ಡಿಕೆಶಿ ವಿರುದ್ಧ ರಾಜಕೀಯ ಪಿತೂರಿ: ವಕೀಲರ ವಾದ
Team Udayavani, Nov 20, 2022, 6:40 AM IST
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಗೆ ರಾಜಕೀಯವಾಗಿ ಕಿರುಕುಳ ನೀಡಲೆಂದು ಸಿಬಿಐ, ಇಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರ ಪರ ವಕೀಲರು ಹೈಕೋರ್ಟ್ ಮುಂದೆ ವಾದಿಸಿದ್ದಾರೆ.
ಸಿಬಿಐ ತನಿಖೆಗೆ ಆಕ್ಷೇಪಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಪೀಠದಲ್ಲಿ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಸಿ.ಎಚ್. ಜಾಧವ್ ಹಾಗೂ ಸಂದೇಶ್ ಚೌಟ ಅವರು, ತಮ್ಮ ಕಕ್ಷಿದಾರ ಡಿ.ಕೆ .ಶಿವಕುಮಾರ್ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದ್ದು, ಈಗಾಗಲೇ ಆದಾಯ ತೆರಿಗೆ ಇಲಾಖೆಯು 3-4 ಪ್ರಕರಣ ದಾಖಲಿಸಿದೆ. ಜಾರಿ ನಿರ್ದೇಶನಾಲಯ ಎರಡು ಪ್ರಕರಣ ದಾಖಲಿಸಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿರುವುದಕ್ಕೆ ಕಿರುಕುಳ ಮಾಡಲಾಗುತ್ತಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ತೊಂದರೆ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಅಲ್ಲದೇ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ಹೇಳಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 13(1)(ಇ)ರ ಅಡಿ ಕುಟುಂಬ ಸದಸ್ಯರನ್ನು ಎಫ್ಐಆರ್‌ನಲ್ಲಿ ಸೇರಿಸಲಾಗದು ಎಂದು ವಾದಿಸಿದರು.
ಶಿವಕುಮಾರ್ ಮನೆಯಲ್ಲಿ 41 ಲಕ್ಷ ರೂ. ದೊರೆತಿದೆ ಎಂಬ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಎರಡು ಕೇಸು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮತ್ತೂಂದು ಕೇಸು, ಆದಾಯ ತೆರಿಗೆ ನಾಲ್ಕು ಕೇಸುಗಳನ್ನು ದಾಖಲಿಸಿತ್ತು. ಆದರೆ, ಈ ಕೇಸುಗಳಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಿಡುಗಡೆ ನೀಡಿತ್ತು. ಈ ಆದೇಶ ಪ್ರಶ್ನಿಸಿದ ಮೇಲ್ಮನವಿಯನ್ನು ಹೈಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಈಗ ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಜಾಮೀನು ದೊರೆತ ಮೇಲೆ ಜಾರಿ ನಿರ್ದೇಶನಾಲಯದ ಮಾಹಿತಿ ಅನುಸಾರ ಸಿಬಿಐ ಕೇಸು ದಾಖಲಿಸಿದೆ. ಇದೆಲ್ಲಾ ಅರ್ಜಿದಾರರಿಗೆ ಕಿರುಕುಳ ನೀಡಬೇಕೆಂಬ ಏಕೈಕ ಉದ್ದೇಶ ಹೊಂದಿದ ದುರುದ್ದೇಶಪೂರಿತ ಕ್ರಮವಾಗಿದೆ ಎಂದು ವಾದ ಮಂಡಿಸಿದರು. ಡಿ.ಕೆ. ಶಿವಕುಮಾರ್ ಪರ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ಹಾಜರಿದ್ದರು.
ಪ್ರಕರಣವೇನು? : ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ. ಸಿಬಿಐ ದಾಖಲಿಸಿರುವ ಈ ಎಫ್ಐಆರ್ ಕಾನೂನು ಬಾಹಿರವಾಗಿದ್ದು ಅದನ್ನು ರದ್ದುಗೊಳಿಸಬೇಕು ಎಂದು ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.