ಗುಜರಾತ್ ಚುನಾವಣ ಕಣಕ್ಕೆ ಆಪ್ ತಾಪ
Team Udayavani, Nov 7, 2022, 6:30 AM IST
ಕಳೆದ ಬಾರಿ ಅಂದರೆ 2017ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ವಿವಿಧ ಕಾರಣಗಳಿಂದ ಭಾರೀ ಕುತೂಹಲ ಕೆರಳಿಸಿತ್ತು. 1998ರ ಬಳಿಕ ಸತತವಾಗಿ ರಾಜ್ಯದ ಅಧಿಕಾರ ಸೂತ್ರವನ್ನು ಹಿಡಿದಿರುವ ಬಿಜೆಪಿ ರಾಜ್ಯದಲ್ಲಿ ಏಕಚಕ್ರಾಧಿಪತ್ಯವನ್ನು ಕಂಡಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ಈ ಮೂವರು ಯುವ ನಾಯಕರು ಬಿಜೆಪಿ ಸರಕಾರದ ವಿರುದ್ಧ ನೇರ ಸಮರ ಸಾರಿದ್ದರು. ಇದು ಬಿಜೆಪಿಯನ್ನು ಕಂಗೆಡಿಸಿದ್ದರೆ ಕಾಂಗ್ರೆ ಸ್‌ನಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿತ್ತು. ಇದರ ಪರಿಣಾಮ ಎಂಬಂತೆಯೋ ವಿಧಾನ ಸಭೆಯಲ್ಲಿ ಬಿಜೆಪಿ ಎರಡಂಕಿಯ ಗಡಿ ದಾಟುವಲ್ಲಿ ವಿಫಲವಾಗಿತ್ತಲ್ಲದೆ ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಎರಡು ದಶಕಗಳ ಅವಧಿಯಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆಗೈದಿತ್ತು.
ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ನರ್ಮದಾ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ.
ಆಡಳಿತಾರೂಢ ಬಿಜೆಪಿಯಾಗಲಿ, ವಿಪಕ್ಷ ಕಾಂಗ್ರೆಸ್ ಆಗಲಿ ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳುವಲ್ಲಿ ಎಡವಿರುವುದು ಸುಸ್ಪಷ್ಟ. ಕಳೆದ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲು ಕಾರಣಕರ್ತರಾಗಿದ್ದ ಯುವ ನಾಯಕರಾದ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್ ಈಗ ಬಿಜೆಪಿ ತೆಕ್ಕೆಯಲ್ಲಿದ್ದರೆ ಜಿಗ್ನೇಶ್ ಮೇವಾನಿ ಕಾಂಗ್ರೆಸ್‌ನಲ್ಲಿದ್ದಾರೆ. ಈ ಮೂವರು ನಾಯಕರು ಪಕ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಕಳೆದ ಬಾರಿಯಷ್ಟು ಜನಪ್ರಿಯತೆಯನ್ನು ಹೊಂದಿಲ್ಲ. ಹಾಲಿ ಬಿಜೆಪಿ ಸರಕಾರದ ವಿರುದ್ಧ ಸಹಜವಾಗಿಯೇ ಸ್ವಲ್ಪ ಮಟ್ಟಿಗೆ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ವಿಪಕ್ಷ ಕಾಂಗ್ರೆಸ್ ಅನ್ನು ಈ ಹಿಂದಿನಂತೆಯೇ ನಾಯಕತ್ವದ ಕೊರತೆ ಬಾಧಿಸುತ್ತಿದೆ. ಮೇಲ್ನೋಟಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಲೀಸಾಗಿ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರುವುದು ಖಚಿತ ಎನ್ನಲಾಗುತ್ತಿದೆ. ಇದನ್ನೇ ಚುನಾವಣ ಪೂರ್ವ ಸಮೀಕ್ಷೆಗಳೂ ಹೇಳಿವೆ. ಆದರೆ ಈ ಎಲ್ಲ ವಿಶ್ಲೇಷಣೆಗಳ ನಡುವೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಗುಜರಾತ್‌ನಲ್ಲಿಯೂ ಬೇರೂರಲು ಶತಪ್ರಯತ್ನ ನಡೆಸುತ್ತಿದೆ. ಇದರಿಂದಾಗಿ ಈ ಬಾರಿ ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಬಿಜೆಪಿ ಸರಕಾರದ ವಿರುದ್ಧ ಅಪಸ್ವರ: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ಕಳೆದ 24 ವರ್ಷಗಳಿಂದ ಸತತವಾಗಿ ಅಧಿಕಾರದಲ್ಲಿದೆ. 2001 ರಿಂದ 2014ರ ವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎಂಟು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಇವೆಲ್ಲದರ ಹೊರತಾಗಿಯೂ ಬಿಜೆಪಿ ಪಾಲಿಗೆ ನರೇಂದ್ರ ಮೋದಿ ಅವರೇ ವರ್ಚಸ್ವೀ ನಾಯಕ.
ಇನ್ನು ಕಳೆದ 24 ವರ್ಷಗಳಿಂದ ಏಕ ಪಕ್ಷದ ಆಡಳಿತದಿಂದಾಗಿ ಜನರು ಒಂದಿಷ್ಟು ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಹಣದುಬ್ಬರ, ನಿರುದ್ಯೋಗ ಮತ್ತು ಜನಸಾಮಾನ್ಯರ ಪ್ರಾಥಮಿಕ ಆವಶ್ಯಕತೆ ಮತ್ತು ವಿಷಯಗಳ ಬಗೆಗಿನ ನಿರ್ಲಕ್ಷ್ಯದ ಬಗೆಗೆ ಜನರು ಸರಕಾರದ ವಿರುದ್ಧ ತಮ್ಮ ಅತೃಪ್ತಿಯನ್ನು ಹೊರಹಾಕ ತೊಡಗಿದ್ದಾರೆ.
ಅ.30ರಂದು ಮೊರ್ಬಿ ಸೇತುವೆ ಕುಸಿತ ದುರಂತ ಆಡಳಿತ ವ್ಯವಸ್ಥೆ ಮತ್ತು ಶ್ರೀಮಂತ ಉದ್ಯಮಿಗಳ ನಡುವಣ ನಂಟಿನತ್ತ ಬೆಟ್ಟು ಮಾಡಿದೆ. ಸರಕಾರಿ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಮುಂದೂಡಿಕೆ ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿಗಳ ನಿರಾಸೆಗೆ ಕಾರಣವಾಗಿದೆ. ಕಳೆದೆರಡು ವರ್ಷಗಳಿಂದ ಅತಿವೃಷ್ಟಿ ಯಿಂದಾಗಿ ನಷ್ಟವಾದ ಬೆಳೆಗೆ ಪರಿಹಾರ ನೀಡದಿರುವುದನ್ನು ವಿರೋಧಿಸಿ ರಾಜ್ಯದ ಹಲವೆಡೆ ರೈತರು ಪ್ರತಿಭಟನೆ ನಡೆಸು ತ್ತಿದ್ದಾರೆ. ಈ ಹಿಂದೆ ಗುಜರಾತ್ ಗುಣಮಟ್ಟದ ರಸ್ತೆಗೆ ಹೆಸರು ವಾಸಿಯಾಗಿದ್ದರೆ ಕಳೆದ ಐದಾರು ವರ್ಷಗಳಿಂದ ರಾಜ್ಯದೆಲ್ಲೆಡೆ ರಸ್ತೆಗಳು ಗುಂಡಿ ಬಿದ್ದಿದ್ದು, ಜನರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ದರ ತೀರಾ ದುಬಾರಿಯಾಗಿದ್ದು ಇದು ದೇಶದಲ್ಲಿಯೇ ಅತ್ಯಧಿಕ ಎಂಬ ಆರೋಪ ಕೇಳಿಬರುತ್ತಿದೆ. ಸರಕಾರದ ವಿವಿಧ ಯೋಜನೆಗಳಿಗಾಗಿ ರೈತರು ಮತ್ತು ಭೂಮಾಲಕರಿಂದ ಬೇಕಾಬಿಟ್ಟಿ ಯಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗು ತ್ತಿರುವ ಬಗೆಗೂ ಅಪಸ್ವರಗಳು ಕೇಳಿ ಬಂದಿವೆ.
ಇವೆಲ್ಲವೂ ಬಿಜೆಪಿ ಸರಕಾರ ವಿರುದ್ಧ ಜನರಲ್ಲಿ ಅಸಮಾಧಾನ ಉಂಟು ಮಾಡಿವೆ. ಆದರೆ ಬಿಜೆಪಿಗೆ ಪರ್ಯಾಯವೇನು ಎಂಬ ಪ್ರಶ್ನೆಗೆ ಜನರ ಬಳಿ ಸ್ಪಷ್ಟತೆ ಇಲ್ಲವಾದ್ದರಿಂದ ಆಡಳಿತ ವಿರೋಧಿ ಅಲೆ ಸರಕಾರವನ್ನು ಬದಲಾಯಿಸುವಷ್ಟು ಪ್ರಬಲ ಅಂಶವಾಗಲಾ ರದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಅದೇ ರಾಗ ಅದೇ ಹಾಡು; ಕಾಂಗ್ರೆಸ್ ಪಾಡು: ಹಾಲಿ ವಿಪಕ್ಷವಾಗಿರುವ ಕಾಂಗ್ರೆಸ್‌ನ ಪರಿಸ್ಥಿತಿ ಕೂಡ ಭಿನ್ನವೇನಿಲ್ಲ. ಕಳೆದ ಬಾರಿ ಎರಡು ದಶಕಗಳ ತೀವ್ರ ಹಿನ್ನಡೆಯಿಂದ ಸುಧಾರಿಸಿ ಕೊಂಡಿತ್ತು. 1995ರಿಂದೀಚೆಗೆ ಕಾಂಗ್ರೆಸ್ ನಿರಂತರವಾಗಿ ಸೋಲುತ್ತಾ ಬಂದಿದ್ದರೂ ಇದರ ಮತಗಳಿಕೆ ಪ್ರಮಾಣ ಸರಾಸರಿ ಶೇ.38ರಷ್ಟಿದ್ದು ಇದೇನು ನಗಣ್ಯವಲ್ಲ. 2017ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಒಟ್ಟಾರೆ ಮತಗಳಿಕೆ ಪ್ರಮಾಣ ಶೇ.42ಕ್ಕೇರಿತ್ತು. ಆದರೆ ಈ ಬಾರಿ ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕಾಂಗ್ರೆಸ್‌ನ ಬಲ ಮತ್ತೆ ಕುಂದಲಿರುವುದು ನಿಶ್ಚಿತ. ಕಾಂಗ್ರೆಸ್‌ಗೆ ಈ ಬಾರಿಯ ಚುನಾವಣೆಯನ್ನು ಮತ್ತಷ್ಟು ಸಮರ್ಥವಾಗಿ ಎದುರಿಸಲು ಅವಕಾಶವಿತ್ತಾದರೂ ಅದನ್ನು ಸ್ವಯಂಕೃತ ಅಪರಾಧಗಳಿಂದ ಕೈಚೆಲ್ಲಿದೆ ಎಂದರೆ ತಪ್ಪಾಗಲಾರದು.
ಕಳೆದ ಬಾರಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ಕಾಂಗ್ರೆಸ್‌ಗೆ ನೆರವಾಗಿದ್ದ ಹಾರ್ದಿಕ್ ಪಟೇಲ್ ಪಕ್ಷಕ್ಕೆ ಸೇರ್ಪಡೆಗೊಂಡರೂ ಅವರನ್ನು ಪಕ್ಷ ಸಂಘಟನೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಇದರಿಂದ ಮುನಿಸಿಕೊಂಡ ಹಾರ್ದಿಕ್ ಪಟೇಲ್ ಈಗ ಬಿಜೆಪಿ ತೆಕ್ಕೆಯಲ್ಲಿದ್ದಾರೆ. ಇನ್ನು ಮತ್ತೋರ್ವ ಯುವನಾಯಕ ಜಿಗ್ನೇಶ್ ಮೇವಾನಿ ಅವರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲೂ ಕಾಂಗ್ರೆಸ್ ನಾಯಕತ್ವ ಕೈಸೋತಿದೆ.
2017ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಗುಜರಾತ್‌ನಲ್ಲಿ ಹೆಚ್ಚು ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಈ ಬಾರಿ ರಾಹುಲ್ ಗಾಂಧಿ ಗುಜರಾತ್‌ನತ್ತ ಕಣ್ಣೆತ್ತಿಯೂ ನೋಡಿಲ್ಲ. ಕಳೆದ ಆರು ತಿಂಗಳುಗಳ ಅವಧಿಯಲ್ಲಿ ರಾಜ್ಯಕ್ಕೆ ಒಂದೆರಡು ಬಾರಿ ಭೇಟಿ ನೀಡಿದ್ದನ್ನು ಹೊರತುಪಡಿಸಿ ರಾಜ್ಯ ವಿಧಾನಸಭೆ ಚುನಾವಣೆಯ ಬಗೆಗೆ ಅವರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅಚ್ಚರಿಯ ವಿಷಯ ಎಂದರೆ ರಾಹುಲ್ ಗಾಂಧಿ ಅವರ ಅತ್ಯಂತ ಮಹತ್ವಾ ಕಾಂಕ್ಷೆಯ “ಭಾರತ್ ಜೋಡೋ ಯಾತ್ರಾ’ ಗುಜರಾತ್ ಅನ್ನು ಹಾದುಹೋಗುತ್ತಿಲ್ಲ. ಇವೆಲ್ಲವನ್ನೂ ಗಮನಿಸಿದಾಗ ಕಾಂಗ್ರೆಸ್ ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿರುವುದು ಸ್ಪಷ್ಟ.
ಆಪ್ ರಂಗಪ್ರವೇಶ: ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಆಮ್ ಆದ್ಮಿ ಪಾರ್ಟಿ ಗುಜರಾತ್‌ನಲ್ಲಿ ರಂಗಪ್ರ ವೇಶ ಮಾಡಿದೆ. ಕಳೆದ ಆರು ತಿಂಗಳುಗಳಿಂದೀಚೆಗೆ ಸತತವಾಗಿ ಆಪ್ ರಾಜ್ಯದಲ್ಲಿ ಸಂಘಟನೆ ಮತ್ತು ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಸದ್ಯ ಆಪ್ ಅಧಿಕಾರದಲ್ಲಿರುವ ದಿಲ್ಲಿ ಮತ್ತು ಪಂಜಾಬ್‌ಗ ಹೋಲಿಸಿದಲ್ಲಿ ಗುಜರಾತ್ ಭೌಗೋಳಿಕವಾಗಿ ದೊಡ್ಡದಾಗಿದ್ದು ಈ ರಾಜ್ಯಗಳಲ್ಲಿ ಪಕ್ಷ ತೋರಿದ ನಿರ್ವಹಣೆಯನ್ನು ಇಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಇದೇ ವೇಳೆ ಗೋವಾ ಮತ್ತು ಉತ್ತರಾಖಂಡ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಭಾರೀ ನಿರೀಕ್ಷೆ ಮೂಡಿಸಿದ್ದ ಆಪ್ ಫಲಿತಾಂಶ ಘೋಷಣೆಯಾದಾಗ ತೀವ್ರ ನಿರಾಸೆಗೊಳಗಾದುದು ಈಗ ಇತಿಹಾಸ. ಇದೇ ವೇಳೆ ಪಂಜಾಬ್‌ನಲ್ಲಿ ಪಕ್ಷ ತೋರಿದ ಸಾಧನೆಯನ್ನು ಯಾರೂ ಅಲ್ಲಗಳೆಯಲಾಗದು. ಈಗ ಗುಜರಾತ್‌ನಲ್ಲೂ ಆಪ್ ತನ್ನದೇ ಆದ ಹವಾವನ್ನು ಸೃಷ್ಟಿಸಿದೆ. ಕಳೆದ ಮೂರು ದಶಕಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದ್ದ ಗುಜರಾತ್‌ನಲ್ಲಿ ಈ ಬಾರಿ ಆಪ್ ಪ್ರವೇಶದಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಂಘಟನಾತ್ಮಕವಾಗಿ ಪಕ್ಷ ಇನ್ನಷ್ಟೇ ರಾಜ್ಯದಲ್ಲಿ ಬಲವರ್ಧನೆಗೊಳ್ಳಬೇಕಿರುವುದರಿಂದ ಈ ಚುನಾವಣೆಯ ಫಲಿತಾಂಶದಲ್ಲಿ ಭಾರೀ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದರ ಹೊರತಾಗಿಯೂ ಆಪ್‌ನ ರಂಗಪ್ರವೇಶ ಗುಜರಾತ್ ಚುನಾವಣ ಕಣಕ್ಕೆ ಒಂದಿಷ್ಟು ಬಿಸಿ ಮೂಡಿಸಿರು ವುದು ಮಾತ್ರ ಸುಳ್ಳಲ್ಲ. ಸದ್ಯದ ಸ್ಥಿತಿಯಲ್ಲಿ ಆಪ್ ಅನ್ನು ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ನಿರ್ಲಕ್ಷಿಸಲು ಸಾಧ್ಯವಿಲ್ಲ.
-ಹರೀಶ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.