ಅನ್ನದ ಜೊತೆಗೆ ಜ್ಞಾನದ ಹಸಿವನ್ನೂ ನೀಗಿಸಲಿ ಕನ್ನಡ!
Team Udayavani, Oct 29, 2022, 10:10 AM IST
ಕನ್ನಡ ಅನ್ನ ಕೊಡುವ ಭಾಷೆಯಾಗಲಿ… ತನ್ನೊಡಲೊಳಗೆ ತಂತ್ರಜ್ಞಾನವನ್ನು ಹೆಚ್ಚೆಚ್ಚು ಅಳವಡಿಸಿಕೊಳ್ಳಲಿ… ಜ್ಞಾನ ಕೇಳುವವರಿಗೆ ಜ್ಞಾನದಾತವಾಗಲಿ…ಮತ್ತೊಂದು ರಾಜ್ಯೋತ್ಸವದ ಸಂಭ್ರಮಕ್ಕೆ ಸಿದ್ಧ ವಾಗುವ ಹೊತ್ತಲ್ಲೇ, ಕನ್ನಡದ ಮಡಿಲಲ್ಲಿ ತಂತ್ರಜ್ಞಾನವೆಂಬುದು ಬಂದು ಬೀಳುವುದು ಯಾವಾಗ? ಇದಕ್ಕೆ ಇನ್ನೆಷ್ಟು ದಿನ ಬೇಕು ಎಂಬ ಸವಾಲೊಂದು ಮೂಡುತ್ತದೆ. ಒಂದು ವೇಳೆ ಕನ್ನಡದಲ್ಲಿ ಸರಿಯಾಗಿ ಹದವಾದರೆ, ತಂತ್ರಜ್ಞಾನ ಬೆರೆತು, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತವೆ, ಆಗ ಕನ್ನಡ ಅನ್ನ ಕೊಡುವ ಭಾಷೆಯಾಗಿ ಬದಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕನ್ನಡದಲ್ಲಿ ಕೋಡಿಂಗ್: ಕನ್ನಡ ಇನ್ನೂ ಪ್ರೋಗ್ರಾಮಿಂಗ್ ಭಾಷೆಗೆ ಹೊಂದಿಕೊಂಡಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. 1980ರ ದಶಕದಲ್ಲೇ ಕನ್ನಡವನ್ನು ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬಳಕೆ ಮಾಡಲು ಪ್ರಯತ್ನ ನಡೆದಿತ್ತು. ಇದಕ್ಕೆ ಡಿ.ಎ.ಪಾಟೀಲ್ ಎಂಬವರು ಪ್ರಯತ್ನಿಸಿದ್ದರು ಎಂದು ಕಂಪ್ಯೂಟರ್ ತಜ್ಞ, ಲೇಖಕ ಟಿ.ಜಿ. ಶ್ರೀನಿಧಿ ಹೇಳುತ್ತಾರೆ. ಆದರೂ ಕನ್ನಡದಲ್ಲಿ ಕೋಡಿಂಗ್ ಜತೆ ಜತೆಗೆ ತಂತ್ರಜ್ಞಾನದಲ್ಲಿ ಕನ್ನಡವನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಬಹುದು ಎಂಬುದು ಅವರ ಅಭಿಪ್ರಾಯ.
ಅಂದರೆ, ರಾಜ್ಯ ಸರಕಾರವೇ ರೂಪಿಸಿರುವ ಕಣಜ ವೆಬ್‌ಸೈಟ್ ಅನ್ನೇ ಬೇರೆ ಬೇರೆ ರೂಪಗಳಲ್ಲಿ ಬಳಕೆ ಮಾಡಿಕೊಳ್ಳಬಹುದು. ಸದ್ಯ ಕನ್ನಡದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವಂಥ ಉತ್ತಮ ವೆಬ್‌ಸೈಟ್‌ಗಳು ಅಥವಾ ಆನ್‌ಲೈನ್ ವೇದಿಕೆ ಎಂಬುದಿಲ್ಲ. ಇದೇ ಕಣಜವನ್ನು ವಿದ್ಯಾರ್ಥಿಗಳ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಅನುಕೂಲಕ್ಕೆ ಬಳಸಿಕೊಂಡರೆ ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ ಶ್ರೀನಿಧಿ. ಇದರ ನಡುವೆಯೇ ಹೊಸ ಶಿಕ್ಷಣ ನೀತಿ ಅಡಿಯಲ್ಲಿ ಆರನೇ ತರಗತಿಯಿಂದಲೇ ಕೋಡಿಂಗ್ ಕಲಿಸುವುದೂ ಉತ್ತಮವಾದ ಕೆಲಸ ಎಂಬುದು ಇವರ ಅಭಿಪ್ರಾಯ.
ಆದರೆ ಸದ್ಯ ಕಣಜದ ಸ್ಥಿತಿ ಬೇರೆಯಾಗಿಯೇ ಇದೆ. ಸರಕಾರ ಇದನ್ನೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇತ್ತೀಚೆಗೆ ಈ ವೆಬ್‌ಸೈಟ್ ತೀರಾ ನಿಧಾನ ಎನ್ನಿಸಿದೆ. ಸರಕಾರ ಇದರ ಬಗ್ಗೆ ಹೆಚ್ಚಿನ ನಿಗಾ ತೆಗೆದುಕೊಂಡು ಉತ್ತಮಗೊಳಿಸಬೇಕು. ಇದರಲ್ಲಿರುವ ಅಸಂಖ್ಯಾತ ಮಾಹಿತಿಯನ್ನು ಎಲ್ಲರಿಗೂ ಹಂಚಬಹುದು ಎಂಬುದು ಶ್ರೀನಿಧಿ ಅವರ ಮಾತು.
ಉದ್ಯೋಗಾಧಾರಿತವಾಗಿ ಹೇಳಿಕೊಡಿ: ಸದ್ಯ ಎನ್‌ಇಪಿಯಲ್ಲಿ ಕನ್ನಡ ಮಾಧ್ಯಮದಲ್ಲೇ ಎಂಜಿನಿಯರಿಂಗ್ ಹೇಳಿಕೊಡಲು ತಯಾರಿ ನಡೆಯುತ್ತಿದೆ. ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾತ್ರ ಆರಂಭದಲ್ಲಿ ಹೇಳಿಕೊಡಲಾಗುತ್ತದೆ. ಇದರಲ್ಲಿ ಎಂಜಿನಿಯರಿಂಗ್ ಹೇಳಿಕೊಟ್ಟರೆ ಮುಂದೆ ಉದ್ಯೋಗಕ್ಕೆ ಸಮಸ್ಯೆಯಾಗುವುದಿಲ್ಲ ಎಂಬುದು ಮತ್ತೂಬ್ಬ ಕಂಪ್ಯೂಟರ್ ತಜ್ಞ ಯು.ಬಿ.ಪವನಜ ಅವರ ಹೇಳಿಕೆ.
ಸ್ಮಾರ್ಟ್‌ಫೋನ್‌ಗಾಗಿ ಫಾಂಟ್ ಬೇಕು: ಡೆಸ್ಕ್ಟಾಪ್ ಮತ್ತು ಸ್ಮಾರ್ಟ್‌ಫೋನ್‌ನಲ್ಲಿ ಕೆಲವೇ ಕೆಲವು ಫಾಂಟ್‌ಗಳಿವೆ. ಡೆಸ್ಕ್ಟಾಪ್‌ನಲ್ಲಿ ನುಡಿ ಮತ್ತು ಯೂನಿಕೋಡ್ ಸೇರಿ ಕೆಲವೊಂದು ಫಾಂಟ್‌ಗಳು ಮಾತ್ರ ಉಚಿತವಾಗಿ ಸಿಗುತ್ತಿವೆ. ಉಳಿದಂತೆ ಬರಹ, ಶ್ರೀಲಿಪಿ ಫಾಂಟ್‌ಗಳಿಗೆ ಹಣನೀಡಿ ಖರೀದಿಸಬೇಕು. ಸ್ಮಾರ್ಟ್‌ಫೋನ್‌ಗೆ ಹೊಂದಿಕೊಳ್ಳುವಂಥ ಫಾಂಟ್‌ಗಳ ಅನ್ವೇಷಣೆಯಾಗಬೇಕು.
ಕನ್ನಡದ ಕಿಂಡಲ್ ಮತ್ತು ಇ-ಬುಕ್: ಅಮೆರಿಕದ ಅಮೆಜಾನ್‌ನ ಕಿಂಡಲ್‌ನ ಇ-ಬುಕ್‌ನಲ್ಲಿ ಕನ್ನಡಕ್ಕೆ ಸ್ಥಾನ ಸಿಕ್ಕಿಲ್ಲ. ಇದುವರೆಗೆ ಏಕೆ ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿಲ್ಲ. ಇತ್ತೀಚೆಗೆ ಅಮೆಜಾನ್‌ನ ಕಿಂಡಲ್ ಅನ್ನೇ ಏಕೆ ಅವಲಂಬಿಸಬೇಕು ಎಂಬ ಉದ್ದೇಶದಿಂದ ಕನ್ನಡಿಗರೇ ಮೈಲಾಂಗ್, ಋತುಮಾನ, ಆಲಿಸಿರಿ ಸೇರಿದಂತೆ ಹಲವಾರು ಇ-ಬುಕ್‌ಗಳ ವೇದಿಕೆ ಶುರು ಮಾಡಿದ್ದಾರೆ. ಇದಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಪಂದನೆ ಸಿಕ್ಕಿದೆ. ಸದ್ಯ ಈ ವೇದಿಕೆಗಳಲ್ಲಿ ಕುವೆಂಪು, ಶಿವರಾಮ ಕಾರಂತರು, ಪೂರ್ಣಚಂದ್ರ ತೇಜಸ್ವಿ, ಜಯಂತ್ ಕಾಯ್ಕಿಣಿ, ಜೋಗಿ ಸೇರಿದಂತೆ ಹೊಸ ಮತ್ತು ಹಳೇ ತಲೆಮಾರಿನ ಸಾಹಿತಿಗಳ ಪುಸ್ತಕಗಳು ಸಿಗುತ್ತಿವೆ. ಇಲ್ಲೂ ಒಂದು ಸಮಸ್ಯೆ ಇದೆ. ಕನ್ನಡದಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇ-ಬುಕ್‌ನೊಳಗೆ ಬರುವ ಲೇಖಕರ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಎಲ್ಲಿ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿ ಹಂಚಿ ಬಿಡುತ್ತಾರೆಯೋ ಎಂಬ ಆತಂಕ. ಈ ಆತಂಕ ಹೋಗಬೇಕು ಎಂಬುದು ಇ-ಬುಕ್ ವೇದಿಕೆಗಳ ರೂಪಿಸಿರುವವರ ಅಭಿಪ್ರಾಯ.
ಹೊಸ ಅನ್ವೇಷಣೆಗಳು ಏಕಿಲ್ಲ?
ಕೋಡಿಂಗ್ ಅಷ್ಟೇ ಅಲ್ಲ, ತಂತ್ರಜ್ಞಾನದಲ್ಲಿ ಕನ್ನಡ ವಿಷಯದಲ್ಲಿ ಇಂದಿಗೂ ಸರಕಾರಗಳ ನಿಲುವು ಅಷ್ಟಕ್ಕಷ್ಟೇ ಎಂಬಂತೆಯೇ ಇದೆ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಸಣ್ಣದಾಗಿರುವ ನಾರ್ವೆ, ಸಿಂಗಾಪೂರದಂಥ ಅದೆಷ್ಟೋ ದೇಶಗಳಲ್ಲಿ ಅವರದ್ದೇ ಭಾಷೆಯಲ್ಲೇ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡಲಾಗುತ್ತಿದೆ. ಆದರೆ ಕನ್ನಡದಲ್ಲಿ ಮಾತ್ರ ಇನ್ನೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಸರಕಾರಗಳ ಇಚ್ಛಾಶಕ್ತಿಯ ಕೊರತೆ ಇರುವುದೂ ಕಾರಣ ಎಂದು ಹೇಳುತ್ತಾರೆ ಪವನಜ ಅವರು.
(ಮರು ಪ್ರಕಟಿತ ಲೇಖನ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.