![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 8, 2022, 6:37 PM IST
ಗದಗ: ಕಳೆದ ಮುಂಗಾರಿನಲ್ಲಿ ನಿರಂತರ ಮಳೆಯಿಂದ ಬಿತ್ತಿದ ಬೆಳೆ ಹಾಳಾಗಿ ಸಂಕಷ್ಟ ಎದುರಿಸಿದ್ದ ರೈತರು ಹಿಂಗಾರಿನಲ್ಲಿ ಉತ್ತಮ ಇಳುವರಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕಡಲೆ, ಶೇಂಗಾ, ಜೋಳ, ಗೋದಿ ಬಿತ್ತನೆ ಆರಂಭಿಸಿದ್ದಾರೆ.
ಮುಂಗಾರು ಅವಧಿಯಲ್ಲಿ ಉಂಟಾದ ಅತಿವೃಷ್ಟಿಯಿಂದ ಬೇಸತ್ತಿರುವ ರೈತರಿಗೆ ಹಿಂಗಾರು ಕೃಷಿಯಲ್ಲಿ ಬೇಡಿಕೆಗೆ ತಕ್ಕಂತೆ ಬೀಜಗಳನ್ನು ವಿತರಿಸಲು ಕೃಷಿ ಇಲಾಖೆ ಗಮನ ಹರಿಸಿದ್ದು, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡಿದೆ.
ಜಿಲ್ಲೆಯ ಗದಗ, ಮುಂಡರಗಿ, ರೋಣ, ನರಗುಂದ, ಲಕ್ಷ್ಮೇಶ್ವರ, ಶಿರಹಟ್ಟಿ, ಗಜೇಂದ್ರಗಡ ತಾಲೂಕು ವ್ಯಾಪ್ತಿಯಲ್ಲಿ 33 ಸಾವಿರ ಹೆಕ್ಟೇರ್ ನೀರಾವರಿ, 2.29 ಲಕ್ಷ ಹೆಕ್ಟೇರ್ ಮಳೆಯಾಧಾರಿತ ಒಣ ಬೇಸಾಯ ಸೇರಿದಂತೆ ಒಟ್ಟು 2.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇಲಾಖೆ ಹಿಂಗಾರು ಹಂಗಾಮಿನ ಬಿತ್ತನೆ ಗುರಿ ಹೊಂದಿದೆ. ಕಳೆದ ಸಾಲಿನ ಮುಂಗಾರು ಅವಧಿಯಲ್ಲಿ ಮಳೆರಾಯನ ಅವಕೃಪೆಗೆ ತುತ್ತಾಗಿ ಬಿತ್ತಿದ ಬೆಳೆ ಹಾನಿಯಾಗಿ ಕೈ ಸುಟ್ಟುಕೊಂಡಿದ್ದ ರೈತ ಸಮುದಾಯ ಪ್ರಸಕ್ತ ಸಾಲಿನ ಹಿಂಗಾರು ಆಶಾದಾಯಕ ಸ್ಥಿತಿಯಲ್ಲಿದೆ. ಈಗಾಗಲೇ ನೀರಾವರಿ ಪ್ರದೇಶದಲ್ಲಿನ ರೈತರು ಬಿತ್ತನೆ ಆರಂಭಿಸಿದ್ದಾರೆ.
ಈಗಾಗಲೇ ಕಡಲೆ ಬಿತ್ತನೆ ಪೂರ್ಣವಾಗಿರಬೇಕಿತ್ತು. ಹಲವೆಡೆ ಜಮೀನುಗಳು ಮಳೆ ನೀರು ನಿಂತು ಇನ್ನೂ ಕೆಸರು ತುಂಬಿರುವುದರಿಂದ ಬಿತ್ತನೆಗೆ ತಡೆಯಾಗಿದೆ. ಇನ್ನೊಂದು ವಾರ ಬಿಸಿಲು ಚುರುಕು ಮುಟ್ಟಿದರೆ ಕೃಷಿ ಚಟುವಟಿಕೆ ಕೈಗೊಳ್ಳಲು ಇನ್ನಷ್ಟು ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು.
ಬಿತ್ತನೆ ಗುರಿ: ಖುಷ್ಕಿ ಹಾಗೂ ನೀರಾವರಿ ಸೇರಿ 1.38 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 84 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಕಡಲೆ ಬೆಳೆ ಬಿತ್ತನೆಯಾಗಿದೆ. 63 ಸಾವಿರ ಹೆಕ್ಟೇರ್ ಪೈಕಿ 30 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಜೋಳ ಬಿತ್ತನೆಯಾಗಿದೆ. 18 ಸಾವಿರ ಹೆಕ್ಟೇರ್ ಪೈಕಿ 5 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಗೋದಿ, 9 ಸಾವಿರ ಹೆಕ್ಟೇರ್ ಪೈಕಿ 4 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಮೆಕ್ಕೆಜೋಳ, 12 ಸಾವಿರ ಹೆಕ್ಟೇರ್ ಪೈಕಿ 6 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಸೂರ್ಯಕಾಂತಿ ಸೇರಿ ಹಿಂಗಾರು ಹಂಗಾಮಿನಲ್ಲಿ ಖುಷ್ಕಿ ಹಾಗೂ ನೀರಾವರಿ ಸೇರಿದಂತೆ 2.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 1.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
22,238 ಕ್ವಿಂಟಲ್ ಬಿತ್ತನೆ ಬೀಜ ಮಾರಾಟ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬೆಳೆಗಳಾದ ಜೋಳ, ಗೋದಿ, ಕಡಲೆ ಸೇರಿ ಇತರೆ ಬೆಳೆಗಳನ್ನು ಅಗತ್ಯಕ್ಕೆ ತಕ್ಕಂತೆ ಕೃಷಿ ಇಲಾಖೆ 27,380 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿದ್ದು, ಈಗಾಗಲೇ 22,238 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ.
24,935 ಕ್ವಿಂಟಲ್ ಪೈಕಿ 20,987 ಕ್ವಿಂಟಲ್ ಕಡಲೆ, 1770 ಕ್ವಿಂಟಲ್ ಪೈಕಿ 752 ಕ್ವಿಂಟಲ್ ಶೇಂಗಾ, 300 ಕ್ವಿಂಟಲ್ ಪೈಕಿ 215 ಕ್ವಿಂಟಲ್ ಜೋಳ, 300 ಕ್ವಿಂಟಲ್ ಪೈಕಿ 250 ಕ್ವಿಂಟಲ್ ಗೋದಿ, 30 ಕ್ವಿಂಟಲ್ ಪೈಕಿ 30 ಕ್ವಿಂಟಲ್ ಕುಸುಬೆ ಸೇರಿ 3.20 ಕ್ವಿಂಟಲ್ ಸೂರ್ಯಕಾಂತಿ, 1.20 ಕ್ವಿಂಟಲ್ ಮೆಕ್ಕೆಜೋಳ ಸೇರಿ 22,238 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ. 5141 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದೆ.
ಕಳೆದ ವಾರದಿಂದ ಜಿಲ್ಲೆಯ ವಿವಿಧೆಡೆ ಬಿಳಿಜೋಳ, ಗೋದಿ, ಕಡಲೆ, ಕುಸುಬಿ ಬಿತ್ತನೆ ಮಾಡಲಾಗಿದ್ದು, ತೇವಾಂಶದ ಕೊರತೆಯಿಂದ ಬೆಳೆ ಮೊಳಕೆಯೊಡೆಯುವ ಪ್ರಮಾಣ ಕಡಿಮೆಯಾಗಿದೆ. ಮುಂದಿನ ವಾರದೊಳಗೆ ಮಳೆಯಾದರೆ ಇಳುವರಿ ಪ್ರಮಾಣ ಹೆಚ್ಚುತ್ತದೆ. ಇಲ್ಲವಾದಲ್ಲಿ ಇಳುವರಿ ಕುಂಠಿತಗೊಳ್ಳುವ ಆತಂಕದಲ್ಲಿ ರೈತ ಸಮೂಹವಿದೆ. zಯಲ್ಲಪ್ಪ ಬಾಬರಿ ತಿಮ್ಮಾಪುರ ಗ್ರಾಮದ ರೈತ.
ರೈತರ ಅಗತ್ಯಕ್ಕೆ ತಕ್ಕಂತೆ ಬೀಜ, ರಸಗೊಬ್ಬರ ಪೂರೈಸಲಾಗಿದೆ. ಈಗಾಗಲೇ ಕಡಲೆ ಬೆಳೆ ಸಂಪೂರ್ಣವಾಗಿ ಬಿತ್ತನೆಯಾಗಬೇಕಿತ್ತು. ಕೆಲವು ಪ್ರದೇಶಗಳಲ್ಲಿ ಮಳೆ ನೀರು ನಿಂತು ಕೆಸರುಗದ್ದೆಯಂತಾಗಿದ್ದರಿಂದ ಭೂಮಿ ಆರಲು ಬಿಟ್ಟಿದ್ದು, ಮುಂದಿನ 15ದಿನದೊಳಗೆ ಹಿಂಗಾರು ಬಿತ್ತನೆ ಪೂರ್ಣಗೊಳ್ಳಲಿದೆ. -ಜಿಯಾವುಲ್ಲಾ ಕೆ., ಜಂಟಿ ಕೃಷಿ ನಿರ್ದೇಶಕ. ಅರುಣಕುಮಾರ ಹಿರೇಮಠ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ! ನಸುಕಿನ ವೇಳೆ ಡಿಸಿ ಹಾಗೂ ಎಸಿ ದಿಢೀರ್ ದಾಳಿ!
You seem to have an Ad Blocker on.
To continue reading, please turn it off or whitelist Udayavani.