ಖರ್ಗೆ ಹೆಗಲ ಮೇಲೆ ಕಾಂಗ್ರೆಸ್ ಪುನರ್ ಸಂಘಟನೆ ಹೊಣೆ
Team Udayavani, Oct 20, 2022, 6:00 AM IST
ಕಾಂಗ್ರೆಸ್‌ನ ಹಿರಿಯ ನಾಯಕ, ಕರ್ನಾಟಕದ ಅನುಭವಿ ರಾಜಕಾರಣಿ, 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಗಾದಿಗೇರಿದ್ದಾರೆ. ಸುಮಾರು 24 ವರ್ಷಗಳ ಬಳಿಕ ನೆಹರೂ-ಗಾಂಧಿ ಕುಟುಂಬೇತರ ನಾಯಕರೊಬ್ಬರು ಈ ಹುದ್ದೆಗೆ ಏರುತ್ತಿರುವುದು ವಿಶೇಷ. ರಾಜಕೀಯ ವಿಶ್ಲೇಷಕರ ಪ್ರಕಾರ ತಡವಾಗಿಯಾದರೂ ಖರ್ಗೆ ಅವರ ಪಕ್ಷ ನಿಷ್ಠೆ ಗುರುತಿಸಿ, ಕಾಂಗ್ರೆಸ್ ಅತ್ಯುನ್ನತ ಸ್ಥಾನಮಾನ ನೀಡಿದೆ.
ಇದನ್ನು ಅತ್ಯುನ್ನತ ಸ್ಥಾನದ ಅಧಿಕಾರ ಎಂದು ಪರಿಗಣಿಸುವುದರ ಜತೆಗೆ ಖರ್ಗೆ ಮುಂದೆ ಅಗಾಧ ಸವಾಲುಗಳಿವೆ ಎನ್ನುವುದನ್ನು ಮರೆಯುವ ಹಾಗಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ ಎಂಬ ವಾತಾವರಣ ಇದೆ. ಒಂದೊಂದೇ ರಾಜ್ಯಗಳನ್ನು ಕಳೆದುಕೊಂಡು ಬಂದಿರುವ ಪಕ್ಷವು ಎಷ್ಟೋ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಮುಂದೆ ಸಣ್ಣ ಪಕ್ಷ ವಾಗಿ ಗುರುತಿಸಿಕೊಂಡಿದೆ. ಇಂಥ ಸಮಯದಲ್ಲಿ ಖರ್ಗೆ ಅಧ್ಯಕ್ಷರಾಗಿರುವುದು ಸಹಜವಾಗಿಯೇ ಆ ಪಕ್ಷದಲ್ಲಿ ಹೊಸ ನಿರೀಕ್ಷೆಗೆ ದಾರಿ ಮಾಡಿಕೊಟ್ಟಿದೆ. ಖರ್ಗೆ ಅವರು ಗಾಂಧಿ ಕುಟುಂಬಕ್ಕೆ ತೋರುತ್ತಿರುವ ಪರಮ ನಿಷ್ಠಾವಂತಿಕೆ ನಡುವೆಯೂ ಗಾಂಧಿಯೇತರ ಕುಟುಂಬದ ವ್ಯಕ್ತಿ ಯೊಬ್ಬರು ಪಕ್ಷದ ಸಾರಥ್ಯ ವಹಿಸಲು ಮುಂದಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಕನಸು ಗರಿಗೆದರುವಂತೆ ಮಾಡಿದೆ.
ಖರ್ಗೆ ಅವರನ್ನು ಪಕ್ಷ ನಿಷ್ಠ ಎಂದು ಮಾತ್ರಕ್ಕೆ ಸೀಮಿತಗೊಳಿಸುವ ಬದಲು ಅವರ ಕ್ಷಮತೆ, ಪರಿಶ್ರಮ, ಕಾರ್ಯತಂತ್ರವನ್ನು ಮರೆಯುವ ಹಾಗಿಲ್ಲ. ಎಲ್ಲದ್ದಕ್ಕೂ ಮಿಗಿಲಾಗಿ ಅವರು ಇತರ ಪಕ್ಷಗಳ ನಾಯಕ ರೊಂದಿಗೂ ಸಹ ಅತ್ಯಂತ ಸೌಹಾರ್ದ ಸಂಬಂಧ ಇರಿಸಿಕೊಂಡಿರುವುದು ಪಕ್ಷದ ಭವಿಷ್ಯಕ್ಕೂ ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತದೆ. ಕಾಂಗ್ರೆಸ್‌ನಲ್ಲಿ ಹಿರಿತಲೆಗಳ ಒಂದು ಗುಂಪು, ಮಹತ್ವಾಕಾಂಕ್ಷಿ ಕಿರಿಯರ ಒಂದು ಗುಂಪು, ಗಾಂಧಿ ಕುಟುಂಬದ ನಿಷ್ಠರ ಒಂದು ಗುಂಪು, ಗಾಂಧಿ ಕುಟುಂಬ ವನ್ನು ವಿರೋಧಿಸುವ ಗುಂಪು ಎಂಬ ರೀತಿಯಲ್ಲಿ ಪಕ್ಷ ಒಡೆದಿ ರುವ ಈ ಸನ್ನಿವೇಶದಲ್ಲಿ ಖರ್ಗೆ ಮುಂದೆ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ದೊಡ್ಡ ಸವಾಲಿದೆ. ಇಷ್ಟು ಮಾತ್ರವಲ್ಲ, ಎದುರಾಳಿ ಪಕ್ಷಗಳ ನಾಯಕತ್ವಕ್ಕೆ ಸಡ್ಡು ಹೊಡೆಯುವ ಮಾದರಿಯಲ್ಲಿ ಪಕ್ಷವನ್ನು ಮುನ್ನ ಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಖರ್ಗೆ ಮುಂದೆ ಇದೆ. ಹಾಗೆಯೇ ಕರಗಿಹೋಗುತ್ತಿರುವ ಪಕ್ಷದ ಕಾರ್ಯಕರ್ತ ಪಡೆಯನ್ನು ಮತ್ತೆ ಕಟ್ಟಿ ಉತ್ಸಾಹ ತುಂಬಬೇಕಾದ ಅಗತ್ಯ ಇದೆ. ನೆಲಕಚ್ಚಿರುವ ಪಕ್ಷವನ್ನು ಮತ್ತೆ ಸಿಡಿ ದೇಳುವಂತೆ ಮಾಡುವುದು ಸರಳ ಕೆಲಸವೇನಲ್ಲ. ಈ ನಿಟ್ಟಿನಲ್ಲಿ ಖರ್ಗೆ ಅವರು ಸಮರ್ಥವಾದ ತಂಡವನ್ನು ರೂಪಿಸಿಕೊಂಡು ಎಲ್ಲರನ್ನೂ ಒಳಗೊಳ್ಳುವ ಕಾರ್ಯತಂತ್ರ ರೂಪಿಸಿಕೊಳ್ಳಬೇಕಿದೆ. ಅಲ್ಲದೆ ಈ ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗೂ ಸಜ್ಜಾಗಬೇಕಾಗಿದೆ.
ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಾಯಕತ್ವವನ್ನು ಸರಿದೂಗಿಸಿಕೊಂಡು ಹೋಗಬೇಕಾದ ದೊಡ್ಡ ಜವಾಬ್ದಾರಿ ಖರ್ಗೆ ಮೇಲಿದೆ. ರಾಜ್ಯದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಸದಾ ಲಭ್ಯರಾಗುವ ಮೂಲಕ ಅವರ ದುಮ್ಮಾನಗಳಿಗೆ ಪರಿಹಾರ ನೀಡಿದಲ್ಲಿ ಮಾತ್ರ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಸಿಗಬಹುದು. ಒಟ್ಟಿನಲ್ಲಿ ಖರ್ಗೆ ಅವರ ಮುಂದೆ ಸವಾಲುಗಳ ಪರ್ವತವೇ ಇದ್ದು, ಇದನ್ನು ಮೆಟ್ಟಿ ನಿಂತರೆ ಮಾತ್ರ ಅವರ ಸಾಮರ್ಥ್ಯ, ಕ್ಷಮತೆ ಕಾಂಗ್ರೆಸ್ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.