ಸ್ಕಿಲ್ ಕನೆಕ್ಟ್ ಪೋರ್ಟಲ್‌ಗೆ ಚಾಲನೆ, ಉದ್ಯೋಗಸೃಷ್ಟಿಗೆ 5 ಒಡಂಬಡಿಕೆ: ಸಚಿವ ಅಶ್ವತ್ಥನಾರಾಯಣ
Team Udayavani, Dec 1, 2022, 4:43 PM IST
ಬೆಂಗಳೂರು: ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಬೆಸೆಯುವ ಸ್ಕಿಲ್ ಕನೆಕ್ಟ್ ಪೋರ್ಟಲ್ ಉದ್ಘಾಟನೆ, ಐದು ಸಂಸ್ಥೆಗಳೊಂದಿಗೆ ಉದ್ಯೋಗಸೃಷ್ಟಿಯ ಒಡಂಬಡಿಕೆ ಮತ್ತು ತಮ್ಮ ಇಲಾಖೆಗಳಲ್ಲಿ ಏನೆಲ್ಲ ಸುಧಾರಣೆಗಳನ್ನು ಮಾಡಲಾಗುತ್ತದೆ ಎಂಬುದರ ಸಂಕಲ್ಪ ಪತ್ರಗಳ ಬಿಡುಗಡೆಯೊಂದಿಗೆ ತಮ್ಮ ನೇತೃತ್ವದ ಎಲ್ಲ ಇಲಾಖೆಗಳಡಿಯಲ್ಲಿ ಡಿಸೆಂಬರ್ ಪೂರ್ತಿ ನಡೆಯುವ ‘ಸುಶಾಸನ ಮಾಸಾಚರಣೆ’ಗೆ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಗುರುವಾರ ಚಾಲನೆ ನೀಡಿದರು.
ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳ ವ್ಯಾಪ್ತಿಯಲ್ಲಿ ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಈ ಸುಶಾಸನ ಉಪಕ್ರಮವನ್ನು ವ್ಯಾಪಕ ಸ್ವರೂಪದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಆರಂಭಕ್ಕಾಗಿ ವಿಧಾನಸೌಧದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಸುಶಾಸನ ಎನ್ನುವುದು ಹೊಸ ರಾಜಕೀಯ ಸಂಸ್ಕೃತಿಯಾಗಿದೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ಇದು ಸಾರ್ವಜನಿಕ ಸೇವೆಗಳನ್ನು ಜನರ ಮನೆ ಬಾಗಿಲಿಗೇ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನವಾಗಿದೆ. ಇದರಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಒತ್ತು ಕೊಡಲಾಗಿದೆ” ಎಂದರು.
ಸುಶಾಸನ ಬರಬೇಕೆಂದರೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಹೀಗಾಗಿ ಎನ್‌ಇಪಿ ಅನುಷ್ಠಾನದ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರಲಾಗುತ್ತಿದೆ. ಇದರ ಜತೆಗೆ ಈಗ ಸುಶಾಸನವೂ ಸೇರಿಕೊಂಡಿದೆ. ಇದರ ಭಾಗವಾಗಿ ಡಿಗ್ರಿ ಕಾಲೇಜು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರಣಿ ನೇರ ಸಂವಾದಗಳನ್ನು ನಡೆಸಲಾಗುವುದು ಎಂದರು.
ಇದಲ್ಲದೆ ವಿ.ವಿ.ಗಳಲ್ಲಿ ಆನ್‌ಲೈನ್ ಡಿಜಿಟಲ್ ಕಲಿಕೆ ಮತ್ತು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಇದರಂತೆ, 2023ರ ಮಾರ್ಚ್ ವೇಳೆಗೆ ಪ್ರತಿ ವಿ.ವಿ.ಯಲ್ಲೂ ಕನಿಷ್ಠಪಕ್ಷ ಒಂದು ಡಿಗ್ರಿ ಕೋರ್ಸಾದರೂ ಆನ್‌ಲೈನ್ ರೂಪದಲ್ಲಿ ಆರಂಭವಾಗಲಿದೆ. ಹಾಗೆಯೇ, ಈ ತಿಂಗಳ ಕೊನೆಯ ವೇಳೆಗೆ ಪ್ರತಿ ವಿ.ವಿ.ಯೂ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಜತೆಗೆ 3 ತಿಂಗಳಲ್ಲಿ ಕನಿಷ್ಠ ಪಕ್ಷ 5 ಉದ್ಯಮ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಅವರು ವಿವರಿಸಿದರು.
ಕೌಶಲ್ಯ ಕಲಿಕೆಗೆ ಮತ್ತಷ್ಟು ಬಲ
ಆಧುನಿಕ ಜಗತ್ತಿನಲ್ಲಿ ಯುವಜನರಲ್ಲಿ ಕೌಶಲ್ಯ ಕಲಿಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಸ್ಕಿಲ್ ಕನೆಕ್ಟ್ ಪೋರ್ಟಲ್‌ಗೆ ಹೊಸ ರೂಪ ಕೊಡಲಾಗಿದೆ. ಇದರಿಂದ ಉದ್ಯೋಗಾಕಾಂಕ್ಷಿ ಮತ್ತು ಉದ್ಯೋಗದಾತರ ನಡುವೆ ಸಕ್ರಿಯ ಸಂಬಂಧ ಉಂಟಾಗಲಿದೆ. ಇನ್ನೊಂದೆಡೆಯಲ್ಲಿ, ಐಟಿಐ ಅಂಕಪಟ್ಟಿಗಳ ಡಿಜಿಟಲೀಕರಣ ಮತ್ತು ಅವುಗಳನ್ನು ರಾಷ್ಟ್ರೀಯ ಶೈಕ್ಷಣಿಕ ಕೋಠಿಗೆ ಅಪ್‌ಲೋಡ್ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಒಟ್ಟು 60 ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ಕಂಪನಿಯ ವತಿಯಿಂದ ಉತ್ಕೃಷ್ಟ ತರಬೇತಿ ಕೊಡಿಸಲಾಗುವುದು ಎಂದು ಅಶ್ವತ್ಥನಾರಾಯಣ ವಿವರಿಸಿದರು.
ಇದರಡಿಯಲ್ಲಿ ಇಂಗ್ಲಿಷ್ ಕಲಿಕೆ ಲ್ಯಾಬ್‌ಗಳ ಸ್ಥಾಪನೆ, ಜಪಾನಿನಲ್ಲಿ ಉದ್ಯೋಗಾವಕಾಶ ದೊರಕಿಸಿ ಕೊಡಲು ಜಪಾನಿ ಭಾಷೆಯ ಕಲಿಕೆಗೆ ವ್ಯವಸ್ಥೆ, ಲೋಕೋಸ್ ತಂತ್ರಾಂಶದ ಮೂಲಕ ಸ್ವಸಹಾಯ ಸಂಘಗಳ ಮಾಹಿತಿ ಮತ್ತು ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರಲಾಗುವುದು. ಜತೆಗೆ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಮಿಗಿಲಾಗಿ 13,500 ಮಹಿಳಾ ಉದ್ಯಮಿಗಳಿಗೆ ಸಿ-ಡಾಕ್ ಮೂಲಕ ಪ್ರೇರಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಒಟ್ಟಿನಲ್ಲಿ 10 ಸಾವಿರ ಜನರಿಗೆ ಏಕಕಾಲದಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಗುವುದು. ಎಂದು ಅವರು ನುಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಬಾಗಲಕೋಟೆ, ಕೊಪ್ಪಳ, ದಾವಣಗೆರೆಗಳಲ್ಲಿ ನಿರ್ಮಿಸುತ್ತಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಗದಗಿನ ಮಿನಿ ತಾರಾಲಯವನ್ನು ಸದ್ಯದಲ್ಲೇ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಕಿಯೋನಿಕ್ಸ್ ಸಂಸ್ಥೆಯಲ್ಲಿ 1976ರಿಂದಲೂ ಇರುವ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೌಶಲ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಸ್ಕಿಲ್ ಕನೆಕ್ಟ್ ವೆಬ್ ಸೈಟ್ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರಭಾಕರ್ ಅವರು ಒಟ್ಟಾರೆ ಸುಶಾನ ಮಾಸದಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಐಟಿ ಬಿಟಿ ನಿರ್ದೇಶಕಿ ಮೀನಾ ನಾಗರಾಜ, ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತೆ ಜ್ಯೋತಿ, ಎನ್ ಆರ್ ಎಲ್ ಎಂ ವ್ಯವಸ್ಥಾಪಕ ನಿರ್ದೇಶಕಿ ರಾಗಪ್ರಿಯಾ, ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿ ವ್ಯವಸ್ಥಾಪ ನಿರ್ದೇಶಕ ಬಸವರಾಜ, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್.ಅಶ್ವಿನ್ ಗೌಡ ಮುಂತಾದವರು ಉಪಸ್ಥಿತರಿದ್ದರು.
5 ಸಂಸ್ಥೆಗಳೊಂದಿಗೆ ಒಡಂಬಡಿಕೆಗೆ ಅಂಕಿತ
ಸುಶಾಸನ ಮಾಸಾಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಟ್ಯಾಲೆನ್ಷೀಯಾ ಗ್ಲೋಬಲ್, ಇನ್ನೋವ್‌ಸೋರ್ಸ್, ಫ್ಯೂಯೆಲ್, ಎಐಎಸ್ಇಸಿಟಿ ಮತ್ತು ಇನ್ಫಿಕ್ವಿಟಿ ಆಟೋ ಟೆಕ್ನಾಲಜೀಸ್ ಕಂಪನಿಗಳ ಮುಖ್ಯಸ್ಥರೊಂದಿಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಅವರು ಹಲವು ಒಪ್ಪಂದಗಳಿಗೆ ಸಹಿ ಹಾಕಿದರು.
ಇದರ ಬಗ್ಗೆ ವಿವರಿಸಿದ ಆಯುಕ್ತ ಪ್ರದೀಪ ಅವರು, ಟ್ಯಾಲೆನ್ಷಿಯಾ ಕಂಪನಿಯು ಕಳೆದ ಮೂರು ವರ್ಷಗಳಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ 1,500 ಜನರಿಗೆ ಉದ್ಯೋಗ ನೀಡಿ, ಇಷ್ಟೇ ಸಂಖ್ಯೆಯ ಜನರಿಗೆ ಉದ್ಯೋಗ ತರಬೇತಿ ನೀಡಿದೆ. ಮಿಕ್ಕಂತೆ ಇನ್ನೋವ್‌ಸೋರ್‍ಸ್ ಕಂಪನಿಯು ರಾಜ್ಯದ 1.20 ಲಕ್ಷ ಅರ್ಹರಿಗೆ, ಫ್ಯೂಯೆಲ್ ಕಂಪನಿಯು 19 ಸಾವಿರ ತಂತ್ರಜ್ಞರಿಗೆ ಮತ್ತು ಮಿಕ್ಕ ಕ್ಷೇತ್ರಗಳ 6 ಸಾವಿರ ಜನರಿಗೆ (ಒಟ್ಟು 25 ಸಾವಿರ ಮಂದಿಗೆ), ಎಐಎಸ್‌ಇಸಿಟಿ ಕಂಪನಿಯು ರಾಜ್ಯದ 6 ಸಾವಿರ ಅಭ್ಯರ್ಥಿಗಳಿಗೆ ಮತ್ತು ಇನ್ಫಿಕ್ವಿಟಿ ಕಂಪನಿಯು 250 ಜನರಿಗೆ ಉದ್ಯೋಗಾವಕಾಶ ಮತ್ತು ಒಂದು ಸಾವಿರ ಯುವಜನರಿಗೆ ಔದ್ಯೋಗಿಕ ತರಬೇತಿ ನೀಡಿದೆ ಎಂದು ಅಂಕಿಅಂಶಗಳನ್ನು ಒದಗಿಸಿದರು.
ಕೆಇಎಗೆ ಸುಶಾಸನದ ಸ್ಪರ್ಶ
ಸುಶಾಸನ ಮಾಸಾಚರಣೆ ಅಂಗವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೊಸ ರೂಪ ಕೊಡಲಾಗಿದೆ. ಇಲ್ಲಿ ನೇಮಕಾತಿ ವಿಭಾಗ ಮತ್ತು ಸೀಟು ಹಂಚಿಕೆ ವಿಭಾಗಗಳನ್ನು ಸೃಷ್ಟಿಸಿ, 20 ಹೊಸ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಇದಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಇದಲ್ಲದೆ, ನೀಟ್ ಪರೀಕ್ಷೆ ಬಂದ ನಂತರ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳ ದಾಖಲಾತಿಗಳ ಪರಿಶೀಲನೆಯನ್ನು ಮತ್ತಷ್ಟು ಸರಳಗೊಳಿಸಲಾಗುವುದು. ಜತೆಗೆ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆಯನ್ನು ಇನ್ನಷ್ಟು ವಿದ್ಯಾರ್ಥಿಸ್ನೇಹಿಯನ್ನಾಗಿ ಮಾಡಲಾಗುವುದು ಎಂದು ಅವರು ಪ್ರತಿಪಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.