ಪುನೀತ ಪರ್ವದಲ್ಲಿ ಅಪ್ಪು ನೆನಪು
"ಗಂಧದ ಗುಡಿ' ಪ್ರೀ ರಿಲೀಸ್ ಇವೆಂಟ್‌ನಲ್ಲಿ ಮಿಂದೆದ್ದ ಚಿತ್ರರಂಗ
Team Udayavani, Oct 22, 2022, 11:29 AM IST
ಬೆಂಗಳೂರು: ಅಭಿಮಾನಿಗಳ ಪಾಲಿನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಅಗಲಿ ಒಂದು ವರ್ಷವಾಗುತ್ತಾ ಬರುತ್ತಿದೆ. ಆದರೆ, ಅವರನ್ನು ಕನ್ನಡ ಚಿತ್ರರಂಗ, ಅವರ ಅಪಾರ ಅಭಿ ಮಾನಿ ಬಳಗ ಮರೆತಿಲ್ಲ. ಅದಕ್ಕೆ ಸಾಕ್ಷಿಯಾಗಿದ್ದು “ಪುನೀತ ಪರ್ವ’. ಪುನೀತ್ ನಟನೆಯ “ಗಂಧದ ಗುಡಿ’ ಡಾಕ್ಯುಮೆಂಟರಿ ಚಿತ್ರ ಅ.28ಕ್ಕೆ ತೆರೆ ಕಾಣುತ್ತಿದೆ. ಇದು ಪುನೀತ್ ನಟನೆಯ ಕೊನೆಯ ಚಿತ್ರ. ಅದರ ಪೂರ್ವಭಾವಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ “ಪುನೀತ ಪರ್ವ’ ದಲ್ಲಿ ಅಪಾರ ಅಭಿಮಾನಿ ಬಳಗ ಹಾಗೂ ಚಿತ್ರರಂಗ ಸೇರಿ ಮತ್ತೂಮ್ಮೆ ಪುನೀತ್ ನಮನಗೈದರು. ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅರಮನೆ ಮೈದಾನದತ್ತ ಅಭಿಮಾನಿಗಳು ಧಾವಿಸಿ ತಮ್ಮ ಅಭಿಮಾನ ಮೆರೆದರು.
ಅರಮನೆ ಮೈದಾನದಲ್ಲಿ ಹಾಕಲಾದ ಅದ್ಧೂರಿ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ಪರಭಾಷಾ ಚಿತ್ರರಂಗದ ಅನೇಕ ನಟ-ನಟಿ ಯರು ಭಾಗಿಯಾಗಿ, ಪುನೀತ್ ಜೊತೆಗಿನ ನಂಟನ್ನು ಹಂಚಿಕೊಂಡರು.
ಪುನೀತ್ ಹಾಡು ಹಾಡಿದ ರಾಘಣ್ಣ: ಪುನೀತ್ ಬಾಲನಟರಾಗಿ ಹಾಡಿದ ಮೊದಲ ಹಾಡು “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..’ ಹಾಡನ್ನು ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹಾಡಿದರು. ಹಾಡಿಗೂ ಮುನ್ನ ಪುನೀತ್ ಅವರಿಂದ ಅಂದು ಹಾಡಿಸಲು ಅಣ್ಣಾವ್ರ ನಡೆಸಿದ ತಯಾರಿ, ಪುನೀತ್ ತಯಾರಾದ ರೀತಿ ಎಲ್ಲವನ್ನು ವಿವರಿಸಿದರು.
ವೈಟ್ ಥೀಮ್: ಇಡೀ ಕಾರ್ಯಕ್ರಮವನ್ನು ವೈಟ್ ಥೀಮ್‌ನಲ್ಲಿ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಬರುವವರು ಬಿಳಿ ವಸ್ತ್ರದೊಂದಿಗೆ ಬರಬೇಕೆಂಬ ಆಯೋಜಕರ ಮನವಿಗೆ ಎಲ್ಲರೂ ಸ್ಪಂದಿಸಿದ್ದು, ಇಡೀ ಆಡಿಟೋರಿಯಂ ಬಿಳಿ ಬಣ್ಣದೊಂದಿಗೆ ಕಂಗೊಳಿಸುತ್ತಿತ್ತು.
ಗಾನ ನಮನ: ಕನ್ನಡ ಚಿತ್ರರಂಗದ ಖ್ಯಾತ ಗಾಯಕರಿಂದ ಪುನೀತ್‌ಗೆ ಗಾನ ನಮನ ಸಲ್ಲಿಸಲಾಯಿತು. ಗಾಯಕರಾದ ವಿಜಯ ಪ್ರಸಾದ್, ಗುರುಕಿರಣ್, ಅರ್ಮಾನ್ ಮಲ್ಲಿಕ್, ಟಿಪ್ಪು, ಕುನಾಲ್ ಗಾಂಜಾವಾಲ ಸೇರಿದಂತೆ ಅನೇಕ ಗಾಯಕರು ಪುನೀತ್ ಚಿತ್ರದ ಹಾಡುಗಳನ್ನು ಹಾಡಿದರು. ಚಿತ್ರರಂಗ ಭಾಗಿ: ಪುನೀತ ಪರ್ವ ಕಾರ್ಯಕ್ರಮ ದಲ್ಲಿ ಇಡೀ ಕನ್ನಡ ಚಿತ್ರರಂಗ ಭಾಗಿಯಾಗಿತ್ತು. ನಟ, ನಟಿಯರು, ನಿರ್ಮಾಪಕ, ನಿರ್ದೇಶಕರು, ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ಪರಭಾಷಾ ನಟರಾದ ಸೂರ್ಯ, ರಾಣಾ ದಗ್ಗುಭಾಟಿ, ಸಿದ್ಧಾರ್ಥ್, ಅಖೀಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಡ್ಯಾನ್ಸ್ ಧಮಾಕಾ : ಚಿತ್ರರಂಗದಲ್ಲಿ ಮತ್ತೆ ಸಕ್ರಿಯವಾಗಿರುವ ನಟಿ ರಮ್ಯಾ ಕೂಡ ಪುನೀತ ಪರ್ವದಲ್ಲಿ ಭಾಗಿಯಾಗಿದ್ದರು. ಹಾಡೊಂದಕ್ಕೆ ಸಹ ನೃತ್ಯಗಾರರ ಜೊತೆ ಹೆಜ್ಜೆ ಹಾಕಿ ದರು. ಇನ್ನು, ನಟ ಪ್ರಭುದೇವ, ಶಿವರಾಜ್‌ಕುಮಾರ್ ಕೂಡ ಪುನೀತ್ ಅವರ ಹಾಡುಗಳಿಗೆ ಡ್ಯಾನ್ಸ್ ಮಾಡಿ ರಂಜಿಸಿದರು.
ಬೊಂಬೆ ಹೇಳುತೈತೆ ಹಾಡಿಗೆ ಕಣ್ಣೀರಾದ ಅಶ್ವಿನಿ ಪುನೀತ್ : ಪುನೀತ್ ಅವರ “ರಾಜ್‌ಕುಮಾರ’ ಚಿತ್ರದ ಬೊಂಬೆ ಹೇಳುತೈತೆ ಹಾಡನ್ನು ವಿಜಯ್ ಪ್ರಕಾಶ್ ಹಾಡುತ್ತಿದ್ದಂತೆ ಇಡೀ ಸಭಾಂಗಣ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಹಾಡಿಗೆ ಇಡೀ ರಾಜ್ ಕುಟುಂಬ ಧ್ವನಿಗೂಡಿಸಿತ್ತು. ಇನ್ನು, ಈ ಹಾಡು ಕೇಳುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾವುಕರಾಗಿ ಅತ್ತೇಬಿಟ್ಟರು. ಇಡೀ ಸಭಾಂಗಣ ಮೌನಕ್ಕೆ ಸಾಕ್ಷಿಯಾಯಿತು.
ಅಮಿತಾಭ್, ಕಮಲ್ ಹಾಸನ್ ಶುಭ ಹಾರೈಕೆ : ಪುನೀತ್ ರಾಜಕುಮಾರ್ ನಟನೆಯ ಕಡೆ ಚಿತ್ರವಾದ “ಗಂಧದ ಗುಡಿ’ಗೆ ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ ಹಾಗೂ ಕಮಲ್ ಹಾಸನ್ ವಿಡಿಯೋ ಸಂದೇಶ ಮೂಲಕ ಶುಭ ಹಾರೈಸಿದ್ದಾರೆ. ರಾಜ್‌ಕುಮಾರ್ ಕುಟುಂಬದೊಂದಿಗೆ ಬಾಂಧವ್ಯವನ್ನು ಇದೇ ವೇಳೆ ಅಮಿತಾಭ್ ಬಚ್ಚನ್ ಹಂಚಿಕೊಂಡಿದ್ದಾರೆ.
ಗಂಧದ ಗುಡಿ’ ಅಂದ್ರೆ ಮೊದಲು ನೆನಪಿಗೆ ಬರುವುದು ಅಪ್ಪಾಜಿ, ವಿಷ್ಣುವರ್ಧನ್ ಜೋಡಿ. ಅದಾದ ನಂತರ ಅದೇ ಹೆಸರಿನ ಸಿನಿಮಾದಲ್ಲಿ ನನಗೂ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಈಗ ಮತ್ತೆ ಅದೇ ಹೆಸರಿನಲ್ಲಿ ಅಪ್ಪು ಅವನಾಗಿಯೇ ಜನರ ಮುಂದೆ ಬರುತ್ತಿದ್ದಾನೆ. ಅವನು ಹುಟ್ಟುವಾಗಲೇ ಸೂಪರ್ ಸ್ಟಾರ್. 4 ತಿಂಗಳ ಮಗುವಾಗಿದ್ದಾಗಲೇ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡವನು. ನನಗಿಂತ ಚಿಕ್ಕವನು, ನನಗಿಂತ ಮೊದಲು ಸಿನಿಮಾಕ್ಕೆ ಬಂದವನು, ನನಗಿಂತ ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದವನು. ಅವನು ನಮ್ಮ ನಡುವೆಯೇ ಇದ್ದಾನೆ. ಅವನ ಕನಸು “ಗಂಧದ ಗುಡಿ’ ಈಗ ನನಸಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. – ಶಿವರಾಜ್ ಕುಮಾರ್, ನಟ
ಅಪ್ಪುನ ನಾನು ಲೋಹಿತ್ ಅಂತಾನೆ ಕರಿತಿದ್ದೆ. ಅವರ ಬಾಲ್ಯದ ಚಿತ್ರಗಳನ್ನು ನೋಡಿದ್ದೆ. ಒಬ್ಬ ನಟನಾಗಿ ಹಾಗೂ ಸಜ್ಜನ ವ್ಯಕ್ತಿಯಾಗಿ ಅವರದ್ದು ಮಾದರಿಯಾಗುವಂತಹ ವ್ಯಕ್ತಿತ್ವ. – ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಷನ್
ಗಂಧದಗುಡಿ ಸಿನಿಮಾ ಎಲ್ಲಾ ರೆಕಾರ್ಡ್‌ಗಳನ್ನು ಮುರಿಯಬೇಕು. ಕೆಜಿಎಫ್-2 ಅನ್ನು ಕೂಡ ಬ್ರೇಕ್ ಮಾಡುವಂತೆ ಈ ಸಿನಿಮಾವನ್ನು ನಾವು ಆಚರಿಸಲು ನಿರ್ಧರಿಸಿದ್ದೇವೆ. – ಯಶ್, ನಟ
ಗಂಧದ ಗುಡಿ ಚಿತ್ರವನ್ನು ಅಭಿಮಾನಿಯಾಗಿ ನೋಡೋಕೆ ನಾನು ಕಾಯುತ್ತಿದ್ದೇನೆ. ಸೂರ್ಯ ಚಂದ್ರ ಇರೋವರೆಗೂ ಪುನೀತ್ ಪರ್ವ ನಡೆಯುತ್ತಲೇ ಇರುತ್ತದೆ. – ದುನಿಯಾ ವಿಜಯ್, ನಟ
ನನ್ನ ಸಿನಿಕೆರಿಯರ್‌ನಲ್ಲಿ ತುಂಬಾ ಸಪೋರ್ಟಿವ್ ಕೋ ಸ್ಟಾರ್. ನನಗೆ ಡ್ಯಾನ್ಸ್ ಬರದಿದ್ದಾಗ ಅವರು ಸ್ಟೆಪ್ ಹೇಳಿಕೊಡುತ್ತಿದ್ದರು. ನಾನು ಇವತ್ತು ಇಲ್ಲಿ ನಿಲ್ಲಲು ಡಾ.ರಾಜ್‌ಕುಮಾರ್ ಫ್ಯಾಮಿಲಿ ಕಾರಣ. ಅಭಿಮಾನಿಗಳ ಮೂಲಕ ಅವರು ಇನ್ನೂ ಬದುಕಿದ್ದಾರೆ. – ರಮ್ಯಾ,ನಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.