ಬೆಂಗಳೂರು ನಿರ್ಮಾತೃ, ರಾಜರ್ಷಿ ಕೆಂಪೇಗೌಡ
Team Udayavani, Nov 11, 2022, 6:20 AM IST
ಬಿಜಾಪುರದ ಸುಲ್ತಾನರು, ಮೊಗಲರು, ಹೈದರಾಲಿ, ಟಿಪ್ಪು, ಅನಂತರ ಬ್ರಿಟಿಷರು ಹೀಗೆ ಮತಾಂಧರ ಕೈಯಲ್ಲಿ ನೂರಾರು ವರ್ಷಗಳ ಕಾಲ ಆಳ್ವಿಕೆಗೆ ಒಳಪಟ್ಟರೂ ಬೆಂಗಳೂರು ತನ್ನ ಮೂಲ ಸಂಸ್ಕೃತಿ, ಪರಂಪರೆಗಳನ್ನು ಬಿಟ್ಟುಕೊಡದೆ ಇಂದಿಗೂ ಜಗತ್ತಿನ ಮೊದಲ ಹತ್ತು ಕ್ರಿಯಾಶೀಲ ನಗರಗಳಲ್ಲಿ ಅಗ್ರಸ್ಥಾನ ಪಡೆದು, ಭಾರತದ ಆಶಾಕಿರಣವಾಗಿ ಬೆಳಗುತ್ತಿದೆ. ಬೆಂಗಳೂರಿನ ಈ ಭದ್ರ ಬುನಾದಿಗೆ ಕಾರಣೀಪುರುಷ ಮಹಾನ್ ಪರಾಕ್ರಮಿ ಕೆಂಪೇಗೌಡ.
ಯಲಹಂಕ ನಾಡಪ್ರಭು ಕೆಂಪನಂಜೇಗೌಡ-ಲಿಂಗಮಾಂಬೆಯ ಪುತ್ರನಾದ ಕುಮಾರ ಕೆಂಪಣ್ಣ, ತನ್ನ ವಿದ್ಯಾಭ್ಯಾಸವನ್ನು ಪೂರೈಸಿದ್ದು ಮಾಧವ ಭಟ್ಟರ ಗುರುಕುಲದಲ್ಲಿ. ವಿದ್ಯಾಭ್ಯಾಸ ಸಂಪೂರ್ಣವಾಗುತ್ತಿದ್ದಂತೆ ಗುರುಗಳ ಆಶಯಕ್ಕೆ ಬದ್ಧನಾಗಿ ರಾಜಧಾನಿಯಾದ ವಿಜಯನಗರದ ಸಂದರ್ಶನಕ್ಕೆ ಹೊರಟು, ಅಲ್ಲಿನ ನವರಾತ್ರಿಯ ಕ್ರೀಡೆಗಳಲ್ಲಿ ಭಾಗವಹಿಸಿ, ಮಲ್ಲಯುದ್ಧ ಸಹಿತ ಎಲ್ಲ ಸ್ಪರ್ಧೆಗಳನ್ನು ಗೆದ್ದು ಶ್ರೀಕೃಷ್ಣದೇವರಾಯರ ಮನಸ್ಸನ್ನೂ ಗೆದ್ದರು ಕುಮಾರ ಕೆಂಪಣ್ಣ.
ವಿಜಯನಗರವನ್ನು ನೋಡಿದ ಕೆಂಪ ರಾಯನ ಮನಸ್ಸಿನಲ್ಲಿ “ತಾನೂ ಆ ರೀತಿಯ ಸುಸಜ್ಜಿತ, ಭವ್ಯ ನಗರವೊಂದನ್ನು ಕಟ್ಟ ಬೇಕೆಂಬ ಹಂಬಲ ಚಿಗುರೊಡೆಯಿತು. ನಗರಕ್ಕಾಗಮಿಸಿದ ಕೆಂಪರಾಯರಿಗೆ ಯಲಹಂಕದಲ್ಲಿ ಅದ್ದೂರಿಯ ಸ್ವಾಗತ ಲಭಿಸಿತು. ಮುಂದೆ ಚೆನ್ನಾಂಬೆಯೊಂದಿಗೆ ವಿವಾಹ. ಮದುವೆಯಾದರೂ ಐದು ವರ್ಷಗಳ ಕಾಲ ಬ್ರಹ್ಮಚರ್ಯವನ್ನು ಪಾಲಿಸಿ, ಆ ಸಮಯದಲ್ಲಿ ತೀರ್ಥಯಾತ್ರೆಯನ್ನು ಕೈಗೊಂಡು ತನ್ನ ಆತ್ಮಬಲವನ್ನು ವೃದ್ಧಿಸಿಕೊಂಡರು ಕೆಂಪರಾಯ. ನಗರ ನಿರ್ಮಾಣಕ್ಕೆ ಆ ಶಕ್ತಿಯ ಆವಶ್ಯಕತೆಯನ್ನು ಮನಗಂಡು ಗುರುಗಳಾದ ಮಾಧವ ಭಟ್ಟರು ಶಿಷ್ಯನನ್ನು ಇಂತಹ ಕಠಿನ ತ್ಯಾಗಕ್ಕೆ ಅಣಿಗೊಳಿಸಿದ್ದರು. ವಿದ್ಯೆ, ಸಾಮರ್ಥ್ಯಗಳ ಜತೆ ಅಪಾರ ಧಾರ್ಮಿಕ ಶಕ್ತಿಯನ್ನು ಪಡೆದು ಬಂದ ಕೆಂಪರಾಯನನ್ನು ತಂದೆ ಕೆಂಪನಂಜೇಗೌಡರು 1531ರಲ್ಲಿ ಯಲಹಂಕದ ರಾಜನಾಗಿ ರಾಜ್ಯಾಭಿಷೇಕ ಮಾಡಿದರು. ಕೆಂಪರಾಯ ಕೆಂಪೇಗೌಡರಾದರು.
ಕೃಷ್ಣದೇವರಾಯರು ಕಾಲವಾದ ಅನಂತರ ಅಚ್ಯುತರಾಯ ಪಟ್ಟವೇರಿದ್ದರು. ಆದರೆ ಸಿಂಹಾಸನಕ್ಕಾಗಿ ಅಂತಃಕಲಹ ನಡೆದೇ ಇತ್ತು. ಚನ್ನಪಟ್ಟಣದ ದೊರೆತನ ಮಾಡುತ್ತಿದ್ದ ಜಗದೇವರಾಯ ತನ್ನ ಸೇನಾಧಿಪತಿ ಈರಸಂಗಯ್ಯನೊಡನೆ ಸೇರಿ ಸಂಚಾರದಲ್ಲಿದ್ದ ಚಕ್ರವರ್ತಿ ಅಚ್ಯುತರಾಯನನ್ನು ಕೊಲ್ಲಲು ಸಂಚು ನಡೆಸಿದ. ರಾಜ್ಯದ ಗಡಿಯಲ್ಲಿ ಚಕ್ರವರ್ತಿಗಳ ಸ್ವಾಗತದ ಸಿದ್ಧತೆಯಲ್ಲಿದ್ದ ಕೆಂಪೇಗೌಡರು ದೊರೆಯು ಪ್ರಾಣಾಪಾ ಯದ ಸ್ಥಿತಿಯಲ್ಲಿರುವುದನ್ನು ಕಂಡು ಶತ್ರುಗಳ ಮೇಲೆ ಸಿಂಹದಂತೆ ಎರಗಿದ್ದರು. ಆ ರೌದ್ರಾವತಾರಕ್ಕೆ ಶತ್ರುಪಾಳಯ ಬೆಚ್ಚಿಬಿದ್ದಿತ್ತು. ತನ್ನ ಪ್ರಾಣ ಉಳಿಸಿದ ಕೆಂಪೇಗೌಡರ ಕೋಟೆ ಹಾಗೂ ನಗರ ನಿರ್ಮಾಣದ ಕನಸಿಗೆ ಆಸರೆಯಾಗಿ ನಿಂತರು ಅಚ್ಯುತರಾಯರು.
1537ರ ಹೊತ್ತಿಗೆ ನೂತನ ರಾಜಧಾನಿಯ ಸ್ಥಾಪನೆಗೆ ಮುಹೂರ್ತ ಕೂಡಿಬಂತು. “ಈ ನಗರ ಚಿರಾಯುವಾಗಲು ತಾನು ಗಳಿಸಿರುವ ಎಲ್ಲ ಧಾರ್ಮಿಕ ಶಕ್ತಿಯನ್ನು ಧಾರೆ ಎರೆಯುತ್ತೇನೆ’ ಎಂದು ಗುರುಗಳ ಮುಂದೆ ಪ್ರತಿಜ್ಞೆ ಮಾಡಿ ನಿರ್ಮಾಣದ ಕಾರ್ಯಕ್ಕೆ ಮುನ್ನುಡಿ ಬರೆದರು ಕೆಂಪೇಗೌಡ. ನಾಲ್ಕು ಜೊತೆ ಎತ್ತುಗಳಿಗೆ ನೇಗಿಲು ಹೂಡಿಸಿ, ಉಳುತ್ತಾ ಸಾಗುವಾಗ ಎತ್ತುಗಳು ನಿಂತುಕೊಳ್ಳುವ ಜಾಗವೇ ನಮ್ಮ ರಾಜಧಾನಿಯ ಗಡಿಗಳೆಂದು ಗುರುತಿಸಬೇಕು ಮತ್ತು ಆ ನಾಲ್ಕೂ ದ್ವಾರಗಳಲ್ಲಿ ಶಕ್ತಿದೇವತೆ ಆಂಜನೇಯನನ್ನು ಪ್ರತಿಷ್ಠಾಪಿಸಬೇಕೆಂದು ಆಜ್ಞೆಯಾಯಿತು. ಅದರಂತೆ ಎತ್ತುಗಳು ನಿಂತ ಹಲಸೂರು, ಯಲಹಂಕ, ಯಶವಂತಪುರ ಹಾಗೂ ಕೆಂಗೇರಿಗಳು ನಗರದ ಗಡಿಗಳಾದವು.
ಐಹಿಕದ ಜತೆಗೆ ಪಾರಮಾರ್ಥಿಕದ ಕಡೆಗೂ ಅಷ್ಟೇ ಶ್ರದ್ಧೆ ತೋರಿಸಿದವರು ಕೆಂಪೇಗೌಡರು. ಬೆಂಗಳೂರು ಕೋಟೆಯ ದಕ್ಷಿಣ ದಿಕ್ಕಿನಲ್ಲಿ ಬೃಹತ್ ಬಸವಣ್ಣನನ್ನು ಕೆತ್ತಿಸಿ ಪ್ರತಿಷ್ಠಾಪಿಸಿದರು. ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಾಲಯ, ದೊಡ್ಡಪೇಟೆಯ ಆಂಜನೇಯ ಸ್ವಾಮಿಯ ಗುಡಿ, ಹಲಸೂರಿನ ಸೋಮೇಶ್ವರನಿಗೆ ಜೀರ್ಣೋದ್ಧಾರ ಹೀಗೆ ನಗರದೆಲ್ಲೆಡೆ ದೇವಸ್ಥಾನಗಳು ತಲೆಯೆತ್ತಿ ನಿಂತು ಕೆಂಪೇಗೌಡರ ಧರ್ಮಭೀರುತನಕ್ಕೆ ಸಾಕ್ಷಿಯಾದವು.
ಕೆಂಪೇಗೌಡರ ಪ್ರಯತ್ನದಿಂದಾಗಿ ಧರ್ಮಾಂಬುಧಿ, ಸಂಪಂಗಿ, ಕೆಂಪಾಂಬುಧಿ, ಹಲಸೂರು, ಯಡಿಯೂರು, ಸಿದ್ದನಕಟ್ಟೆ, ಬೆಳ್ಳಂದೂರು ಮುಂತಾದ ಅನೇಕ ಬೃಹತ್ ಕೆರೆಗಳು ಜೀವ ತಳೆದವು. ಉತ್ತರದಿಂದ ದಕ್ಷಿಣಕ್ಕೆ ಹೋಗುವ ಪೇಟೆ ದೊಡ್ಡಪೇಟೆ, ಪಶ್ಚಿಮಕ್ಕೆ ಹೋಗುವ ಪೇಟೆ ಚಿಕ್ಕಪೇಟೆ, ಪೂರ್ವಕ್ಕೆ ನಗರ್ತ ಪೇಟೆ ಎಂದು ನಾಮಾಂಕಿತಗೊಂಡವು.
ಪ್ರತೀ ಕಸುಬಿನ ಜನರಿಗೂ ಅಕ್ಕಿಪೇಟೆ, ಕುಂಬಾರಪೇಟೆ, ಅರಳೇಪೇಟೆ, ಕುಂಚಟಿಗರ ಪೇಟೆ, ತಿಗಳರ ಪೇಟೆ ಮುಂತಾದ ಐವತ್ತಕ್ಕೂ ಹೆಚ್ಚು ಪೇಟೆಗಳ ನಿರ್ಮಾಣವಾಯಿತು. ಸುಂದರವಾಗಿ ಕಟ್ಟಿದ ಸೌಧಗಳು, ಕಾರಂಜಿಗಳು, ತೆಂಗು, ಕಂಗು ಮುಂತಾದ ಫಲವೃಕ್ಷಗಳು, ಕಣ್ಮನ ತಣಿಸುವ ಪುಷೊ³àದ್ಯಾನಗಳು ಮೈತಳೆದವು.
ಅಚ್ಯುತರಾಯನ ಕಾಲಾನಂತರ ಕೆಂಪೇಗೌಡರಿಗೆ ವಿಜಯನಗರ ದಿಂದ ಬೆಂಬಲ ಮರೀಚಿಕೆಯಾಯಿತು. ಆರ್ಥಿಕ ಸಂಕಷ್ಟ ತೀರಿಸಲು ಸ್ವತಃ ತಾವೇ ಹೊಸದಾಗಿ ನಾಣ್ಯಗಳನ್ನು ಟಂಕಿಸಲು ಪ್ರಾರಂಭಿಸಿದರು. ನಾಣ್ಯಕ್ಕೆ ತನ್ನ ಹೆಸರನ್ನೇ ಇಡಬೇಕೆಂಬ ಜನರ ಇಚ್ಛೆಗೆ ಮಣಿಯದೆ ಕುಲದೇವರಾದ ಭೈರವನ ಹೆಸರನ್ನಿಟ್ಟು “ಭೈರವ ನಾಣ್ಯ’ ಎಂದು ಕರೆದು ಅಲ್ಲಿಯೂ ತಮ್ಮ ಧರ್ಮಭೀರುತನವನ್ನು ಮೆರೆದರು ಕೆಂಪೇಗೌಡ. ಪ್ರಜೆಗಳ ರಕ್ಷಣೆಗಾಗಿ ಕಾವಲು ಗೋಪುರಗಳು, ವಿಶಾಲವಾದ ಮಾರುಕಟ್ಟೆಗಳು ನಿರ್ಮಾಣಗೊಂಡವು. ಹೀಗೆ ಸುಮಾರು 500 ವರ್ಷಗಳ ಹಿಂದೆಯೇ ಸುವ್ಯವಸ್ಥಿತ, ಸುಸಜ್ಜಿತ ನಗರ ನಿರ್ಮಾಣವನ್ನು ಮಾಡಿದ ಕೆಂಪೇಗೌಡರ ಸಾಮರ್ಥಯ ಹಾಗೂ ಮೇಧಾವಿತನಕ್ಕೆ ಭಾರತೀಯರೆಲ್ಲರೂ ತಲೆಬಾಗಲೇಬೇಕು.
ನಾಡಿಗಾಗಿ ಬಾಳಿದ ಹಲವು ಮಹಾಪುರುಷರ ಪ್ರತಿಮೆಗಳನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11ರಂದು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆಯನ್ನೂ ಲೋಕಾರ್ಪಣೆಗೊಳಿಸಲಿದ್ದಾರೆ.
ಬೆಂಗಳೂರಿನ ನಿರ್ಮಾಣಕ್ಕಾಗಿ ಕೆಂಪೇಗೌಡರು ತನ್ನ ಸರ್ವಸ್ವವನ್ನೂ ಧಾರೆ ಎರೆದು ಹಂತಹಂತವಾಗಿ ರಾಜಧಾನಿಯನ್ನು ಕಟ್ಟಿ ಬೆಳೆಸಿದ ಕಥೆ ಇತಿಹಾಸದ ಮೈಲಿಗಲ್ಲು. ಅದೆಷ್ಟೋ ಆಕ್ರಮಣಗಳ ಅನಂತರವೂ ಬೆಂಗಳೂರು ತನ್ನ ಸತ್ವವನ್ನು ಕಳೆದುಕೊಳ್ಳದೆ ಇಂದಿಗೂ ನಳನಳಿಸುತ್ತಿದೆ ಎಂದರೆ ಅದು ಕೆಂಪೇಗೌಡರ ದೂರದೃಷ್ಟಿಯ ಫಲ. ಆ ರಾಜರ್ಷಿ, ಧರ್ಮಪ್ರಭುವಿನ ಚಿಂತನೆಗಳಿಗೆ ವಿರುದ್ಧವಾಗಿ ನಡೆಯದಿರುವುದೇ ನಾವು ಅವರಿಗೆ ಸಲ್ಲಿಸುವ ಗೌರವ.
– ಪ್ರಕಾಶ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.