ಜೋಡೋ ಯಾತ್ರೆ ಯಾವ ಪುರುಷಾರ್ಥಕ್ಕೆ?: ಸಿಎಂ ಬೊಮ್ಮಾಯಿ ವಾಗ್ದಾಳಿ
ರಾಹುಲ್ ಗಾಂಧಿ ಸಿದ್ದುಗೆ ಶಾಕ್ ಕೊಟ್ಟಿದ್ದಾರೆ... ಮುಂದಿನ ಚಿತ್ರವನ್ನ ಪರದೆ ಮೇಲೆ ನೋಡಿ
Team Udayavani, Oct 12, 2022, 8:05 PM IST
ಕೊಪ್ಪಳ: ‘ಭಾರತ್ ಜೋಡೋ’ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ ? ಅದಕ್ಕೆ ಯಾವ ದಿಕ್ಕುದೆಸೆಯಿಲ್ಲ. ಯಾಕೆ ಯಾತ್ರೆ ಮಾಡುತ್ತಿದ್ದಾರೆ ಎಂದು ಜನರಿಗೂ ಗೊತ್ತಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕುಷ್ಟಗಿಯಲ್ಲಿ ಬಿಜೆಪಿಯಿಂದ ನಡೆದ ಜನ ಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಸೇರಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ದ ಗುಡುಗಿದರು.
ಸಜ್ಜೆ ರಾಶಿ ಮಾಡುವ ಮೂಲಕ ಯಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ, ಅವರ ನಾಯಕರು ಬೀದಿಗಿಳಿದು ಪಾದಯಾತ್ರೆ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಅವರಿಗೆ ಜನ ನೆನಪಾಗುತ್ತಾರೆ. ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣಾ ಕಡಿಗೆ ಎಂದು ಪಾದಯಾತ್ರೆ ಮಾಡಿ ನೀರಿಡಿದು ಕೃಷ್ಣೆಯ ಮೇಲೆ ಆಣೆ ಮಾಡಿದರು. ಐದು ವರ್ಷದಲ್ಲಿ 50 ಸಾವಿಎ ಕೋಟಿ ಕೊಡುತ್ತೇವೆ ಎಂದಿದ್ದರು. ಅದರಲ್ಲಿ ಕೊಪ್ಪಳ ಏತ ನೀರಾವರಿಯೂ ಒಂದು. ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಮರೆತರು. ಅವರು ಅಧಿಕಾರಕ್ಕೆ ಬಂದ ಮೇಲೆ ಕೃಷ್ಣೆ ಮೇಲೆ ಆಣೆ ಮಾಡಿ ಮಾತು ತಪ್ಪಿದೆ ಮಾತು ತಪ್ಪಿದೆ. ಸಿದ್ದರಾಮಯ್ಯ, ಡಿಕೆಶಿ ಅವರನ್ನ ನೀವೆಲ್ಲ ಕೇಳಬೇಕು. ಜನರನ್ನ ಎಲ್ಲಾ ಸಂದರ್ಭದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಪಾದಯಾತ್ರೆ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದೀರಿ ? ರಾಹುಲ್ ಗಾಂಧಿ ಅವರು ಮಾಡುವ ಯಾತ್ರೆಗೆ ಯಾವುದೇ ದಿಕ್ಕು ದೆಸೆಯಿಲ್ಲ. ಜನರಿಗೂ ಈ ಬಗ್ಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ರಾಹುಲ್ ಗಾಂಧಿ ಅವರು ಯಾಕೆ ನಡೆಯುತ್ತಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಭಾರತ ಜೋಡೋ ಅಂತಾರೆ. ಇಂಡಿಯಾ- ಪಾಕಿಸ್ಥಾನ ಮಾಡಿದ್ದು ಯಾರು ? ಕರ್ನಾಟಕದಲ್ಲಿ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ ಎಂದರು.
ನಾವು ನೀರಾವರಿ ಮಾಡುತ್ತೇವೆ ಎಂದಾಗ ಇಲ್ಲಿಯ ನಾಯಕರೊಬ್ಬರು ಸಾಧ್ಯವಿಲ್ಲ ಎಂದರು. ನಾವು ಅಧಿಕಾರಕ್ಕೆ ಬಂದು ಅಡಿಗಲ್ಲು ಹಾಕಿದ್ದೇವೆ. ಆಗಲೂ ಇದು ಅಡಿಗಲ್ಲು ಅಲ್ಲ ಅಡ್ಡಗಾಲು ಎಂದರು. ಕೊಪ್ಪಳ ಏತ ನೀರಾವರಿಗೆ ಕಾಂಗ್ರೆಸ್ ಪಕ್ಷ ಅಡ್ಡಗಾಲು ಹಾಕಿದೆ. ನಾವಿ ಕೊಪ್ಪಳ ಏತ ನೀರಾವರಿ ಪೂರ್ಣಗೊಳಿಸಿ ಚಾಲನೆ ಕೊಡಲು ನಾನೇ ಬರಲಿದ್ದೇನೆ. ನಾವು ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟು ಅದಕ್ಕೆ 1500 ರಿಂದ3000 ಸಾವಿರ ಕೋಟಿ ಅನುದಾನ ಕೊಟ್ಟಿರುವೆ. ಮೂರು ವರ್ಷದಲ್ಲಿ ನಾವು ಅಭಿವೃದ್ಧಿ ಮಾಡಿದ್ದೇವೆ. ಕೋವಿಡ್ ಬಂದರೂ ನಮ್ಮ ಅಭಿವೃದ್ಧಿ ನಿಲ್ಲಿಸಿಲ್ಲ. ಉತ್ತರ ಕರ್ನಾಟಕ ಬಿಸಿಲನಾಡಲ್ಲಿ ನಾವು ಜಲಧಾರೆ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಬರಿ ಭಾಷಣ ಮಾಡುತ್ತಿದೆ. ದಲಿತರಿಗೆ ಏನು ಮಾಡಿದೆ. ಅವರನ್ನ ತಿರುಗಿ ನೋಡಿಲ್ಲ. ನಾಗಮೋಹನ್ ದಾಸ್ ಸಮಿತಿ ಮಾಡಿದ್ದು ಕುಮಾರಸ್ವಾಮಿ ಅವರು. ಇದರಲ್ಲಿ ಕಾಂಗ್ರೆಸ್ ಪಾತ್ರ ಏನೂ ಇಲ್ಲ. ಕಾಂಗ್ರೆಸ್ ದೀನ ದಲಿತರ ಶಿಕ್ಷಣಕ್ಕೆ ಬಜೆಟ್ ನಲ್ಲಿ ಹಣ ಇಟ್ಟುರೂ ಖರ್ಚು ಮಾಡಿಲ್ಲ.
ಕನಕದಾಸರು ಜನಿಸಿದ ನೆಲದಿಂದ ಬಂದಿರುವೆ
ಕನಕದಾಸರು ಜನಿಸಿದ ಊರಿನಿಂದ ನಾನು ಬಂದಿರುವೆ. ಕನಕದಾಸರ ಬಗ್ಗೆ ಭಕ್ತಿ ಭಾವ ನನ್ನ ಕಣ ಕಣದಲ್ಲೂ ಅಳವಡಿಸಿಕೊಂಡಿದ್ದೇನೆ. ನನ್ನ ಅವಧಿಯಲ್ಲಿ 14 ಕೋಟಿ ಹಾಗೂ ಬಿಎಸ್ವೈ ಸರ್ಕಾರದಲ್ಲಿ ಕಾಗಿನೆಲೆಗೆ 40 ಕೋಟಿ ಕೊಟ್ಟಿದ್ದೇವೆ. ಕನಕದಾಸರು, ವಾಲ್ಮೀಕಿ ಜಯಂತಿ ಮಾಡಿದ್ದು ಯಡಿಯೂರಪ್ಪ ಅವರ ಸರ್ಕಾರ. ಕಾಂಗ್ರೆಸ್ ಅಹಿಂದ ಎನ್ನುತ್ತಿತ್ತು. ಈಗ ಹಿಂದುಳಿದ, ದಲಿತರೂ ಹೋದರು, ಈಗ ಅ ಮಾತ್ರ ಉಳಿದಿದೆ. ಅಂದರೆ ಅಲ್ಪಸಂಖ್ಯಾತರಿದ್ದಾರೆ. ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರೇ ನುಂಗಿ ನೀರು ಕುಡಿದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅದರ ತನಿಖೆ ನಡೆಯಲಿದೆ. ಕಾಂಗ್ರೆಸ್ ಧರ್ಮ ಒಡೆಯುವ ಕೆಲಸ ಮಾಡಿದರು. ಒಡೆದು ಆಳುವ ನೀತಿ ನಿಮ್ಮದಾಗಿದೆ. ಕಾಂಗ್ರೆಸ್ ವಂಶಾವಳಿ ಬ್ರಟೀಷರದ್ದಾಗಿದೆ. ಬ್ರಿಟೀಷರು ತಮ್ಮ ವಂಶಾವಳಿ ಬಿಟ್ಟು ಹೋಗಿದ್ದಾರೆ ಎಂದರು.
ಬೊಮ್ಮಾಯಿ ನಮ್ಮ ಗಿರಾಕಿ ಎನ್ನುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಗೆ ಯಾಕೆ ಹೋದ್ರು. ? ಕಾಂಗ್ರೆಸ್ ನಾವು ಕಟ್ಟ ವಿರೋಧ ಮಾಡಿದ್ದೆವು. ಸಿದ್ದರಾಮಯ್ಯ ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದ ಹಳೇ ಟೇಪ್ ಹಚ್ಚಿದರೆ ಇವರ ಕತೆ ಗೊತ್ತಾಗುತ್ತೆ ಎಂದರು.
ನಮ್ಮ ಸರ್ಕಾರ ಮಕ್ಕಳ ಶಿಕ್ಷಣ ಕಲಿಕೆಗೆ ಯೋಜನೆ ತಂದಿದ್ದೇವೆ. ನೇಕಾರ, ಮೀನುಗಾರ, ಟ್ಯಾಕ್ಸಿ, ಆಟೋ ಚಾಲಕರು, ದುಡಿಯುವ ಪಾಲಕರ ಮಕ್ಕಳಿಗೆ ಕೊಡುತ್ತಿದ್ದೇವೆ. ಎಸ್ಸಿ ಎಸ್ಟಿ ಗೆ 75 ಯೂನಿಟ್ ಉಚಿತ ವಿದ್ಯುತ್ ಕೊಡುತ್ತಿದೆ. ಮಹಿಳೆಯರಿಗೆ ಮಹಿಳಾ ಸಂಘಕ್ಕೆ 2 ಲಕ್ಷ ಕೊಡಲಿದ್ದೇವೆ. ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ ಸ್ವಯಂ ಉದ್ಯೋಗ ಕೊಡಲಿದ್ದೇವೆ. ನಾವು ನವ ಕರ್ನಾಟಕ ಕಟ್ಟಿದ್ದೇವೆ. ಹೊಸ ತಂತ್ರಜ್ಞಾನ, ನೀರಾವರಿ, ರೈತರಿಗೆ ದುಡಿಯುವ ವರ್ಗಕ್ಕೆ ನಮ್ಮ ಕಾರ್ಯಕ್ರಮ ಮುಂದಿಟ್ಟು ನಿಮ್ಮ ಆಶೀರ್ವಾದ ಕೇಳಲು ಬಂದಿದ್ದೇವೆ. ನಮಗೆ ನೂರಕ್ಕೆ ನೂರು ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬಿರುಗಾಳಿಯಾಗಿ ಬೀಸಲಿದೆ ಎಂದರು.
ಸಿದ್ದರಾಮಯ್ಯ ಟ್ವಿಟ್ ಗೆ ತಿರುಗೇಟು
ಸಿದ್ದರಾಮಯ್ಯ ಟ್ವಿಟ್ ಮಾಡಿದ್ದು, ಯಡಿಯೂರಪ್ಪ, ಬೊಮ್ಮಾಯಿ ಒಟ್ಟಿಗೆ ಹೋಗುತ್ತಿದ್ದಾರೆ ಎಂದಿದ್ದಾರೆ. ನಾನು ಮೊದಲೇ ಹೇಳಿದ್ದೆ. ಧಮ್ ಇದ್ರೆ ನಮ್ಮ ಯಾತ್ರೆ ನಿಲ್ಲಿಸಿ ಎಂದಿದ್ದೆ. ಈಗ ಮತ್ತೆ ಹೇಳುತ್ತಿರುವೆ. ಧಮ್ ಇದ್ರೆ ನಮ್ಮ ಯಾತ್ರೆ ನಿಲ್ಲಿಸಿ ಎಂದು ಮತ್ತೆ ಸಿದ್ದು, ಡಿಕೆಶಿ ಗೆ ಸವಾಲ್ ಹಾಕಿದರು.
ರಾಹುಲ್ ಗಾಂಧಿ ಸಿದ್ದುಗೆ ಶಾಕ್ ಕೊಟ್ಟಿದ್ದಾರೆ. ಚುನಾವಣೆ ನಂತರ ಸಿಎಂ ಕ್ಯಾಂಡೆಟ್ ಯಾರು ಎಂದು ರಾಹುಲ್ ಬಾಬಾ ಹೇಳಿ ತಣ್ಣೀರು ಹಾಕಿದ್ದಾರೆ. ಮುಂದಿನ ಚಿತ್ರವನ್ನ ಪರದೆ ಮೇಲೆ ನೋಡಿ ಎಂದರು.
ಮೋದಿ ಅವರು ವಿಶ್ವದ ಗಮನ ಸೆಳೆದಿದ್ದಾರೆ. ಕಿಸಾನ್ ಸಮ್ಮಾನ್ ಆಯುಷ್ಮಾನ ಸೇರಿ ಹಲವು ಯೋಜನೆ ಜಾರಿ ಮಾಡಿದೆ. ಡಬಲ್ ಇಂಜಿನ್ ಸರ್ಕಾರ ಸರ್ಮಥವಾಗಿ ಮುನ್ನಡೆದಿದೆ. ಮುಂದೆ ತಮ್ಮ ಆಶೀರ್ವಾದ ಬೇಕು. ಇದು ವಿಜಯ ಸಂಕಲ್ಪ ಯಾತ್ರೆಯಾಗಿ ಮತ್ತೊಮ್ಮೆ ಸರ್ಕಾರ ತರೋಣ. ನವ ಕರ್ನಾಟಕ ದಿಂದ ನವ ನಿರ್ಮಾಣ ಮಾಡೋಣ, ನಿಮ್ಮ ವಿಶ್ವಾಸಕ್ಕೆ ಎಂದೂ ಚುತಿ ಬಾರದ ತೀರಿ ಕೆಲಸ ಮಾಡಲಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ ಮತ್ತೊಮ್ಮೆ ಬದಲಾವಣೆ ಬೀಸುತ್ತಿದೆ ಎಂದರು.
ಸಿದ್ದು-ಡಿಕೆಶಿ ಕನಸು ನನಸಾಗಲ್ಲ : ಯಡಿಯೂರಪ್ಪ
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ ಜನಕ್ಕೆ ನಮಸ್ಕಾರ. ಮಳೆ ವಾತಾವರಣ ಇದ್ದರೂ ರಸ್ತೆ ಮೂಲಕ ಸಮಾವೇಶದಲ್ಲಿ ಪಾಲ್ಗೊಂಡಿರುವೆ. ಜನಸ್ತೋಮ ನೋಡಿದರೆ ನಮ್ಮ ಅಭ್ಯರ್ಥಿ ಸೋಲಿಸಲು ಸಾಧ್ಯವೇ ಇಲ್ಲ.ಇಂದು ಮೋದಿ ಆಶೀರ್ವಾದ ದಿಂದ ಬಿಜೆಪಿ ಬೆಳೆದಿದೆ. ಕಾಂಗ್ರೆಸ್ ಕೇವಲ ಎರಡು ರಾಜ್ಯದಲ್ಲಿ ಇದೆ. ಹಣ ,ತೋಳು, ಹೆಂಡದ ಬಲವಿದೆ ಎನ್ನುವ ಭ್ರಮೆಯಲ್ಲಿದೆ. ಸಿದ್ದರಾಮಯ್ಯ, ಡಿಕೆಶಿ ಜೋಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಈ ಬಾರಿ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನ ಗೆದ್ದು ನಾವು ಅಧಿಕಾರಕ್ಕೆ ಬರಲಿದ್ದೇವೆ. ನಮ್ಮ ಸರ್ಕಾರದ ಆಡಳಿತ ಮೆಚ್ಚಿ ಜನ ಸೇರಿದ್ದೀರಿ. ನಿಮಗೆ ಅಭಿನಂದನೆ ಸಲ್ಲಿಸುವೆ. ಪ್ರತಿಯೊಬ್ಬರು ಮನೆಯ ಜೊತೆಗೆ ಹತ್ತತ್ತು ಮತ ಕೊಟ್ಟರೆ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ. ನೀವು ಮನೆ ಮನೆಗೆ ಹೋಗಿ ನಮ್ಮವರನ್ನ ಗೆಲ್ಲಿಸಬೇಕು ಎಂದರು.
ಮೋದಿ ವಿಶ್ವದ ನಾಯಕಾರಿಗಿದ್ದಾರೆ. ಇಡೀ ವಿಶ್ವ ಅವರನ್ನ ಹಾಡಿ ಕೊಂಡಾಡುತ್ತಿದೆ. ಇಂದು ಸಿಎಂ ಬೊಮ್ಮಾಯಿ ಅವರು ಎಸ್ಸಿ ಎಸ್ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಇದು ಐತಿಹಾಸಿಕ ನಿರ್ಧಾರ. ನೀವು ಎಸ್ಸಿ ಎಸ್ಟಿ ಕಾಲೋನಿಗೆ ತೆರಳಿ ಬೊಮ್ಮಾಯಿ ಅವರ ತೀರ್ಮಾನ ಜನರಿಗೆ ತಿಳಿಸಿ. ಗ್ರಾಮದ ಮುಖಂಡರುಗೆ ಮನವರಿಕೆ ಮಾಡಿ ಅವರಿಗೆ ಸರ್ಕಾರದ ತೀರ್ಮಾನ ತಿಳಿಸಿ. ಸಿದ್ದು, ಡಿಕೆಶಿ ಮನೆಗ ಹೋಗುವುದರಲ್ಲಿ ಸಂಶಯವಿಲ್ಲ. ರಾಹುಲ್ ಗಾಂಧಿ ಅವರನ್ನ ಮನೆಗೆ ಕಳಿಸಾಗಿದೆ. ನಿಮ್ಮ ಪಾದಯಾತ್ರೆಯಿಂದ ನಿಮ್ಮ ಆರೋಗ್ಯ ಸುಧಾರಣೆ ಕಾಣಬಹುದು. ಆದರೆ ಏನೂ ಆಟ ನಡೆಯಲ್ಲ. ಜನತೆ ಕ್ರಾಂತಿಕಾರಿ ನಿರ್ಧಾರ ಮಾಡಿದೆ. ನಿಮಗೆ ಅಂಬೇಡ್ಕರ್ ಬದುಕಿದ್ದಾಗ ಸೀಟು ಕೊಡಲಿಲ್ಲ. ಅವರನ್ನ ಸೋಲಿಸಿದಿರಿ. ಅವರು ಮೃತರಾದಾಗ ದೆಹಲಿಯಲ್ಲಿ ಶವ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಮುಂಬೈನಲ್ಲಿ ಜಾಗ ಕೊಟ್ರಿ. ನಿಮಗೆ ನೈತಿಕತೆ ಇದೆಯಾ ಎಂದು ಕಾಂಗ್ರೆಸ್ ವಿರುದ್ದ ಗುಡುಗಿದರು.
ರಮೇಶ ಕುಮಾರ ಅವರು ಮೂರು ತಲೆ ಮಾರಿನ ಆಸ್ತಿ ಬಗ್ಗೆ ಮಾತನಾಡಿದರು ಆದರೆ ಕಾಂಗ್ರೆಸ್ ಯಾವ ನಾಯಕು ಇದು ಸುಳ್ಳು ಎಂದು ಹೇಳಲಿಲ್ಲ. ನೀವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕನಸು ಕಾಣುತ್ತಿದ್ದೀರೇನು ? ಕರ್ನಾಟಕದ ಉದ್ದಗಲಕ್ಕೂ ಪ್ರವಾಸ ಮಾಡಿ 150 ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ನಾವು ಇನ್ನು ನಾಲ್ಕೈದು ತಿಂಗಳು ಮನೆಗೆ ಹೋಗುವುದು ಬೇಡ. ಬಿಜೆಪಿ ಅಧಿಕಾರ ತಡೆಯುವ ಶಕ್ತಿ ಯಾರಿಗೂ ಇಲ್ಲ. ನಾವು ರೈತರ ಸಾಲ ಮನ್ನಾ ಮಾಡಿದೆವು. ಪಿಎಂ ಕಿಸಾನ್ ಹಣ ಕೊಟ್ಟಿದ್ದೇವೆ. ಮಹಿಳೆಯರ ಸಬಲೀಕರಣಕ್ಕೆ ಭಾಗ್ಯ ಲಕ್ಷ್ಮಿ ಕೊಟ್ಟೆವು. ಹಾಲು ಉತ್ಪಾದನೆಗೆ ಪ್ರೋತ್ಸಾಹ ಕೊಟ್ಟಿದ್ದು ನಾವು. ಯಾವ ಕಾರಣಕ್ಕೂ ಕನಸು ಮನಸಿನಲ್ಲೂ ರಾಹುಲ್ , ಸೋನಿಯಾರನ್ನು ಕರೆ ತಂದರೂ ಕರ್ನಾಟಕದ ಜನ ಬಿಜೆಪಿ, ಮೋದಿ ಅವರನ್ನ ಬಿಟ್ಟು ಕೊಡುವುದಿಲ್ಲ. ಮತ್ತೆ ನಾವು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದೇವೆ. ಇಲ್ಲಿನ ಜನಸ್ತೋಮ ನೋಡಿ ವರಣನೂ ಶಾಂತವಾಗಿದ್ದಾನೆ. ರಾಜಕೀಯ ದೊಂಬರಾಟ ಮಾಡುವ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಪಾಠ ಕಲಿಸಬೇಕು ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದ ಅಭಿವೃದ್ದಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಕೊಪ್ಪಳ ಏತ ನೀರಾವರಿ ಯೋಜನೆಗೆ ಅನುದಾನ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರ ಅನುದಾನ ಕೊಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತ್ವರಿತಗತಿಯಲ್ಲಿ ಕಾಮಗಾರಿ ನಡೆದಿದೆ. ಬರದ ನಾಡಲ್ಲಿ ತಿಂಗಳಲ್ಲಿ ನೀರು ಹರಿಸಲಿದ್ದೇವೆ. ಎಲ್ಲ ಸಣ್ಣ ನೀರಾವರಿ ಯೋಜನೆಗೂ ಅನುದಾನ ಕೊಟ್ಟಿದ್ದೇವೆ. ನವಲಿ ಡ್ಯಾಂಗೆ 13040 ಕೋಟಿ ಬೇಕಾಗುತ್ತದೆ. ಡಿಪಿಆರ್ ಮಾಡಿಸಿದೆ. ಅದಕ್ಕೆ ನಮ್ಮ ಸರ್ಕಾರ ಚಾಲನೆ ಕೊಡಲಿದೆ. ಆಂಧ್ರ ಹಾಗೂ ತೆಲಂಗಾಣ ಸರ್ಕಾರದ ಜತೆಗೆ ಮಾತನಾಡಿ ಶೀಘ್ರವಾಗಿ ಚಾಲನೆ ಕೊಡಲಿದೆ ಎಂದರು.
ಭಾರತ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಮೋದಿ ಹಾಗೂ ಸಿಎಂ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ರಾಹುಲ್ ಅವರಿಗೆ ಎಸ್ಸಿ ಎಸ್ಟಿ ಅವರ ಮೀಸಲಾತಿ ಗೊತ್ತಾ ನಿಮಗೆ ಎಂದರಲ್ಲದೇ, ಸಿದ್ದರಾಮಯ್ಯ ಅವರೂ ಸಹ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಮಾಜಿಕ ಕಳಕಳಿ, ದಲಿತರ ಸಮಸ್ಯೆ, ಅಸ್ಪೃಶ್ಯತೆಯ ಸಮಸ್ಯೆ ಕಾಂಗ್ರೆಸ್ಗೆ ಗೊತ್ತಿಲ್ಲ. 40 ವರ್ಷ ಕಾಂಗ್ರೆಸ್ ಪಕ್ಷ ಪೌರ ಕಾರ್ಮಿಕರನ್ನ ತಿರುಗಿ ನೋಡಿಲ್ಲ. ಆದರೆ ಬೊಮ್ಮಾಯಿ ಸರ್ಕಾರ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡಿದರು. ಈಚೆಗೆ ಎಸ್ಸಿ ಎಸ್ಟಿ ಅವರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದಾರೆ.
ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರಿಗೆ ದಲಿತರ ಸಮಸ್ಯೆ ಗೊತ್ತಿಲ್ಲ. ನೀವು ಬರಿ ವೋಟ್ ಬ್ಯಾಂಕ್ ಮಾಡಿಕೊಂಡಿದ್ದೀರಿ. ಸುಳ್ಳು ಭರವಸೆ ನೀಡಿ 60 ವರ್ಷ ಆಡಳಿತ ನಡೆಸಿದೆ. ನಿಮಗೆ ನಾಚಿಕೆ ಆಗಬೇಕು. ನೀವು ಮನೆಗೆ ಹೋಗುವ ಕಾಲ ಬಂದಿದೆ. ಮುಂದಿನ ದಿನದಲ್ಲಿ ಬಿಜೆಪಿ ಬೆಂಬಲಿಸಿ ಅಧಿಕಾರ ತಂದು ಕೊಡಬೇಕು ಎಂದರು.
ಸಚಿವ ರಾಮುಲು ಮಾತನಾಡಿ, ಮೀಸಲಾತಿಯನ್ನು ಹಿಂದೆ ಕಾಂಗ್ರೆಸ್ ಸರ್ಕಾರ ಜಾಸ್ತಿ ಮಾಡಬಹುದಿತ್ತು. ಆದರೆ ನಮ್ಮವರ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ಆದರೆ ಮೀಸಲಾತಿ ವಿಚಾರದಲ್ಲಿ ನಾನು ಬದ್ದವಾಗಿದ್ದೆ. ಸಿಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದಿದ್ದೆ. ಸಿಎಂ ಅವರು ನಮಗೆ ಮೀಸಲಾತಿ ಕೊಡುವರು ಎನ್ನುವ ಭರವಸೆ ನನಗಿತ್ತು. ನಮ್ಮ ಸಮಾಜಕ್ಕೆ ಮೀಸಲಾತಿ ಜಾಸ್ತಿ ಮಾಡಿದೆ. ಇದು ದೊಡ್ಡ ಇತಿಹಾಸವಾಗಿದೆ. 3 ರಿಂದ 7ಕ್ಕೆ ಮೀಸಲು ಹೆಚ್ಚಳ ಮಾಡಲಾಗಿದೆ. ಮಕ್ಕಳಿಗೆ ಮೀಸಲಾತಿಯಿಂದ ಉದ್ಯೋಗದಲ್ಲಿ ಮೀಸಲು ಸಿಗಲಿದೆ. ಇಷ್ಟೊಂದು ದೊಡ್ಡ ಕೆಲಸವನ್ನು ಯಾವ ರಾಜಕೀಯ ಪಕ್ಷ ಮಾಡಿತ್ತಾ ? ಎಂದು ಪ್ರಶ್ನೆ ಮಾಡಿದರು. ಮೋದಿ, ಬೊಮ್ಮಾಯಿ, ನಳೀನ್ ಕುಮಾರ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ರಾಮುಲು ಬದುಕಿರುವ ತನಕ ಎಸ್ಸಿ,ಎಸ್ಟಿ ಜನ ಆ ಕಡೆ ಈ ಕಡೆ ಇದ್ದೀರಂತೆ. ನಾನು ಇರುವ ತನಕ ಯಾವ ಕಡೆಯೂ ಇರಬೇಡಿ. ಬಿಜೆಪಿ ಕಡೆ ಇರಿ. ನಾನು ಕೊಟ್ಟ ಮಾತಿಗೆ ತಪ್ಪಿದ ಮಾತಿಲ್ಲ. ಕೊಟ್ಟ ಮಾತಿಗೆ ಜೀವ ಕೊಡಲು ನಾನು ಸಿದ್ದನಿದ್ದೇನೆ. ಕುಷ್ಟಗಿ ದೊಡ್ಡನಗೌಡ ಪಾಟೀಲ ಅವರನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.