ಹೊಸ ವಿ.ವಿ.ಗಳಲ್ಲಿ ಹಳೆ ವಿ.ವಿ. ಸಿಬಂದಿ ವಿಲೀನ; ಹುದ್ದೆ ಮರುಹಂಚಿಕೆಗೆ ಮುಂದಾದ ಸರಕಾರ
Team Udayavani, Nov 27, 2022, 7:00 AM IST
ಮಂಗಳೂರು: ರಾಜ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಲಿರುವ ಏಳು ಹೊಸ ವಿಶ್ವವಿದ್ಯಾನಿಲಯಗಳಲ್ಲಿ ಸೇವೆಗೆ ಸೇರಲು ಇಚ್ಛಿಸುವ ಮಾತೃ ವಿ.ವಿ.ಗಳ ಬೋಧಕ ಹಾಗೂ ಬೋಧಕೇತರ ಸಿಬಂದಿಯ ವಿಲೀನಕ್ಕೆ ಸರಕಾರ ಮುಂದಾಗಿದೆ.
ಇದರಂತೆ ಮಂಗಳೂರು ವಿ.ವಿ. ಸಹಿತ ಸಂಬಂಧಪಟ್ಟ ಆಯಾ ಮಾತೃ ವಿ.ವಿ.ಗಳ ಕುಲಸಚಿವರು ನಿಯಮಾನುಸಾರ ಬೋಧಕ- ಬೋಧಕೇತರರಿಂದ ಅಭಿ ಪ್ರಾಯ ಪಡೆದು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಿದೆ. ವಿಲೀನ ಆದೇಶ ಸರಕಾರದಿಂದ ಬಂದ ಬಳಿಕ ತಲಾ 2 ಕೋ.ರೂ. ಅನುದಾನ ಹೊಸ ವಿ.ವಿ.ಗಳಿಗೆ ಬರಲಿದೆ.
ನೂತನ ವಿ.ವಿ.ಗಳು ಹಾಗೂ ಸಂಬಂಧಪಟ್ಟ ಮಾತೃ ವಿ.ವಿ. ಗಳಿಗೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯ ಅಂತಿಮ ನಿರ್ಧಾರ ಶೀಘ್ರ ನಡೆಯಲಿದೆ. ಬೋಧಕ/ಬೋಧಕೇತರ ಹುದ್ದೆ ಗಳನ್ನು ನಿರ್ದಿಷ್ಟ ಅನುಪಾತದೊಂದಿಗೆ ಮರು ಹಂಚಿಕೆ ಮಾಡಲಾಗುತ್ತದೆ. ಈ ಕುರಿತ ಪ್ರಸ್ತಾವನೆಯನ್ನು ಆಯಾ ಮಾತೃ ವಿ.ವಿ. ಕುಲಸಚಿವರು (ಆಡಳಿತ) ಸರಕಾರಕ್ಕೆ ಸಲ್ಲಿಸಲಿದ್ದಾರೆ.
ಸದ್ಯ ಈ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ 15 ದಿನಗಳ ಒಳಗಾಗಿ ಪೂರ್ಣವಾಗುವ ನಿರೀಕ್ಷೆಯಿದೆ. ಅಲ್ಲಿಯ ವರೆಗೆ ಪ್ರಸ್ತುತ ನೂತನ ವಿ.ವಿ.ಗಳ ಕೇಂದ್ರ ಸ್ಥಾನವಾಗಿ ಪರಿವರ್ತನೆಗೊಂಡಿರುವ ಸ್ನಾತ ಕೋತ್ತರ ಕೇಂದ್ರ
ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ ಬೋಧಕೇತರ ಸಿಬಂದಿ ಆಯಾ ಸ್ನಾತಕೋತ್ತರ ಕೇಂದ್ರದ
ಲ್ಲಿಯೇ ಕರ್ತವ್ಯ ನಿರ್ವಹಿಸಬೇಕಿದೆ.
ಪ್ರಸ್ತುತ ಶೈಕ್ಷಣಿಕ ವರ್ಷ ಪೂರ್ಣ ವಾಗುವವರೆಗೆ ನೂತನ ವಿ.ವಿ.ಯಡಿಬರುವ ಸಂಯೋಜಿತ ಕಾಲೇಜು ಗಳಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳನ್ನು ಮಾತೃ ವಿ.ವಿ.ಗಳೇ ಪೂರ್ಣಗೊಳಿಸಲಿವೆ. ಈ ವೇಳೆ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಈ ಮಧ್ಯೆ 2023-24ನೇ ಸಾಲಿನಿಂದ ಸಂಗ್ರಹಿಸುವ ಸಂಯೋಜನೆ ಶುಲ್ಕ, ಪರೀಕ್ಷೆಶುಲ್ಕ ಸಹಿತ ಇತರ ಶುಲ್ಕವನ್ನು ಆಯಾ ನೂತನ ವಿ.ವಿ.ಗಳು ನಿಯಮ ಬದ್ಧ ನಿರ್ವಹಣೆಗಾಗಿ ಬಳಸಿಕೊಳ್ಳಲು ಸರಕಾರ ಅವಕಾಶ ಕಲ್ಪಿಸಿದೆ.
ಹೊಸ ಹುದ್ದೆ ಇಲ್ಲ !
ಈಗಾಗಲೇ ಮಾತೃ ವಿ.ವಿ.ಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿಯೇ ಅವಶ್ಯ ಹುದ್ದೆಗಳನ್ನು 7 ನೂತನ ವಿ.ವಿ.ಗಳಿಗೆ ಬಳಸಿಕೊಳ್ಳಬೇಕಿದೆ. ಯಾವುದೇ ಹೊಸ ಹುದ್ದೆ ಸೃಷ್ಟಿಸಲು ಸರಕಾರ ಸದ್ಯಕ್ಕೆ ಅವಕಾಶ ನೀಡಿಲ್ಲ. ಹೊಸ ನೇಮಕಾತಿಗಾಗಿ ಪ್ರಸ್ತಾವನೆ ಸಲ್ಲಿಸುವುದಕ್ಕೂ ಅವಕಾಶವಿಲ್ಲ!
ಸಂಪೂರ್ಣ ಡಿಜಿಟಲ್
ಸಾಂಪ್ರದಾಯಿಕ ವಿ.ವಿ.ಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪದ ಉಪ ಯೋಗಿಸದೆ ಲಭ್ಯ ಸಂಪನ್ಮೂಲ ವನ್ನಷ್ಟೇ ಬಳಸಿ ಹೊಸ ವಿ.ವಿ. ಕಾರ್ಯನಿರ್ವಹಿಸಬೇಕಿದೆ. ಸಂಪೂರ್ಣ ಡಿಜಿಟಲ್ ಹಾಗೂ ಕೌಶಲಾಧಾರಿತ ಮಾದರಿಯಂತೆ ವಿ.ವಿ. ಸ್ಥಾಪನೆ ಸರಕಾರದ ಉದ್ದೇಶ. ಹೊಸ ವಿ.ವಿ. ಸ್ಥಾಪನೆಗೆ ಜಮೀನು ಖರೀದಿಸುವಂತಿಲ್ಲ ಹಾಗೂ ವಿ.ವಿ.ಗೆ ಹೊಸ ಕಟ್ಟಡ ನಿರ್ಮಿಸುವಂತಿಲ್ಲ.
ಹೊಸ ವಿ.ವಿ.ಗೆ ಹಂಚಿಕೆಯಾದ ಕಾಲೇಜುಗಳ ಸಂಖ್ಯೆ
ಕೊಡಗು ವಿ.ವಿ. 22
ಚಾಮ ರಾಜ ನಗರ 18
ಹಾಸನ 36
ಹಾವೇರಿ 40
ಬೀದರ್ 140
ಕೊಪ್ಪಳ 40
ಬಾಗಲಕೋಟೆ 71
ಇವುಗಳೊಂದಿಗೆ ಮಂಡ್ಯ ವಿ.ವಿ. ವ್ಯಾಪ್ತಿಗೆ ಆ ಜಿÇÉೆಯ ಪ್ರ. ದರ್ಜೆ ಕಾಲೇಜುಗಳು ಬರಲಿವೆ. ಮಂಡ್ಯ ವಿ.ವಿ.
ಬಿಟ್ಟು ಮಿಕ್ಕ 7 ವಿ.ವಿ.ಗಳ ಆರಂಭ ವನ್ನು ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.
ಹೊಸ ವಿಶ್ವವಿದ್ಯಾನಿಲಯಗಳಲ್ಲಿ ಸೇವೆಗೆ ಸೇರಲಿಚ್ಛಿಸುವ ಹಾಲಿ ವಿ.ವಿ.ಗಳ ಬೋಧಕ, ಬೋಧಕೇತರ ಸಿಬಂದಿ ವಿಲೀನ ಸಂಬಂಧಿಸಿ ಅಭಿಮತ ಪಡೆಯುವಂತೆ ಸರಕಾರ ದಿಂದ ಪತ್ರ ಬಂದಿದೆ. ನಿಗದಿತ ಸಮಯದೊಳಗೆ ಅಭಿಮತ ಪಡೆದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸ ಲಾಗುವುದು.
– ಡಾ| ಕಿಶೋರ್ ಕುಮಾರ್ ಸಿ.ಕೆ.,
ಕುಲಸಚಿವರು (ಆಡಳಿತ), ಮಂಗಳೂರು ವಿವಿ
-ದಿನೇಶ್ ಇರಾ