ತಾನೇ ಬೆಳೆದ ಬೆಳೆಗೆ ಬೆಲೆ ಕಟ್ಟುವ ಹಕ್ಕಿಲ್ಲ!
ಹೋರಾಟ ಮಾಡಿಯೇ ದರ ಪಡೆಯುವ ಅನಿವಾರ್ಯತೆ ; ಕಾರ್ಖಾನೆ ಬೆಳೆದಂತೆ ರೈತರು ಬೆಳೆಯುತ್ತಿಲ್ಲ
Team Udayavani, Oct 31, 2022, 4:37 PM IST
ಬಾಗಲಕೋಟೆ: ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸಲು ಹೋಗಿ, ಅದಕ್ಕೊಂದು ಎಂಆರ್‌ಪಿ ದರವಿದೆ. ಯಾವುದೇ ಕಂಪನಿ, ಉದ್ಯಮಿಗಳು ತಾವು ಉತ್ಪಾದಿಸುವ ವಸ್ತುಗಳಿಗೆ ನಿರ್ದಿಷ್ಟ ಬೆಲೆ ನಿರ್ಧರಿಸುತ್ತಾರೆ. ಆದರೆ, ರೈತರು, ತಾವೇ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಕಟ್ಟುವ ಅಥವಾ ದರ ನಿಗದಿಪಡಿಸಿ ಮಾರುಕಟ್ಟೆಗೆ ಕಳುಹಿಸುವ ಹಕ್ಕಿಲ್ಲ. ಇದು ನಮ್ಮ ದು:ಸ್ಥಿತಿ…
ಹೀಗೆ ಆಕ್ರೋಶ ವ್ಯಕ್ತಪಡಿಸಿದವರು ಜಿಲ್ಲೆಯ ಕಬ್ಬು ಬೆಳೆಗಾರರು. ಕಬ್ಬು ಬೆಳೆಗಾರರು, ಪ್ರತಿ ವರ್ಷವೂ ತಾವು ಬೆಳೆದ ಕಬ್ಬಿಗೆ ದರ ನಿಗದಿ ಮಾಡಿ ಎಂದು ಹೋರಾಟ ಮಾಡುವುದು ತಪ್ಪಿಲ್ಲ.
ಕಬ್ಬು ಬೆಳೆಗಾರರಿಗೆ ನಿರ್ದಿಷ್ಟ ಬೆಲೆ ಸಿಗಲಿ ಹಾಗೂ ಪ್ರತಿ ವರ್ಷವೂ ನಡೆಯುವ ಹೋರಾಟ ಕೊನೆಗೊಳ್ಳಲಿ ಎಂಬ ಕಾರಣಕ್ಕಾಗಿ ಕಳೆದ 2013ರಲ್ಲಿ ಜಗದೀಶ ಶೆಟ್ಟರ ಅವರು ಸಿಎಂ ಆಗಿದ್ದಾಗ, ರಾಜ್ಯದಲ್ಲಿ ಎಸ್‌ಎಪಿ ಕಾಯಿದೆ ಜಾರಿಗೊಳಿಸಲಾಗಿದೆ. ಈ ಕಾಯಿದೆ ಅನ್ವಯ ಪ್ರತಿಯೊಂದು ಕಾರ್ಖಾನೆಗಳು ದರ ನಿಗದಿಪಡಿಸಬೇಕು. ಅದನ್ನು ರಾಜ್ಯ ಸರ್ಕಾರವೇ ನೇರವಾಗಿ ನಿಗಾ ವಹಿಸಬೇಕು. ಇದು ಕಾನೂನಿನಲ್ಲಿ ಇರುವ ಅವಕಾಶ. ಜಿಲ್ಲಾಡಳಿತ ಕೇವಲ ಅದರ ಉಸ್ತುವಾರಿ ಅಥವಾ ಕಾನೂನು-ಸೂವ್ಯವಸ್ಥೆ ಕಾಪಾಡುವ ಜವಾಬ್ದಾರಿ ಮಾತ್ರ ಹೊಂದಿದೆ. ಆದರೆ, ಎಎಸ್‌ಪಿ ಕಾಯ್ದೆ ಅನ್ವಯ ದರ ನಿಗದಿಯಾಗುತ್ತಿಲ್ಲ ಎಂಬುದು ರೈತರ ಆಕ್ರೋಶ.
14 ಕಾರ್ಖಾನೆಗಳು: ರಾಜ್ಯದಲ್ಲಿ ಅತಿಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬಾಗಲಕೋಟೆಗೆ 2ನೇ ಸ್ಥಾನವಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಕಾರ್ಖಾನೆಗಳಿದ್ದು, ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ ನೋಡುವುದಾದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಹೆಚ್ಚೇ ಇವೆ. ಅಲ್ಲದೇ ಜಿಲ್ಲೆಯಲ್ಲಿ ಪ್ರತಿವರ್ಷ ಸುಮಾರು 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದು, ಸಕ್ಕರೆ ಉತ್ಪಾದನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಕಾರ್ಖಾನೆಗಳು, ದೇಶದ ಗಮನ ಸೆಳೆದಿವೆ.
ನಿರಾಣಿ ಉದ್ಯಮ ಸಮೂಹದಿಂದ ಮುಧೋಳದ ನಿರಾಣಿ ಶುಗರ್, ಚಿಪ್ಪರಗಿಯಲ್ಲಿ ಸಾಯಿಪ್ರಿಯಾ ಶುಗರÕ, ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಶುಗರÕ, ಕುಳಗೇರಿ ಕ್ರಾಸ್ ಮತ್ತು ಬಾದಾಮಿ ಶುಗರ್ ಸಹಿತ ಒಟ್ಟು ಐದು ಸಕ್ಕರೆ ಕಾರ್ಖಾನೆಗಳು ಜಿಲ್ಲೆಯಲ್ಲಿವೆ. ಇನ್ನು ಉತ್ತೂರಿನ ಐಸಿಪಿಎಲ್ ಶುಗರ್, ತಿಮ್ಮಾಪುರದಲ್ಲಿ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ, ಸಮೀರವಾಡಿಯ ಗೋದಾವರಿ ಶುಗರ್, ಸಿದ್ದಾಪುರದ ಪ್ರಭುಲಿಂಗೇಶ್ವರ ಶುಗರ್, ಹಿರೇಪಡಸಲಗಿಯ ಜಮಖಂಡಿ ಶುಗರ್, ಬೀಳಗಿ ತಾಲೂಕಿನ ಕುಂದರಗಿಯ ಜಮ್ ಶುಗರ್, ಬಾಡಗಂಡಿಯ ಬೀಳಗಿ ಶುಗರ್, ನಾಯನೇಗಲಿಯ ಸದಾಶಿವ ಶುಗರ್, ಶಿರೂರಿನಲ್ಲಿ ಹೊಸದಾಗಿ ಆರಂಭಗೊಂಡ ಮೆಲ್‌ಬ್ರೋ ಶುಗರ್ ಸಹಿತ ಒಟ್ಟು 14 ಸಕ್ಕರೆ ಕಾರ್ಖಾನೆಗಳಿವೆ. ಜತೆಗೆ ಇನ್ನೂ ಒಂದೆಡೆ ಕಾರ್ಖಾನೆಗಳು ತಲೆ ಎತ್ತಲು ಸಜ್ಜಾಗಿವೆ.
ಸೌಹಾರ್ದಯುತ ವೇದಿಕೆ ಅಗತ್ಯ: ರೈತರಿಲ್ಲದೇ ಸಕ್ಕರೆ ಕಾರ್ಖಾನೆ ನಡೆಯಲ್ಲ. ಸಕ್ಕರೆ ಕಾರ್ಖಾನೆಗಳಿಲ್ಲದೇ ರೈತರು ಬೆಳೆದ ಕಬ್ಬು ನುರಿಸಲು ಸಾಧ್ಯವಿಲ್ಲ. ಇಬ್ಬರ ಮಧ್ಯೆಯೂ ಸೌಹಾರ್ದಯುತ ವಾತಾವರಣ ಇರಲೇಬೇಕು. ಆದರೆ, ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳು, ರಾಜಕಾರಣಿಗಳ ಒಡೆತನದಲ್ಲಿವೆ. ಹೀಗಾಗಿ ಇಲ್ಲಿಯೂ ಆಗಾಗ ರಾಜಕೀಯ ಸದ್ದು ಮಾಡುತ್ತಲೇ ಇರುತ್ತದೆ. ಜಿಲ್ಲೆಯಲ್ಲಿ ರೈತ ಸಂಘಟನೆ ಪ್ರಭಲವಾಗಿದ್ದು, ಕಬ್ಬಿನ ದರಕ್ಕಾಗಿ ಗಟ್ಟಿ ಹೋರಾಟ ನಡೆಸುತ್ತಲೇ ಇರುತ್ತಾರೆ. ಆದರೆ, ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಗಂಭೀರ ಪ್ರಯತ್ನಗಳು ನಡೆಯಲು, ಕೆಲ ರಾಜಕೀಯ ಶಕ್ತಿಗಳು ಬಿಡುತ್ತಿಲ್ಲ ಎಂಬ ಮಾತಿದೆ.
ನಮಗೇಕೆ ಅನ್ಯಾಯ?: ಜಿಲ್ಲೆಯ ರೈತರು, ನಾವು ಕಷ್ಟಪಟ್ಟು ಬೆಳೆದ ಕಬ್ಬಿಗೆ ಯೋಗ್ಯ ದರ ನೀಡಿ ಎಂದು ಕೇಳುತ್ತಿದ್ದಾರೆ. ನಮ್ಮ ಜಿಲ್ಲೆಗಿಂತಲೂ ಅತಿಕಡಿಮೆ ಸಕ್ಕರೆ ರಿಕವರಿ ಇರುವ ಉತ್ತರಪ್ರದೇಶದಲ್ಲಿ 3500, ಗುಜರಾತ್ ನಲ್ಲಿ 4400 ಹಾಗೂ ಪಂಜಾಬ್‌ನಲ್ಲಿ 3800 ರೂ. ದರವನ್ನು ಪ್ರತಿಟನ್‌ಗೆ ನೀಡಲಾಗುತ್ತಿದೆ. ಬೆಲೆ ನಿಗದಿ ಮಾಡದೇ, ಸಕ್ಕರೆ ಕಾರ್ಖಾನೆ ಆರಂಭಿಸಲಾಗುತ್ತದೆ. ರೈತರು, ನಮ್ಮ ಕಬ್ಬು ಹಾಳಾಗಬಾರದು ಎಂದು ಕಾರ್ಖಾನೆಗೆ ಕಬ್ಬು ಕಳುಹಿಸುತ್ತಾರೆ. ಕಬ್ಬು ನುರಿಸಿದ ಬಳಿಕ, ಮನ ಬದಂತೆ ದರ ನೀಡಲಾಗುತ್ತಿದೆ. ಸಧ್ಯ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಟನ್‌ಗೆ 2900, ಜಮಖಂಡಿ ಶುಗರÕನವರು 2800 ರೂ. ದರ ಘೋಷಣೆ ಮಾಡಿದ್ದಾರೆ. ಉಳಿದ ಯಾವ ಕಾರ್ಖಾನೆಗಳೂ ದರ ಘೋಷಣೆ ಮಾಡಿಲ್ಲ. ಆದ್ದರಿಂದ ರಾಜ್ಯ ಸರ್ಕಾವೇ ಮಧ್ಯ ಪ್ರವೇಶಿಸಿ, ಎಸ್‌ಎಪಿ ಕಾನೂನು ಪ್ರಕಾರ ಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡಬೇಕು ಎಂಬುದು ಕಬ್ಬು ಬೆಳೆಗಾರರ ಸಂಘದ ಒಕ್ಕೋರಲಿನ ಒತ್ತಾಯ.
ನಮ್ಮ ಕಾರ್ಖಾನೆಯ ಕಬ್ಬು ಬೆಳೆಗಾರರರು, ರೈತ ಪ್ರಮುಖರೊಂದಿಗೆ ಕೂಡಿ ಸುಧೀಘ್ರ ಚರ್ಚೆ ಮಾಡಿದ್ದೇವೆ. ಚರ್ಚೆಯ ಬಳಿಕ ಪ್ರಸಕ್ತ ವರ್ಷ ಟನ್ ಕಬ್ಬಿಗೆ 2800 ರೂ. ದರ ನಿಗದಿ ಮಾಡಿದ್ದು, ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಗಳು ಇದಕ್ಕೂ ಹೆಚ್ಚಿನ ಬೆಲೆ ನೀಡಿದರೆ, ಅದನ್ನು ನೀಡಲು ನಾವೂ ಬದ್ಧರಿದ್ದೇವೆ ಎಂದು ಹೇಳಿದ್ದೇವೆ. ಇದಕ್ಕೆ ಕಬ್ಬು ಬೆಳೆಗಾರರು ಸಹಮತ ವ್ಯಕ್ತಪಡಿಸಿದ್ದಾರೆ. –ಆನಂದ ನ್ಯಾಮಗೌಡ, ಜಮಖಂಡಿ ಶಾಸಕ ಹಾಗೂ ಜಮಖಂಡಿ ಶುಗರ್ ನಿರ್ದೇಶಕ
ರೈತರು ಒಂದು ಹೆಕ್ಟೇರ್ ಕಬ್ಬು ಬೆಳೆಯಲು ಕನಿಷ್ಠ 60 ಸಾವಿರ ವರೆಗೆ ಖರ್ಚು ಮಾಡುತ್ತಾರೆ. ಇಂದು ರಸಗೊಬ್ಬರ, ಬಿತ್ತನೆ ಬೀಜ, ಡಿಸೇಲ್-ಪೆಟ್ರೋಲ್ ಸಹಿತ ಪ್ರತಿಯೊಂದರ ಬೆಲೆಯೂ ಹೆಚ್ಚಳವಾಗಿದೆ. ಆದರೆ, ಕಳೆದ ನಾಲ್ಕೈದು ವರ್ಷದಿಂದ ಟನ್ ಕಬ್ಬಿಗೆ ಒಂದೇ ದರ ನೀಡಲಾಗುತ್ತಿದೆ. ಬೆಲೆ ಏರಿಕೆಯಿಂದ ತತ್ತರಿಸುವ, ಕಷ್ಟಪಟ್ಟು ರೈತ ಬೆಳೆಯುವ ಕಬ್ಬಿಗೆ ಯೋಗ್ಯ ಬೆಲೆ ಕೊಡಬೇಕು ಎಂಬುದು ನಮ್ಮ ನ್ಯಾಯಯುತ ಬೇಡಿಕೆ. ಇದಕ್ಕಾಗಿ ಹೋರಾಟ ನಡೆಸಿದ್ದೇವೆ. ಅ.31ರಂದು ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದು, ಸಭೆಯ ಬಳಿಕ ಮುಂದಿನ ಹೋರಾಟದ ನಿರ್ಧಾರ ಮಾಡುತ್ತೇವೆ. –ಯಲ್ಲಪ್ಪ ಹೆಗಡೆ, ಕಬ್ಬು ಬೆಳೆಗಾರರ ಹೋರಾಟಗಾರ
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.