ಸನ್ನತಿಯ ಬೌದ್ಧ ಸ್ತೂಪ ಶಿಲೆಗಳ ಜೋಡಣೆಗೆ ಚಾಲನೆ
Team Udayavani, Oct 10, 2022, 4:00 PM IST
ವಾಡಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿ ಪರಿಸರದ ಕನಗನಹಳ್ಳಿ ಗ್ರಾಮದಲ್ಲಿ ಧರೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಬಿಸಿಲು ಮಳೆಗೆ ಮೈಯೊಡ್ಡಿ ಅವಸಾನದಂಚಿಗೆ ಸಾಗಿದ್ದ ಬೌದ್ಧ ಸ್ತೂಪದ ಶಿಲೆಗಳ ಜೋಡಣೆ ಕಾರ್ಯಕ್ಕೆ ಬರೋಬ್ಬರಿ 22 ವರ್ಷಗಳ ನಂತರ ಸರ್ಕಾರ ಚಾಲನೆ ನೀಡಿದೆ.
ಕೇಂದ್ರ ಪ್ರಾಚ್ಯವಸ್ತು ಇಲಾಖೆ 1994ರಿಂದ 2000ರ ತನಕ ಕೈಗೊಂಡ ವಿಸ್ತೃತ ಉತ್ಖನನದ ಪರಿಣಾಮ ಕ್ರಿ.ಪೂ. 3ನೇ ಶತಮಾನಕ್ಕೆ ಸೇರಿದ ಸಾಮ್ರಾಟ್ ಅಶೋಕ ಚಕ್ರವರ್ತಿಯ ಧಮ್ಮ ಪ್ರಚಾರದ ಕುರುಹುವಾಗಿರುವ ಬೌದ್ಧ ಮಹಾಸ್ತೂಪ ಸಮುತ್ಛಯದ ಅವಶೇಷಗಳು ಬೆಳಕಿಗೆ ಬಂದಿದ್ದವು.
ಪ್ರಪಂಚದ ಗಮನ ಸೆಳೆದಿರುವ ಈ ಸನ್ನತಿ ಬೌದ್ಧ ತಾಣ ಮರು ಜೋಡಣೆಗೆ ಈ ಹಿಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ಕೋಟಿ ರೂ. ಅನು ದಾನ ನೀಡಿದ್ದರೆ, ಈಗಿನ ಕೇಂದ್ರ ಬಿಜೆಪಿ ಸರ್ಕಾರ 3.50 ಕೋಟಿ ರೂ. ಅನುದಾನ ನೀಡಿದೆ. ಒಟ್ಟು 5.50 ಕೋಟಿ ರೂ. ಅನುದಾನದಲ್ಲಿ ಬೌದ್ಧ ಸ್ತೂಪ ಮರು ಜೋಡಣೆಯಾಗುತ್ತಿದೆ. ಇದಕ್ಕಾಗಿ ಕಳೆದ ಎರಡು ತಿಂಗಳಿನಿಂದ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಅಧಿ ಕಾರಿಗಳು ಸನ್ನತಿಯಲ್ಲಿ ಬೀಡುಬಿಟ್ಟಿದ್ದಾರೆ. ಶಿಲಾ ವಿಹಾರದ ಮೂಲ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ.
ಸುಣ್ಣದ ಕಲ್ಲಿನದ್ದೇ ಸವಾಲು: ಸ್ಥಳೀಯವಾಗಿ ದೊರೆತ ಸುಣ್ಣದ ಕಲ್ಲಿನಲ್ಲಿ ನಿರ್ಮಿಸಲಾಗಿದ್ದ ಅಲಂಕೃತ ಶೈಲಿಯ ಬೌದ್ಧ ಸ್ತೂಪ ಈಗ ನೆಲಸಮವಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬುದ್ಧನ ಮೂರ್ತಿಗಳು, ಪಾಲಿ ಭಾಷೆಯಲ್ಲಿ ಕೆತ್ತಲಾದ ಶಿಲಾ ಶಾಸನ, ನಾಲ್ಕು ದಿಕ್ಕುಗಳಲ್ಲಿ ಮುಂಚಾಚಿದ ಆಯಕ ವೇದಿಕೆಗಳು, ಕಲ್ಲು ನೆಲಹಾಸಿನ ಪ್ರದಕ್ಷಿಣಾಪಥ, ಬುದ್ಧನ ಜಾತಕ ಕಥೆಗಳು, ಬುದ್ಧನ ಜೀವನದ ಪ್ರಮುಖ ಘಟನೆಗಳು, ಸಾಮ್ರಾಟ್ ಅಶೋಕ ಮತ್ತು ಶಾತವಾಹನ ಅರಸರ ಚಿತ್ರಗಳು, ಅಶೋಕನ ಸೂಚನೆಯಂತೆ ಭಾರತದ ವಿವಿಧ ಭಾಗಗಳಲ್ಲಿ ಸಂಚರಿಸಿ ಬೌದ್ಧ ಧರ್ಮ ಪ್ರಚಾರ ಮಾಡಿದ ಬೌದ್ಧ ಭಿಕ್ಷುಗಳ ಚಿತ್ರಗಳು, 60 ಅಂಡ ಫಲಕಗಳು, 72 ವೇದಿಕಾ ಫಲಕಗಳು, ಧರ್ಮಚಕ್ರ, ಸ್ತೂಪ, ಬುದ್ಧನ ಪ್ರಥಮೋಪದೇಶ, ಬೋಧಿ ವೃಕ್ಷ, ನಾಗಮುಚುಲಿಂದ, ಚೇತವನ, ನಿಂತಿರುವ ಬುದ್ಧನ ಹತ್ತು ಮೂರ್ತಿಗಳು, ಛತ್ರದಂಡಗಳ ಭಗ್ನ ಭಾಗಗಳು, ವಿಭಿನ್ನ ಲಿಪಿ ಲಕ್ಷಣಗಳಿರುವ 250ಕ್ಕೂ ಹೆಚ್ಚಿನ ಬ್ರಾಹ್ಮಿ ಶಾಸನಗಳು, ಸ್ತೂಪವನ್ನು ಸುತ್ತುವರೆದ ನಾಲ್ಕು ಸೂಚಿಗಳ ಕಟಾಂಜನ, ಪ್ರವೇಶ ದ್ವಾರಗಳನ್ನು ಒಳಗೊಂಡಿರುವ ಈ ಸ್ತೂಪ 22 ಮೀಟರ್ ವ್ಯಾಸವಿದ್ದು, 17 ಮೀಟರ್ ಎತ್ತರವಾಗಿತ್ತು ಎಂದು ಅಂದಾಜಿಸಲಾಗಿದೆ.
ಇದು ಮೌರ್ಯ, ಆರಂಭ ಶಾತವಾಹನ ಮತ್ತು ಅಂತ್ಯ ಶಾತವಾಹನರ ಕಾಲದ (ಕ್ರಿ.ಪೂ.3ರಿಂದ ಕ್ರಿ.ಶ.3ನೇ ಶತಮಾನ) ಮೂರು ಹಂತಗಳಲ್ಲಿ ನಿರ್ಮಾಣವಾಯಿತು ಎಂಬುದು ಸಂಶೋಧಕರ ಅನಿಸಿಕೆ. ಮುಖ್ಯ ಸ್ತೂಪದ ಸುತ್ತಲೂ ಕಿರುಸ್ತೂಪ, ಚೈತ್ಯಗೃಹ, ಬುದ್ಧ ಪಾದಗಳನ್ನು ಸ್ಥಾಪಿಸಿದ ವೇದಿಕೆ, ವಿಶಾಲವಾದ ವಿಹಾರ ಸಮುಚ್ಚಯ, 10 ಇಟ್ಟಿಗೆ ಕಟ್ಟಡಗಳು ಪತ್ತೆಯಾಗಿವೆ. ಶಿಲಾ ಬಂಡೆಗಳು, ಮೂರ್ತಿಗಳು ಸೇರಿದಂತೆ ಎಲ್ಲವನ್ನೂ ಸಂರಕ್ಷಿಸಿ ಸುರಕ್ಷಿತವಾಗಿಡಲಾಗಿದ್ದು, ಮೂಲ ಸ್ವರೂಪದಲ್ಲಿ ಮರು ಜೋಡಿಸುವುದೇ ಅಧಿಕಾರಿಗಳ ಪಾಲಿಗೆ ದೊಡ್ಡ ಸವಾಲಾಗಿ ಕಾಡುತ್ತಿದೆ.
ಈ ನಡುವೆ “ಉದಯವಾಣಿ’ ಜತೆ ಮಾತನಾಡಿದ ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆಯ ಅಧಿಕಾರಿಯೊಬ್ಬರು, ಮುಟ್ಟಿದರೆ ಧೂಳು ಹರಡುವ, ಎತ್ತಿದರೆ ಬಿರುಕು ಮೂಡುವ ಸುಣ್ಣದ ಕಲ್ಲಿನಲ್ಲಿ ಅರಳಿದ್ದ ಸುಂದರ ಬೌದ್ಧ ಸ್ತೂಪದ ಮರು ನಿರ್ಮಾಣಕ್ಕೆ ಮುಂದಾಗಿದ್ದೇವೆ. ಹೊರಗಿನಿಂದ ಹೊಸತಾಗಿ ಯಾವುದೇ ಕಲ್ಲುಗಳನ್ನು ತರಿಸಿಕೊಳ್ಳದೆ ಮೂಲ ಶಿಲೆಗಳನ್ನೇ ಬಳಕೆ ಮಾಡಿಕೊಂಡು ಯಥಾವತ್ತಾಗಿ ಮರು ಜೋಡಿಸಲು ಮುಂದಾಗಿದ್ದೇವೆ. ಇದು ಅತ್ಯಂತ ಕಷ್ಟಕರ ಕಾರ್ಯವಾಗಿದ್ದು, ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸ್ತೂಪದ ಯಥಾಸ್ಥಿತಿಯ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದ್ದು, ನಂತರ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ. ಶಿಲೆಗಳನ್ನು ಗುರುತಿಸಿ ಪ್ರತಿಯೊಂದಕ್ಕೂ ಕ್ರಮಬದ್ಧ ಸಂಖ್ಯೆಗಳನ್ನು ನೀಡಲಾಗುತ್ತದೆ. ಇದು ಒಂದು ಅಥವಾ ಎರಡು ವರ್ಷದಲ್ಲಿ ಮುಗಿಯುವ ಕೆಲಸವಲ್ಲ. ಒತ್ತಡಗಳಿಲ್ಲದೇ ಸಾರ್ವಜನಿಕರ ಸಹಕಾರದೊಂದಿಗೆ ಈ ಐತಿಹಾಸಿಕ ತಾಣ ಅಭಿವೃದ್ಧಿಪಡಿಸಲು ದೊರೆತರೆ ಅವಸಾನ ಗೊಳ್ಳುವುದಕಿಂತ ಮೊದಲು ಹೇಗಿತ್ತೋ ಅದೇ ಮಾದರಿಯಲ್ಲಿ ಸ್ತೂಪ ಸಿದ್ಧಗೊಳ್ಳುತ್ತದೆ ಎಂದಿದ್ದಾರೆ.
●ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.