ಉದಯವಾಣಿ “ನವರೂಪ ಉತ್ಸವ”ದ ಬಂಪರ್ ಬಹುಮಾನ ವಿತರಣೆ
ನಮ್ಮಲ್ಲಿರುವ ನೈಜತೆ ಅರಿತರೆ "ನವರೂಪ' ತಿಳಿಯುವುದು: ಉಷಾಪ್ರಭಾ ನಾಯಕ್
Team Udayavani, Oct 13, 2022, 6:54 PM IST
ಮಣಿಪಾಲ: ನವರೂಪ ನಮ್ಮಲ್ಲಿರುವ 9 ಬಗೆಯ ಭಾವನೆಯನ್ನು ಪ್ರತಿನಿಧಿಸುತ್ತದೆ. 10ನೇ ಬಣ್ಣವಾಗಿರುವ ನಮ್ಮಲ್ಲಿನ ನೈಜತೆಯನ್ನು ಅರ್ಥಮಾಡಿಕೊಂಡಾಗ ನವರೂಪ ಏನೆಂಬುದು ತಿಳಿಯುತ್ತದೆ ಎಂದು ಮಂಗಳೂರಿನ ಎಕ್ಸ್‌ಪರ್ಟ್ ವಿದ್ಯಾಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಉಷಾಪ್ರಭಾ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ನವರಾತ್ರಿಯ ಸಂಭ್ರಮದಲ್ಲಿ ಉದಯವಾಣಿ ಹಮ್ಮಿಕೊಂಡಿದ್ದ “ನವರೂಪ ಉತ್ಸವ’ದಲ್ಲಿ ಭಾಗವಹಿಸಿ ಬಂಪರ್ ಬಹುಮಾನ ಪಡೆದವರಿಗೆ ಉದಯವಾಣಿ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಉದಯವಾಣಿಯ ನವರೂಪ ಉತ್ಸವ ಎಲ್ಲರನ್ನು ಒಟ್ಟುಮಾಡಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲರೂ ಸೇರಿಕೊಂಡು ನವರೂಪ ಆಚರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ, ಎಲ್ಲದರಲ್ಲೂ ವಿಭಜಿಸುವ ಪ್ರವೃತ್ತಿ ಹೆಚ್ಚುತ್ತಿವೆ. ಆದರೆ ಉದಯವಾಣಿಯ ನವರೂಪ ಉತ್ಸವ ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿದೆ ಎಂದು ಹೇಳಿದರು.
ಬಿಳಿ ಬಣ್ಣ ಶಾಂತ ಸ್ವಭಾವನ್ನೂ, ಕೆಂಪು ಬಣ್ಣ ವ್ಯಾಘ್ರರೂಪವನ್ನು ಹೀಗೆ ಒಂದೊಂದು ಬಣ್ಣವೂ ಒಂದೊಂದು ರೀತಿಯ ಭಾವನೆ ಒಳಗೊಂಡಿದೆ. ನವರಸ, ನವರಪೂಗಳ ಅನಂತರದ 10ನೇ ರೂಪವೂ ಇದೆ. ಹೆಣ್ಣನ್ನು ಸುಲಭದಲ್ಲಿ ಹೇಗೆ ಅರ್ಥಮಾಡಿಕೊಳ್ಳಲು ಅಸಾಧ್ಯವೂ ಹಾಗೆಯೇ 10ನೇ ಬಣ್ಣವೇ ನಮ್ಮೊಳಗಿನ ನೈಜ್ಯತೆ. ಅದನ್ನು ನಾವು ಸರಿಯಾಗಿ ಅರ್ಥೈಸಿಕೊಂಡಾಗ ಉಳಿದ 9 ಬಣ್ಣ ಮತ್ತದರ ಭಾವನೆ ಸುಲಭವಾಗಿ ಅರಿವಿಗೆ ಬರುತ್ತದೆ ಎಂದರು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಎಂಡಿ ಹಾಗೂ ಸಿಇಒ ವಿನೋದ್ ಕುಮಾರ್ ಅವರು ಮಾತನಾಡಿ, ನವರೂಪ ಉತ್ಸವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗಿದೆ. ಎಲ್ಲರಿಂದಲೂ ಅಭೂತಪೂರ್ವವಾದ ಪ್ರತಿಕ್ರಿಯೆ ದೊರೆತಿದೆ. ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಮಂದಿ ಸಾಧಕಿಯರನ್ನು ರಾಯಭಾರಿಗಳಾಗಿ ಗುರುತಿಸಿದ್ದೆವು. ಅವರೆಲ್ಲರೂ ಒಪ್ಪಿಕೊಂಡು ಕಾರ್ಯಕ್ರಮದ ಭಾಗವಾಗಿ ಇನ್ನಷ್ಟು ಮೆರಗು ತುಂಬಿದರು ಎಂದು ಹೇಳಿದರು.
ಸಂಪಾದಕ ಅರವಿಂದ ನಾವಡ ಅವರು ಪ್ರಸ್ತಾವನೆಗೈದವರು. ಎಚ್.ಆರ್.ವಿಭಾಗದ ವ್ಯವಸ್ಥಾಪಕಿ ಉಷಾರಾಣಿ ಕಾಮತ್ ಅದೃಷ್ಟಶಾಲಿಗಳ ಪಟ್ಟಿ ವಾಚಿಸಿದರು. ಪ್ರಸರಣ ಮತ್ತು ವ್ಯಾಪಾರ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಸತೀಶ್ ಶೆಣೈ ವಂದಿಸಿದರು. ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ(ಮ್ಯಾ ಗ ಜಿನ್ಸ್ ಆ್ಯಂಡ್ ಸ್ಪೆಶಲ್ ಪ್ರಾಜೆಕ್ಟ್ಸ್) ರಾಮಚಂದ್ರ ಮಿಜಾರು ಸ್ವಾಗತಿಸಿ, ನಿರೂಪಿಸಿದರು.
ಬಂಪರ್ ಬಹುಮಾನ ವಿತರಣೆ:
ಉಡುಪಿ ನಗರಸಭೆ ಮಹಿಳಾ ಪೌರಕಾರ್ಮಿಕ ಸಿಬಂದಿ ತಂಡ, ಮೆಟ್ರೋ ಲೇಡಿಸ್ ಮಂಗಳೂರು ತಂಡ ಹಾಗೂ ಅಟ್ಟಾಜೆ ಪುಂಜಾಲಕಟ್ಟೆ ವೃಷ್ಟಿ ಮತ್ತು ಬಳಗಕ್ಕೆ ಉಷಾಪ್ರಭಾ ನಾಯಕ್ ಅವರು ಬಂಪರ್ ಬಹುಮಾನ ವಿತರಿಸಿದ ರು.
ಪ್ರತಿ ಮಹಿಳೆಯೂ ಸಾಧಕಿ: ಡಾ| ಸಂಧ್ಯಾ ಎಸ್.ಪೈ :
ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರು ಮಾತನಾಡಿ, ಜೀವನದ ಪ್ರತಿದಿನ, ಪ್ರತಿಗಳಿಗೆಯಲ್ಲೂ ನವರೂಪದ ಪ್ರಭಾವವನ್ನು ಕಾಣುತ್ತೇವೆ. ನಮ್ಮ ಮೂಲ ಸ್ವರೂಪ ಬಿಳಿ ಎಂಬುದನ್ನು ನೆನಪಿಟ್ಟುಕೊಂಡರೆ ಎಲ್ಲ ಬಣ್ಣಗಳು ಕೂಡ ಇದಕ್ಕೆ ಪೂರಕವಾಗಿದೆ. ಎಲ್ಲ ಬಣ್ಣಗಳು ಒಂದಾದ ಬಿಳಿಯಾಗುತ್ತದೆ ಎಂಬುದನ್ನು ಅರಿತಾಗ ಜೀವನ ಸುಂದರವಾಗುತ್ತದೆ. ಕೆಲವರ ಸಾಧನೆ ಸಮಾಜಕ್ಕೆ ಕಾಣುತ್ತದೆ, ಇನ್ನು ಕೆಲವರ ಸಾಧನೆ ಕಾಣುವುದಿಲ್ಲ. ಆದರೆ ಪ್ರತಿ ಹೆಣ್ಣು ಸಾಧಕಿಯೇ ಆಗಿರುತ್ತಾಳೆ. ದೇಶ ನಿಂತಿರುವುದು ಸಂಸ್ಕೃತಿಯ ಮೇಲೆ ಹಾಗೂ ಆ ಸಂಸ್ಕೃತಿಯನ್ನು ಮಹಿಳೆ ಕಾಪಿಟ್ಟುಕೊಂಡು ಬಂದಿದ್ದಾಳೆ. ಹೀಗಾಗಿ ಅವಳು ದೊಡ್ಡ ಸಾಧಕಿ ಎಂದು ಬಣ್ಣಿಸಿದರು.
ನವರೂಪಕ್ಕೆ ಸಂಬಂಧಿಸಿದಂತೆ ಪುರುಷರಿಗೆ ಅಥವಾ ಅತ್ತೆ-ಸೊಸೆ ಜೋಡಿ, ಗಂಡ-ಹೆಂಡತಿ ಜೋಡಿ ಚಿತ್ರಗಳನ್ನು ಮುಂದಿನ ವರ್ಷಗಳಲ್ಲಿ ಆಹ್ವಾನಿಸಬಹುದು ಎಂಬ ಸಲಹೆ ನೀಡಿದರು.
ನಾವೆಲ್ಲರೂ ರೋಟರಿ ಸದಸ್ಯರು. ಸಮಾಜಕ್ಕೆ ಏನಾದರೂ ಕೊಡುಗೆ ನೀಡುತ್ತಿರುತ್ತೇವೆ. ಈಗ ನಮಗೆ ಬಹುಮಾನ ಬಂದಿದೆ. ಖಂಡಿತವಾಗಿಯೂ ಈ ಬಹುಮಾನದ ಮೊತ್ತವನ್ನು ಸಮಾಜದ ಉತ್ತಮ ಕಾರ್ಯಕ್ಕೆ ಬಳಸುತ್ತೇವೆ. ಉದಯವಾಣಿ ನವರೂಪ ಉತ್ಸವ ನಮಗೆ ಸಾಕಷ್ಟು ಖುಷಿ ಕೊಟ್ಟಿದೆ.-ಮೆಟ್ರೋ ಲೇಡಿಸ್ ಮಂಗಳೂರು ತಂಡದ ಸದಸ್ಯರು
ನಮಗೆ ಬಹುಮಾನ ಸಿಕ್ಕಿದ ವಿಷಯ ತಿಳಿದು ತುಂಬಾ ಖುಷಿಯಾಗಿದೆ. ಬಹುಮಾನದ ನಿರೀಕ್ಷೆಯೂ ಮಾಡಿರಲಿಲ್ಲ. ನವರೂಪ ಉತ್ಸವ ನಮ್ಮ ಸಡಗರವನ್ನು ಇನ್ನಷ್ಟು ಹೆಚ್ಚಿದೆ. – ಉಡುಪಿ ಮಹಿಳಾ ಪೌರಕಾರ್ಮಿಕರ ತಂಡದ ಸದಸ್ಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.