ಸಿರಿಧಾನ್ಯಕ್ಕೆ ಈಗ ಅಂತಾರಾಷ್ಟ್ರೀಯ ಮಹತ್ವ
Team Udayavani, Dec 2, 2022, 10:10 AM IST
ಜಗತ್ತು ಈಗ ನಮ್ಮ ಮಾತು ಕೇಳುತ್ತಿದೆ. ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭ್ಯಾಸ ಮಾಡಬೇಕು ಮತ್ತು ಅದಕ್ಕೋಸ್ಕರ ಪ್ರತ್ಯೇಕ ದಿನ ಎಂದು ನಿಗದಿ ಮಾಡಬೇಕು ಎಂದು ಪ್ರಧಾನಿ ಮೋದಿಯವರು ಅಭಿಪ್ರಾಯಪಟ್ಟದ್ದೇ ತಡ- ವಿಶ್ವಸಂಸ್ಥೆಯಿಂದ ಅದನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಆಚರಿಸಲಾಗುತ್ತಿದೆ. ಇದೀಗ ಹಸಿವು ಮತ್ತು ಅಪೌಷ್ಟಿಕತೆಯ ನಿವಾರಣೆ ಮಾಡುವಲ್ಲಿ ಶಕ್ತಿಯುತ ಪಾತ್ರ ವಹಿಸುವ ಸಿರಿಧಾನ್ಯಗಳನ್ನು ಜಗತ್ತಿನಾದ್ಯಂತ ಪರಿಚಯಿಸಲು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು 2023ನ್ನು ಆಚರಿಸಬೇಕು ಎಂಬ ಸಲಹೆಗೂ ಮನ್ನಣೆ ಸಿಕ್ಕಿದೆ. ನಮ್ಮ ದೇಶದ ಯಾವ ರಾಜ್ಯದಲ್ಲಿ ಯಾವ ರೀತಿಯ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ ಎಂಬ ಬಗ್ಗೆ ಮುನ್ನೋಟ ಇಲ್ಲಿದೆ.
ಇತಿಹಾಸವೇನು?:
ಸಿಂಧೂ ನದಿಯ ನಾಗರಿಕತೆಯ ಅವಧಿಯಲ್ಲಿ ಅಂದರೆ ಕ್ರಿಸ್ತಪೂರ್ವ 3 ಸಾವಿರದ ಸಂದರ್ಭದಲ್ಲಿ ಸಿರಿಧಾನ್ಯಗಳನ್ನು ಬಳಕೆ ಮಾಡುತ್ತಿದ್ದರು ಎಂಬ ಬಗ್ಗೆ ದಾಖಲೆಗಳು ಇವೆ. ಅದನ್ನು ಮೊದಲ ಬಾರಿಗೆ ಬೆಳೆದದ್ದು ನಮ್ಮ ದೇಶದಲ್ಲಿಯೇ. ಪಶ್ಚಿಮ ಆಫ್ರಿಕಾ, ಚೀನ ಮತ್ತು ಜಪಾನ್‌ಗಳಲ್ಲಿ ಅದನ್ನು ಮೊದಲು ಬೆಳೆಯ ಲಾರಂಭಿ ಸಿದ್ದರು. ಈಗ ಅವುಗಳನ್ನು 130 ದೇಶಗಳಲ್ಲಿ ಬೆಳೆಯಲಾಗುತ್ತದೆ. ಏಷ್ಯಾ ಮತ್ತು ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಅದು ಜನರ ಸಾಂಪ್ರದಾಯಿಕ ಆಹಾರವೇ ಆಗಿದೆ. ಅಕ್ಕಿ, ಗೋಧಿ ಬೆಳೆಗೆ ಹೋಲಿಕೆ ಮಾಡಿದರೆ ಕಡಿಮೆ ಪ್ರಮಾಣದಲ್ಲಿ ನೀರು ಸಾಕಾಗುತ್ತದೆ.
ಜೋಳವೇ ದೊಡ್ಡ ಬೆಳೆ:
ಜಗತ್ತಿನ ಲೆಕ್ಕಾಚಾರ ತೆಗೆದುಕೊಂಡರೆ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಅಮೆರಿಕ, ಚೀನ, ಭಾರತ, ಆಸ್ಟ್ರೇಲಿಯಾ, ಆರ್ಜೆಂಟೀನಾ, ನೈಜೀರಿಯಾ ಮತ್ತು ಸುಡಾನ್‌ಗಳಲ್ಲಿ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಬಾರ್ಲಿ ಎರಡನೇ ಅತೀ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಭಾರತ ಮತ್ತು ಆಫ್ರಿಕಾ ಖಂಡದ ಕೆಲವು ರಾಷ್ಟ್ರಗಳಲ್ಲಿ ಅದನ್ನು ಬೆಳೆಯಲಾಗುತ್ತದೆ.
ದೇಶದಲ್ಲಿ ಸಿರಿಧಾನ್ಯಗಳ ಮಹತ್ವವೇನು?:
ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ಸಿರಿ ಧಾನ್ಯಗಳು ಮುಂಗಾರಿನ ಬೆಳೆಗಳು. 2018-19ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವಾಲಯದ ದಾಖಲೆಗಳಲ್ಲಿ ಉಲ್ಲೇಖಗೊಂಡ ಮಾಹಿತಿಯಂತೆ ಬಾರ್ಲಿ (3.67%), ಜೋಳ (2.13%), ರಾಗಿ (0.48%) ಈ ಮೂರೂ ಬೆಳೆಗಳು ಸೇರಿಕೊಂಡು ಶೇ.7ರಷ್ಟು ಪ್ರಮಾಣದಲ್ಲಿ ದೇಶದಲ್ಲಿ ಅವುಗಳನ್ನು ಬೆಳೆಯಲಾಗುತ್ತದೆ.
ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳು:
ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶ ಇದೆ. ಹೀಗಾ ಗಿಯೇ ಕೇಂದ್ರ ಕೃಷಿ ಸಚಿವಾಲಯವು 2018 ಎ.10ರಂದು ಸಿರಿ ಧಾನ್ಯವನ್ನು ನ್ಯೂಟ್ರಿ ಸಿರಿಯಲ್ಸ್ ಎಂದು ಕರೆಯಿತು. ಜೋಳ, ರಾಗಿ, ಬಾರ್ಲಿಯನ್ನು ಕಿರು ಧಾನ್ಯ (minor millets) ಎಂದು ಹೆಸರಿಸಿತು. ಹರಕ, ಚಿಯಾ, ಸಾಮೆಗಳೆಲ್ಲ ನ್ಯೂಟ್ರಿ ಸಿರಿಯಲ್ಸ್ ಆಗಿವೆ. ಹೈದರಾಬಾದ್ ನಲ್ಲಿರುವ ಭಾರತೀಯ ಕೃಷಿ ಸಂಶೋಧನ ಪರಿಷತ್‌ನ- ಭಾರತೀಯ ಸಿರಿಧಾನ್ಯಗಳ ಸಂಶೋಧನ ಸಂಸ್ಥೆ (Indian Institute of Millets Research) ಪ್ರಕಟಿಸಿರುವ ಸಿರಿಧಾನ್ಯಗಳ ಕಥೆ (The Story of Millets) ಯಲ್ಲಿ ಉಲ್ಲೇಖೀಸಿರುವಂತೆ ಶೇ.7-12 ಪ್ರೊಟೀನ್, ಶೇ.2ರಿಂದ ಶೇ.5 ಕೊಬ್ಬು, ಶೇ.65ರಿಂದ ಶೇ.75 ಕಾರ್ಬೋ ಹೈಡ್ರೇಟ್ ಗಳು, ಶೇ.15ರಿಂದ ಶೇ.20 ನಾರಿನ ಅಂಶಗಳು ಇವೆ.
ಪಿಡಿಎಸ್‌ನಲ್ಲಿ ಸಿರಿಧಾನ್ಯಗಳು:
2013ರಲ್ಲಿ ಜಾರಿಯಾಗಿರುವ ಆಹಾರ ಭದ್ರತಾ ಕಾಯ್ದೆಯ ಅನ್ವಯ ಅರ್ಹ ಕುಟುಂಬಗಳಿಗೆ ಪ್ರತೀ ಕೆಜಿ ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳನ್ನು ನೀಡಲಾಗುತ್ತದೆ. ಕಾಯ್ದೆಯಲ್ಲಿ ಸಿರಿಧಾನ್ಯಗಳು ಎಂದು ಉಲ್ಲೇಖ ಮಾಡದೇ ಇದ್ದರೂ ಕಾಯ್ದೆಯ ಸೆಕ್ಷನ್ 2(5)ರಲ್ಲಿ ಉಲ್ಲೇಖೀಸಿರುವಂತೆ ಆಹಾರ ಧಾನ್ಯಗಳು ಎಂಬ ವರ್ಗೀ ಕರಣ ವ್ಯಾಪ್ತಿಯಲ್ಲಿ ಬರುತ್ತದೆ.
ಸಿರಿ ಧಾನ್ಯ ಬೆಳೆಯುವ ಮುಖ್ಯ ರಾಜ್ಯಗಳು:
ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಮಧ್ಯ ಪ್ರದೇಶಗಳಲ್ಲಿ ಜೋಳ ವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. 2020-21ನೇ ಸಾಲಿನಲ್ಲಿ ಜೋಳ ಬೆಳೆಯುವ ಪ್ರದೇಶ 4.24 ಮಿಲಿಯ ಹೆಕ್ಟೇರ್ ಪ್ರದೇಶ ಇತ್ತು. 4.78 ಮಿಲಿಯ ಟನ್ ಉತ್ಪಾದನೆಯಾಗಿತ್ತು. ಮಹಾರಾಷ್ಟ್ರದಲ್ಲಿ 1.94 ಮಿಲಿಯ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿತ್ತು. 1.76 ಮಿಲಿಯ ಟನ್ ಉತ್ಪಾದನೆಯಾಗಿತ್ತು. ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಗುಜರಾತ್, ಮಧ್ಯಪ್ರದೇಶ. ಮಹಾರಾಷ್ಟ್ರ ಮತ್ತು ಕರ್ನಾ ಟಕದಲ್ಲಿ ಬಾರ್ಲಿಯನ್ನು ಬೆಳೆಯುತ್ತಾರೆ. 2020-2021ನೇ ಸಾಲಿನಲ್ಲಿ 7.75 ಮಿಲಿಯ ಹೆಕ್ಟೇರ್ ಪ್ರದೇಶದಲ್ಲಿ ಅದನ್ನು ಬೆಳೆಯಲಾಗಿತ್ತು. ಈ ಪೈಕಿ ರಾಜಸ್ಥಾನದಲ್ಲಿ (4.32 ಮಿಲಿಯನ್ ಹೆಕ್ಟೇರ್ ಪ್ರದೇಶ) ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಾಗಿತ್ತು. ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 4.53 ಮಿಲಿಯನ್ ಟನ್ ಬಾರ್ಲಿಯನ್ನು ಬೆಳೆಯಲಾಗಿದೆ. ಆ ವರ್ಷ ಒಟ್ಟು 10.86 ಮಿಲಿಯನ್ ಟನ್ ಬೆಳೆಯಲಾಗಿತ್ತು.
ಸಿರಿಧಾನ್ಯಗಳ ಬಳಕೆ ಹೇಗೆ?:
ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಎಸ್‌ಒ) ಹತ್ತು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ಪ್ರಕಾರ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಶೇ.10ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬಳಕೆ ಮಾಡುತ್ತಾರೆ. 2011-12ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತೀ ತಿಂಗಳಿಗೆ ವ್ಯಕ್ತಿ 11.23 ಕೆಜಿ ಬೇಳೆಕಾಳುಗಳು ಬಳಕೆಯಾಗಿದ್ದರೆ, 6.12 ಕೆಜಿ ಅಕ್ಕಿ, 4.43 ಕೆಜಿ ಗೋಧಿಯನ್ನು ಬಳಕೆ ಮಾಡಿದ್ದ. ಸಿರಿಧಾನ್ಯವನ್ನು ಅತ್ಯಲ್ಪ ಪ್ರಮಾಣದಲ್ಲಿ ಬಳಕೆ ಮಾಡಿದ್ದ. 201 ಗ್ರಾಂ ಜೋಳ, 246 ಗ್ರಾಂ ಬಾರ್ಲಿ, 75 ಗ್ರಾಂ ರಾಗಿ, 4 ಗ್ರಾಂ ಸಣ್ಣ ಸಿರಿಧಾನ್ಯ ಬಳಕೆಯಾಗಿತ್ತು. ಶೇ.95ಕ್ಕಿಂತ ಹೆಚ್ಚು ಮನೆಗಳಲ್ಲಿ ಅಕ್ಕಿ, ಶೇ.59ಕ್ಕಿಂತ ಹೆಚ್ಚು ಮನೆಗಳಲ್ಲಿ ಗೋಧಿ ಉಪಯೋಗವಾಗಿತ್ತು.
ನಗರ ಪ್ರದೇಶಗಳಲ್ಲಿ ಪ್ರತೀ ತಿಂಗಳ ಲೆಕ್ಕಾಚಾರ ನೋಡಿದರೆ ಬೇಳೆಕಾಳುಗಳ ಬಳಕೆ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಇರುವುದಕ್ಕಿಂತ ಕಡಿಮೆ ಅಂದರೆ 9.322 ಕೆಜಿ. ಜೋಳ, ಬಾರ್ಲಿ, ರಾಗಿ ಮತ್ತು ಇತರ ಸಿರಿಧಾನ್ಯಗಳ ಬಳಕೆ ಪ್ರಮಾಣ ಕ್ರಮವಾಗಿ 139 ಗ್ರಾಂ, 91 ಗ್ರಾಂ, 60 ಗ್ರಾಂ ಮತ್ತು 1 ಗ್ರಾಂ ಆಗಿದೆ.
ಪ್ರಧಾನಿ ಮೋದಿ ಪ್ರಸ್ತಾವಿಸಿದ್ದರು:
ಇತ್ತೀಚೆಗೆ ಇಂಡೋನೇಶ್ಯಾದಲ್ಲಿ ನಡೆದ ಜಿ20 ರಾಷ್ಟ್ರಗಳ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿಯವರು ಸಿರಿ ಧಾನ್ಯಗಳ ಪ್ರಸ್ತಾವ ಮಾಡಿದ್ದರು. ಸಿರಿ ಧಾನ್ಯಗಳ ಮೂಲಕ ಜಗತ್ತಿಗೆ ಪಿಡುಗು ಆಗಿರುವ ಹಸಿವು ಮತ್ತು ಅಪೌಷ್ಟಿಕತೆ ಯನ್ನು ನಿವಾರಿಸಲು ಸಾಧ್ಯವಿದೆ ಎಂದು ಹೇಳಿದ್ದರು. ಹೀಗಾಗಿ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 2023ನ್ನು ಅಂತಾ ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಣೆ ಮಾಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದಿದ್ದರು.
ಯಾವುದೆಲ್ಲ ಸಿರಿ ಧಾನ್ಯಗಳು? :
ಜೋಳ, ಬಾರ್ಲಿ, ನವಣೆ, ಸಾಮೆ, ಬಿಳಿ ಜೋಳ, ಸಜ್ಜೆ, ರಾಗಿ, ಬರಗು, ಹರಕ, ಊದಲು ಕೊರಲೆ.
ಕನಿಷ್ಠ ಬೆಂಬಲ ಬೆಲೆ :
ಜೋಳ, ಬಾರ್ಲಿ ಮತ್ತು ರಾಗಿಗೆ ಕೇಂದ್ರ ಸರಕಾರ ಕನಿಷ್ಠ ಬೆಂಬಲ ಬೆಲೆ ನೀಡುತ್ತದೆ. 2022-23ನೇ ಸಾಲಿಗೆ ಸಂಬಂಧಿಸಿದಂತೆ ಪ್ರತೀ ಕ್ವಿಂಟಾಲ್ ಹೈಬ್ರಿಡ್ ಜೋಳಕ್ಕೆ 2,970 ರೂ., ಜೋಳ (ಮಾಲ್ದಂಡಿ) 2,990 ರೂ., ಬಾರ್ಲಿಗೆ 2,350 ರೂ, ರಾಗಿಗೆ 3,578 ರೂ. ನಿಗದಿಪಡಿಸಲಾಗಿತ್ತು.
ಕರ್ನಾಟಕ ಸರಕಾರದ ಕ್ರಮವೇನು? :
ಕರ್ನಾಟಕ ಸರಕಾರ ಕೂಡ ಸಿರಿ ಧಾನ್ಯವನ್ನು ಹೆಚ್ಚಿನ ರೀತಿಯಲ್ಲಿ ಬಳಕೆ ಮಾಡುವ ಬಗ್ಗೆ ಒತ್ತು ನೀಡಲು ತೀರ್ಮಾನಿಸಿದೆ. ಅದಕ್ಕಾಗಿ 2023ನ್ನು ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷ ಎಂದು ಆಚರಿಸಲು ತೀರ್ಮಾನಿಸಿದೆ. ಅದಕ್ಕೆ ಕಾರಣವೂ ಇಲ್ಲದೇ ಇಲ್ಲ. ಇಡೀ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ನಮ್ಮಲ್ಲೇ ಬೆಳೆಯಲಾಗುತ್ತದೆ. ಯುವಕರಲ್ಲಿ, ಮಕ್ಕಳಲ್ಲಿ ಅದರ ಬಳಕೆಯನ್ನು ಹೆಚ್ಚು ಮಾಡುವಂಥ ಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ರೈತರಿಗೂ ಹೆಚ್ಚಿನ ರೀತಿಯಲ್ಲಿ ಆದಾಯ ಸಿಗುವಂತಾಗಲು ಕ್ರಮಗಳನ್ನು ರೂಪಿಸಿ ಜಾರಿಗೊಳಿಸಲು ಮುಂದಾಗಿದೆ. ಸದ್ಯ ರಾಗಿ, ಜೋಳವನ್ನು ಸಾರ್ವಜನಿಕ ವಿತರಣ ವ್ಯವಸ್ಥೆ ಅಡಿ ನೀಡಲಾಗುತ್ತಿದೆ.
-ಸದಾಶಿವ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.