19-11-2022 – 23-11-2022ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ

ಭಕ್ತಕೋಟಿಗೆ ಸಂಸ್ಕೃತಿಯ ವಿಶ್ವರೂಪ ಅನಾವರಣ

Team Udayavani, Nov 18, 2022, 12:03 PM IST

7

ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿಯಿಂದ ಆರಂಭಗೊಂಡು ಅಮಾವಾಸ್ಯೆಯ ಪರ್ಯಂತ ಐದು ದಿನಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಉತ್ಸವಗಳ ಇತಿಹಾಸದಲ್ಲಿಯೇ ಅವಿಸ್ಮರಣೀಯ ಪುಣ್ಯ ವೈಭವಕ್ಕೆ ಸಾಕ್ಷ್ಯವಾಗುವ ಮಹೋತ್ಸವವೊಂದು ನಡೆಯುತ್ತದೆ. ಲಕ್ಷಗಳ ಸಂಖ್ಯೆಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಬರುವ ಭಕ್ತವೃಂದ ಕಣ್ದಣಿಯೆ ಭಗವಂತನ ಲೀಲೋತ್ಸವವನ್ನು ಕಂಡು ಧನ್ಯತಾಭಾವದ ಶರಧಿಯಲ್ಲಿ ಮಿಂದೇಳುತ್ತದೆ. ಅದುವೇ ಲಕ್ಷ ದೀಪೋತ್ಸವ.

ಈ ಸಂದರ್ಭದಲ್ಲಿ ತೇಲಿ ಬರುವ ಶಂಖ – ಜಾಗಟೆ ನಾದ, ವಾಲಗ, ಕಹಳೆಯಂತಹ ವಾದ್ಯವಾದನಗಳು, ಅಷ್ಟಕ, ಮೌರಿ, ಚಕ್ರತಾಳದೊಂದಿಗೆ ಸರ್ವ ವಾದ್ಯಮೇಳಗಳು, ಬ್ಯಾಂಡಿನ ನಾದ, ಚಂಡೆಗಳ ಅಬ್ಬರದೊಂದಿಗೆ ವೀರಗಾಸೆ, ಡೊಳ್ಳಿನ ಕುಣಿತದಂತಹ ಜನಪದ ಕಲಾ ಪ್ರಕಾರಗಳೂ ಉತ್ಸವದ ಸಂಪನ್ನತೆಗೆ ಮೆರುಗು ನೀಡುತ್ತವೆ. ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಎರಡು ವರ್ಷಗಳ ಕಾಲ ಸಾಂಕೇತಿಕವಾಗಿದ್ದ ಲಕ್ಷ ದೀಪೋತ್ಸವ ಈ ವರ್ಷ ವಿಜೃಂಭಣೆಯಿಂದ ಎಂದಿನದೇ ನವೀನ್ಮೇಷಶಾಲಿಯಾಗಿ ನಡೆದು ಕಳೆದ ಕಾಲದ ಕೊರತೆಯನ್ನು ನೀಗಿಸಿ, ಭಕ್ತಿ ಭಾವರಸಾಯನದ ಸುರಗಂಗೆಯಲ್ಲಿ ಭಕ್ತಗಡಣ ವನ್ನು ಮುಳುಗಿಸಿ ಪುಳಕಿತಗೊಳಿಸಿ ಮನದ ಸಂಭ್ರಮವನ್ನು ಮುಗಿಲಿನೆತ್ತರಕ್ಕೆ ಒಯ್ಯಲಿದೆ. ಎಂದಿನಂತೆಯೇ ವಸ್ತು ಪ್ರದರ್ಶನಗಳು, ವೈವಿಧ್ಯಮಯ ವಸ್ತುಗಳ ಮಾರಾಟ ಮಳಿಗೆಗಳೂ ಉತ್ಸವದ ಸೊಬಗಿಗೆ ರಂಗೇರಿಸಲು ಸಿದ್ಧವಾಗಿವೆ.

ಬೆಳಕಿನ ವಾರ್ಷಿಕ ಹಬ್ಬವೆಂದೇ ಪೊಗಳ್ತೆ ಪಡೆದಿರುವ ಲಕ್ಷದೀಪ ಅಪರೂಪದ ಪೂಜಾ ಪದ್ಧತಿಗಳು, ವಿಶಿಷ್ಟವಾದ ಬೆಳ್ಳಿ ರಥದ ಉತ್ಸವಗಳಿಂದಲೂ ಭಕ್ತರ ಮನಸೂರೆಗೊಳ್ಳುತ್ತದೆ. ಕೇವಲ ಮಂಜುನಾಥ ಸ್ವಾಮಿಗೇ ಉತ್ಸವ ನಡೆಯುತ್ತಿಲ್ಲ, ಭಗವಂತನ ಸ್ವರೂಪವೇ ಆಗಿರುವ ಭಕ್ತ ಸಮುದಾಯದ ಸಂತಸಕ್ಕಾಗಿ ಸಾಂಸ್ಕೃತಿಕ ಹಬ್ಬವಾಗಿ ಪರಿವರ್ತನೆಯಾಗುತ್ತದೆ.

ಭಕ್ತರ ಪಾಲಿನ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ ಕಲಿಯುಗದ ಕಲ್ಪತರುವೆಂದೇ ಖ್ಯಾತವಾಗಿರುವ ಧರ್ಮಸ್ಥಳ ಕ್ಷೇತ್ರದಲ್ಲಿ ಸವಿಯಾದ ಭೋಜನದಿಂದ ಉದರ ತಂಪಾಗುತ್ತದೆ, ನೃತ್ಯ, ಸಂಗೀತ, ಹರಿಕಥೆ, ಜಾನಪದ ಕಾರ್ಯಕ್ರಮ, ಯಕ್ಷಗಾನದಂತಹ ಪ್ರದರ್ಶಕ ಕಲೆಗಳಿಂದ ಸಿಗುವ ಮನರಂಜನೆ ಮತ್ತು ಜ್ಞಾನ ವಿಕಾಸದಿಂದ ಕಣ್ಣುಗಳು ತಂಪಾಗುತ್ತವೆ, ಭಕ್ತಿ ರಸ ಸಿಂಚನಗೈಯುವ ದೇವರ ಉತ್ಸವದಿಂದ ಬದುಕು ಪಾವನವಾಗುತ್ತದೆ. ಪುಣ್ಯನದಿ ನೇತ್ರಾವತಿಯ ತೀರ್ಥಸ್ನಾನದಿಂದ ಬದುಕು ಪವಿತ್ರವಾಗುತ್ತದೆ.

ಕಾರ್ತಿಕ ಮಾಸದ ಅಮಾವಾಸ್ಯೆಯಂದು ನಡೆಯುವ ದೇವಾ ಲಯಗಳ ದೀಪಾರಾಧನೆಗೆ ವಿಶೇಷ ಅರ್ಥವಿದೆ. ಇದು ದಕ್ಷಿಣಾಯನ. ದೇವಾನುದೇವತೆಗಳಿಗೆ ಕತ್ತಲೆಯ ಕಾಲ. ಆ ಸಮಯ ದೇವಾಲಯಗಳಲ್ಲಿ ಬೆಳಗುವ ಲಕ್ಷ ದೀಪಗಳ ಬೆಳಕಿನ ಪ್ರಭೆಯನ್ನು ಸಹಿಸ ಲಾಗದೆ ದಾರಿದ್ರ್ಯ ಲಕ್ಷ್ಮೀಯು ಯಾರ ಮನೆಗೂ ಪ್ರವೇಶಿಸಲಾಗದೆ ಓಡಿಹೋಗುತ್ತಾಳಂತೆ. ತನ್ನನ್ನು ನಂಬಿದ ಭಕ್ತರನ್ನು ಇಂತಹ ದಾರಿದ್ರ್ಯ ದೇವತೆಯ ಕೆಟ್ಟ ದೃಷ್ಟಿಯಿಂದ ಸಂರಕ್ಷಿಸಲು ದೇವಾಲಯಗಳಲ್ಲಿ ಲಕ್ಷದೀಪಗಳ ಬೆಳಕನ್ನು ಪಸರಿಸಲಾಗುತ್ತದೆಂಬುದು ಒಂದು ನಂಬಿಕೆ. ದೀಪಗಳ ಬೆಳಕಿನಲ್ಲಿ ದೇವರ ಬಲಿ ವಿಗ್ರಹವನ್ನು ಒಂದೊಂದು ದಿನವೂ ವಿಶೇಷ ಪ್ರದಕ್ಷಿಣೆಗಳೊಂದಿಗೆ ಊರಿಡೀ ಮೆರವಣಿಗೆ ಮಾಡಿ ಅಲ್ಲಿರುವ ಭಕ್ತರ ಬಳಿಗೇ ದೇವರು ಆಗಮಿಸುವ ಅನನ್ಯ ದರ್ಶನ ಭಾಗ್ಯವನ್ನೂ ಅಂದಿನ ಉತ್ಸವಗಳು ಕರುಣಿಸುತ್ತವೆ.

ಸಮವಸರಣ ಪೂಜೆ:

ಲಕ್ಷ ಲಕ್ಷ ದೀಪಗಳು ಬೆಳಗಿ ಧರ್ಮಸ್ಥಳ ಕ್ಷೇತ್ರವು ನೀಲಗಗನ ದಂತೆ ಚಿಕ್ಕೆಗಳ ಮಹಾಸಾಗರದಂತೆ ಮಿನುಗುವ ಲಕ್ಷದೀಪದ ಸಂದರ್ಭದಲ್ಲಿ ದೀಪೋತ್ಸವದ ಕೊನೆಯ ದಿನ ಸಮವಸರಣ ಪೂಜೆಯೂ ನಡೆಯುತ್ತದೆ. ಕೇವಲ ಜ್ಞಾನವನ್ನು ಪಡೆದು ಪರಿಪೂರ್ಣ ಜ್ಞಾನಿಗಳಾದ ಜಿನರಿಗೆ ದೇವತೆಗಳು ನಿರ್ಮಿ ಸುವ ಮಂಟಪವೇ ಸಮವಸರಣ. ಭೂಮಿಯಲ್ಲಿ ತೀರ್ಥಂಕರ ರಾಗಿ ಅವತರಿಸಿದವರು ದೇವತೆಗಳು. ಅವರ ಜೀವನದ ಐದು ವಿಶೇಷಗಳೇ ಪಂಚ ನಮಸ್ಕಾರ ವಿಧಿಯ ಗುಣಗಳು.

ತೀರ್ಥಂಕರರು ಓಂಕಾರದ ದಿವ್ಯಧ್ವನಿಯ ಮೂಲಕ ಧರ್ಮೋಪದೇಶ ನೀಡುವ ಈ ವಿಶಿಷ್ಟ ಆರಾಧನೆ ಯಿಂದ ಹೊರ ಹೊಮ್ಮುವ ಧರ್ಮ ಸಂದೇಶವನ್ನು ಪ್ರಾಣಿ, ಪಕ್ಷಿಗಳಲ್ಲದೆ ಸರ್ವ ಧರ್ಮೀ ಯರೂ ತಮ್ಮದೇ ಭಾಷೆಯಲ್ಲಿ ಆಲಿಸಲು ಅವಕಾಶವಿದೆ. ಜೈನ ಸಂಪ್ರದಾಯದ ಪ್ರಕಾರ ಬಸದಿ ಗಳೆಂದರೆ ಸಮವಸರಣದ ಪ್ರತೀಕ. ಈ ತತ್ವವನ್ನು ಮನ ಮುಟ್ಟುವಂತೆ ಶ್ರುತಪಡಿಸುವುದೇ ಮಹೋತ್ಸವ ಸಭಾಭವನದಲ್ಲಿ ನಡೆಯುವ ಸಮವಸರಣ ಪೂಜೆಯ ಉದ್ದೇಶ.

ಸಮವಸರಣ ಪೂಜೆಗಾಗಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನಿವಾಸ ವಾದ ಬೀಡಿನಿಂದ ಚಂದ್ರನಾಥ ಸ್ವಾಮಿಯ ಸ್ಫಟಿಕ ವಿಗ್ರಹವನ್ನು ಅದ್ಧೂರಿಯ ಮೆರವಣಿಗೆ ಮೂಲಕ ಸಭಾಭವನಕ್ಕೆ ಕೊಂಡೊ ಯ್ಯುವ ಕ್ರಮವಿದೆ. ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬದ ಎಲ್ಲರೂ ಈ ಪೂಜೆಯಲ್ಲಿ ಭಾಗವಹಿಸುತ್ತಾರೆ.

ಬಸದಿಯ ಇಂದ್ರರು ನೆರವೇರಿಸುವ ಪೂಜೆಯಲ್ಲಿ ಜೈನ ಶ್ರಾವಕ, ಶ್ರಾವಿಕೆಯರೂ ಅಷ್ಟವಿಧಾರ್ಚನೆ, ಸಂಗೀತ ಪೂಜೆ, ಪಂಚ ನಮಸ್ಕಾರ, ಸಂಪ್ರದಾಯ ವಿಧಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದರೊಂದಿಗೆ ಗಣಧರ ಪರಮೇಷ್ಠಿ ಪೂಜೆ, ಶ್ರುತ ಪೂಜೆ, ಭಗವಾನ್‌ ಬಾಹುಬಲಿ ಸ್ವಾಮಿಗೂ ಪೂಜೆ ಸಲ್ಲುತ್ತದೆ. ಪೂಜೆಯ ಮಂತ್ರಪಠಣದೊಡನೆ ಭಜನೆ, ಭಕ್ತಿಗೀತೆಗಳು, ಮಹಾಕಾವ್ಯಗಳ ವಾಚನವೂ ನಡೆಯುತ್ತದೆ.

ಆತ್ಮ ಕಲ್ಯಾಣದೊಂದಿಗೆ ಲೋಕ ಕಲ್ಯಾಣಕ್ಕೂ ಸಮವಸರಣ ಪೂಜೆಯಿಂದ ದೊರೆಯುವ ಸಂದೇಶವು ಸಹಾಯಕವಾಗುತ್ತದೆ. ಮಹಾ ಮಂಗಳಾರತಿ, ಶಾಂತಿ ಮಂತ್ರ ಪಠಣದೊಂದಿಗೆ ಪೂಜಾ ಕಾರ್ಯಕ್ರಮವು ಮುಕ್ತಾಯವಾಗುತ್ತದೆ. ಇತರ ಧರ್ಮೀಯರೂ ಗಮನಾರ್ಹ ಸಂಖ್ಯೆಯಲ್ಲಿ ಈ ಸಂದರ್ಭ ಆಗಮಿಸುತ್ತಾರೆ.

ಲಲಿತಕಲಾ ಗೋಷ್ಠಿಗಳು

1975ರಿಂದಲೂ ಲಕ್ಷ ದೀಪೋತ್ಸವವನ್ನು ರಸಮಯಗೊಳಿಸುವ ಲಲಿತಕಲಾ ಗೋಷ್ಠಿಗಳು ನಡೆದು ಬರತೊಡಗಿವೆ. ರಾಗ ರಸಾಯನದ ಗಂಧರ್ವ ಲೋಕವನ್ನೇ ಅದು ಅನಾವ ರಣಗೊಳಿಸುವ ಮೂಲಕ ದೀಪೋತ್ಸವಕ್ಕೆ ಆಗಮಿಸಿದ ಜನ ಸಮುದಾಯದ ಹೃದಯ ದಲ್ಲಿ ನೆನಪಿನ ಪರ್ವವಾಗಿ ಉಳಿ ಯುತ್ತದೆ. ವರ್ಷದಿಂದ ವರ್ಷಕ್ಕೆ ಅದು ಇನ್ನಷ್ಟು ಪರಿಪಕ್ವವಾದ ರಸಾಮೃತ ಅಭಿಷೇಕವನ್ನೇ ಮಾಡುತ್ತ ಬಂದಿದೆ.

ವಸಂತ ಕುಮಾರಿ, ಡಾ| ಎಂ. ಬಾಲ ಮುರಳೀಕೃಷ್ಣ, ಜೇಸುದಾಸ್‌, ಭೀಮಸೇನ ಜೋಷಿಯವರಂಥ ಹೆಸರಾಂತ ಸಂಗೀತಪಟುಗಳು, ವೀಣಾ ಚಕ್ರವರ್ತಿ ಆರ್‌. ಕೆ. ಸೂರ್ಯ ನಾರಾಯಣ, ಪಿಟೀಲು ವಾದಕ ಚೌಡಯ್ಯ ರಂತಹ ವಾದ್ಯ ವಾದನ ಪಟುಗಳು ಇಲ್ಲಿ ತಮ್ಮ ಕಾರ್ಯಕ್ರಮದ ರಸ ದೌತಣ ನೀಡಿದ್ದಾರೆ. ಕಸ್ತೂರಿ ಶಂಕರ್‌, ಸಿ. ಅಶ್ವತ್ಥ್, ಮೈಸೂರು ಅನಂತಸ್ವಾಮಿಯವರಂಥ ಗಾಯಕರ ಕಂಠದೈಸಿರಿಯೂ ಇಲ್ಲಿ ಮೆರೆದಿದೆ. ಗೊಂಬೆಯಾಟ, ಪ್ರೊ| ಶಂಕರ್‌ ಅವರ ಜಾದೂ, ನಾಟಕ ಪ್ರದರ್ಶನಗಳಿಂದಲೂ ಈ ಗೋಷ್ಠಿ ಸುಸಂಪನ್ನವಾಗಿದೆ.

ಲಕ್ಷೋಪಲಕ್ಷ ಜನ ಸಂದಣಿಯ ನಡುವೆ ರಾಜ ಮರ್ಯಾದೆಯ ಬಿರುದು ಬಾವಲಿಗಳೊಂದಿಗೇ ಸಾಗುವ ಭಗವಂತನ ಮೆರವಣಿಗೆ, ಐದು ದಿನ, ಐದು ಕಡೆಗಳಲ್ಲಿ ಇರುವ ಕಟ್ಟೆಗಳಿಗೆ ಹೋಗಿ ಭಕ್ತರ ಬಳಿಗೆ ಬಂದು ಸ್ವಾಮಿಯು ಪಡೆಯುವ ಆರಾಧನೆ, ಕಟ್ಟೆಪೂಜೆಯ ಬಳಿಕ ದೇವರ ಉತ್ಸವಮೂರ್ತಿ ದೇವಾಲಯಕ್ಕೆ ಕರೆತಂದು ಪಲ್ಲಕಿಯಲ್ಲಿ ಸ್ಥಾಪಿಸಿ, ಗರ್ಭಗುಡಿಯನ್ನು ಪ್ರವೇಶಿಸುವ ಮೊದಲು ತಂತ್ರಿಗಳು ಬೇರೆ ಬೇರೆ ದಿಕ್ಕುಗಳಲ್ಲಿರುವ ಪರಿವಾರ ದೇವತೆಗಳಿಗೆ ಸಲ್ಲಿಸುವ ತಾಂತ್ರಿಕ ವಿಧಿ ವಿಧಾನಗಳ ಸೇವೆಯೂ ವಿಶಿಷ್ಟವಾಗಿದೆ.

ಪಲ್ಲಕಿಯಿಂದ ಉತ್ಸವಮೂರ್ತಿಯನ್ನು ಎತ್ತಿಕೊಂಡು ದೇವಾಲಯಕ್ಕೆ ಪ್ರದಕ್ಷಿಣೆ ಬರುವ ವಿಧಿಯಲ್ಲಿ ಹಲವಾರು ಸಾಂಸ್ಕೃತಿಕ ಸೇವೆಗಳು ಒಂದೊಂದು ಸುತ್ತಿಗೂ ಪ್ರತ್ಯೇಕವಾದ ವಾದ್ಯ ವಾದನದಿಂದ ನಡೆಯುತ್ತದೆ. ಈ ವಾದ್ಯ ವಾದನವು ಕೂಡ ವಿಭಿನ್ನ, ವಿಶಿಷ್ಟ ಬಗೆಯದಾಗಿದ್ದು ಭಕ್ತಿ ಭಾವವನ್ನು ಸಂವೃದ್ಧಿಗೊಳಿಸುತ್ತದೆ. ಎಲ್ಲರೂ ಹೇಳುವ ಮಾತೊಂದೇ, “ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದು ನಮ್ಮ ಸೌಭಾಗ್ಯ’ ಕೇವಲ ಲಕ್ಷ ದೀಪಗಳು ಬೆಳಗುವ ಉತ್ಸವವಾಗಿರದೆ ನಾಡಿನ ಅಗಣಿತ ಭಕ್ತರ ಲಕ್ಷÂವನ್ನು ತನ್ನತ್ತ ಸೆಳೆಯುವ ದಿವ್ಯೋತ್ಸವವಾಗಿಯೂ ಅದು ಪ್ರಸಿದ್ಧವಾಗಿದೆ.

ಸರ್ವಧರ್ಮ ಮತು ಸಾಹಿತ್ಯ ಸಮೇಳನಗಳು

ಬೆಳಕಿನ ಅತ್ಯಪೂರ್ವ ಹಬ್ಬವೆನಿಸಿಕೊಂಡಿರುವ ಲಕ್ಷ ದೀಪೋತ್ಸವದಲ್ಲಿ ಒಂದು ದಿನ ಜಗತ್ತಿನ ಧರ್ಮಗಳ ಮಾನವೀಯ ಗುಣಗಳನ್ನು ಬಿಡಿಸಿ ಹೇಳುವ ಸರ್ವಧರ್ಮ ಸಮ್ಮೇಳನ ಮತ್ತು ಅದರ ಮರುದಿನ ನಡೆಯುವ ಸಾಹಿತ್ಯ ಸಮ್ಮೇಳನಗಳು ಜ್ಞಾನ ಮತ್ತು ಸಾಹಿತ್ಯಾಸಕ್ತರ ಪಾಲಿಗೆ ರಸಗವಳವಾಗಿ ಅನನ್ಯ ಗ್ರಾಸವನ್ನೇ ಒದಗಿಸುತ್ತವೆ.

ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಧರ್ಮಾಧಿಕಾರಿಗಳಾಗಿದ್ದ ಕಾಲದಲ್ಲಿ ಆರಂಭವಾದ ಈ ಸಾಹಿತ್ಯಿಕ ಸಮಾರಂಭವನ್ನು ಅನಂತರ ಧರ್ಮಾಧಿಕಾರಿಗಳಾದ ರತ್ನವರ್ಮ ಹೆಗ್ಗಡೆ ಯವರು ಚ್ಯುತಿಯಿಲ್ಲದೆ ಮುಂದುವರೆಸಿಕೊಂಡು ಬಂದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಬಗೆಗೆ ಅಪಾರ ಅಭಿಮಾನ ವಿರುವ ಡಾ| ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿ ಪಟ್ಟವನ್ನು ಅಲಂಕರಿಸಿದ ಬಳಿಕ ಈ ಎರಡೂ ಕಾರ್ಯಕ್ರಮಗಳಿಗೆ ಹೊಸ ಸತ್ವ ಮೂಡಿಬರುತ್ತಿದೆ.

1933ರಲ್ಲಿ ವಿವಿಧ ಮತ ಧರ್ಮಗಳ ಮುಖ್ಯಸ್ಥರ ಸಮ್ಮೇಳ ನವು ಆರಂಭಗೊಂಡ ಬಳಿಕ ಒಂದು ವರ್ಷವೂ ನಿಲ್ಲದೆ ನಡೆದು ಬರುತ್ತಿದೆ. ಧರ್ಮಾಧಿಕಾರಿಗಳು ಸ್ವಾಗತಾಧ್ಯಕ್ಷರ ನೆಲೆಯಲ್ಲಿ ಮಾಡುವ ವಿಶಿಷ್ಟ ಸಂದೇಶವಿರುವ ಭಾಷಣವೂ ಒಂದು ಪರಂಪ ರಾಗತ ಪದ್ಧತಿಯಾಗಿ ಅದರೊಂದಿಗೇ ಸಾಗಿ ಬಂದಿದೆ. ತಮ್ಮ ಧರ್ಮವು ಮಾನವೀಯ ಜೀವಸೆಲೆಗೆ ಹೇಗೆ ಪೂರಕವಾದ ತತ್ವಗಳನ್ನೊಳಗೊಂಡಿದೆ ಎಂಬುದನ್ನು ಅನ್ಯಧರ್ಮಗಳ ಜ್ಞಾನಿ ಗಳು ವಿವರಿಸಲು ಅವಕಾಶವೊದಗಿಸುವ ಈ ಧರ್ಮ ಸಮ್ಮೇಳ ನದ ವೇದಿಕೆ ಕ್ರೈಸ್ತ,  ಮುಸ್ಲಿಂ, ಜೈನ, ಬೌದ್ಧ ಮುಂತಾದ ಹಲವು ಮತ ಮತ್ತು ಧರ್ಮಗಳ ಸಾರವನ್ನು ಕಿತ್ತಳೆಯ ತೊಳೆಗಳಂತೆ ಬಿಡಿಸಿಕೊಟ್ಟಿದೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳೆಂದು ಹಲವು ಬಗೆಯಿಂದ ಹರಡಿರುವ ನಂಬಿಕೆಗಳ ನಡುವಣ ಭಿನ್ನಾಭಿ ಪ್ರಾಯಗಳನ್ನು ನಿವಾರಿಸುವ ವೇದಿಕೆಯೆನಿಸಿ, ಭಾವೈಕ್ಯತೆಯ ಸಂವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಬಂದಿದೆ.

ಇದೇ ಸಮಯ ಧರ್ಮ ಸಮ್ಮೇಳನದೊಂದಿಗೇ ಆರಂಭ ಗೊಂಡ ಸಾಹಿತ್ಯ ಸಮ್ಮೇಳನಗಳು ಕೂಡ ಶ್ರೇಷ್ಠ ಸಾಹಿತಿಗಳನ್ನು ಬರಮಾಡಿಸಿ ನಾಡಿಗೆ ಪರಿಚಯ ಮಾಡಿಸುತ್ತ ಬಂದಿದೆ. ಅವರ ಮಾತುಗಳನ್ನು ದಾಖಲಿಸಲು ಅವಕಾಶವೊದಗಿಸಿದೆ. 1937ರ ಬಳಿಕ ಒಂದು ದಿನ ಧರ್ಮ ಸಮ್ಮೇಳನ ನಡೆದರೆ ಮರುದಿನ ಸಾಹಿತ್ಯ ಸಮ್ಮೇಳನ ನಡೆಯುವ ಕ್ರಮ ರೂಢಿಗೆ ಬಂದಿತು. ಡಾ| ಶಿವರಾಮ ಕಾರಂತರಂತಹ ದಿಗ್ಗಜರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಸಾಹಿತ್ಯ ಸುಧೆಯನ್ನು ಹಂಚಿದ್ದಾರೆ. ಇಂದಿಗೂ ನಾಡಿನ ಶ್ರೇಷ್ಠ ಸಾಹಿತಿಗಳು ಸಮ್ಮೇಳನ ವೇದಿಕೆಯಲ್ಲಿ ಮನದಾಳದ ಮಾತುಗಳ ಪಕ್ವಾನ್ನವನ್ನು ಉಣಬಡಿಸುತ್ತಾರೆ. ಪ್ರತೀ ವರ್ಷ ಡಾ| ಹೆಗ್ಗಡೆಯವರು ಅದರ ಸತ್ವವನ್ನು ಹೆಚ್ಚಿಸುವ ದಿಸೆಯಲ್ಲಿ ಸಾಕಷ್ಟು ಪರಿವರ್ತನೆಗಳನ್ನು ಮಾಡುತ್ತ ಬಂದಿದ್ದಾರೆ. ಸಾಹಿತ್ಯಾಸಕ್ತರ ಪಾಲಿಗೆ ಈ ನುಡಿಗಬ್ಬ ಅನುಪಮ ನುಡಿಹಬ್ಬವಾಗಿ ಪರಿಣಮಿಸಿದೆ.

ಉತ್ಸವಗಳು

ದೀಪೋತ್ಸವದ ಮೊದಲನೆಯ ದಿನ ದೇವಾಲಯದ ಗರ್ಭಗುಡಿ ಯಿಂದ ಹೊರಡುವ ಮೆರ ವಣಿಗೆ ಸಂಭ್ರಮೋಪೇತವಾಗಿ ಹೊಸ ಕಟ್ಟೆಯ ತನಕ ಸಾಗುತ್ತದೆ. ಕಟ್ಟೆಯಲ್ಲಿ ದೇವರಿಗೆ ನಡೆಯುವ ವಿಶೇಷ ಪೂಜೆ ಯನ್ನು ನೋಡಿ ಭಕ್ತ ಸಾಗರವೇ ಕಣ್ತುಂಬಿ ಕೊಳ್ಳುತ್ತದೆ. ಎರಡನೆಯ ದ್ವಾದಶಿಯ ದಿನದಂದು ಕೆರೆಕಟ್ಟೆಗೆ ದೇವರ ಸವಾರಿ ಚಿತ್ತೈಸಿ ಪೂಜಾದಿಗಳನ್ನು ನಡೆಸಿದ ಬಳಿಕ ಮತ್ತೆ ದೇವಾಲಯಕ್ಕೆ ಮರಳುವುದು ವಾಡಿಕೆ. ಮೂರನೆಯ ದಿನ ಇದೇ ರೀತಿ ಲಲಿತೋದ್ಯಾನ ಉತ್ಸವ ನಡೆಯುವ ಪದ್ಧತಿಯಿದೆ. ನಾಲ್ಕನೆಯ ದಿನ ಕಂಚಿಮಾರು ಕಟ್ಟೆಯ ತನಕ ದೇವರ ಸವಾರಿ ಸಾಗಿ ಪೂಜಾದಿಗಳು, ಮಹಾಮಂಗಳಾರತಿ ನಡೆಯುತ್ತದೆ. ಪ್ರತಿಯೊಂದು ದಿನದ ಉತ್ಸವವು ನಡೆಯುವಾಗಲೂ ವೇದ ವೇದಾಂಗ ವಿದ್ವಾಂಸರಿಂದ ನಾಲ್ಕು ವೇದಗಳ ಪಾರಾಯಣ, ಸಂಗೀತ, ವ್ಯಾಕರಣ, ರಾಮಾಯಣ, ಮಹಾಭಾರತ, ಭಾಗವತಗಳ ವಿಚಾರವಾಗಿ ನಡೆಯುವ ಅಷ್ಟವಧಾನ ಸೇವೆಯು ಕೇಳುಗರ ಕಿವಿಗಳನ್ನು ಪವಿತ್ರಗೊಳಿಸಿ, ವಾತಾವರಣವನ್ನು ಪುನೀತಗೊಳಿಸುತ್ತದೆ.

ಉತ್ಸವದ ಕಡೆಯ ದಿನವೇ ನಡೆಯುವುದು ಲಕ್ಷ ಲಕ್ಷ ದೀಪಗಳು ಬೆಳಕಿನ ಚಿಕ್ಕೆಗಳಾಗಿ ಮಿನುಗುವ ಲಕ್ಷ ದೀಪೋತ್ಸವದ ಸಂಭ್ರಮ, ಸಡಗರ. ಕಂಡು ಸಹಸ್ರ ಸಹಸ್ರ ಭಕ್ತರು ಧನ್ಯರಾಗುತ್ತಾರೆ. ಮನೆಗಳು, ಮನಗಳು ಬೆಳಕಿನ ಮಂದಹಾಸದಲ್ಲಿ ಅಂಧಕಾರ ಮುಕ್ತವಾಗಿ ದಿವ್ಯವಾದ ಪ್ರಭೆಯಿಂದ ಹೊಳೆಯುತ್ತವೆ. ವಿಶೇಷ ವಾದ ದೀಪಾಲಂಕಾರವೂ ಹಣತೆಗಳ ಬೆಳಕಿನೊಂದಿಗೆ ಸ್ಪರ್ಧಿಸುವ ಮೂಲಕ ಭಗವಂತನ ಸನ್ನಿಧಿಗೆ ದೀಪಾರತಿ ಮಾಡುತ್ತವೆ.

ಐದನೆಯ ದಿನದಂದು ನಡೆಯುವ ಗೌರಿಮಾರು ಕಟ್ಟೆಯ ಉತ್ಸವ ಕೂಡ ವಿಶಿಷ್ಟವಾಗಿದೆ. ದೇವಾಲಯದ ಗರ್ಭ ಗುಡಿಯ ಸುತ್ತಲೂ ಎರಡು ಸಲ, ಅಂಗಣದಲ್ಲಿ ನಾಲ್ಕು ಸಲ ದೇವರನ್ನು ಹೊತ್ತುಕೊಂಡು ಬಲಿ ಪ್ರದಕ್ಷಿಣೆ ಬರುವ ಕ್ರಮವಿದೆ. ಹೂ, ಹಣ್ಣುಗಳಿಂದ ಸಿಂಗರಿಸಿದ ಬೆಳ್ಳಿರಥದಲ್ಲಿ ದೇವರನ್ನು ಮುಖ್ಯದ್ವಾರದ ಎಡಬದಿಯಲ್ಲಿರುವ ಗೌರಿಮಾರು ಕಟ್ಟೆಯ ವರೆಗೆ ರಥಬೀದಿಯ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ಯ ಲಾಗುತ್ತದೆ. ವಿವಿಧ ಸಂಪ್ರದಾಯಗಳಿಂದ ಪೂಜೆ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನಡೆಯುತ್ತದೆ.

ಪ. ರಾಮಕೃಷ್ಣ ಶಾಸ್ತ್ರಿ, ತೆಂಕಕಾರಂದೂರು

 

ಟಾಪ್ ನ್ಯೂಸ್

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.