ಶಾಲೆಗೆ ಹೋಗದಿದ್ದರೂ ಆಕೆ ಸಾಧಕಿಯಾದಳು!
Team Udayavani, Oct 23, 2022, 6:15 AM IST
ಅಮ್ಮಾ, ಮಿಸ್ಸು ಈ ಲೆಟರ್ ಕೊಟ್ಟಿದ್ದಾರೆ…’ ಆ ಮಗು ಹೀಗೆನ್ನುತ್ತಲೇ ಶಾಲೆಯಿಂದ ತಂದಿದ್ದ ಪತ್ರವನ್ನು ತಾಯಿಯ ಮುಂದೆ ಹಿಡಿಯಿತು. ಆಕೆ, ಲಗುಬಗೆಯಿಂದಲೇ ಆ ಪತ್ರ ಪಡೆದಳು. ಅಲ್ಲಿದ್ದದ್ದು ಎರಡೇ ಸಾಲು. ಅದನ್ನು ಓದುತ್ತಿದ್ದಂತೆಯೇ ಆಕೆಯ ಮುಖ ಕಳೆಗುಂದಿತು. ಆ ಪತ್ರದಲ್ಲಿ, ಶಿಕ್ಷಕರು ಹೀಗೆ ಬರೆದಿದ್ದರು; ನಾಳೆ ತಪ್ಪದೇ ಶಾಲೆಗೆ ಬನ್ನಿ. ನಿಮ್ಮ ಮಗಳ ಕುರಿತು ಮುಖ್ಯವಾದ ವಿಷಯವನ್ನು ಹೇಳಬೇಕಿದೆ’.
ಮರುದಿನ ಮುಖ್ಯೋಪಾಧ್ಯಾಯಿನಿಯ ಛೇಂಬರಿನ ಹೊರಗೆ ಈ ತಾಯಿ ಸಂಕೋಚದಿಂದ ಕೂತಿದ್ದಳು. ಆಕೆಯನ್ನು ಕಂಡ ಕ್ಲಾಸ್ ಟೀಚರ್- ಮಿಸ್ ಬಾರ್ಬರಾ, ಬನ್ನಿ ಬನ್ನಿ’ ಎಂದರು. ಈಕೆ ಮೌನವಾಗಿ ನಡೆದುಹೋಗಿ ಅನಂತರ ಕ್ಲಾಸ್ ಟೀಚರ್ ಮಾತಾಡಿದರು: ನಿಮ್ಮ ಮಗಳಿಗೆ ಓದುವುದರಲ್ಲಿ ಆಸಕ್ತಿ ಇಲ್ಲ. ಆಕೆ ಓದಿನಲ್ಲಿ ತುಂಬಾ ಹಿಂದುಳಿದಿದ್ದಾಳೆ. ಪಾಠ ಮಾಡ್ತಾ ಇದ್ರೆ ಅವಳ ಪಾಡಿಗೆ ಅವಳು ಕಾಲು ಅಲ್ಲಾ ಡಿಸಿಕೊಂಡು ಕೂತಿರ್ತಾಳೆ. ಪ್ರಶ್ನೆ ಕೇಳಿದ್ರೆ ಸುಮ್ನೆ ಎದ್ದು ನಿಂತ್ಕೊತಾಳೆ. ಏನಂದ್ರೆ ಏನು ಉತ್ತರ ಹೇಳಲ್ಲ. ನಾವು ಬೈದರೆ ಅದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಹೋಂವರ್ಕ್ ಕೊಡ್ತೇವೆ. ಮಾಡಿಕೊಂಡು ಬರಲ್ಲ. ಅವಳ ಅಕ್ಷರವೋ, ಯಾರೊಬ್ಬರಿಗೂ ಅರ್ಥ ಆಗುವುದಿಲ್ಲ. ಟೀಚರ್ಸ್ ಏನಾದ್ರೂ ಬೈಯ್ಯಬಹುದು ಎಂಬ ಕಾಮನ್ ಸೆನ್ಸ್ ಕೂಡ ಅವಳಿಗಿಲ್ಲ. ಒಂಥರಾ ವಿಲಕ್ಷಣ ವರ್ತನೆ ಅವಳದ್ದು. ನನಗೆ ಅನಿಸುವ ಪ್ರಕಾರ, ನಿಮ್ಮ ಮಗುವಿಗಿರುವ ಸಮಸ್ಯೆ ಮಾನಸಿಕ ಅಸ್ವಸ್ಥತೆಯದ್ದು ಅನಿಸುತ್ತೆ. ಹಲವು ಬಗೆಯಲ್ಲಿ ಪ್ರಯತ್ನಿಸಿದ್ದಾಯ್ತು. ಅವಳು ಸರಿಹೋಗಲೇ ಇಲ್ಲ. ವೆರಿ ಸಾರಿ. ಅವಳನ್ನು ಸಂಭಾಳಿಸಲಿಕ್ಕೆ ನಮ್ಮಿಂದ ಸಾಧ್ಯವಿಲ್ಲ. ಅವಳಿಗೆ ಪಾಠ ಕಲಿಸು ವುದಂತೂ ದೂರದ ಮಾತು. ಈಗ ನೀವು ಒಂದು ಕೆಲಸ ಮಾಡಿ. ಮಾನಸಿಕ ಅಸ್ವಸ್ಥ ಸಮಸ್ಯೆ ಹೊಂದಿದ ಮಕ್ಕಳ ಶಾಲೆಗೇ ಇವಳನ್ನು ಆದಷ್ಟು ಬೇಗ ಸೇರಿಸುವ ಪ್ರಯತ್ನ ಮಾಡಿ. ಹಾಗೆಯೇ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಕೊಡಿಸಿ. ಯಾವುದೇ ತೊಂದರೆ ಆಗಲಿ: ಅದನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದರೆ ಸಮಸ್ಯೆ ಪರಿಹಾರ ಆಗುತ್ತೆ. ಇಲ್ಲ ಅಂದ್ರೆ ಬದುಕಿಡೀ ಸಮಸ್ಯೆ ಆಗಬಹುದು. ತಡ ಮಾಡಬೇಡಿ. ಈ ವಾರವೇ ಯಾರಾದರೂ ತಜ್ಞ ವೈದ್ಯರ ಬಳಿಗೆ ಮಗಳನ್ನು ಕರ್ಕೊಂಡು ಹೋಗಿ. ಆಲ್ ದಿ ಬೆಸ್ಟ್ ……’
***
ಸೈಕಾಲಜಿಸ್ಟ್ ರ ಮುಂದೆ ಆ ತಾಯಿ ಸುಮ್ಮನೆ ಕೂತಿದ್ದಳು. ಕ್ಲಾಸ್ ಟೀಚರ್ ತನ್ನ ಮಗಳ ಬಗ್ಗೆ ಹೇಳಿದ್ದನ್ನು ಮತ್ತು ಅವರ ಸಲಹೆಯಂತೆಯೇ ನಿಮ್ಮನ್ನು ಭೇಟಿಯಾಗಿದ್ದೇನೆ ಸರ್. ದಯವಿಟ್ಟು ನನ್ನ ಮಗಳನ್ನು ಒಮ್ಮೆ ಚೆಕ್ ಮಾಡಿ ಅವಳಿಗೆ ಯಾವ ಸಮಸ್ಯೆ ಇದೆ ಎಂದು ತಿಳಿಸಿ’- ಇದಿಷ್ಟನ್ನೂ ಆಕೆ ಒಂದು ಹಾಳೆಯಲ್ಲಿ ಬರೆದುಕೊಂಡು ಬಂದಿದ್ದಳು. ಆ ಪತ್ರವನ್ನು ವೈದ್ಯರಿಗೆ ಕೊಟ್ಟು ಮೌನವಾಗಿ ಕೂತಿದ್ದಳು.ಪತ್ರವನ್ನು ಓದಿದ ವೈದ್ಯರು, ಅಮ್ಮನ ಪಕ್ಕ ಕುಳಿತಿದ್ದ ಎಂಟು ವರ್ಷದ ಆ ಬಾಲಕಿಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರು. ಈ ಸಂಭಾಷಣೆಗೂ, ತನಗೂ ಯಾವುದೇ ಸಂಬಂಧವೂ ಇಲ್ಲ ಎಂಬಂತೆ ಆಕೆ ಕೂತಿದ್ದಳು. ಆಸ್ಪತ್ರೆಯಲ್ಲಿ ಕೂತಿದ್ದಾ ಗಲೂ ಅವಳು ಕಾಲು ಕುಣಿಸುತ್ತಿದ್ದಾಳೆ, ಆ ಕುರಿತು ಅವಳಿಗೆ ಯಾವುದೇ ಹಿಂಜರಿಕೆಯಾಗಲಿ, ಸಂಕೋಚವಾಗಲಿ ಇಲ್ಲ ಎಂದು ವೈದ್ಯರಿಗೆ ಅರ್ಥವಾಯಿತು. ಆಗಿಂದಾಗ್ಗೆ ಅಲುಗಾಡುತ್ತಿದ್ದ ಆಕೆಯ ಶರೀರ, ಈ ಅನಿಸಿಕೆಗೆ ಸಾಕ್ಷಿ ಒದಗಿಸುತ್ತಿತ್ತು.
ಮೇಡಂ, ನಿಮ್ಮ ಜತೆ ಪ್ರತ್ಯೇಕವಾಗಿ ಮಾತಾಡಬೇಕು. ಎರಡು ನಿಮಿಷ ಹೊರಗಡೆ ಇರುವ ಛೇಂಬರ್‌ಗೆ ಹೋಗೋಣ- ಹೀಗೆಂದ ವೈದ್ಯರು, ಬಾಲೆಯ ಕಡೆಗೆ ತಿರುಗಿ, ಒಂದೆರಡು ನಿಮಿಷ ನೀನು ಇಲ್ಲೇ ಕೂತಿರು. ಅಮ್ಮ ಬೇಗ ವಾಪಸ್ ಬರ್ತಾರೆ ಎಂದರು. ಆ ರೂಂ ಬಿಡುವ ಮುನ್ನ, ಅಲ್ಲಿದ್ದ ರೇಡಿಯೋ ಆನ್ ಮಾಡಿದರು. ಯಾವುದೋ ಮಧುರ ಗೀತೆ ಯೊಂದು ಆಗ ಪ್ರಸಾರವಾಗ ತೊಡಗಿತು.
ರೂಮ್‌ನಿಂದ ಹೊರಬಂದ ವೈದ್ಯ, ಅಲ್ಲಿನ ಕಿಂಡಿಯಿಂದ ಮಗು ವಿದ್ದ ರೂಮನ್ನೊಮ್ಮೆ ಇಣುಕಿ ನೋಡಿದ. ಅವನ ತುಟಿ ಯಂಚಿನಲ್ಲಿ ನಗೆ ಕಾಣಿಸಿತು. ಶ್, ಸದ್ದು ಮಾಡದೆ ನೋಡಿ ಎಂದು ಕಣನ್ನೆಯಲ್ಲೇ ಎಚ್ಚರಿಸಿ, ಆ ಮಗುವಿನ ತಾಯಿಗೆ ಇಣುಕಿ ನೋಡಲು ಅವಕಾಶ ಮಾಡಿಕೊಟ್ಟ. ಆ ತಾಯಿಗೆ ಕಂಡದ್ದಾದರೂ ಏನು ಗೊತ್ತೆ? ರೇಡಿಯೋದಿಂದ ಕೇಳಿಬರುತ್ತಿದ್ದ ಹಾಡಿಗೆ ಆ ಪುಟ್ಟ ಬಾಲಕಿ ತನ್ಮಯಳಾಗಿ ನರ್ತಿಸುತ್ತಿದ್ದಳು. ಆಕೆಯ ಕಂಗಳಲ್ಲಿ ದಿವ್ಯ ಸಂತೋಷವಿತ್ತು. ಮಿಗಿಲಾಗಿ, ಆಕೆ ಹಾಕುತ್ತಿದ್ದ ಹೆಜ್ಜೆಗಳಲ್ಲಿ ನಿಖರತೆಯಿತ್ತು. ಮಗಳ ಆ ವರ್ತನೆಗೆ ಹೇಗೆ ಪ್ರತಿಕ್ರಿಯಿಸುವುದೋ ಗೊತ್ತಾಗದೆ ಸುಮ್ಮನೆ ನಿಂತ ಆ ತಾಯಿಗೆ ವೈದ್ಯರು ಸ್ಪಷ್ಟವಾಗಿ ಹೇಳಿದರು:’ ಮೇಡಂ, ನಿಮ್ಮ ಮಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆಕೆ ಫಿಜಿಕಲಿ ಆ್ಯಂಡ್ ಮೆಂಟಲಿ ಪರ್ಫೆಕ್ಟ್ ಇದ್ದಾಳೆ. ಆಕೆಗೆ ಓದುವುದರಲ್ಲಿ ಆಸಕ್ತಿ ಇಲ್ಲ. ಆದರೆ ನೃತ್ಯದಲ್ಲಿ ಅಪಾರ ಆಸಕ್ತಿಯಿದೆ. ಒಳೆೆÛಯ ಗುರುಗಳು ಸಿಕ್ಕಿಬಿಟ್ಟರೆ ಆಕೆ ಡ್ಯಾನ್ಸರ್ ಆಗಿ ದೊಡ್ಡ ಹೆಸರು ಮಾಡ್ತಾಳೆ. ಎರಡನೇ ಯೋಚನೆ ಮಾಡಲೇಬೇಡಿ. ನೆಮ್ಮದಿಯಿಂದ ಮನೆಗೆ ಹೋಗಿ. ಆದಷ್ಟು ಬೇಗ ಮಗಳನ್ನು ಡ್ಯಾನ್ಸ್ ಸ್ಕೂಲ್‌ಗೆ ಸೇರಿಸಿ…
***
ಈ ಘಟನೆ ನಡೆದದ್ದು ಇಂಗ್ಲೆಂಡಿನಲ್ಲಿ, 1932 ಸುಮಾರಿನಲ್ಲಿ. ಅಂದರೆ 90 ವರ್ಷಗಳ ಹಿಂದೆ. ಬಾರ್ಬರಾ ವೈದ್ಯರ ಮಾತಿನಲ್ಲಿ ನಂಬಿಕೆ ಇಟ್ಟಳು. ಮರುದಿನವೇ ಶಾಲೆಗೆ ಹೋಗಿ ಮಗಳ ಟಿ.ಸಿ. ಪಡೆದು ಆಕೆಯನ್ನು ಡ್ಯಾನ್ಸ್ ಶಾಲೆಗೆ ಸೇರಿಸಿಯೇ ಬಿಟ್ಟಳು. ಡ್ಯಾನ್ಸ್ ಶಾಲೆಗೆ ಸೇರಿದಳಲ್ಲ; ಆ ಮಗುವಿನ ಹೆಸರು- ಗಿಲಿಯನ್ ಲಿನ್!
ಮುಂದೆ ನಡೆದಿದ್ದೆಲ್ಲ ಇತಿಹಾಸ. ಲಿನ್, ತುಂಬ ಶ್ರದ್ಧೆಯಿಂದ ಡ್ಯಾನ್ಸ್ ಕಲಿತಳು. ಡ್ಯಾನ್ಸರ್‌ಗಳಿಗೆ ಶಿಸ್ತಿನ ಬದುಕು ಬಲುಮುಖ್ಯ. ಈ ಸರಳ ಸತ್ಯವನ್ನು ಮಗಳಿಗಷ್ಟೇ ಅರ್ಥವಾಗುವ ಭಾಷೆಯಲ್ಲಿ ಹೇಳಿಕೊಟ್ಟಳು ಬಾರ್ಬರಾ. ಈ ವೇಳೆಗೆ, ತಾನು ಬಾಲ್ಯದಲ್ಲಿ ಕಳೆದುಕೊಂಡಿದ್ದೇನು, ತನ್ನ ವರ್ತನೆ ಯಿಂದ ಅಮ್ಮನಿಗೆ ಏನೆಲ್ಲ ಅವಮಾನಗಳಾಗಿವೆ ಎಂದು ಲಿನ್‌ಗೆ ಅರ್ಥ ವಾಗಿತ್ತು. ನೃತ್ಯದಲ್ಲಿ ಮಹತ್ಸಾಧನೆ ಮಾಡುವ ಮೂಲಕ ತನ್ನನ್ನು ಆಡಿ ಕೊಂಡವರಿಗೆ ಉತ್ತರ ಕೊಡಬೇಕು ಎಂದಾಕೆ ನಿರ್ಧರಿಸಿದಳು. ಶ್ರದ್ಧೆಯಿಂದ ನೃತ್ಯದ ಒಂದೊಂದೇ ಪಟ್ಟುಗಳನ್ನು ಕರಗತ ಮಾಡಿಕೊಂಡಳು. ಹಲವು ಸಂಗೀತ ಕಲಾವಿದರ ಜೊತೆ ಚರ್ಚಿಸಿ ಜ್ಞಾನ ಹೆಚ್ಚಿಸಿಕೊಂಡಳು. ಆನಂತರದಲ್ಲಿ ಇಂಗ್ಲಿಷ್ ಹಾಡುಗಳಿಗೆ, ಪಾಪ್ ಸಂಗೀತಕ್ಕೆ ವಿಶಿಷ್ಟ ಅನ್ನಿಸುವಂಥ ನೃತ್ಯ ಸಂಯೋ ಜಿಸಿದಳು. ಇಂಗ್ಲೆಂಡ್ ನ ನಂಬರ್ ಒನ್ ಡ್ಯಾನ್ಸರ್ ಅನ್ನಿಸಿ ಕೊಂಡಳು. ಐವತ್ತಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಡ್ಯಾನ್ಸ್ ಪ್ರೋಗ್ರಾಂ ನೀಡಿದಳು.
ಇಷ್ಟಾಗುತ್ತಿದ್ದಂತೆಯೇ ಇಂಗ್ಲೆಂಡ್‌ನ ನಾಟಕ ಮತ್ತು ಸಿನೆಮಾ ರಂಗ ಈಕೆಯ ಹಿಂದೆ ಬಿತ್ತು. ತಮ್ಮ ನಾಟಕಕ್ಕೆ, ಕಾರ್ಯಕ್ರಮಗಳಿಗೆ ಸಂಗೀತ ಸಂಯೋಜನೆ ಮಾಡುವಂತೆ ನಿರ್ಮಾಪಕ-ನಿರ್ದೇಶಕರು ಒತ್ತಾಯಿಸಿದರು. ಎಲ್ಲಾ ಬಗೆಯ ಸವಾಲುಗಳಿಗೂ ತೆರೆದುಕೊಂಡಳು. ನೃತ್ಯ ನಿರ್ದೇಶನ, ಚಿತ್ರ ನಿರ್ಮಾಣ, ಗೀತೆ ರಚನೆ, ಮ್ಯೂಸಿಕ್ ಆಲ್ಬಮ್ ನಿರ್ಮಾಣದಲ್ಲಿ ತೊಡಗಿಸಿಕೊಂಡಳು. ಪ್ರತಿಯೊಂದು ಪ್ರಯತ್ನದಲ್ಲೂ ಯಶ ಕಂಡಳು. ಆಕೆ ನೃತ್ಯ ನಿರ್ದೇಶಕಿಯಾಗಿ ರೂಪಿಸಿದ ಮಾರ್ಜಾಲ ನಡಿಗೆಯ ನರ್ತನವಂತೂ ಇಂಗ್ಲೆಂಡ್‌ನಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಭಾರೀ ಮೆಚ್ಚುಗೆ ಪಡೆಯಿತು. ಪತ್ರಿಕೆಗಳು, ವಿಮರ್ಶಕರು ಆಕೆಯ ಸಾಧನೆಯನ್ನು ಹಾಡಿ ಹೊಗಳಿದರು. 8ನೇ ವಯಸ್ಸಿಗೇ ಶಾಲೆ ಬಿಟ್ಟ ಈ ಬಾಲೆ, ವಿಶಿಷ್ಟ ಡ್ಯಾನ್ಸ್ ಮೂಲಕವೇ ಮನೆ ಮಾತಾದಳು. ಖ್ಯಾತಿ, ಹಣ, ಅಭಿಮಾನ, ಪ್ರಶಸ್ತಿ, ಪಾರಿತೋಷಕಗಳು ಆಕೆಯ ಕಾಲಬುಡಕ್ಕೆ ದಂಡಿಯಾಗಿ ಬಂದು ಬಿದ್ದವು.
ತನ್ನ ಬದುಕಿನ ಬಗ್ಗೆ ವಿಮರ್ಶಕನೊಬ್ಬ ಕೇಳಿದ ಪ್ರಶ್ನೆಗೆ ಲಿನ್ ಉತ್ತರಿಸಿದ್ದು ಹೀಗೆ ಶಾಲೆಯಿಂದ ಹೊರದಬ್ಬಿಸಿಕೊಂಡು ಬಂದೆನಲ್ಲ,: ಆನಂತರದಲ್ಲಿ ಜನ ನಮ್ಮನ್ನು ಆಡಿಕೊಂಡರು. ಹಂಗಿಸಿದರು. ತಿರಸ್ಕಾರದಿಂದ ನೋಡಿ ದರು. ನನ್ನತ್ತ ಬೆಟ್ಟು ಮಾಡಿ, ಅರೆಹುಚ್ಚಿ ಅಂದರು. ಜನರ ಟೀಕೆ, ಅವರ ಮಾತಲ್ಲಿದ್ದ ನಂಜು ನನ್ನನ್ನು ತಾಕದಂತೆ ಅಮ್ಮ ಎಚ್ಚರ ವಹಿಸಿ ದ್ದೇ ಅಲ್ಲದೆ ಟೀಕೆಗಳತ್ತ ತಿರುಗಿ ನೋಡದೆ, ಸಾಧನೆಯ ಕಡೆಗೆ ಗಮನಕೊಡು…’ಎಂದು ಕಿವಿಮಾತು ಹೇಳಿದಳು. ಅನಂತರದ ಕೆಲವೇ ದಿನಗಳಲ್ಲಿ ಅಮ್ಮ ತೀರಿಕೊಂಡಳು. ಆದರೆ, ಆಕೆ ಹೇಳಿದ್ದ ಮಾತುಗಳು ನನ್ನೊಳಗೆ ಗಟ್ಟಿಯಾಗಿ ಉಳಿದು ಬಿಟ್ಟವು. ಡ್ಯಾನ್ಸ್ ಮಾಡಲೆಂದು ಸ್ಟೇಜ್ ಹತ್ತಿದಾಕ್ಷಣ ನನಗೆ ಕಾಣುತ್ತಿದ್ದುದು ಒಬ್ಬಳೇ- ನನ್ನ ಅಮ್ಮ! ಆಕೆಗೆ ತೃಪ್ತಿಯಾಗು ವಂತೆ ಕುಣಿಯಬೇಕೆಂದೇ ಹೆಜ್ಜೆಯಿಡುತ್ತಿದ್ದೆ. ಒಂದ ರ್ಥದಲ್ಲಿ ಟ್ರಾನ್ಸ್ ಗೆ ಹೋಗಿ ಬಿಡುತ್ತಿದ್ದೆ. ನನ್ನ ಯಶಸ್ಸು ಏನಿದ್ದರೂ ಅಮ್ಮನಿಗೇ ಸಲ್ಲಬೇಕು….
****
ಕಡಿಮೆ ಮಾರ್ಕ್ಸ್ ತಗೊಂಡರು ಎಂಬ ಕಾರಣಕ್ಕೆ ಮಕ್ಕಳನ್ನು ಬೈಯ್ಯುವ ಪೋಷಕರು- ಶಿಕ್ಷಕರನ್ನು, ಕಡಿಮೆ ಮಾರ್ಕ್ಸ್ ಬಂತೆಂಬ ಕಾರಣಕ್ಕೇ ಓದು ನಿಲ್ಲಿಸುವ, ಮನೆ ಬಿಟ್ಟು ಹೋಗಿ ಬಿಡುವ ಮಕ್ಕಳನ್ನು ಕಂಡಾಗ ಶಾಲೆಯಿಂದ ದೂರವಿದ್ದೂ ಮಹಾನ್ ಸಾಧಕಿಯಾದ ಗಿಲಿಯನ್ ಲಿನ್‌ಳ ಕಥೆ ಹೇಳಬೇಕು ಅನ್ನಿಸಿತು…
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.