ಮಳೆಯಾಟ; ಥಂಡಾ ಹೊಡೆದ ಟಿ20 ವಿಶ್ವಕಪ್
ಅಂಕ ಹಂಚಿಕೊಂಡ ಆಸ್ಟ್ರೇಲಿಯ-ಇಂಗ್ಲೆಂಡ್; ಅಫ್ಘಾನಿಸ್ಥಾನ-ಐರ್ಲೆಂಡ್
Team Udayavani, Oct 29, 2022, 6:30 AM IST
ಮೆಲ್ಬರ್ನ್: ಟಿ20 ವಿಶ್ವಕಪ್‌ನಲ್ಲಿ ಮಳೆಯ ಆಟ ಬಿರುಸು ಪಡೆದಿದೆ. ಪಂದ್ಯಾವಳಿ ಥಂಡಾ ಹೊಡೆದಿದೆ. ಶುಕ್ರವಾರ “ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ಥಾನ-ಐರ್ಲೆಂಡ್ ಮತ್ತು ತೀವ್ರ ಕುತೂಹಲ ಮೂಡಿಸಿದ್ದ ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಪಂದ್ಯಗಳೆರಡೂ ಒಂದೂ ಎಸೆತ ಕಾಣದೆ ರದ್ದುಗೊಂಡವು. ಕ್ರಿಕೆಟ್ ಅಭಿಮಾನಿಗಳ ಹತಾಶೆ, ನಿರಾಸೆ, ಆಕ್ರೋಶ, ಅಸಮಾಧಾನವೆಲ್ಲ ಸ್ಫೋಟಗೊಂಡಿದೆ. ಇದು ಸೂಪರ್-12 ಅಲ್ಲ, ಸೂಪರ್-13 ಸುತ್ತು ಎಂಬ ಜೋಕ್ ಹರಿದಾಡುತ್ತಿದೆ.
ಇದರೊಂದಿಗೆ ಸೂಪರ್-12 ಸುತ್ತಿನ 4 ಪಂದ್ಯಗಳು ಮಳೆಯಿಂದ ಕೊಚ್ಚಿ ಹೋದಂತಾಯಿತು. ಇದರಲ್ಲಿ ಮೆಲ್ಬರ್ನ್ ಪಂದ್ಯಗಳ ಪಾಲೇ ಅಧಿಕ. ಇಲ್ಲಿನ 3 ಮುಖಾಮುಖೀಗಳು ಮಳೆಯ ಹೊಡೆತಕ್ಕೆ ಸಿಲುಕಿವೆ. ಒಂದು ಪಂದ್ಯದ ಫಲಿತಾಂಶವನ್ನು ಡಿ-ಎಲ್ ನಿಯಮದಂತೆ ನಿರ್ಧರಿಸಲಾಗಿದೆ. ಇನ್ನೊಂದು ಮಳೆ ಪಂದ್ಯದ ತಾಣ ಹೋಬರ್ಟ್. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ಹಾಗೂ ನ್ಯೂಜಿಲ್ಯಾಂಡ್-ಅಫ್ಘಾನಿಸ್ಥಾನ ನಡುವಿನ ಪಂದ್ಯಗಳು ರದ್ದುಗೊಂಡಿದ್ದವು.
ಐಸಿಸಿ ವಿರುದ್ಧ ಆಕ್ರೋಶ
ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ಮಳೆ ಜಾಸ್ತಿ ಎಂಬ ಅರಿವಿದ್ದರೂ ಐಸಿಸಿ ಇಲ್ಲಿನ ಕೆಲವು ತಾಣಗಳಲ್ಲಿ ಟಿ20 ಪಂದ್ಯಗಳನ್ನು ಇರಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೂಪರ್-12 ಸುತ್ತಿನ ಪಂದ್ಯಗಳಿಗೆ ಮೀಸಲು ದಿನವಿಲ್ಲ. ಇವೆಲ್ಲದರ ಒಟ್ಟಾರೆ ಪರಿಣಾಮವೆಂಬಂತೆ, ನೆಚ್ಚಿನ ಹಾಗೂ ಬಲಿಷ್ಠ ತಂಡಗಳು ಹೊರಬೀಳುವ, ಸಾಮಾನ್ಯ ತಂಡಗಳು ನಾಕೌಟ್ ಪ್ರವೇಶಿಸುವ ಸಾಧ್ಯತೆ ಗೋಚರಿಸುತ್ತಿದೆ. ಹಾಗೆಯೇ ಸೆಮಿಫೈನಲ್ಸ್ ಏಕಪಕ್ಷೀಯವಾಗಿ ನಡೆಯಲೂಬಹುದು. ಗ್ರೂಪ್ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳಿಗಷ್ಟೇ ನಾಕೌಟ್ ಟಿಕೆಟ್ ಲಭಿಸುವುದರಿಂದ ಇಲ್ಲಿ ಏನೂ ಸಂಭವಿಸಬಹುದಾದ, ಲೆಕ್ಕಾಚಾರವೆಲ್ಲ ತಲೆಕೆಳಗಾಗುವ ಸ್ಥಿತಿ ಇದೆ.
ಈಗಿನ ಲೆಕ್ಕಾಚಾರ…
ಈಗಿನ ಲೆಕ್ಕಾಚಾರದಂತೆ ಒಂದನೇ ಗ್ರೂಪ್‌ನಲ್ಲಿರುವ ನ್ಯೂಜಿಲ್ಯಾಂಡ್, ಎರಡನೇ ಗ್ರೂಪ್‌ನಲ್ಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸುರಕ್ಷಿತ ವಲಯದಲ್ಲಿವೆ. ಈ ತಂಡಗಳಿಗೆ ಮುನ್ನಡೆಯ ಅವಕಾಶ ಹೆಚ್ಚು. ಭಾರತ ಈ ಕೂಟದಲ್ಲಿ ಎರಡೂ ಪಂದ್ಯ ಗೆದ್ದಿರುವ ಏಕೈಕ ತಂಡ. ದಕ್ಷಿಣ ಆಫ್ರಿಕಾ +5.200ರಷ್ಟು ಉತ್ಕೃಷ್ಟ ರನ್‌ರೇಟ್ ಹೊಂದಿದೆ.
ನೆಚ್ಚಿನ ತಂಡವಾಗಿರುವ ಇಂಗ್ಲೆಂಡ್‌ಗೆ ಮಳೆಯಿಂದ ಹೊಡೆತ ಬಿದ್ದಿದೆ. ಐರ್ಲೆಂಡ್ ವಿರುದ್ಧ ಆಘಾತ ಅನುಭವಿಸಿದ ಆಂಗ್ಲರ ಪಡೆ ಜಯ ಸಾಧಿಸಿದ್ದು ಅಫ್ಘಾನ್ ವಿರುದ್ಧ ಮಾತ್ರ. ಅದಕ್ಕಿನ್ನು ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾದ ಬಲವಾದ ಸವಾಲು ಎದುರಾಗಲಿಕ್ಕಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯದ ಸ್ಥಿತಿ ಶೋಚನೀಯ. ನ್ಯೂಜಿಲ್ಯಾಂಡ್‌ಗೆ ಶರಣಾಗಿ, ಲಂಕೆಯನ್ನು ಮಣಿಸಿದ ಕಾಂಗರೂ ಪಡೆ 4ನೇ ಸ್ಥಾನಕ್ಕೆ ಜಾರಿದೆ. ರನ್‌ರೇಟ್ ಮೈನಸ್‌ನಲ್ಲಿದೆ. ಆಸ್ಟ್ರೇಲಿಯಕ್ಕಿಂತ ಐರ್ಲೆಂಡ್ ಮೇಲಿನ ಸ್ಥಾನದಲ್ಲಿದೆ! ಇಂಗ್ಲೆಂಡ್ ಎದುರಿನ ಶುಕ್ರವಾರದ ಪಂದ್ಯ ಆಸೀಸ್ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು. ಈ ಆ್ಯಶಸ್ ಎದುರಾಳಿಗಳ ಪಂದ್ಯ ಕೂಟದ “ಬಿಗ್ ಮ್ಯಾಚ್’ ಆಗಿತ್ತು. ಎಂಸಿಜಿಯಲ್ಲಿ ಕಿಕ್ಕಿರಿದು ನೆರೆದ ವೀಕ್ಷಕರಿಗೆ ನಿರಾಸೆಯೇ ಗತಿಯಾಯಿತು.
ಎರಡನೇ ಗ್ರೂಪ್‌ನಲ್ಲಿ ಮಳೆಯಿಂದ ಅಡಚಣೆ ಎದುರಾದದ್ದು ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ಪಂದ್ಯಕ್ಕೆ ಮಾತ್ರ. ಈ ತಂಡಗಳು ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿವೆ. ಎರಡೂ ಪಂದ್ಯಗಳನ್ನು ಸೋತ ಪಾಕಿಸ್ಥಾನಕ್ಕೆ ಇಲ್ಲಿ ಗಂಡಾಂತರ ಕಾದಿದೆ.
ಅಫ್ಘಾನಿಸ್ಥಾನದ ಅವಸ್ಥೆ ಯಾರಿಗೂ ಬೇಡ. ಎರಡು ಪಂದ್ಯಗಳು ಮಳೆಯಿಂದ ಕೊಚ್ಚಿ ಹೋದರೆ, ಒಂದರಲ್ಲಿ ನಬಿ ಪಡೆ ಸೋಲನುಭವಿಸಿದೆ. ಅದರ ಎರಡೂ ಅಂಕ ರದ್ದುಗೊಂಡ ಪಂದ್ಯಗಳ ಮೂಲಕವೇ ಬಂದಿರುವುದು ವಿಶೇಷ. ಕೂಟದ ಏರುಪೇರಿಗೆ ಕಾರಣವಾದೀತೆಂಬ ನಿರೀಕ್ಷೆ ಹೊಂದಿದ್ದ ಅಫ್ಘಾನ್ ಪಡೆಯೀಗ ಅಂಕಪಟ್ಟಿಯ ತಳದಲ್ಲಿದೆ.
ಸಮಾಧಾನವೆಂದರೆ, ಇನ್ನು ಮೆಲ್ಬರ್ನ್ನಲ್ಲಿ ಫೈನಲ್ ಹೊರತುಪಡಿಸಿದರೆ ಬೇರೆ ಯಾವುದೇ ಪಂದ್ಯ ಇಲ್ಲದಿರುವುದು. ಉಳಿದ ಸ್ಪರ್ಧೆಗಳೆಲ್ಲ ಸಾಂಗವಾಗಿ ಸಾಗಿದರೆ ಟಿ20 ವಿಶ್ವಕಪ್ ಮರಳಿ ಜೋಶ್ ಪಡೆದೀತು.
ಬದಲಿ ಸ್ಟೇಡಿಯಂನಲ್ಲಿ ಆಡಬಹುದಿತ್ತೇ?
ಕಳೆದ ಕೆಲವು ದಿನಗಳಿಂದ ಮೆಲ್ಬರ್ನ್ ನಲ್ಲಿ ಭಾರೀ ಮಳೆ ಸುರಿಯುತ್ತಿದ್ದುದರಿಂದ ಈ ಪಂದ್ಯವನ್ನು ಎಂಸಿಜಿ ಬದಲು “ಡಾಕ್‌ಲ್ಯಾಂಡ್ಸ್ ಸ್ಟೇಡಿಯಂ’ನಲ್ಲಿ ಆಡಬಹುದಿತ್ತು ಎಂಬ ಅನಿಸಿಕೆ ಈಗ ಹೆಚ್ಚು ಮಹತ್ವ ಪಡೆಯುತ್ತಿದೆ. ಕಾರಣ, ಈ ಸ್ಟೇಡಿಯಂ ಛಾವಣಿ ಹೊಂದಿರುವುದು. ಎಷ್ಟೇ ಮಳೆ ಬಂದರೂ ಇಲ್ಲಿ ಆಟ ನಿರಾಂತಕವಾಗಿ ಸಾಗುತ್ತದೆ.
“ಡಾಕ್‌ಲ್ಯಾಂಡ್ ಸ್ಟೇಡಿಯಂ’ ಎಂಸಿಜಿಗಿಂತ ಕೇವಲ 5 ಕಿ.ಮೀ. ದೂರದಲ್ಲಿದೆ. ಹೀಗಾಗಿ ಪಂದ್ಯದ ಸ್ಥಳಾಂತರ ಸಮಸ್ಯೆ ಎನಿಸದು. ಆದರೆ ಇದರ ವೀಕ್ಷಕರ ಸಾಮರ್ಥ್ಯ ಕಡಿಮೆ. ಎಂಸಿಜಿಯಲ್ಲಿ 90 ಸಾವಿರ ವೀಕ್ಷಕರಿಗೆ ಅವಕಾಶವಿದ್ದರೆ, ಇಲ್ಲಿ 53 ಸಾವಿರ ಮಾತ್ರ. ಹೀಗಾಗಿ ಎಂಸಿಜಿಯಲ್ಲಿ ಟಿಕೆಟ್ ಪಡೆದವರಿಗೆಲ್ಲ ಕಡೆ ಗಳಿಗೆಯಲ್ಲಿ ವ್ಯವಸ್ಥೆ ಮಾಡುವುದು ಕಷ್ಟ ಎಂಬುದು ಒಂದು ಕಾರಣ. ಹಾಗೆಯೇ ಇದು ಮೂಲತಃ ಕ್ರಿಕೆಟ್ ಸ್ಟೇಡಿಯಂ ಅಲ್ಲ ಎಂಬುದು ಮತ್ತೂಂದು ಕಾರಣ. ಕೇವಲ ಬಿಬಿಎಲ್ ಪಂದ್ಯಗಳನ್ನು ಇಲ್ಲಿ ಆಡಲಾಗುತ್ತದೆ.
ಆದರೆ ಇದಕ್ಕಿಂತ ಮಿಗಿಲಾದದ್ದು, ವಿಶ್ವಕಪ್ ಎನ್ನುವುದು ಐಸಿಸಿ ಪಂದ್ಯಾವಳಿ ಎಂಬುದು. ಹೀಗಾಗಿ ಪಂದ್ಯದ ಸ್ಥಳಾಂತರಕ್ಕೆ ನಾನಾ ನಿಯಮ, ಪ್ರಕ್ರಿಯೆಗಳಿವೆ.
ಆಸ್ಟ್ರೇಲಿಯದ ಕೋಚ್ ಆ್ಯಂಡ್ರೂé ಮೆಕ್‌ಡೊನಾಲ್ಡ್ ಇದನ್ನೇ ಉಲ್ಲೇಖೀಸಿ ಅಫ್ಘಾನ್ ಕೋಚ್ ಜೊನಾಥನ್ ಟ್ರಾಟ್ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ಅಫ್ಘಾನಿಸ್ಥಾನದ 2 ಪಂದ್ಯಗಳು ಮಳೆಯಿಂದ ರದ್ದುಗೊಂಡಿ ರುವುದರಿಂದ ಕೋಚ್ ಟ್ರಾಟ್ ತೀವ್ರ ಹತಾಶರಾಗಿದ್ದಾರೆ. ಹೀಗಾಗಿ ಅವರು “ಡಾಕ್‌ಲ್ಯಾಂಡ್ಸ್ ಕ್ರೀಡಾಂಗಣ’ವನ್ನೇಕೆ ಬಳಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದರು.
ಮಳೆ ಪಂದ್ಯಗಳಿಗೆ ಪರಿಹಾರವೇನು?
ಪ್ರತಿಯೊಂದು ಲೀಗ್ ಪಂದ್ಯಕ್ಕೂ ಮೀಸಲು ದಿನವನ್ನು ಇರಿಸಲು ಸಾಧ್ಯವಿಲ್ಲ. ಹಾಗೆಯೇ ಅಂಕಗಳನ್ನು ಹಂಚಿಕೊಳ್ಳುತ್ತ ಹೋಗಿ ನಾಕೌಟ್ ಪ್ರವೇಶಿಸುವುದರಲ್ಲೂ ಅರ್ಥವಿಲ್ಲ. ಹಾಗಾದರೆ ಇದಕ್ಕೇನು ಪರಿಹಾರ?
ಮಳೆಯಿಂದ ರದ್ದುಗೊಂಡ ಪಂದ್ಯಗಳನ್ನೆಲ್ಲ ಗ್ರೂಪ್ ಸ್ಪರ್ಧೆ ಮುಗಿದ ಬಳಿಕ ಆಡಿಸುವುದು. ಇದಕ್ಕೆಂದೇ ಒಂದೆರಡು ದಿನಗಳನ್ನು ಮೊದಲೇ ನಿಗದಿಗೊಳಿಸಬೇಕು. ಹವಾಮಾನ ವರದಿಯನ್ನು ಪರಿಗಣಿಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸ್ಪಷ್ಟ ಫಲಿತಾಂಶ ಪಡೆದೇ ನಾಕೌಟ್ ಪ್ರವೇಶಿಸಿದರೆ ವಿಶ್ವಕಪ್ ಪಂದ್ಯಾವಳಿ ಪರಿಪೂರ್ಣವೆನಿಸುತ್ತದೆ ಎಂಬುದು ಕ್ರಿಕೆಟ್ ಪಂಡಿತರ ಸಲಹೆ.
ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆದ್ದ ಸ್ಥಿತಿ ಮರುಕಳಿಸದಿರಲಿ ಎಂಬುದು ಎಲ್ಲರ ಹಾರೈಕೆ.
ರದ್ದುಗೊಂಡ ಪಂದ್ಯಗಳು
1. ದಕ್ಷಿಣ ಆಫ್ರಿಕಾ-ಜಿಂಬಾಬ್ವೆ (ಹೋಬರ್ಟ್)
2. ನ್ಯೂಜಿಲ್ಯಾಂಡ್-ಅಫ್ಘಾನಿಸ್ಥಾನ (ಮೆಲ್ಬರ್ನ್)
3. ಅಫ್ಘಾನಿಸ್ಥಾನ-ಐರ್ಲೆಂಡ್ (ಮೆಲ್ಬರ್ನ್)
4. ಆಸ್ಟ್ರೇಲಿಯ-ಇಂಗ್ಲೆಂಡ್ (ಮೆಲ್ಬರ್ನ್)
ಇಂದಿನ ಪಂದ್ಯ
ನ್ಯೂಜಿಲ್ಯಾಂಡ್-ಶ್ರೀಲಂಕಾ
ಆರಂಭ: ಅಪರಾಹ್ನ 1.30
ಸ್ಥಳ: ಸಿಡ್ನಿ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.