ಮಣಿಪಾಲ: ಮಾಧ್ಯಮಗಳ ಟೀಕೆಗಳಿಂದ ಸದಾ ಎಚ್ಚರವಾಗಿರಲು ಸಾಧ್ಯ: ಸಿಎಂ ಬೊಮ್ಮಾಯಿ
ಪತ್ರಿಕಾ ರಂಗದ 6 ಮಂದಿ ಧೀಮಂತ ನಾಯಕರ ಸಂಸ್ಮರಣೆ ಕಾರ್ಯಕ್ರಮದ ಸಮಾರೋಪ
Team Udayavani, Nov 7, 2022, 6:37 PM IST
ಮಣಿಪಾಲ: ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ತುಂಬಾ ಮಹತ್ತರವಾದದ್ದು. ದಿನಪತ್ರಿಕೆಗಳ ಸಂಖ್ಯೆ ಕೂಡಾ ಕಡಿಮೆ ಇತ್ತು. ತಂತ್ರಜ್ಞಾನ ಕೂಡಾ ಬೆಳೆದಿರಲಿಲ್ಲವಾಗಿತ್ತು. ಅಂತಹ ಕಾಲದಲ್ಲಿ ಈ ಕರಾವಳಿ ಪ್ರದೇಶ ಪತ್ರಿಕೋದ್ಯಮದಲ್ಲಿ ಮಹತ್ತರವಾದ ಹೆಜ್ಜೆಯನ್ನಿಟ್ಟಿದ್ದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ (ನವೆಂಬರ್ 07) ಉದಯವಾಣಿಯು ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ರಂಗದ 6 ಮಂದಿ ಧೀಮಂತ ನಾಯಕರ ಸಂಸ್ಮರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಹಾತ್ಮ ಗಾಂಧಿ ಕೂಡಾ ತಮ್ಮ ಸಂದೇಶಗಳನ್ನು ಪತ್ರಿಕೆ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದರು. ಕರ್ನಾಟಕದಲ್ಲಿ ಮೊದಲ ಪತ್ರಿಕೆ ಆರಂಭವಾಗಿದ್ದೇ ಮಂಗಳೂರಿನಲ್ಲಿ. ಇದೊಂದು ಮಹತ್ವದ ವಿಚಾರ. ಯಾಕೆಂದರೆ ಇಲ್ಲಿ ಅತ್ಯಂತ ದೂರದೃಷ್ಟಿ ಇರುವ ಚಿಂತಕರು, ಅದನ್ನು ಬರಹ ರೂಪದಲ್ಲಿ ಅಭಿವ್ಯಕ್ತಗೊಳಿಸುವ ಸಾಹಿತಿಗಳು, ದೇಶಪ್ರೇಮ ಈ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಬೆಳೆದಿರುವುದನ್ನು ಎತ್ತಿ ತೋರಿಸುತ್ತದೆ.
ಆ ಸಂದರ್ಭದಲ್ಲಿ ಮಣಿಪಾಲದಂತಹ ಸಣ್ಣ ಗ್ರಾಮದಲ್ಲಿ ಪತ್ರಿಕೆಯನ್ನು ಆರಂಭ ಮಾಡುವುದೇ ದೊಡ್ಡ ಸಂಗತಿಯ ವಿಷಯವಾಗಿದೆ. ಅಂದು ಎಸ್ ಯು ಪಣಿಯಾಡಿ, ಕಮಾಲ್ ಹೈದರ್, ಪಾ.ವೆಂ.ಆಚಾರ್ಯ, ಬನ್ನಂಜೆ ರಾಮಾಚಾರ್ಯರು, ಬೈಕಾಡಿ ಕೃಷ್ಣ ಅವರಂತಹ ದಿಗ್ಗಜರನ್ನು ನಾವು ಇಂದು ಸ್ಮರಿಸಿಕೊಳ್ಳುವುದು ಅರ್ಥಪೂರ್ಣವಾಗಿದೆ ಎಂದರು.
ಯಾವುದೇ ಸಹಾಯಗಳಿಲ್ಲದೆ ಜನಾಭಿಪ್ರಾಯವನ್ನು ಮುಟ್ಟಿಸುವ ಕೆಲಸವನ್ನು ಈ ಎಲ್ಲಾ ಮಹನೀಯರು ಮಾಡಿದ್ದಾರೆ. ಹೀಗಾಗಿ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಟಿ.ಎಂ.ಎ. ಪೈ ಅವರು ಮಣಿಪಾಲ ಪ್ರೆಸ್ ಪ್ರಾರಂಭಿಸಿ ಮಣಿಪಾಲಷ್ಟೇ ಅಲ್ಲದೇ ಭಾರತದಲ್ಲಿಯೇ ದೊಡ್ಡ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಕ್ರಾಂತಿಯನ್ನು ಮಾಡಿದ್ದಾರೆ. ಮಣಿಪಾಲ ಇಂದು ಶಿಖರದೆತ್ತರಕ್ಕೇ ಬೆಳೆದಿರುವುದು ಹೆಮ್ಮೆ ಪಡುವ ವಿಚಾರ ಎಂದ ಮುಖ್ಯಮಂತ್ರಿಗಳು ಇದಕ್ಕೆ ಶ್ರಮಿಸಿದ ಎಲ್ಲರನ್ನೂ ಸಿಎಂ ಅಭಿನಂದಿಸಿದರು.
ವಿಶ್ವಾಸಾರ್ಹತೆ ಕಾಯ್ದುಕೊಂಡ ಉದಯವಾಣಿ
ಒಂದು ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ. ಅದೊಂದು ಸಾಹಸ. ಸಾಹಿತ್ಯ ರಚನೆಗೆ ಸಮಯ ಬೇಕು. ಆದರೆ ಪತ್ರಿಕೆಯಲ್ಲಿ ಬರೆಯಲು ಸಮಯ ಇರುವುದಿಲ್ಲ. ವರದಿ, ವಿಶ್ಲೇಷಣೆಗಳನ್ನು ತುರ್ತಾಗಿ ಮಾಡುವ ಸಾಹಿತ್ಯ ರಚನೆ ಇದು. ಸೂಕ್ತವಾಗಿದ್ದಾಗ ಜನ ಒಪ್ಪುತ್ತಾರೆ. ಇಂದು ಜನರಿಗೆ ಹಲವು ಪತ್ರಿಕೆಗಳು ಹಾಗೂ ವಾಹಿನಿಗಳು ಲಭ್ಯವಿದ್ದು ಬಹಳಷ್ಟು ಆಯ್ಕೆಗಳಿವೆ. ಅಲ್ಲಿಯೂ ಬಹಳಷ್ಟು ಸ್ಪರ್ಧೆಯಿದೆ. ಈ ಸ್ಪರ್ಧೆಯಲ್ಲಿ ಉಳಿಯಲು ಗುಣಾತ್ಮಕವಾದ ಪತ್ರಿಕೋದ್ಯಮ ಅಗತ್ಯ. ಗುಣಾತ್ಮಕ ಬರಹಗಳು ಅಗತ್ಯವಿದ್ದರೆ ಅಲ್ಲಿಯ ವರದಿಗಾರರಿಗೆ ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಅದನ್ನು ಉದಯವಾಣಿ ಪತ್ರಿಕೆ ಒದಗಿಸಿಕೊಟ್ಟಿದೆ. ದೇಶದಲ್ಲಿ ಏನೇ ಬದಲಾವಣೆ ಆದರೂ ಉದಯವಾಣಿಯ ವಿಶ್ವಾಸಾರ್ಹತೆ ಖಾಯಂ ಆಗಿದೆ. ಭಾರತದ ಸ್ವಾತಂತ್ರ್ಯಾ ನಂತರದ, ಆರ್ಥಿಕ, ಉದಾರೀಕರಣದ ಸಂದರ್ಭ, ತಂತ್ರಜ್ಞಾನ, ಡಿಜಿಟಲೀಕರಣದ ಸಂದರ್ಭದಲ್ಲಿಯೂ ಉದಯವಾಣಿ ತನ್ನ ವಿಶ್ವಾಸಾರ್ಹತೆಯನ್ನು ಮೆರೆದಿದೆ. ಆ ವಿಶ್ವಾಸಾರ್ಹತೆಯಿಂದಲೇ ಇಂದು ಕರಾವಳಿ ಪ್ರದೇಶದಲ್ಲಿ ಉದಯವಾಣಿಯನ್ನು ಓದದವರು ಯಾರೂ ಇಲ್ಲ. ಎಲ್ಲಾ ವಿಚಾರಗಳಲ್ಲಿಯೂ ಉದಯವಾಣಿ ಮುಂದಿದೆ. ಉದಯವಾಣಿ ಈಗ ಒಳನಾಡಿನಲ್ಲಿ ದೊಡ್ಡ ಪ್ರಮಾಣದಲಿ ಬೆಳೆಯುತ್ತಿದೆ. ಹುಬ್ಬಳ್ಳಿ- ಧಾರವಾಡ, ಬೆಂಗಳೂರು, ಮೈಸೂರು, ಗುಲ್ಬರ್ಗಾ ಭಾಗಗಳಲ್ಲಿಯೂ ತನ್ನದೇ ಛಾಪು ಬೆಳೆಸಿಕೊಂಡಿದೆ ಎಂದರು.
ರಾಜಕಾರಣಿಗಳು ಮತ್ತು ಪತ್ರಿಕೆಗಳ ಅವಿನಾಭಾವ ಸಂಬಂಧ
ರಾಜಕಾರಣಿಗಳು ಮತ್ತು ಪತ್ರಿಕೆಗಳದ್ದು ಅವಿನಾಭಾವ ಸಂಬಂಧ. ನಿಮ್ಮನ್ನು ಬಿಟ್ಟು ನಾವು, ನಮ್ಮನ್ನು ಬಿಟ್ಟು ನೀವು ಇರಲು ಸಾಧ್ಯವಿಲ್ಲ. ರಾಜಕೀಯ ಸುದ್ದಿಇಲ್ಲದೆ ಪತ್ರಿಕೆಗಳು ಸಪ್ಪೆಯಾಗಿರುತ್ತವೆ. ರಾಜಕಾರಣಿಗಳೂ ಸಹ ಪತ್ರಿಕೆಗಳಿಗೆ ರಜೆ ಇದ್ದರೆ ಒದ್ದಾಡುವಂತಾಗುತ್ತದೆ. ನಾವು ಹೇಳವುದು ಜನರಿಗೆ ಮುಟ್ಟಿಸುವ ಕೆಲಸ ಮಾಧ್ಯಮಗಳು ಮೂಲಕವೇ ಆಗುತ್ತದೆ. ಇದೊಂದು ರೀತಿಯಲ್ಲಿ ಗಂಡಹೆಂಡತಿಯ ಸಂಬಂಧವಿದ್ದಂತೆ. ಒಬ್ಬರಿಗೊಬ್ಬರು ಇರಲೇಬೇಕಾಗುತ್ತದೆ ಎಂದರು.
ಟೀಕೆಗಳಿಂದ ಎಚ್ಚರಿಕೆಯ ಹೆಜ್ಜೆಯಿಡಲು ಸಾಧ್ಯ
ಪ್ರಜಾಪ್ರಭುತ್ವದ ಭಾರತದಲ್ಲಿ ಪತ್ರಿಕೆಗಳು ನಮ್ಮನ್ನು ಸದಾ ಕಾಲ ಹೊಗಳುತ್ತಿರಬೇಕೆಂದು ನಿರೀಕ್ಷೆ ಮಾಡುವುದು ದಡ್ಡತನ. ಪತ್ರಿಕೆಗಳು ಜಾಗೃತಿ ಮೂಡಿಸಲೆಂದೇ ಇದೆ. ಹಾಗಿದ್ದಾಗಲೇ ಆಡಳಿತ ಮಾಡುವವರಿಗೆ ಎಚ್ಚರಿಕೆಯ ನಡೆ ಇಡಲು ಸಾಧ್ಯವಾಗುತ್ತದೆ. ಟೀಕೆಗಳನ್ನು ಸ್ವಾಗತಿಸಬೇಕು. ಸುಧಾರಣೆಗೆ ಅವಕಾಶಗಳೂ ಸಹ ಇರುತ್ತದೆ. ಪತ್ರಿಕೆಗಳಲ್ಲಿ ಬರುವ ಟೀಕೆಟಿಪ್ಪಣಿಗಳಿಂದಲೇ ಹಲವಾರು ನಿರ್ಣಯಗಳನ್ನು ಕೈಗೊಂಡು ಸುಧಾರಣೆಗಳನ್ನು ತಂದಿದ್ದೇವೆ. ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ, ತುಂಗಭದ್ರಾ ನದಿಯ ಕಾಲುವೆ ಬಗ್ಗೆ ಬಂದ ಲೇಖನದಿಂದ ಕೈಗೊಂಡ ನಿರ್ಣಯದಿಂದಾಗಿ 6 ಲಕ್ಷ ಎಕರೆಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ತುಂಗಾ ಮೇಲ್ದಂಡೆ ಯೋಜನೆಯ ಬಗ್ಗೆಯೂ ಬಂದ ಲೇಖನದಿಂದಾಗಿ 1 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಯೋಜನೆ ಸಿದ್ಧವಾಗಿದೆ. ತುಮಕೂರಿನಲ್ಲಿ ಮದುವೆಗೆ ಹೋಗಬೇಕಾದ ಸಂದರ್ಭದಲ್ಲಿ ಪತ್ರಿಕೆಯೊಂದರಲ್ಲಿ ಬಂದ ಲೇಖನದಿಂದ ಮದುವೆ ಮನೆಯಲ್ಲಿಯೇ ಸಭೆ ಕರೆದು 2 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಪತ್ರಿಕೆಗಳ ಸುದ್ದಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡರೆ ಆಡಳಿತವನ್ನು, ಸಾರ್ವಜನಿಕ ಜೀವನವನ್ನು ಹೇಗೆ ಉತ್ತಮಪಡಿಸಲು ಸಾಧ್ಯವೆನ್ನಲು ಹಲವಾರು ಉದಾಹರಣೆಗಳಿವೆ ಎಂದರು.
ಪತ್ರಿಕೋದ್ಯಮದ ಮುಖಾಂತರ ಮೌಲ್ಯಗಳ ಪುನರ್ ಸ್ಥಾಪನೆ
ಉದಯವಾಣಿ ಪತ್ರಿಕೆ ಸಮಸ್ಯೆಗಳನ್ನು ಹೇಳುವ ಹಿನ್ನೆಲೆಯಲ್ಲಿ ಸದುದ್ದೇಶವಿರುತ್ತದೆ. ಸುಧಾರಣೆಯಾಗಲಿ ಎಂಬ ಉದ್ದೇಶದಿಂದ ತಿಳಿಸಲಾಗುತ್ತದೆ. ವೈಯಕ್ತಿಕವಾದ ಹಿತಾಸಕ್ತಿವುಳ್ಳ ಪತ್ರಿಕೆಗಳೂ ಇವೆ. ಕೆಲವು ಪತ್ರಿಕೆಗಳನ್ನು ನೋಡಿದರೆ ಯಾರ ಪರವಾಗಿದೆ ಎಂದು ಜನರೇ ತೀರ್ಮಾನಿಸಿಬಿಡುತ್ತಾರೆ. ಆದ್ದರಿಂದ ಅಂತಹ ಯಾವುದೇ ಪಕ್ಷಪಾತವಿಲ್ಲದೇ, ರಾಜ್ಯದ ಜನತೆಗೆ ಒಳ್ಳೆಯದು ಮಾಡುವ ಕೆಲಸವನ್ನು ಉದಯವಾಣಿ ಮಾಡುತ್ತಿದೆ. ಇದು ಸದಾ ಮುಂದುವರೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರಂಗದ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಎಸ್. ಪೈ ಅವರು ವಹಿಸಿದ್ದು, ಸುಮಾರು 75 ವರ್ಷಗಳ ಹಿಂದೆ ಮಣಿಪಾಲದಂತಹ ಪುಟ್ಟ ಊರಿನಲ್ಲಿ ಈ ಆರು ಮಂದಿ ಧೀಮಂತರು ಮುದ್ರಣ ಮತ್ತು ಪತ್ರಿಕೆಯನ್ನು ಆರಂಭಿಸಿದ್ದರು. ಆ ಕಾಲಘಟ್ಟದಲ್ಲಿ ಹೇಗೆ ಸುದ್ದಿ ಸಂಗ್ರಹಿಸುತ್ತಿದ್ದರು, ಅದರ ಪ್ರಸರಣ, ಮುದ್ರಣ ಹೇಗೆ ನಡೆಯುತ್ತಿತ್ತು ಎಂಬುದು ಕುತೂಹಲದ ವಿಷಯವಾಗಿದೆ. ಕರಾವಳಿ ಜನರು ಕನಸುಗಾರರು, ಅಷ್ಟೇ ಅಲ್ಲ ಆ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಾರೆ. ಇಲ್ಲಿಯ ಜನರು ಸಹೃದಯವಂತರು, ಸರಳತೆಗೆ ಹೆಸರಾದವರು ಎಂದು ಹೇಳಿದರು.
ವೇದಿಕೆಯಲ್ಲಿ ಸಚಿವರಾದ ವಿ.ಸುನಿಲ್ ಕುಮಾರ್, ಎಸ್. ಅಂಗಾರ, ಶಾಸಕ ಕೆ.ರಘುಪತಿ ಭಟ್, ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಸತೀಶ್ ಯು.ಪೈ, ಮಣಿಪಾಲ್ ಟೆಕ್ನಾಲಜೀಸ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್ ಪೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ್, ಮಾಹೆ ಸಹ ಕುಲಾಧಿಪತಿ ಎಚ್.ಎಸ್.ಬಲ್ಲಾಳ ಹಾಜರಿದ್ದರು.
ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಸತೀಶ್ ಯು.ಪೈ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಂಎಂಎನ್ ಎಲ್ ಆಡಳಿತ ನಿರ್ದೇಶಕರು, ಸಿಇಒ ವಿನೋದ್ ಕುಮಾರ್ ಅವರು ಕರಾವಳಿ ಪ್ರದೇಶದಲ್ಲಾಗಬೇಕಾದ ಉದಯವಾಣಿ ಕಾಳಜಿಯ ಅಭಿವೃದ್ಧಿ ಕಾರ್ಯಗಳ ವರದಿಯ ಪುಸ್ತಕವನ್ನು ಸಿಎಂಗೆ ನೀಡಿದರು.
ಉದಯವಾಣಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಉಷಾರಾಣಿ ಪ್ರಸ್ತಾವನೆ ಮಾತುಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು. ಎಂಜಿಎಂ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.