ಶ್ರೀಗಳಿಂದ ಪರ್ಯಾಯ ಅವಧಿಯ ಪಂಚ ಯೋಜನೆ ಘೋಷಣೆ
Team Udayavani, Dec 3, 2022, 10:22 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ 2024ರ ಜ. 18ರಂದು ನಡೆಯುವ ಪುತ್ತಿಗೆ ಮಠದ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವ ಮೊದಲ ಮುಹೂರ್ತವಾದ ಬಾಳೆ ಮಹೂರ್ತವು ಶ್ರೀ ಪುತ್ತಿಗೆ ಮಠದ ಆವರಣದಲ್ಲಿ ಶುಕ್ರವಾರ ನೆರವೇರಿತು.
ಪ್ರಾತಃಕಾಲ ದೇವತಾ ಪ್ರಾರ್ಥನೆ ಯೊಂದಿಗೆ ಪೂಜೆ ನಡೆಸಿದ ಅನಂತರ ಶ್ರೀ ಅನಂತೇಶ್ವರ ದೇಗುಲ, ಶ್ರೀ ಚಂದ್ರಮೌಳೀಶ್ವರ ದೇಗುಲ, ಶ್ರೀಕೃಷ್ಣಮಠಕ್ಕೆ ವಾದ್ಯ ಗೋಷ್ಠಿ, ಬಿರುದಾವಳಿಗಳೊಂದಿಗೆ ತೆರಳಿ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು. ರಥಬೀದಿಯಲ್ಲಿ ಬಾಳೆಗಿಡಗಳ ಮೆರವಣಿಗೆ ನಡೆದ ಅನಂತರ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಾಳೆಗಿಡ ಮತ್ತು ತುಳಸಿ ಗಿಡಗಳನ್ನು ನೆಟ್ಟು ಮುಹೂರ್ತ ನೆರವೇರಿಸಿದರು.
ಪ್ರಾರ್ಥನೆಯಿಂದ ಸುಭಿಕ್ಷೆ :
ಜಗತ್ತಿನ ಆಗು ಹೋಗುಗಳ ಹಿಂದಿರುವ ಒಂದು ವ್ಯವಸ್ಥೆಯೇ ದೇವರ ಪ್ರಾರ್ಥನೆ. ಅದನ್ನು ನಾವೆಲ್ಲರೂ ಮಾಡಬೇಕಾಗಿದೆ. ದೇವರನ್ನು ಯಾವ ರೀತಿಯಲ್ಲಿ ಪೂಜೆ ಮಾಡುತ್ತೇವೆಯೋ ಹಾಗೆಯೇ ದೇವರು ಅನುಗ್ರಹಿಸುತ್ತಾನೆ ಎಂದು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.
ಶಿಷ್ಯರೊಡಗೂಡಿ ಕೃಷ್ಣ:
ಪೂಜೆಶಿಷ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಜತೆಗೂಡಿ ಶ್ರೀಕೃಷ್ಣ ಪೂಜೆಯನ್ನು ನೆರವೇರಿಸಲು ಸಂಕಲ್ಪಿಸಿದ್ದೇವೆ. ಸಮಸ್ತರು ಸೇರಿ ಪರಮಾತ್ಮನನ್ನು ಉಪಾಸನೆ ಮಾಡಿದರೆ ಲೋಕಕಲ್ಯಾಣವಾಗಲಿದೆ ಎನ್ನುವ ಆಚಾರ್ಯರ ಆದೇಶದಂತೆ ಭಗವಂತನ ಕೃಪೆ ಯಾಚಿಸಲು ಎಲ್ಲರೂ ಪೂಜಾ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದು ಆಶೀರ್ವಚನ ನೀಡಿದರು.
ಬಾಳೆಎಲೆಯ ಶ್ರೇಷ್ಠತೆ:
ಬಾಳೆ ಮುಹೂರ್ತ ಅರ್ಥಪೂರ್ಣವಾದುದು. ಬಾಳೆಎಲೆ ಊಟಕ್ಕೆ ಪ್ರಧಾನವಾದ ನೆಲೆಯಲ್ಲಿ ಶ್ರೇಷ್ಠತೆಯನ್ನು ಪಡೆದಿದೆ. ತುಳಸಿ ಎಂದರೆ ತುಲನೆ ಇಲ್ಲದ ಸಸಿ ಎಂದರ್ಥ. ಆದುದರಿಂದ ತುಳಸಿ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಆಚಾರ್ಯ ಮಧ್ವರು, ವಾದಿರಾಜರು ತುಳಸಿ, ಬಾಳೆ ಮುಹೂರ್ತದೊಂದಿಗೆ ಪ್ರಕೃತಿ ಪೂಜೆಗೆ ಮತ್ತೆ ಒತ್ತು ಕೊಟ್ಟಿದ್ದರು. ಈ ನೆಲೆಯಲ್ಲಿ ಬಾಳೆ ಮುಹೂರ್ತದೊಂದಿಗೆ ತುಳಸಿ ಗಿಡವನ್ನು ನೆಡಲಾಯಿತು ಎಂದರು.
ಪಂಚ ಯೋಜನೆಗಳು:
ಪರ್ಯಾಯ ಅವಧಿಯಲ್ಲಿ ಪಂಚ ಪ್ರಧಾನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೋಟಿ ಗೀತಾ ಲೇಖನ ಯಜ್ಞ (ಒಂದು ಕೋಟಿ ಜನರಿಂದ ಭಗವದ್ಗೀತೆಯನ್ನು ಬರೆಸಿ ಕೃಷ್ಣನಿಗೆ ಸಮರ್ಪಿಸುವುದು), ಗೀತೆಗೆ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ಸಮ್ಮೇಳನ, ಯಾತ್ರಿಕರ ಅನುಕೂಲಕ್ಕೆ ಕ್ಷೇತ್ರವಾಸ ನಿರ್ಮಾಣ, ವಸತಿ ಸಮುಚ್ಚಯ ನಿರ್ಮಾಣ, ಕಲ್ಸಂಕದಲ್ಲಿ ಮಧ್ವಾಚಾರ್ಯರ ಪ್ರತಿಮೆಯ ಜತೆಗೆ ಕೃಷ್ಣನ ಪ್ರತಿಮೆ ಹಾಗೂ ಸ್ವಾಗತ ಗೋಪುರ ನಿರ್ಮಾಣ, ಗೀತಾ ಯಜ್ಞದ ಪ್ರಯುಕ್ತ ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೆ, ತಮ್ಮ ಸನ್ಯಾಸ ಜೀವನಕ್ಕೆ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಗುಲದ ಒಳಗೂ ಹೊರಗೂ ಎಳೆಯಲು ಅನುಕೂಲವಾಗುವಂತೆ ಸ್ವರ್ಣ ರಥ ನಿರ್ಮಾಣ ನಿರ್ಮಿಸಲಾಗು ವುದು ಶ್ರೀಪಾದರು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಹಿರಿಯ ವಿದ್ವಾಂಸ ಹರಿದಾಸ ಉಪಾಧ್ಯ, ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿಕೃಷ್ಣ ಪುನರೂರು, ಉದ್ಯಮಿಗಳಾದ ಸುರೇಶ್ ಪಿ. ಶೆಟ್ಟಿ ಗುರ್ಮೆ, ಬೆಳಪು ದೇವಿಪ್ರಸಾದ್ ಶೆಟ್ಟಿ, ಕಿಶೋರ್ ರಾವ್, ಪ್ರದೀಪ್ ಕಲ್ಕೂರ, ಎಂ.ಬಿ. ಪುರಾಣಿಕ್, ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು, ಯಶ್‌ಪಾಲ್ ಎ. ಸುವರ್ಣ, ಪ್ರಪ್ಪುಲ್ಲ ಶೆಟ್ಟಿ ಎಲ್ಲೂರುಗುತ್ತು, ಹರೀಶ್ ಶೆಟ್ಟಿ ಗುರ್ಮೆ, ದಿವಾಕರ ಶೆಟ್ಟಿ ಕೊಡವೂರು, ಶ್ರೀಕರ ಶೆಟ್ಟಿ ಕಲ್ಯ, ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಪ್ರಮೋದ್ ಕುಮಾರ್, ಮಂಜುನಾಥ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಅಮೆರಿಕ, ಆಸ್ಟ್ರೇಲಿಯಾದ ಶ್ರೀಪಾದರ ಅಭಿಮಾನಿಗಳು ಉಪಸ್ಥಿತರಿದ್ದರು.
ಪ್ರಸಾದ ರೂಪವಾಗಿ ಭಕ್ತರಿಗೆ ಮಂತ್ರಾಕ್ಷತೆಯೊಂದಿಗೆ ಬಾಳೆಗಿಡವನ್ನು, ಗೀತಾ ಲೇಖನ ಯಜ್ಞದ ಪುಸ್ತಕವನ್ನು ವಿತರಿಸಲಾಯಿತು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್ ಆಚಾರ್ಯ ಸ್ವಾಗತಿಸಿ ವಿದ್ವಾಂಸ ಬಿ. ಗೋಪಾಲಾಚಾರ್ ನಿರೂಪಿಸಿದರು.
“ಉಡುಪಿ’ ಪ್ರಸಿದ್ಧಿ :
ಶ್ರೀಕೃಷ್ಣನನ್ನು ಅನ್ನಬ್ರಹ್ಮ, ಕಾಂಚನಬ್ರಹ್ಮ, ನಾದಬ್ರಹ್ಮನೆಂದು ಉಪಾಸನೆ ಮಾಡಬೇಕೆಂದು ಮಧ್ವಾಚಾರ್ಯರು ಆದೇಶಿಸಿದ್ದರು. ಅಂತೆಯೇ ತಿರುಪತಿಯಲ್ಲಿ ಕಾಂಚನಬ್ರಹ್ಮ, ಪಂಡರಾಪುರದಲ್ಲಿ ನಾದಬ್ರಹ್ಮ, ಉಡುಪಿಯಲ್ಲಿ ಅನ್ನಬ್ರಹ್ಮನಾಗಿ ಉಪಾಸನೆ ಮಾಡಬೇಕಾಗಿದೆ. ದೇಶ ವಿದೇಶಗಳಲ್ಲಿ “ಉಡುಪಿ ಹೊಟೇಲ್’ ಪ್ರಸಿದ್ಧಿ ಪಡೆಯುವುದಕ್ಕೆ ಶ್ರೀಕೃಷ್ಣನ ಅನುಗ್ರಹದಿಂದ ಮಾತ್ರ ಸಾಧ್ಯ. ಎಲ್ಲಿಯವರೆಗೆ ಉಡುಪಿ ಪ್ರಸಿದ್ಧಿ ಪಡೆದಿದೆ ಎಂದರೆ, ಸಂಚಾರದಲ್ಲಿರುವ ಸಂದರ್ಭ ಸಿಕ್ಕ ವ್ಯಕ್ತಿಯೊಬ್ಬರು ತಾವು ಎಲ್ಲಿಂದ ಬಂದವರು ಎಂದು ಪ್ರಶ್ನಿಸಿದಾಗ ಉಡುಪಿಯಿಂದ ಬಂದವರು ಎಂದಾಗ ಅವರು ಆಶ್ಚರ್ಯಚಕಿತರಾದರು. ಯಾಕೆ ಎಂದು ವಿಚಾರಿಸಿದಾಗ ಉಡುಪಿ ಎಂದರೆ ಒಂದು ಊರೇ? ನಾನು ತಿಂಡಿಗಳ ಹೆಸರೆಂದು ಭಾವಿಸಿದ್ದೆ ಎಂದರಂತೆ. ಆ ವ್ಯಕ್ತಿಯ ಪ್ರಕಾರ…”ಉಡುಪಿ’ ಯು-ಉತ್ತಪ್ಪ, ಡಿ-ದೋಸೆ, ಯು-ಉಪ್ಪಿಟ್ಟು, ಪಿ-ಪತ್ರೋಡೆ, ಐ-ಇಡ್ಲಿ ಎಂದು ತಿಳಿದಿದ್ದರಂತೆ ಎಂದು ಶ್ರೀಪಾದರು ಹಾಸ್ಯ ಚಟಾಕಿ ಹಾರಿಸಿದರು.
ಪುತ್ತಿಗೆ ಶ್ರೀಗಳ ಪರ್ಯಾಯ :
1976-78 ಪ್ರಥಮ ಪರ್ಯಾಯ (ಬಾಲ್ಯ ಪರ್ಯಾಯ), 1992-94 ದ್ವಿತೀಯ ಪರ್ಯಾಯ (ಗೀತಾ ಪರ್ಯಾಯ), 20008-10 ತೃತೀಯ ಪರ್ಯಾಯ (ವಿಶ್ವ ಪರ್ಯಾಯ)ವಾಗಿ ನೆರವೇರಿದ್ದು, ಪ್ರಸ್ತುತ 2024-26 ಚತುರ್ಥ ಪರ್ಯಾಯ (ವಿಶ್ವಗೀತಾ ಪರ್ಯಾಯ)ವಾಗಿ ನೆರವೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.