ತಾನು ಹೆಣೆದ ಬಲೆಗೆ ಬಿದ್ದ ಕೋಲ್ಕತ್ತಾದ ಕುವರ? ಗಂಗೂಲಿ-ಬಿಸಿಸಿಐ ಸಂಬಂಧ ಹಳಸಲು ಕಾರಣ…
ಇತ್ತೀಚಿನ ದಿಲ್ಲಿ ಸಭೆಯಲ್ಲಿ ಅವರ ವಿರುದ್ಧದ ಕೆಲಸದ ಶವಪೆಟ್ಟಿಗೆಯ ಮೇಲೆ ಕೊನೆಯ ಮೊಳೆ ಬಡಿಯಲಾಗಿತ್ತು
Team Udayavani, Oct 13, 2022, 5:30 PM IST
ಸೌರವ್ ಗಂಗೂಲಿ… ಪ್ರಿನ್ಸ್ ಆಫ್ ಬೆಂಗಾಲ್, ದಾದಾ, ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬ, ಬಿಸಿಸಿಐ ಬಿಗ್ ಬಾಸ್.. ಎಷ್ಟೆಲ್ಲಾ ಬಿರುದುಗಳು. ಬಿರುದುಗಳಿಂದ ಒಂದು ಕೈ ಹೆಚ್ಚೇ ಎಂಬಂತ್ತಿದ್ದ ಗಂಗೂಲಿಗೆ ಏನಾಯಿತು? ಗಂಗೂಲಿ ಎಂದರೆ ಬಿಸಿಸಿಐ ಎಂಬಲ್ಲಿಂದ ಯಾರಿಗೂ ಬೇಡವಾದ ಸ್ಥಿತಿಗೆ ಬರಲು ಕಾರಣವೇನು? ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಬಂಗಾಲದ ಯುವರಾಜ ಭಾರವಾದರೆ? ಅಥವಾ ಬಿಸಿಸಿಐನ ಒಳಗಿನ ಗೂಗ್ಲಿ ಎದುರಿಸುವಲ್ಲಿ ಗಂಗೂಲಿ ಸೋತರೆ? ಏನಿದು ಗಂಗೂಲಿ ವರ್ಸಸ್ ಬಿಸಿಸಿಐ ಕೇಸ್ ನ ಕಥೆ? …
2019ರ ಅಕ್ಟೋಬರ್ ನಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಆಳಲು ಸಿದ್ದರಾದರು. ಅದುವರೆಗಿನ ಕ್ರಿಕೆಟ್ ಹೊರತಾದ ಜನರಿಂದಲೇ ಆಳಲ್ಪಟ್ಟಿದ್ದ ಬಿಸಿಸಿಐಗೂ ಹೊಸ ಹುರುಪು ಬಂದಿತ್ತು. ಯುವರಾಜನ ಆಗಮನವೇ ಹೊಸ ವೇಗ ತಂದಿತ್ತು. ಖಡಕ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಗಂಗೂಲಿ ತನ್ನ ಆಡಳಿತದಲ್ಲೂ ಹೊಸ ಚಾರ್ಮ್ ತಂದಿದ್ದರು. ಮ್ಯಾಚ್ ಫಿಕ್ಸಿಂಗ್ ನಿಂದ ಕಂಗೆಟ್ಟಿದ್ದ ತಂಡವನ್ನು ವಿಶ್ವಕಪ್ ಫೈನಲ್ ವರೆಗೆ ಮುನ್ನಡೆಸಿದ್ದ ಗಟ್ಟಿಗ ಗಂಗೂಲಿ ಬಿಸಿಸಿಐನಲ್ಲೂ ಹೊಸ ಗಾಳಿ ಬೀಸಲು ಕಾರಣರಾಗಿದ್ದರು. ಅಧ್ಯಕ್ಷರಾಗಿ ಕೆಲವೇ ಸಮಯದಲ್ಲಿ ಗಂಗೂಲಿ ಭಾರತದಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಸಿಯೇ ಬಿಟ್ಟರು. ಅಷ್ಟಿತ್ತು ದಾದಾ ವೇಗ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತ ವ್ಯವಸ್ಥೆ ಹೇಗಿದೆ ಎಂದು ನೋಡೋಣ. ಬಿಸಿಸಿಐ ಐದು ಪ್ರಮುಖ ಹುದ್ದೆಗಳನ್ನು ಹೊಂದಿದೆ. ಅವುಗಳೆಂದರೆ ಅಧ್ಯಕ್ಷ (ಸೌರವ್ ಗಂಗೂಲಿ), ಕಾರ್ಯದರ್ಶಿ (ಜಯ್ ಶಾ), ಖಜಾಂಚಿ (ಅರುಣ್ ಧುಮಾಲ್), ಉಪಾಧ್ಯಕ್ಷ (ರಾಜೀವ್ ಶುಕ್ಲಾ) ಮತ್ತು ಜಂಟಿ ಕಾರ್ಯದರ್ಶಿ (ಜಯೇಶ್ ಜಾರ್ಜ್). ಈ ಪ್ರಮುಖ ಹುದ್ದೆಗಳ ಹೊರತಾಗಿ, ಐಪಿಎಲ್ ಅಧ್ಯಕ್ಷ ಸ್ಥಾನವನ್ನು ಅತ್ಯಂತ ನಿರ್ಣಾಯಕ ಹುದ್ದೆ ಎಂದು ಪರಿಗಣಿಸಲಾಗಿದೆ. (ಸದ್ಯ ಬ್ರಜೇಶ್ ಪಟೇಲ್ ಈ ಹುದ್ದೆಯಲ್ಲಿದ್ದಾರೆ. ಈ ಎಲ್ಲಾ ಹುದ್ದೆಗಳು ಮೂರು ವರ್ಷಗಳ ಅಧಿಕಾರವಧಿಯನ್ನು ಹೊಂದಿವೆ)
2019ರಲ್ಲಿ ಅಧಿಕಾರಕ್ಕೆ ಬಂದ ಸೌರವ್ ಗಂಗೂಲಿ ಮತ್ತ ಜಯ್ ಶಾ ಜೋಡಿ ಕಮಾಲ್ ಮಾಡಿತ್ತು. ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವದ ಈ ಜೋಡಿ ಮತ್ತೆ ಅದೇ ಅಧಿಕಾರದಲ್ಲಿ ಮುಂದುವರಿಯುತ್ತದೆ ಎಂಬರ್ಥದ ಮಾತುಗಳು ಹಲವು ವಾರಗಳಿಂದ ಕೇಳಿ ಬರುತ್ತಿತ್ತು. ಆದರೆ ಬಿಸಿಸಿಐ ಎಂಬ ನಿಗೂಢ ಜಗತ್ತು ಅಷ್ಟು ಸುಲಭವೇ? ಟ್ವಿಸ್ಟ್ ಇನ್ ದಿ ಟೇಲ್ ಎಂಬಂತೆ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಬಿನ್ನಿ ಬರಲಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಹಾಗಾದರೆ ಗಂಗೂಲಿ ಐಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಸಮಾಧಾನ ಪಟ್ಟಿದ್ದ ಅಭಿಮಾನಿಗಳಿಗೆ ಅಲ್ಲೂ ನಿರಾಸೆಯಾಗಿದೆ. ಯಾಕೆಂದರೆ ಬಿಸಿಸಿಐ ಅಧ್ಯಕ್ಷ ಸ್ಥಾನ ತೊರೆದು ಗಂಗೂಲಿ ಬರುತ್ತಿಲ್ಲ, ಬದಲಾಗಿ ‘ನಿಮ್ಮ ಸೇವೆ ಸಾಕು, ನೀವಿನ್ನು ಹೋಗಬಹುದು’ ಎಂದು ಕಳುಹಿಸಿಕೊಡಲಾಗುತ್ತದೆ. ಈಗ ನೀವು ಮೊದಲ ಪ್ಯಾರಾದ ಪೀಠಿಕೆಯನ್ನು ಮತ್ತೆ ಓದಿ. ಪ್ರತಿ ಶಬ್ಧದ ತೂಕ ಈಗ ಹೆಚ್ಚಾಗಬಹುದು.
ಗಂಗೂಲಿ ಪದವಿ ಹೋದರೂ ಜಯ್ ಶಾ ಮತ್ತೆ ಕಾರ್ಯದರ್ಶಿ ಆಗುವುದು ನಿಶ್ಚಿತ. ದಾದಾ ವಿರುದ್ಧ ಶಾ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಗಂಗೂಲಿ ಮತ್ತು ಬಿಸಿಸಿಐ ನಡುವಿನ ಸಂಬಂಧದ ಈಗ ಹಳಸಿದೆ. ಇದರ ವಾಸನೆ ಈಗ ಬಗೆ ಬಗೆಯ ಸುದ್ದಿ ರೂಪದಲ್ಲಿ ಊರಗಲ ಹರಡುತ್ತಿದೆ. ಅಂತೆ ಕಂತೆಗಳ ಕಟ್ಟು ಈಗ ಮಾರುಕಟ್ಟೆಯಲ್ಲಿ ಭಾರೀ ಬಿಕರಿಯಾಗುತ್ತಿದೆ. ಗಂಗೂಲಿ ಬಿಜೆಪಿ ಸೇರಲು ಒಪ್ಪದ ಕಾರಣ ಕಮಲ ಪಕ್ಷ ಈ ರೀತಿ ಮಾಡಿಸಿದೆ ಎಂದು ಟಿಎಂಸಿ ರಾಜಕೀಯ ದಾಳ ಎಸೆದಿದೆ.
ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಗಂಗೂಲಿ ಅವರ ಕಾರ್ಯ ವಿಧಾನದ ಬಗ್ಗೆ ಸಾಮೂಹಿಕ ಟೀಕೆ ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಗಂಗೂಲಿ ಭಾಗಿಯಾಗದೇ ಇರದ ಆ ಸಭೆಯಲ್ಲಿ ದಾದಾ ವಿರುದ್ಧ ರಣತಂತ್ರ ರೂಪಿಸಲಾಗಿದೆ ಎನ್ನಲಾಗಿದೆ. ಮಂಡಳಿಯ ಎಲ್ಲರ ವಿಶ್ವಾಸ ಕಳೆದುಕೊಂಡಿರುವ ಗಂಗೂಲಿ ಅವರನ್ನು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಳುಹಿಸಲು ಬಿಸಿಸಿಐ ಆಸಕ್ತಿ ತೋರಿಸುತ್ತಿಲ್ಲ.
ಸೌರವ್ ಗಂಗೂಲಿ ಅವರು ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂಬುದು ಈ ಹಿಂದೆಯೇ ತೀರ್ಮಾನವಾಗಿತ್ತು. ಇತ್ತೀಚಿನ ದಿಲ್ಲಿ ಸಭೆಯಲ್ಲಿ ಅವರ ವಿರುದ್ಧದ ಕೆಲಸದ ಶವಪೆಟ್ಟಿಗೆಯ ಮೇಲೆ ಕೊನೆಯ ಮೊಳೆ ಬಡಿಯಲಾಗಿತ್ತು ಅಷ್ಟೇ. ಯಾಕೆಂದರೆ ದಿಲ್ಲಿಯ ‘ಆ’ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಸೇರಿದಂತೆ ಕೆಲವು ‘ಹಳೆಯ ಹುಲಿಗಳು’ ಭಾಗವಹಿಸಿದ್ದರು. ಗಂಗೂಲಿ ಅವಧಿಯಲ್ಲಿ ಬಿಸಿಸಿಐ ಕಚೇರಿಯಿಂದ ದೂರ ಉಳಿದಿದ್ದ ಶ್ರೀನಿವಾಸನ್ ಮತ್ತೆ ಬಂದಿದ್ದಾರೆಂದರೆ ಅದು ಸುಲಭದ ಮಾತಲ್ಲ. ಅಲ್ಲಿ ಅರ್ಥ ಮಾಡಿಕೊಳ್ಳಲು ಹಲವು ವಿಚಾರಗಳಿವೆ.
ಗಂಗೂಲಿ ಬಗ್ಗೆ ಭಿನ್ನಾಭಿಪ್ರಾಯ ಬರಲು ಕಾರಣ ಏನೆಂದು ನೋಡಿದರೆ ಮೇಲ್ನೋಟಕ್ಕೆ ಕೆಲವನ್ನು ಪಟ್ಟಿ ಮಾಡಬಹುದು. ತನ್ನ ಡ್ಯಾಶಿಂಗ್ ವ್ಯಕ್ತಿತ್ವದಿಂದಲೇ ಹೆಸರು ಪಡೆದಿದ್ದ ದಾದಾ ಅದೇ ಕಾರಣಕ್ಕೆ ಹಲವು ವಿರೋಧಗಳನ್ನೂ ಕಟ್ಟಿಕೊಂಡಿದ್ದಾರೆ. ಕೋವಿಡ್ ನಡುವೆಯೂ ಐಪಿಎಲ್ ನಡೆಸಿದಾಗ ಗಂಗೂಲಿ ಟೀಕೆಗೆ ಒಳಗಾಗಿದ್ದರೆ, ಯುಎಇನಲ್ಲಿ ಯಶಸ್ವಿಯಾಗಿ ಕೂಟ ನಡೆದಾಗ ಅದರ ಕ್ರೆಡಿಟ್ ಶಾ ಪಾಲಿಗೆ ಹೋಗಿತ್ತು ಎನ್ನುವುದೂ ಮುಖ್ಯ. ಅಲ್ಲದೆ ಗಂಗೂಲಿ ತನ್ನ ವ್ಯಾಪ್ತಿ ಮೀರಿ ಅಧಿಕಾರ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಆಹ್ವಾನ ಇಲ್ಲದೆಯೂ ಟೀಮ್ ಇಂಡಿಯಾ ಆಯ್ಕೆ ಸಭೆಗಳಿಗೆ ಅನೇಕ ಸಂದರ್ಭಗಳಲ್ಲಿ ಬಲವಂತವಾಗಿ ಹಾಜರಾಗಿದ್ದಾರೆ, ತಂಡದ ಆಯ್ಕೆಯಲ್ಲಿ ಸೌರವ್ ಮಧ್ಯಪ್ರವೇಶ ಮಾಡುತ್ತಿದ್ದರು ಎಂಬ ವರದಿಗಳು ಬರುತ್ತಿದೆ.
ಎಲ್ಲಕ್ಕಿಂತ ಹೆಚ್ಚು ಗಂಗೂಲಿ ಸಾರ್ವಜನಿಕವಾಗಿ ಟೀಕೆಗೆ ಒಳಗಾಗಿದ್ದು ವಿರಾಟ್ ಕೊಹ್ಲಿ ವಿಚಾರದಲ್ಲಿ. ವಿರಾಟ್ ಕೊಹ್ಲಿ ಟಿ20 ನಾಯಕತ್ವಕ್ಕೆ ರಾಜೀನಾಮೆ, ಏಕದಿನ ನಾಯಕತ್ವದ ಪದಚ್ಯುತಿ ಮತ್ತು ಟೆಸ್ಟ್ ನಾಯಕತ್ವ ವಿಚಾರದಲ್ಲಿ ಸೌರವ್ ಗಂಗೂಲಿ ಅವರ ನಡೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಸಮಯದಲ್ಲಿ ಗಂಗೂಲಿ ನೀಡಿದ ಹೇಳಿಕೆ, ಬಳಿಕ ವಿರಾಟ್ ತಿರುಗೇಟು ಎಲ್ಲವೂ ಟೀಂ ಇಂಡಿಯಾ ವಿಶೇಷವಾಗಿ ವಿರಾಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.
ಸದ್ಯ ಸೌರವ್ ಗಂಗೂಲಿ ಅವರ ಬಿಸಿಸಿಐ ಆಡಳಿತ ಮುಗಿಯುವ ಹಂತಕ್ಕೆ ಬಂದಿದೆ. ಬಿಸಿಸಿಐನಲ್ಲಿ ಏನೋ ಮಾಡಲು ಬಂದ ಗಂಗೂಲಿ ಇದೀಗ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಆಟಗಾರನಾಗಿದ್ದ ಸಮಯದಲ್ಲೂ ಚಾಪೆಲ್ ವ್ಯೂಹದಲ್ಲಿ ಸಿಲುಕಿ ನಂತರ ಮೇಲೆದ್ದು ಬಂದ ಗಂಗೂಲಿ ಈ ಇನ್ನಿಂಗ್ ನಲ್ಲೂ ಮ್ಯಾಜಿಕ್ ಮಾಡುತ್ತಾರಾ ಎಂಬ ನಿರೀಕ್ಷೆ ದಾದಾ ಅಭಿಮಾನಿಗಳದ್ದು.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.