![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 15, 2022, 7:00 AM IST
ನವದೆಹಲಿ: ಕೊರೊನಾ ಕಾಲದಲ್ಲಿ ಹೆಚ್ಚು ಕಡಿಮೆ ಸ್ಥಗಿತವಾಗಿದ್ದ ಜನರ ಖರೀದಿ ಸಾಮರ್ಥ್ಯ, ಈಗ ಹಲವಾರು ಪಟ್ಟು ಏರಿಕೆಯಾಗಿದ್ದು, ಆರ್ಥಿಕ ಚೇತರಿಕೆಯ ಆಶಾಭಾವ ತೋರುತ್ತಿದೆ.
ಸೆಪ್ಟೆಂಬರ್ ಕಡೆಯ ವಾರದಲ್ಲಿ ಆರಂಭವಾಗಿರುವ “ಖರೀದಿ ಹಬ್ಬ’ ನವೆಂಬರ್ ಮೊದಲ ವಾರದ ವರೆಗೂ ಮುಂದುವರಿಯಲಿದೆ ಎಂದು ಅಖಿಲ ಭಾರತ ವ್ಯಾಪಾರಸ್ಥರ ಒಕ್ಕೂಟ(ಸಿಎಐಟಿ) ಅಭಿಪ್ರಾಯಪಟ್ಟಿದೆ. ಅಂದರೆ, ಈ ಅವಧಿಯಲ್ಲಿ ಅಂದಾಜು 27 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ವಹಿವಾಟನ್ನು ಕಾಣಬಹುದಾಗಿದೆ ಎಂದಿದೆ.
ಈ ವೇಳೆಯಲ್ಲಿ ಗ್ರಾಹಕರು ಕಾರುಗಳು, ದ್ವಿಚಕ್ರವಾಹನಗಳು, ಟೀವಿ, ಫ್ರಿಜ್, ಪ್ರವಾಸ, ಆಭರಣ ಖರೀದಿಯನ್ನು ಎಗ್ಗಿಲ್ಲದೇ ಮಾಡಿದ್ದಾರೆ. ಈ ಮೂಲಕ ಆರ್ಥಿಕತೆಗೆ ಜೀವ ತುಂಬಿದ್ದಾರೆ ಎಂದು ಸಿಎಐಟಿ ಹೇಳಿದೆ.
ಈ ಅವಧಿಯಲ್ಲಿ ಖರೀದಿಯನ್ನು ಕೊರೊನಾ ಪೂರ್ವಕ್ಕೆ ಹೋಲಿಕೆ ಮಾಡಿದರೆ ದುಪ್ಪಟ್ಟಾಗಿದೆ. ಹಾಗೆಯೇ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.25ರಷ್ಟು ಹೆಚ್ಚಾಗಿದೆ.
ಒಟ್ಟಾರೆಯಾಗಿ 15.2 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಆಫ್ಲೈನ್ ಮಾರಾಟ ಮತ್ತು 11.8 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಆನ್‌ಲೈನ್ ಸೇಲ್ ಆಗಿದೆ ಎಂದು ಮಾರುಕಟ್ಟೆ ತಿಳಿಸಿದೆ.
ಸಾಮಾನ್ಯವಾಗಿ ಪ್ರತಿವರ್ಷವೂ ಚಿಲ್ಲರೆ ವ್ಯಾಪಾರ ಈ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ವೇಳೆಯಲ್ಲಿ ತುಸು ಹೆಚ್ಚಾಗಿಯೇ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ, ಈ ತಿಂಗಳುಗಳಲ್ಲಿ ಒಂದರ ಹಿಂದೆ ಒಂದು ಹಿಂದೂ ಹಬ್ಬಗಳು ಬರುತ್ತವೆ. ಜತೆಗೆ ಮದುವೆಯ ಸೀಸನ್ ಕೂಡ ಇರುತ್ತದೆ. ಹಾಗೆಯೇ ಈ ಅವಧಿಯಲ್ಲಿ ಖರೀದಿ ಮಾಡುವುದು ಉತ್ತಮ ಎಂಬ ನಂಬಿಕೆಯೂ ಜನರಲ್ಲಿದೆ. ಹೀಗಾಗಿಯೇ ಈ ಸಂದರ್ಭದಲ್ಲಿ ಹೆಚ್ಚಾಗಿ ಖರೀದಿ ಮಾಡುತ್ತಾರೆ ಎಂದು ವ್ಯಾಪಾರಿಗಳ ಒಕ್ಕೂಟ ಹೇಳಿದೆ.
ಈಗ ಹೆಚ್ಚು ಏಕೆ?
ಕೊರೊನಾ ಕಾಣಿಸಿಕೊಂಡ ನಂತರದಲ್ಲಿ ಜನರಲ್ಲಿನ ಖರೀದಿ ಸಾಮರ್ಥ್ಯವೇ ಹೆಚ್ಚು ಕಡಿಮೆ ನಿಂತುಹೋಗಿತ್ತು. ಕೆಲಸ ಕಳೆದುಕೊಂಡವರು, ವೇತನ ಕಡಿತಗೊಂಡವರು ಹೆಚ್ಚಾಗಿದ್ದರಿಂದ, ಇಂಥ ವಸ್ತುಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಿರಲಿಲ್ಲ. ಆದರೆ, ಈ ವರ್ಷದ ಈ ಹಬ್ಬದ ಋತುವಿನಲ್ಲಿ ಕೊರೊನಾದ ಭಯವೇನಿಲ್ಲ. ಹಾಗೆಯೇ, ಕಂಪನಿಗಳು ಜನರಿಗೆ ಉದ್ಯೋಗವಕಾಶ ಹೆಚ್ಚಿಸುತ್ತಿರುವುದಲ್ಲದೇ, ವೇತನ ಹೆಚ್ಚಳ, ಬಡ್ತಿ, ಬೋನಸ್ ಕೂಡ ನೀಡುತ್ತಿವೆ. ಹೀಗಾಗಿ, ಖರೀದಿ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.
ಮುಖ್ಯಾಂಶಗಳು
1. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಗಣನೀಯ ಏರಿಕೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ತಿಂಗಳ ಆರಂಭದಲ್ಲಿ ಶೇ.57ರಷ್ಟು ಹೆಚ್ಚಳ.
2. ಸೆಪ್ಟೆಂಬರ್ ತಿಂಗಳಲ್ಲಿ ಗೃಹ ಮಾರಾಟವೂ ಹಿಂದಿನ ವರ್ಷದ ಇದೇ ವೇಳೆಗೆ ಹೋಲಿಕೆ ಮಾಡಿದರೆ ಶೇ.70ರಷ್ಟು ಹೆಚ್ಚಳ. ಅದೂ ದೇಶದ ಪ್ರಮುಖ ಏಳು ನಗರಗಳಲ್ಲಿ ಖರೀದಿ ಹೆಚ್ಚಳ.
3. ನಗರ ಪ್ರದೇಶದಲ್ಲಿ ಆಭರಣ ಖರೀದಿಯೂ ಹೆಚ್ಚಳ. ಮಳೆಯ ಕಾರಣದಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಒಂದಷ್ಟು ಕಡಿಮೆ.
4. ಪೆಟ್ರೋಲ್ ಮತ್ತು ವಾಹನಗಳ ದರ ಏರಿಕೆ ಹೊರತಾಗಿಯೂ ಕಾರುಗಳ ಖರೀದಿಯಲ್ಲೂ ಗಣನೀಯ ಏರಿಕೆ.
5. ಚಿಲ್ಲರೆ ವ್ಯಾಪಾರದಲ್ಲೂ 2021ರ ಸೆಪ್ಟೆಂಬರ್‌ಗಿಂತ ಈ ಬಾರಿ ಶೇ.26ರಷ್ಟು ಹೆಚ್ಚಳ
6. ಗಾರ್ಮೆಂಟ್ಸ್, ಬಂಗಾರ, ಮನೆ ಖರೀದಿಯಲ್ಲಿ ಈ ಹಬ್ಬದ ಋತುವಿನಲ್ಲಿ ಶೇ.76 ಹೆಚ್ಚಳವಾಗುವ ಸಾಧ್ಯತೆ
ಹಣದುಬ್ಬರ ಇಳಿಕೆ
ಆರ್ಥಿಕ ಚೇತರಿಕೆಯ ಖುಷಿ ಸುದ್ದಿ ನಡುವೆಯೇ, ಸೆಪ್ಟೆಂಬರ್‌ನಲ್ಲಿ ದೇಶದ ಹಣದುಬ್ಬರ ಪ್ರಮಾಣವೂ ಶೇ.10.7ಕ್ಕೆ ಇಳಿಕೆಯಾಗಿದೆ. ಇದು ಹೋಲ್‌ಸೇಲ್ ಬೆಲೆ ಆಧಾರಿತ ಹಣದುಬ್ಬರವಾಗಿದ್ದು 18 ತಿಂಗಳ ಹಿಂದಿನ ಹಂತಕ್ಕೆ ತಲುಪಿದೆ. 2021ರ ಏಪ್ರಿಲ್‌ನಲ್ಲಿ ಈ ಪ್ರಮಾಣದಲ್ಲಿ ಹಣದುಬ್ಬರ ಇತ್ತು. ಆಗಸ್ಟ್‌ನಲ್ಲಿ ಶೇ.12.41ರಷ್ಟಿದ್ದ ಹಣದುಬ್ಬರ ಸೆಪ್ಟೆಂಬರ್‌ಗೆ ಕಡಿಮೆಯಾಗಿದೆ. ಹಾಗೆಯೇ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲೂ ಶೇ.11.80ರಷ್ಟು ಹಣದುಬ್ಬರ ಪ್ರಮಾಣವಿತ್ತು.
ಅಗತ್ಯವಸ್ತುಗಳ ದರದಲ್ಲಿ ಕೊಂಚ ಇಳಿಕೆಯಾಗುತ್ತಿರುವುದು ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗಬಹುದು ಎಂಬ ನಿರೀಕ್ಷೆಯ ಮೇರೆಗೆ ಹಣದುಬ್ಬರದಲ್ಲಿ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಭಾರತದ ಆರ್ಥಿಕತೆಯು ಸುಸ್ಥಿರ ಹಾದಿಯಲ್ಲಿದ್ದು, ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸುತ್ತದೆ. ಆದರೂ, ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಂಡರೆ, ನಮ್ಮ ರಫ್ತಿಗೆ ತೊಂದರೆಯಾಗುತ್ತದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕಡಿಮೆಯಾಗುತ್ತದೆ. ಈ ಎಲ್ಲ ಸಂಗತಿಗಳು ಅರಿವಿದ್ದು, ನಾವು ಚೇತರಿಕೆಯ ಹಾದಿಯಲ್ಲಿದ್ದೇವೆ.
-ನಿರ್ಮಲಾ ಸೀತಾರಾಮನ್, ಕೇಂದ್ರ ವಿತ್ತ ಸಚಿವೆ
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.