ಭೀಮನಕೊಲ್ಲಿಯಲ್ಲಿ ಇಂದು ಸಚಿವ ಅಶೋಕ್ ಗ್ರಾಮ ವಾಸ್ತವ್ಯ
Team Udayavani, Nov 19, 2022, 7:15 AM IST
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಭಾಗವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ಶನಿವಾರ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಭೀಮನಕೊಲ್ಲಿ
(ಕೆಂಚನಹಳ್ಳಿ)ಯಲ್ಲಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ.
ಈ ಪ್ರದೇಶವು ನಾಗರಹೊಳೆ ಅಭಯಾರಣ್ಯದ ನಡುವೆ ಕಾಡಂಚಿನಲ್ಲಿರುವ ಪ್ರದೇಶವಾಗಿದ್ದು, ಅಲ್ಲಿನ ಗ್ರಾಮದ ಜನರ ಸಮಸ್ಯೆಗಳನ್ನು ಜತೆಗೆ ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಕುರಿತು ಸಚಿವರು ಖುದ್ದಾಗಿ ಪರಿಶೀಲನೆ ನಡೆಸಲಿದ್ದಾರೆ.
ಆನೆ ತುಳಿತ ಸೇರಿ ಅರಣ್ಯದಿಂದಾಗುವ ಸಂಕಷ್ಟಗಳ ಬಗ್ಗೆ ಅಹವಾಲು ಸ್ವೀಕರಿಸಲಿದ್ದಾರೆ. ಜೇನು ಕುರುಬರು, ಕಾಡು ಕುರುಬರು, ಎರವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿನ ಕಾಡಿನ ಮಕ್ಕಳ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ರಾತ್ರಿ ಸ್ವಾಮಿ ವಿವೇಕಾನಂದ ಗಿರಿಜನ ಆಶ್ರಮ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಶನಿವಾರ ಬೆಳಗ್ಗೆ ಭೀಮನಕೊಲ್ಲಿಯಲ್ಲಿ ವಿವಿಧ ಸರಕಾರಿ ಮಳಿಗೆ ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಂದಾಯ ಇಲಾಖೆ ಹಾಗೂ ಇತರ ಇಲಾಖೆ ವತಿಯಿಂದ ಸುಮಾರು 10 ಸಾವಿರಕ್ಕೂ ಅಧಿಕ ಜನರಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭ ಸ್ಥಳೀಯ ಶಾಸಕರು ಮತ್ತು ಸಂಸದರು, ಮುಖಂಡರು ಹಾಗೂ ಜಿಲ್ಲಾಧಿಕಾರಿಗಳು ಸಹಿತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಬಾರಿಯ ವಾಸ್ತವ್ಯ ಅಪರೂಪ ಹಾಗೂ ವಿಶೇಷತೆ ಹೊಂದಿದೆ. ನಾಗರಹೊಳೆ ಅಭಯಾರಣ್ಯದ ನಡುವೆ ಕಾಡಂಚಿನಲ್ಲಿರುವ ಕೆಂಚನಹಳ್ಳಿ ಗ್ರಾಮ ಆಯ್ಕೆ ಮಾಡಿಕೊಂಡು ಕಾಡಿನ ನಡುವೆ ಅಲ್ಲಿ ವಾಸಿಸುವ ಹಕ್ಕಿಪಿಕ್ಕಿ, ಹಾಡಿ, ಹಟ್ಟಿಯ ಜನರ ಸಮಸ್ಯೆ ಆಲಿಸಲಾಗುವುದು. ಪ್ರಾಣಿ ಮತ್ತು ಮಾನವ ಸಂಘರ್ಷ ಸಮಸ್ಯೆ ನಿವಾರಣೆ, ಸುಮಾರು 200 ಎಕ್ರೆ ಕಂದಾಯ ಮತ್ತು ಅರಣ್ಯ ಭೂಮಿ ವಿಚಾರದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಆನೆ ತುಳಿತಕ್ಕೊಳಗಾಗಿ ಮೃತಪಟ್ಟವರ ಮನೆಗೂ ಭೇಟಿ ನೀಡಲಾಗುವುದು.
– ಆರ್.ಅಶೋಕ್, ಕಂದಾಯ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.