ಬಿತ್ತನೆಗೆ ಅಡ್ಡಿಯಾದ ಮಳೆ ಕಟಾವಿಗೂ ಬಿಡುತ್ತಿಲ್ಲ! ಹಲವೆಡೆ ಕದಿರೇ ಬಿಟ್ಟಿಲ್ಲ
ಕೆಲವೆಡೆ ಕಟಾವಿಗೆ ಸಿದ್ಧ; ಕಟಾವು ಯಂತ್ರಗಳ ಆಗಮನಕ್ಕೂ ಹಿನ್ನಡೆ
Team Udayavani, Oct 20, 2022, 7:23 AM IST
ಕೋಟ/ಕುಂದಾಪುರ: ಅಕಾಲಿಕ ಮಳೆ ಭತ್ತದ ಕೃಷಿಕರಲ್ಲಿ ಆತಂಕ ಮೂಡಿಸಿದೆ. ಕೆಲವೆಡೆ ಈಗಾಗಲೇ ಕಟಾವು ಆರಂಭಗೊಂಡಿದ್ದು, ಮಳೆ ಅಡ್ಡಿಪಡಿಸಿದೆ. ಇದೇ ವೇಳೆ ಕೆಲವು ಕಡೆಗಳಲ್ಲಿ ಇನ್ನೂ ಕದಿರೇ ಬಿಟ್ಟಿಲ್ಲ ಎನ್ನುವ ಸ್ಥಿತಿಯೂ ಇದ್ದು, ಕಟಾವು ಪ್ರಕ್ರಿಯೆ ಕೂಡ ಅತಂತ್ರವಾಗಿದೆ.
ನಾಟಿ ವೇಳೆ ಅಡ್ಡಿಪಡಿಸಿದ್ದ ಮಳೆ, ಈಗ ಕಟಾವು ಸಮಯದಲ್ಲಿಯೂ ತೊಡಕಾಗಿ ಪರಿಣಮಿಸಿದೆ. ರಾತ್ರಿ ಹಾಗೂ ಬೆಳಗ್ಗಿನ ಜಾವ ಮಳೆ ಬಂದು, ಗದ್ದೆಗಳಲ್ಲಿ ನೀರು ನಿಂತರೆ ಕಟಾವು ಕಷ್ಟ. ಇನ್ನು ಕೆಲವು ಕಡೆಗಳಲ್ಲಿ ಮಧ್ಯಾಹ್ನದ ಬಳಿಕ ಮಳೆ ಆರಂಭವಾಗುತ್ತಿದೆ.
ಪ್ರತೀ ವರ್ಷ ಉಡುಪಿ-ದ.ಕ. ಜಿಲ್ಲೆಯಲ್ಲಿ ಮೊದಲು ನಾಟಿಯಾದ ಪ್ರದೇಶ ಹಾಗೂ ಕೊನೆಯಲ್ಲಿ ನಾಟಿ ನಡೆದ ಪ್ರದೇಶಗಳು ಅಕ್ಟೋಬರ್‌ನಲ್ಲಿ 10-15 ದಿನಗಳ ಅಂತರದಲ್ಲಿ ಕಟಾವಿಗೆ ಬರುತ್ತಿತ್ತು. ಇದು ಯಂತ್ರಗಳಿಗೂ ಹಂತ-ಹಂತವಾಗಿ ಕಟಾವು ನಡೆಸಲು ಸಹಾಯಕವಾಗುತ್ತಿತ್ತು. ಬಹುತೇಕ ಹೆಚ್ಚಿನ ಕಡೆಗಳಲ್ಲಿ ಈಗಾಗಲೇ ಕಟಾವು ಆರಂಭವಾಗಬೇಕಿತ್ತು. ಆದರೆ ಈ ಬಾರಿ ನಾಟಿ ವಿಳಂಬವಾಗಿರುವುದು ಮತ್ತು ಮಳೆಯಿಂದ ಹಾನಿಯಾದ ಕಡೆಗಳಲ್ಲಿ ಮರು ಬಿತ್ತನೆ ಆಗಿದ್ದರಿಂದ ಮತ್ತಷ್ಟು ವಿಳಂಬವಾಗಿದೆ.
ಪ್ರತೀ ವರ್ಷ ನಾವು ದಾವಣಗೆರೆಯಿಂದ 15-20 ಯಂತ್ರಗಳನ್ನು ತರುತ್ತಿದ್ದೆವು. ಈ ಬಾರಿ ಕರಾವಳಿಯಲ್ಲಿ ಕಟಾವು ಒಂದೇ ಸಮಯಕ್ಕೆ ಆರಂಭಗೊಳ್ಳುವುದಿಲ್ಲ. ಹೀಗಾಗಿ ಕೇವಲ ಐದು ಯಂತ್ರಗಳನ್ನು ತಂದಿದ್ದೇವೆ. ನವೆಂಬರ್‌ನಲ್ಲಿ ಕಟಾವು ಸಂಪೂರ್ಣ ಆರಂಭವಾಗುವ ಲಕ್ಷಣವಿದ್ದು ಆಗ ಹೆಚ್ಚಿನ ಯಂತ್ರಗಳನ್ನು ತರಿಸಿಕೊಳ್ಳುತ್ತೇವೆ ಎಂದು ಕಟಾವು ಯಂತ್ರದ ಮಾಲಕ ರಮೇಶ್ ದಾವಣಗೆರೆ ತಿಳಿಸಿದ್ದಾರೆ.
ಉತ್ತಮ ಫಸಲು
ಆರಂಭದಲ್ಲಿ ತೊಂದರೆಯಾಗಿದ್ದರೂ ಬಹುತೇಕ ಕಡೆಗಳಲ್ಲಿ ಉತ್ತಮ ಫಸಲು ಬಂದಿದೆ. ಆದರೆ ಮಳೆಯಿಂದಾಗಿ ತೆನೆಯು ನೀರಲ್ಲಿ ಒದ್ದೆಯಾಗಿದೆ. ಗದ್ದೆಯಲ್ಲಿ ನೀರು ಇರುವುದರಿಂದ ತತ್‌ಕ್ಷಣಕ್ಕೆ ಕಟಾವು ಯಂತ್ರವನ್ನು ಗದ್ದೆಗೆ ಇಳಿಸುವುದು ಕಷ್ಟ. ಅಷ್ಟರಲ್ಲಿ ಭತ್ತ ಉದುರುವುದು, ಮೊಳಕೆ ಬರುವುದರಿಂದ ಬೆಳೆಗಾರನಿಗೆ ಸಾಕಷ್ಟು ನಷ್ಟವಾಗುತ್ತದೆ.
ಧಾರಣೆ ಕುಸಿತ ಭೀತಿ
ಪ್ರಸ್ತುತ ಕ್ವಿಂಟಾಲ್ ಭತ್ತಕ್ಕೆ 2,000-2,100 ರೂ. ಇದೆ. ಆದರೆ ಕಟಾವು ಚುರುಕುಗೊಳ್ಳುತ್ತಿದ್ದಂತೆ ಮಧ್ಯವರ್ತಿಗಳು ಆಟ ಆರಂಭಿಸಿ ದರ ಕುಸಿಯುವಂತೆ ಮಾಡುತ್ತಾರೆ. ಬೆಂಬಲ ಬೆಲೆ ಖರೀದಿ ಕೇಂದ್ರ ವ್ಯವಸ್ಥೆಯು ಕರಾವಳಿಯಲ್ಲಿ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಕ್ವಿಂಟಾಲ್‌ಗೆ 2,500 ರೂ. ಸಿಕ್ಕಿದರೆ ಮಾತ್ರ ರೈತರಿಗೆ ಸ್ವಲ್ಪ ಮಟ್ಟಿನ ಲಾಭ ಸಾಧ್ಯ ಎನ್ನುತ್ತಾರೆ ಕೃಷಿಕ ಶಿವಮೂರ್ತಿ ಉಪಾಧ್ಯ ಪಡುಕರೆ.
ಗಂಟೆಗೆ 1,800 ರೂ.
ಕೃಷಿ ಇಲಾಖೆ ಸಹಭಾಗಿತ್ವದಲ್ಲಿನ ಖಾಸಗಿ ಸಂಸ್ಥೆಗಳು ಸರಕಾರ ನಿಗದಿಪಡಿಸಿದ ದರದಲ್ಲಿ ಕಟಾವಿಗೆ ಯಂತ್ರಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಗಂಟೆಗೆ 1,800 ರೂ. ನಿಗದಿಪಡಿಸಿದ್ದು, 5 ಕಿ.ಮೀ. ವರೆಗೆ ಸಾಗಾಟ ಉಚಿತವಿದೆ. ಇತರ ಕಡೆಗಳಲ್ಲೂ ಇದೇ ವ್ಯವಸ್ಥೆ ಇದೆ. ಖಾಸಗಿ ಯಂತ್ರಗಳಿಗೆ 2,000-2,200 ರೂ. ಬಾಡಿಗೆ ಇದೆ. ಬೈಹುಲ್ಲು ಸಂಸ್ಕರಿಸುವ ಯಂತ್ರಕ್ಕೂ ಬೇಡಿಕೆ ಇದ್ದು ಕಟ್ಟಿಗೆ 40 ರೂ. ಬಾಡಿಗೆ ಇದೆ. ಬೇಡಿಕೆ ಹೆಚ್ಚಿದಂತೆ ಮಧ್ಯವರ್ತಿಗಳ ಹಾವಳಿಯಿಂದಾಗಿ ಬಾಡಿಗೆಯಲ್ಲಿ ಏರುಪೇರಾಗುವ ಸಾಧ್ಯತೆ ಇದ್ದು ರೈತರು ಸಂಘಟಿತರಾಗಿ ನಿಯಂತ್ರಿಸಬೇಕು ಎನ್ನುವ ಸಲಹೆ ರೈತ ಸಂಘಟನೆಗಳದ್ದು.
46,060 ಹೆಕ್ಟೇರ್ ಪ್ರದೇಶದಲ್ಲಿ ನಾಟಿ
ಮುಂಗಾರು ಹಂಗಾಮಿನಲ್ಲಿ ಉಡುಪಿ ಜಿಲ್ಲೆಯಲ್ಲಿ 36,979 ಹೆಕ್ಟೇರ್ ಮತ್ತು ದ.ಕ.ದಲ್ಲಿ 9,090 ಹೆಕ್ಟೇರ್ ಸೇರಿದಂತೆ ಉಭಯ ಜಿಲ್ಲೆಗಳಲ್ಲಿ ಒಟ್ಟು 46,060 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಕಟಾವು ನಿಧಾನಕ್ಕೆ ಆರಂಭವಾಗುತ್ತಿದೆ. ನವೆಂಬರ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಸರಕಾರ, ಜಿಲ್ಲಾಡಳಿತದಿಂದ ಯಂತ್ರಗಳ ಬಾಡಿಗೆ ನಿಯಂತ್ರಣ ಅಸಾಧ್ಯ, ರೈತರು ಸಂಘಟಿತರಾಗಿ ಬೆಲೆ ನಿಯಂತ್ರಿಸಬೇಕು.
– ಕೆಂಪೇಗೌಡ, ಜಂಟಿ ನಿರ್ದೇಶಕರು ಕೃಷಿ ಇಲಾಖೆ, ಉಡುಪಿ
ತಾಲೂಕುವಾರು ಭತ್ತ ನಾಟಿ (ಹೆಕ್ಟೇರ್‌ಗಳಲ್ಲಿ)
ಮಂಗಳೂರು 1,450
ಮೂಡುಬಿದಿರೆ 1,620
ಮೂಲ್ಕಿ 1,635
ಉಳ್ಳಾಲ 720
ಬಂಟ್ವಾಳ 1,490
ಬೆಳ್ತಂಗಡಿ 1,570
ಪುತ್ತೂರು 205
ಕಡಬ 165
ಸುಳ್ಯ 235
ಉಡುಪಿ 3,927
ಕುಂದಾಪುರ 7,923
ಕಾರ್ಕಳ 5,506
ಬೈಂದೂರು 4,570
ಬ್ರಹ್ಮಾವರ 10,667
ಕಾಪು 2,847
ಹೆಬ್ರಿ 1,539
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.