ದ. ಸಮೀಪದ ಕೊಳೆಗೇರಿಯಲ್ಲಿ ಅವನದೊಂದು ಪುಟ್ಟ ಮನೆ ಯಿದೆ ಎಂಬ ಮಾಹಿತಿಯಷ್ಟೇ ನಮ್ಮ ಏರಿಯಾದ ಜನರಿಗೆ ಗೊತ್ತಿತ್ತು.
*****
“ನಿಮಗೆ ಬಿಪಿ ಇದೆ. ನಾಳೆಯಿಂದಲೇ ತಪ್ಪದೆ ವಾಕಿಂಗ್ ಹೋಗಿ. ದಿನಾಲು ಐದಾರು ಕಿಲೋಮೀಟರ್ ಬ್ರಿಸ್ಕ್ ವಾಕ್ ಮಾಡಿ’ ಎಂದು ಡಾಕ್ಟರ್ ಹೇಳಿದ್ದರು. ಅವತ್ತೂಂದು ದಿನ ವಾಕ್ ಮುಗಿಸಿಕೊಂಡು ರೈಲ್ವೇ ಟ್ರ್ಯಾಕ್ ಕಡೆಯಿಂದ ಮನೆಗೆ ಬರುವ ಹಾದಿಯಲ್ಲಿ ನೋಡುತ್ತೇನೆ; ಆಗಷ್ಟೇ ಹೊರಟಿದ್ದ ರೈಲನ್ನು ನಿರ್ಭಾವುಕನಾಗಿ ನೋಡುತ್ತ ಅಲ್ಲಿದ್ದ ಕಲ್ಲು ಬೆಂಚಿನ ಮೇಲೆ ವಲಿ ಆರಾಮಾಗಿ ಕುಳಿತಿದ್ದಾನೆ! ಒಮ್ಮೆ ಕೆಮ್ಮಿ ಅವನ ಗಮನ ಸೆಳೆದೆ. ಗುರುತು ಸಿಕ್ಕಿತೇನೋ; ಪರಿಚಯದ ನಗೆ ಬೀರಿದ. ಅಷ್ಟೆ: ನನಗೇ ಅಚ್ಚರಿಯಾಗುವಂತೆ ಹೇಳಿಬಿಟ್ಟಿದ್ದೆ: “ಯಾವ ಊರಪ್ಪಾ ನಿಮ್ಮದು? ನಿಮ್ಮ ಕೆಲಸ ನೋಡಿದಾಗ ಅಯ್ಯೋ ಅನಿಸುತ್ತೆ. ಸುತ್ತಲಿನ ಜನ, ಈ ಸಮಾಜ ನಿಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಲ್ಲ ಅನಿಸಿದಾಗ ದುಃಖ ಆಗುತ್ತೆ…’
ಈ ಮನುಷ್ಯನ ಮೂಡ್ ಹೇಗಿದೆಯೋ ಏನೋ. ಆತ ಉತ್ತರ ಕೊಟ್ಟರೆ ಕೇಳಿಸಿಕೊಳ್ಳುವುದು, ಇಲ್ಲದಿದ್ದರೆ ಮುಂದಕ್ಕೆ ಹೋಗಿಬಿಡುವುದು ಎಂದು ನಿರ್ಧರಿಸಿಯೇ ಪ್ರಶ್ನೆ ಕೇಳಿದ್ದೆ. ಅಚ್ಚರಿ ಅನ್ನುವಂತೆ ವಲಿ ಉತ್ತರಿಸಿದ. ಅದೂ ಏನು? ತುಸು ದೀರ್ಘವಾಗಿಯೇ ಉತ್ತರ ಕೊಟ್ಟ. ಅದರ ಸಾರಾಂಶ ಇಷ್ಟು:’ ಸರ್, ಯಾವ ಊರು ಅಂತ ನನಗೂ ಗೊತ್ತಿಲ್ಲ. ನಾವು ಕೋಲ್ಕತಾ ಕಡೆಯವರಂತೆ. ಅಲ್ಲಿ ಬರಗಾಲ ಬಂದು ಮನುಷ್ಯರೆಲ್ಲ ಸೊಳ್ಳೆಗಳಂತೆ ಸತ್ತು ಹೋಗ್ತಿದ್ದಾಗ ನಮ್ಮ ಹಿರಿಯರೆಲ್ಲ ಸಿಕ್ಕಿದ ರೈಲು ಹತ್ತಿ ಇಲ್ಲಿಗೆ ಬಂದರಂತೆ. ನನಗೆ ಅಪ್ಪ ಇರಲಿಲ್ಲ. ಇದ್ದದ್ದು ಅಮ್ಮ ಮಾತ್ರ. ಎಲ್ಲಿಂದಲೋ ಬಂದವರಿಗೆ ಒಳ್ಳೆಯ ಕೆಲಸ ಅಥವಾ ಸಂಬಳ ಎಲ್ಲಿ ಸಿಗುತ್ತೆ? ಅಮ್ಮ ಅವರಿವರ ಮನೆಯಲ್ಲಿ ಮನೆಗೆಲಸಕ್ಕೆ ಸೇರಿಕೊಂಡಳು. ಪೂರ್ತಿ ಒಂದು ವರ್ಷ ದುಡಿದವಳು, ಅದೊಂದು ದಿನ ಶ್ರೀಮಂತರೊಬ್ಬರ ಮನೆಯಲ್ಲಿ ನೆಲ ಒರೆಸುತ್ತಿದ್ದಾಗ ಜಾರಿ ಬಿದ್ದು ಕಾಲು ಮುರಿದುಕೊಂಡಳು.
ಆಗ ನಾನಿನ್ನೂ ಚಿಕ್ಕ ಹುಡುಗ. ಊರು-ಕೇರಿ, ಭಾಷೆ ಯಾವುದೂ ಗೊತ್ತಿರಲಿಲ್ಲ. ಆದರೆ ಬದುಕಲಿಕ್ಕೆ ನಾವೊಂದು ದಾರಿ ಹುಡುಕಬೇಕಿತ್ತು. ಯಾರೋ ಹಿರಿಯರು ಬಂದು- “ಚರಂಡಿ ಕ್ಲೀನ್ ಮಾಡುವ ಕೆಲಸಕ್ಕೆ ಹೋಗಿಬಿಡು. ಕೆಲಸ ಮುಗಿದ ತತ್‌ಕ್ಷಣ ಕಾಸು ಸಿಗುತ್ತೆ. ಬದುಕೋಕೆ ಅದೇ ಸುಲಭದ ದಾರಿ’ ಅಂದರು. ಅವತ್ತಿನ ಸಂದರ್ಭದಲ್ಲಿ, ನನಗೆ ಮೂರು ಹೊತ್ತಿನ ಅನ್ನ ಸಂಪಾದನೆಯೇ ಮುಖ್ಯವಾಗಿತ್ತು. ನನ್ನದೇ ವಯಸ್ಸಿನ ಉಳಿದ ಮಕ್ಕಳು ಶಾಲೆಯ ಹಾದಿಯಲ್ಲಿ ನಡೆಯುತ್ತಿದ್ದಾಗ, ನಾನು ದಿಕ್ಕು ತಪ್ಪಿದವನಂತೆ ಕ್ಲೀನಿಂಗ್ ಕೆಲಸಕ್ಕೆ ಇಳಿಯುತ್ತಿದ್ದೆ. ವಿದ್ಯೆಯೋ, ಊಟವೋ ಎಂದಾಗ ನನ್ನ ಮನಸ್ಸಿಗೆ ಊಟವೇ ಮುಖ್ಯ ಅನಿಸಿತು.
ಅವತ್ತಿನತನಕ- ದುರ್ವಾಸನೆ ಅಂದ್ರೆ ಸಾಕು; ನಾನು ಮೂಗು ಮುಚ್ಕೊಂಡು ಓಡಿಬಿಡ್ತಿದ್ದೆ. ಎಷ್ಟೋ ಬಾರಿ ದುರ್ವಾಸನೆ ತಡೆಯಲಾರದೆ ವಾಂತಿ ಮಾಡಿಕೊಳ್ಳುತ್ತಿದ್ದೆ. ಅಂಥವನು, ಬದಲಾದ ಪರಿಸ್ಥಿತಿಯಲ್ಲಿ ನೇರವಾಗಿ ಚರಂಡಿಗೆ ಇಳಿಯಲು ಶುರು ಮಾಡಿದೆ. ಅಲ್ಲಿದ್ದ ಕಸ ಎತ್ತಿ ಹಾಕುವ ಕೆಲಸ ನನ್ನದಾಗಿತ್ತು. ಇಷ್ಟೇ ಸತ್ಯ ಸಾರ್. ಹಸಿವಿನಿಂದ ತಪ್ಪಿಸಿಕೊಳ್ಳಲು ಮನುಷ್ಯ ಯಾವ ಕೆಲಸವನ್ನಾದರೂ ಮಾಡಿಬಿಡುತ್ತಾನೆ. ಅದಕ್ಕೆ ನನಗಿಂತ ದೊಡ್ಡ ಉದಾಹರಣೆ ಬೇಕಾ?’
ನಿರ್ಭಾವುಕ ಧ್ವನಿಯಲ್ಲಿ ಇದಿಷ್ಟನ್ನೂ ಹೇಳಿದ ವಲಿ ಅರೆಕ್ಷಣ ಮೌನವಾದ. ಅನಂತರ ನಿಟ್ಟುಸಿರುಬಿಟ್ಟು ಹೇಳಿದ: ಅವತ್ತಿಂದಾನೇ ಜನ ನನ್ನನ್ನು ವಿಚಿತ್ರವಾಗಿ ನೋಡೋದಕ್ಕೆ ಶುರು ಮಾಡಿದ್ರು. ನನ್ನನ್ನು ಕಂಡ ತತ್‌ಕ್ಷಣ ಸರಿದು ನಿಲ್ಲುತ್ತಿದ್ರು. ಅಕಸ್ಮಾತ್ ನನ್ನ ತಾಯಿ ಹಾಲು ತರಲು ಹೋದರೆ, ಅಲ್ಲಿದ್ದ ಜನ ಬೆಂಕಿ ಕಂಡವರಂತೆ ಅದುರಿ, “ಈ ವಮ್ಮ ಕ್ಲೀನಿಂಗ್ ಕೆಲಸ ಮಾಡ್ತಾನಲ್ಲ ವಲಿ, ಅವರ ತಾಯಿ’ ಎಂದು ಪಿಸುಗುಟ್ಟಿಕೊಂಡು ಸರಿದು ನಿಲ್ಲುತ್ತಿದ್ದರು. ಯಾರೊಬ್ಬರೂ ಆಕೆಯ ಕುಶಲ ವಿಚಾರಿಸಲಿಲ್ಲ. ನಮ್ಮ ಪಾಲಿಗೆ ಕಷ್ಟವನ್ನುಉಸಿರಾಡುವುದೇ ಖಾಯಂ ಆಯಿತು.
ಹೀಗಿರುವಾಗಲೇ ನನ್ನ ತಾಯಿ ಕಾಯಿಲೆ ಬಿದ್ದಳು. ಮೊದಲೇ ಮೂರು ಹೊತ್ತಿನ ಅನ್ನಕ್ಕೆ ಪರದಾಡ್ತಾ ಇದ್ದವರು ನಾವು. ಅಂಥವರು ದೊಡ್ಡ ಆಸ್ಪತ್ರೆಗೆ ಹೋಗುವುದು ಹೇಗೆ? ಅಮ್ಮನನ್ನು ಅಡ್ಮಿಟ್ ಮಾಡಿಕೊಂಡ್ರೆ ಅವಳನ್ನು ನೋಡಿಕೊಳ್ಳಲಿಕ್ಕೂ ಯಾರೂ ಇರಲಿಲ್ಲ. ಹಾಗಾಗಿ, ಮನೆಯಲ್ಲೇ ಉಳಿಸಿಕೊಂಡೆ. ನನ್ನಂಥ ನತದೃಷ್ಟ ಮಗನಿಂದಾಗಿ ಆಕೆ, ಕಡುಕಷ್ಟದಲ್ಲೇ ಬದುಕುವಂತೆ ಆಯಿತಲ್ಲ ಎಂಬ ಸಂಕಟ ಬಿಟ್ಟೂಬಿಡದೆ ಕಾಡಿತು.
ಅಷ್ಟೆ: ಅಮ್ಮನ ಪಕ್ಕ ಕುಳಿತು ಬಿಕ್ಕಳಿಸತೊಡಗಿದೆ. ನನ್ನ ಅಳುವಿನ ಸದ್ದು ಕೇಳಿ ಅಮ್ಮ ಗಾಬರಿಯಾದಳು. ನಡುಗುತ್ತಿದ್ದ ಕೈಗಳಿಂದಲೇ ನನ್ನ ಕೆನ್ನೆ ಸವರುತ್ತಾ-“ಯಾಕೆ ಅಳ್ತಿದೀಯಪ್ಪ?’ ಅಂದಳು. “ನನ್ನಿಂದಾಗಿ ನೀನು ಬಡತನದಲ್ಲೇ ಬದುಕುವಂತೆ ಆಗಿಬಿಡ್ತು. ಕ್ಲೀನಿಂಗ್ ಕೆಲಸದವನ ತಾಯಿ ಅಂತ ಕರೆಸಿಕೊಳ್ಳಬೇಕಾಯ್ತು. ಅದಕ್ಕಾಗಿ ಬೇಜಾರು ಮಾಡ್ಕೋಬೇಡ ಕಣಮ್ಮ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳೋಕೆ, ಆಸ್ಪತ್ರೆಗೆ ಸೇರಿಸಲಿಕ್ಕೆ ಆಗಲಿಲ್ಲ. ಅದಕ್ಕಾಗಿ ಕ್ಷಮಿಸಿಬಿಡಮ್ಮ..’ ಅಂದೆ.
ಅಮ್ಮ, ಅದೇ ನಡುಗುವ ಕೈಗಳಿಂದ ನನ್ನ ತಲೆ ನೇವರಿಸುತ್ತ, ಕೆನ್ನೆಯ ಮೇಲಿದ್ದ ಕಂಬನಿ ಒರೆಸುತ್ತ ಹೇಳಿದಳು: “ಮಗಾ, ಈ ಲೋಕದಲ್ಲಿ ತಮ್ಮ ದೇಹದಲ್ಲಿರೋ ಹೊಲಸನ್ನು ಕಂಡು ಅಸಹ್ಯಪಡುವ ಜನ ಇದ್ದಾರೆ. ಅಂಥಾದ್ರಲ್ಲಿ ಇನ್ನೊಬ್ಬರ ಹೊಲಸನ್ನು ಶುಚಿಗೊಳಿಸುವ ಕೆಲಸವನ್ನು ನೀನು ಶ್ರದ್ಧೆಯಿಂದ ಮಾಡಿದೀಯ. ನಿಜ ಹೇಳಬೇಕು ಅಂದ್ರೆ ನೀನು ಮಾಡ್ತಿರೋದು ದೇವರು ಮೆಚ್ಚುವಂಥ ಕೆಲಸ. ನೀನು ಯಾರಿಗೂ ಮೋಸ ಮಾಡಿಲ್ಲ. ಅನ್ಯಾಯ ಮಾಡಿಲ್ಲ. ಏನನ್ನೂ ಕದ್ದಿಲ್ಲ. ಸೋಮಾರಿಯಾಗಿಲ್ಲ. ನಿಯತ್ತಿನಿಂದ ಕೆಲಸ ಮಾಡಿ ನನಗೆ ಅನ್ನ ಹಾಕಿದೀಯ. ನನ್ನ ಮಗ ಒಬ್ಬ ಕ್ಲೀನಿಂಗ್ ಕೆಲಸದವನು ಅಂತ ಹೇಳಿಕೊಳ್ಳೋಕೆ ನಂಗೆ ಹೆಮ್ಮೆ ಕಣೋ. ಈ ವಿಷಯವಾಗಿ ಇನ್ಯಾವತ್ತೂ ಯೋಚನೆ ಮಾಡಬೇಡ..’ ಎಂದಳು. ಮುಂದಿನ ಕೆಲವೇ ದಿನಗಳಲ್ಲಿ ಅಮ್ಮ ತೀರಿಕೊಂಡಳು.
ಅನಂತರದಲ್ಲಿ ನನಗೆ ಜೀವನದಲ್ಲಿ ಆಸಕ್ತಿಯೇ ಹೋಗಿಬಿಡು. ಹೇಗೋ ಬದುಕುತ್ತಿದ್ದೆ. ಹೀಗಿರುವಾಗಲೇ ತಿಂಗಳ ಹಿಂದೆ ಒಬ್ಬರು, ಹಿರಿಯರನ್ನು ಪೂಜಿಸುವ ಹಬ್ಬದ ಬಗ್ಗೆ ಹೇಳಿದರು. ಮನೆಯಲ್ಲಿ ನಾನೊಬ್ಬನೇ. ಯಾವ ಪೂಜೆ ಮಾಡಲಿ? ಹಾಗಂತ, ಸುಮ್ಮನೇ ಇದ್ದುಬಿಡೋಕೂ ಮನಸ್ಸು ಬರಲಿಲ್ಲ. ಅವತ್ತು ಇಡೀ ವಾರದ ದುಡಿಮೆಯ ಹಣವನ್ನು ನನಗಿಂತ ಕಷ್ಟದಲ್ಲಿ ಇದ್ದವರಿಗೆ ಕೊಟ್ಟುಬಿಟ್ಟೆ. ನನ್ನಿಂದ ಹಣ ಪಡೆದವರ ಕಣ್ಣಲ್ಲಿ ಪ್ರೀತಿ, ಸಂತೋಷ ಮತ್ತು ಕೃತಜ್ಞತೆಯ ಕಣ್ಣೀರಿತ್ತು. ಒಂದೊಳ್ಳೆಯ ಕೆಲಸ ಮಾಡಿದ ಖುಷಿಯಲ್ಲೇ ನಿದ್ರೆಗೆ ಜಾರಿದರೆ- ಕನಸಲ್ಲಿ ಕಾಣಿಸಿದವಳು ಅಮ್ಮ! ಹಸುರು ಬಣ್ಣದ ಸೀರೆಯಲ್ಲಿ ಆಕೆ ಮುದ್ದಾಗಿ ಕಾಣಾ ಇದು. ಅಮ್ಮಾ ಅನ್ನುವ ಮೊದಲೇ- “ನೀನು ಮಾಡಿದ ಒಳ್ಳೆಯ ಕೆಲ್ಸ ನನಗೆ ಖುಷಿ ಕೊಡು ಮಗಾ. ನಿಂಗೆ ಒಳ್ಳೆಯದಾಗ್ಲಿ.. ಅಂದಳು. ಆಮೇಲೆ ನನಗೆ ಎಚ್ಚರ ಆಗಿಬಿಡು… ನಾಲ್ಕು ದಿನದಿಂದ ಅದೇ ಗುಂಗಲ್ಲಿ ಇದೀನಿ. ರೈಲು ಬಂದಾಗ ಅದರಲ್ಲಿ ಅಮ್ಮ ಇದ್ದಾಳೆ ಅನ್ನಿಸ್ತದೆ. ರೈಲು ಹೊರಟಾಗ, ಅಮ್ಮ ರೈಲು ಹತ್ತಿ ಹೋಗ್ತಾ ಇದ್ದಾಳೆ ಅನ್ನಿಸ್ತದೆ! ಇಲ್ಲಿ ಕೂತ್ಕೊಂಡು ಸುಮ್ಮನೇ ಕನಸು ಕಾಣೋದ್ರಲ್ಲೇ ದೊಡ್ಡ ಖುಷಿ ಇದೆ..
ಹೇಳಲು ಮತ್ತೇನೂ ಉಳಿದಿಲ್ಲ ಅನ್ನುವಂತೆ ವಲಿ ಮಾತು ನಿಲ್ಲಿಸಿದ. ಆಗಲೇ ನಿಲ್ದಾಣಕ್ಕೆ ಒಂದು ರೈಲು ಬಂದೇ ಬಿಟ್ಟಿತು.
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.