ಸ್ಮಾರ್ಟ್ ನಗರಕ್ಕೆ ಕೇಬಲ್ ಕಾಟ! ಕಂಬಗಳಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿವೆ ವಯರ್‌ಗಳು
Team Udayavani, Dec 2, 2022, 5:40 AM IST
![ಸ್ಮಾರ್ಟ್ ನಗರಕ್ಕೆ ಕೇಬಲ್ ಕಾಟ! ಕಂಬಗಳಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿವೆ ವಯರ್‌ಗಳು](https://www.udayavani.com/wp-content/uploads/2022/12/cable-620x421.jpg)
![ಸ್ಮಾರ್ಟ್ ನಗರಕ್ಕೆ ಕೇಬಲ್ ಕಾಟ! ಕಂಬಗಳಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿವೆ ವಯರ್‌ಗಳು](https://www.udayavani.com/wp-content/uploads/2022/12/cable-620x421.jpg)
ಮಹಾನಗರ: ನಗರದ ರಸ್ತೆ ಬದಿಯ ಹಲವು ಕಡೆಯ ಕಂಬಗಳಲ್ಲಿ ಸುತ್ತಿರುವ ಕೇಬಲ್‌ಗಳು ನಗರದ ಅಂದಗೆಡಿಸುವುದು ಮಾತ್ರವಲ್ಲದೆ; ಪಾದಚಾರಿಗಳ ಪಾಲಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಬಹುಕಡೆಯ ಬಗೆ ಬಗೆಯ ಕಂಬಗಳ ಎಲ್ಲೆಂದರಲ್ಲಿ ಕೇಬಲ್‌ಗಳು ಸುತ್ತುಹಾಕಿಕೊಂಡಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದ್ದರೂ ಆಡಳಿತ ನಡೆಸುವವರು ಮಾತ್ರ ಇದರ ಬಗ್ಗೆ ಮೌನವಹಿಸಿದ್ದಾರೆ. ಹೀಗಾಗಿ ನಗರದಲ್ಲಿರುವ ಬಹುತೇಕ ಕಂಬಗಳಿಗೆ ವಯರ್‌ಗಳಿಗೆ ಆಧಾರ ಎಂಬಂತಾಗಿದೆ.
ಕಂಬಗಳು ಕಾಣದಷ್ಟು ಕೇಬಲ್!
ಸ್ಟೇಟ್‌ಬ್ಯಾಂಕ್ ಪರಿಧಿಯಲ್ಲಿ ವಿದ್ಯುತ್ ಲೈನ್ ಭೂಗತವಾದ ಹಿನ್ನೆಲೆಯಲ್ಲಿ ಕೇಬಲ್ ಸಮಸ್ಯೆ ಇಲ್ಲ. ಆದರೆ ಬಾವುಟಗುಡ್ಡ, ಜ್ಯೋತಿ, ಬಂಟ್ಸ್ ಹಾಸ್ಟೆಲ್, ಕದ್ರಿ, ಬಿಜೈ ಸಹಿತ ಹಲವು ಕಡೆ ಕಂಬಗಳು ಕಾಣದಷ್ಟು ಕೇಬಲ್‌ಗಳು ಸುತ್ತಿಕೊಂಡಿವೆ.
ನಿಯಮ ಹೀಗೆ ಇದೆ
ನಗರದಲ್ಲಿ ವಿದ್ಯುತ್ ಕಂಬಗಳಲ್ಲಿ ಯಾವುದೇ ಕೇಬಲ್ ಅಳವಡಿಸಲು ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ ಅಗತ್ಯ. ಬಳಿಕ ಆ ಪತ್ರವನ್ನು ಮೆಸ್ಕಾಂಗೆ ಸಲ್ಲಿಕೆ ಮಾಡಬೇಕು. ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. ಅನಂತರವಷ್ಟೇ ಕೇಬಲ್ ಅಳವಡಿಸಲು ಅನುಮತಿ. ಈ ನಿಯಮ ಕಡತದಲ್ಲೇ ಬಾಕಿ ಆಗಿದೆಯೇ ಎಂಬ ಬಗ್ಗೆ ಅನುಮಾನ ಕಾಡುತ್ತಿದೆ.
ಲೈನ್‌ಮನ್‌ಗೆ ಕಂಬವೇರಲು ಆಗಲ್ಲ!
ಬಹುತೇಕ ವಿದ್ಯುತ್ ಕಂಬಗಳ ಮೇಲೆ ಸುರುಳಿ ಸುತ್ತಿದ ಕೇಬಲ್ ಬಂಡಲ್‌ಗಳನ್ನು ಅನಗತ್ಯವಾಗಿ ನೇತು ಹಾಕಲಾಗಿದೆ. ಈ ಕಂಬಗಳಲ್ಲಿ ರಿಪೇರಿ ಇದ್ದರೆ ಲೈನ್‌ಮನ್‌ಗೆ ಕಂಬವೇರುವುದು ತ್ರಾಸದಾಯಕ. ಅವಘಡ ಸಾಧ್ಯತೆಯೂ ಹೆಚ್ಚು. ತುರ್ತು ಸಂದರ್ಭಗಳಲ್ಲಿ ಕಂಬ ಮೇಲೇರುವಂತೆಯೂ ಇಲ್ಲ; ತತ್‌ಕ್ಷಣ ಕೆಳಗೆ ಬರಲೂ ಸಾಧ್ಯವಿಲ್ಲ.
ಫುಟ್‌ಪಾತ್ ವ್ಯಾಪಿಸಿದ ಕೇಬಲ್‌ಗಳು
ನಗರ ಬಹುತೇಕ ಕಡೆಯ ಫುಟ್‌ಪಾತ್‌ಗಳು ಕೇಬಲ್‌ನಿಂದ ಆವರಿಸಿದೆ. ಕಂಬದಲ್ಲಿ ಸುತ್ತಿರುವ ಕೇಬಲ್ ಈಗ ಫುಟ್‌ಪಾತ್‌ನಲ್ಲೂ ಹರಡಿಕೊಂಡಿದೆ. ಪಾದಚಾರಿಗಳು ಕೊಂಚ ಎಚ್ಚರ ತಪ್ಪಿದರೂ ಅಪಾಯ ಎದುರಾಗುವ ಕೇಬಲ್‌ಗಳು ನಗರದ ಕೆಲವು ಕಡೆ ಇದೆ.