ರಿಂಗ್ ರಸ್ತೆಗೆ 32 ಹಳ್ಳಿ ರೈತರ ವಿರೋಧ
ಬಾರುಕೋಲು ಚಳವಳಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ; ಪ್ರಾಣ ಬಿಟ್ಟೇವು, ಭೂಮಿ ಬಿಡೆವು ಎಂದ ಅನ್ನದಾತ
Team Udayavani, Nov 29, 2022, 3:46 PM IST
ಬೆಳಗಾವಿ: ನಗರ ಸೇರಿದಂತೆ ತಾಲೂಕಿನ 32 ಹಳ್ಳಿಗಳಲ್ಲಿ ನಿರ್ಮಾಣವಾಗಲಿರುವ ರಿಂಗ್ ರಸ್ತೆ ನಿರ್ಮಾಣ ವಿರೋ ಧಿಸಿ ರೈತರು ಸೋಮವಾರ ಬಾರುಕೋಲು ಚಳವಳಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಕಾಲೇಜು ರಸ್ತೆ, ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ರಸ್ತೆಯುದ್ದಕ್ಕೂ ಬಾರುಕೋಲು ಹೊಡೆಯುತ್ತ ಪ್ರಾಣ ಬಿಟ್ಟೇವು, ಭೂಮಿ ಬಿಡುವುದಿಲ್ಲ ಎಂದು ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.
ಒಂದಿಂಚೂ ಜಾಗವನ್ನು ರಿಂಗ್ ರಸ್ತೆಗೆ ನಾವು ಬಿಟ್ಟು ಕೊಡುವುದಿಲ್ಲ. ಸರ್ಕಾರ ಕೂಡಲೆ ಈ ಯೋಜನೆಯನ್ನು ಹಿಂಪಡೆದು ಫಲವತ್ತಾದ ಜಮೀನು ಕಾಪಾಡಬೇಕು. ಸರ್ಕಾರ ಡಿ. 15ರೊಳಗೆ ರಿಂಗ್ ರಸ್ತೆ ರದ್ದುಗೊಳಿಸಿದ್ದರ ಬಗ್ಗೆ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಡಿ.19ರಿಂದ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು, ವಕೀಲರ ಸಂಘ, ಶ್ರೀರಾಮ ಸೇನಾ ಹಿಂದೂಸ್ತಾನ್, ಚೇಂಬರ್ ಆಫ್ ಕಾಮರ್ಸ್, ಕಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ಹಾಗೂ ರೈತರು, ಮಹಿಳೆಯರು, ಮಕ್ಕಳು, ಯುವಕ-ಯುವತಿಯರು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳಗಾವಿ ಸುತ್ತಲೂ ಅಭಿವೃದ್ಧಿ ನೆಪದಲ್ಲಿ ಫಲವತ್ತಾದ ಭೂಮಿ ಕಸಿದುಕೊಳ್ಳುತ್ತಿವೆ. ರಿಂಗ್ ರಸ್ತೆ, ಟ್ರಕ್ ಟರ್ಮಿನಲ್, ಹಲಗಾ-ಮಚ್ಛೆ ಬೈಪಾಸ್ ರಸ್ತೆ, ಬೆಳಗಾವಿ-ಚನ್ನಮ್ಮನ ಕಿತ್ತೂರು-ಧಾರವಾಡ ರೈಲು ಮಾರ್ಗ ನಿರ್ಮಾಣ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ 32 ಗ್ರಾಮಗಳ 1,300 ಎಕರೆ ಭೂಮಿ ವಶಪಡಿಸಿಕೊಳ್ಳುತ್ತಿದೆ. ಈ ಯೋಜನೆಗಳಿಗೆ ಫಲವತ್ತಾದ ಭೂಮಿ ಬಿಟ್ಟು ಕೊಡುವುದಿಲ್ಲ. ಸರ್ಕಾರ ಕೂಡಲೇ ಆದೇಶ ಹಿಂಪಡೆದು ರೈತರ ಹಿತ ಕಾಪಾಡಬೇಕು ಎಂದು ಪಟ್ಟು ಹಿಡಿದರು.
ರಿಂಗ್ ರಸ್ತೆ ನಿರ್ಮಾಣಕ್ಕೆ ತಾಲೂಕಿನ ಅಗಸಗಾ, ಅಂಬೇವಾಡಿ, ಬಾಚಿ, ಬಹದ್ದರವಾಡಿ, ಬೆಳಗುಂದಿ, ಕಡೋಲಿ, ಕಾಕತಿ, ಬಿಜಗರ್ಣಿ, ಗೋಜಗೆ, ಹೊನಗಾ, ಶಗನಮಟ್ಟಿ, ಕಲಖಾಂಬ, ಕಲ್ಲೇಹೋಳ, ಕಮಕಾರಟ್ಟಿ, ಕಣಬರ್ಗಿ, ಕೊಂಡಸಕೊಪ್ಪ, ಮಣ್ಣೂರ, ಮಾಸ್ತಮರ್ಡಿ, ಮುಚ್ಚಂಡಿ, ಮುತಗಾ, ನಾವಗೆ, ಸಂತಿಬಸ್ತವಾಡ, ಸೋನಟ್ಟಿ, ಸುಳಗಾ-ಯಳ್ಳೂರು, ಧಾಮಣೆ, ತುರಮುರಿ, ಉಚಗಾಂವ, ವಾಘವಡೆ, ಯರಮಾಳ, ಯಳ್ಳೂರು ಹಾಗೂ ಝಾಡಶಹಾಪುರ ಗ್ರಾಮಗಳ ರೈತರು ಅಳಲು ತೋಡಿಕೊಂಡರು.
ರಿಂಗ್ ರಸ್ತೆ ನಿರ್ಮಾಣವಾದರೆ ತಾಲೂಕಿನ ಝಾಡಶಹಾಪುರ ಗ್ರಾಮದಲ್ಲಿ ಹೊಲದ ಜತೆಗೆ ಇಡೀ ಊರು ಸರ್ವನಾಶವಾಗಲಿದೆ. ಜತೆಗೆ ಹೊನಗಾ ಬೆನ್ನಾಳಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 100 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ರೈತರ ಬದುಕಿಗೆ ತಣ್ಣೀರೆರಚುವ ಕೆಲಸ ಸರ್ಕಾರ ಮಾಡಬಾರದು. ಈ ಯೋಜನೆಗೆ ಯಾವುದೇ ಜನಪ್ರತಿನಿಧಿಗಳು ಅಥವಾ ಗಣ್ಯರು ಭೂಮಿ ಕೊಡುತ್ತಿಲ್ಲ. ಬದಲಿಗೆ ಬಡ ರೈತರ ಭೂಮಿಯನ್ನೇ ಸ್ವಾಧೀನ ಪಡಿಸಿಕೊಳ್ಳುವ ಕೆಲಸ ನಡೆದಿದೆ. ಈ ಯೋಜನೆ ಕೈಬಿಟ್ಟು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶಿವಾಜಿ ಸುಂಠಕರ್, ರಮಾಕಾಂತ ಕೊಂಡೂಸ್ಕರ, ಅಪ್ಪಾಸಾಹೇಬ ದೇಸಾಯಿ, ಪ್ರಕಾಶ ಮರಗಾಳೆ, ಪ್ರಕಾಶ ಶಿರೋಳಕರ, ಪ್ರಕಾಶ ನಾಯಕ, ಸಿದಗೌಡ ಮೋದಗಿ, ಸುಧೀರ ಚವ್ಹಾಣ, ಯಳ್ಳೂರಕರ, ರಾಜು ಮರವೆ ಇನ್ನಿತರರಿದ್ದರು.
ಬೆಳಗಾವಿ ಸುತ್ತಲಿನ ಗ್ರಾಮಗಳಲ್ಲಿ ಫಲವತ್ತಾದ ಕೃಷಿಭೂಮಿ ಇದೆ. ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಇದ್ದಷ್ಟು ಜಮೀನಿನಲ್ಲಿ ಬೆಳೆ ತೆಗೆದು ಜೀವನ ನಡೆಸುತ್ತಿರುವ ರೈತರನ್ನು ಬೀದಿ ಪಾಲು ಮಾಡಬಾರದು. ರಿಂಗ್ ರಸ್ತೆ, ಬೈಪಾಸ್ ರಸ್ತೆ ನೆಪದಲ್ಲಿ ಜಮೀನು ಕಸಿದುಕೊಂಡರೆ ಜೀವನ ನಡೆಸುವುದಾದರೂ ಹೇಗೆ? –ಮನೋಹರ ಕಿಣೇಕರ, ಮಾಜಿ ಶಾಸಕ
ಯೋಜನೆ ಹಿಂಪಡೆಯಲು ನಾವು ಹೊಲದಲ್ಲಿ ಕೆಲಸಕ್ಕಿದ್ದ ಬಾರುಕೋಲು ರಸ್ತೆಗೆ ತಂದಿದ್ದೇವೆ. ಆದೇಶ ಹಿಂಪಡೆಯದಿದ್ದರೆ ಬಾರುಕೋಲುಗಳು ಕಚೇರಿಗೆ ಒಳಗೆ ನುಗ್ಗುತ್ತವೆ. ಹೀಗಾಗಿ ಸರ್ಕಾರ ರೈತರೊಂದಿಗೆ ಎಚ್ಚರಿಕೆಯಿಂದ ವರ್ತಿಸಬೇಕು. –ಪ್ರಭು ಯತ್ನಟ್ಟಿ, ವಕೀಲರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.