ಉ.ಕ. ದಲ್ಲಿ ಸೀರೆ, ಕುಕ್ಕರ್ ಹಂಚಿಕೆ ಅಬ್ಬರ; ಆಕಾಂಕ್ಷಿಗಳಿಂದ ಮನವೊಲಿಕೆ ಕಸರತ್ತು
ಹರಿಯುತ್ತಿದೆ ಭರವಸೆಗಳ ಮಹಾಪೂರ
Team Udayavani, Dec 5, 2022, 12:51 PM IST
ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಪೈಪೋಟಿ ಹೆಚ್ಚುತ್ತಿದೆ. ಟಿಕೆಟ್ ಖಾತರಿಯಾಗುವ ಮುನ್ನವೇ ಅನೇಕ ಆಕಾಂಕ್ಷಿಗಳು ಮತದಾರರ ಓಲೈಕೆಗಿಳಿದ ಪರಿಣಾಮ, ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಸೀರೆ, ಟಿಫಿನ್ ಬಾಕ್ಸ್, ಕುಕ್ಕರ್, ಕ್ಯಾಲೆಂಡರ್, ಫ್ಯಾನ್, ಕ್ರೀಡಾ ಸಲಕರಣೆ ಸೇರಿದಂತೆ ಇನ್ನಿತರ ಸಾಮಗ್ರಿಗಳು ಹಾರಾಡತೊಡಗಿವೆ. ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ಜಾತ್ರೆಗಳಲ್ಲಿ ಭಾಗಿಯಾಗಿ ಆರ್ಥಿಕ ನೆರವು, ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಹಣ ನೀಡಿಕೆ ಭರವಸೆಯ ಮಹಾಪೂರವೇ ಹರಿಯುತ್ತಿದೆ.
ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿ ಜನವರಿಯಿಂದ ವಿವಿಧ ಜಿಲ್ಲೆಗಳಲ್ಲಿ ಜಾತ್ರೆ ಸಂಭ್ರಮ ಆರಂಭವಾಗುತ್ತದೆ. ಅದು ಏಪ್ರಿಲ್-ಮೇ ವರೆಗೂ ಮುಂದುವರೆಯುತ್ತದೆ. ಆದರೆ, ಇದೀಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್-ನವೆಂಬರ್ ನಿಂದಲೇ ಅನೇಕ ಕಡೆಗಳಲ್ಲಿ ಮತಾಕರ್ಷಣೆ ಜಾತ್ರೆ ಶುರುವಾಗಿದೆ. ವಿಧಾನಸಭೆ ಸ್ಪರ್ಧೆಗೆ ಇಳಿಯಬೇಕೆಂಬ ಚಿಂತನೆಯ ಟಿಕೆಟ್ ಆಕಾಂಕ್ಷಿಗಳ ಜತೆಗೆ, ಹಾಲಿ ಶಾಸಕರು ಸಹ ಪೈಪೋಟಿಗೆ ಬಿದ್ದವರಂತೆ ಮತದಾರರ ಸೆಳೆಯುವ ನಿಟ್ಟಿನಲ್ಲಿ ಹಲವು ಆಮಿಷಗಳಿಗೆ ಮುಂದಾಗಿದ್ದಾರೆ.
ಹೆಚ್ಚಿದ ಆಕಾಂಕ್ಷಿಗಳು: ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಮುಖ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದೆ. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೂ ಒಂದೊಂದು ಪಕ್ಷದಲ್ಲೂ ಕನಿಷ್ಟ ನಾಲ್ಕೈದು ಜನರು ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ನೆಚ್ಚಿನ ನಾಯಕರ ಶಿಫಾರಸು, ಜಾತಿ, ಕ್ಷೇತ್ರದಲ್ಲಿರುವ ವರ್ಚಸ್ಸು, ಬೆಂಬಲಿಗರೊಂದಿಗೆ ಬಲಪ್ರದರ್ಶನ, ಆರ್ಥಿಕ ಬಲ ಇತ್ಯಾದಿಯೊಂದಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮದೇ ಪ್ರಭಾವ ತೋರುತ್ತಿದ್ದಾರೆ. ಇರುವ ಒಂದು ಟಿಕೆಟ್ ತಮಗೆ ಪಕ್ಕಾ ಎಂದು ನಾಲ್ಕೈದು ಆಕಾಂಕ್ಷಿಗಳು ಹೇಳಿಕೊಳ್ಳುತ್ತಿದ್ದಾರೆ.
ಉತ್ತರ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಟಿಕೆಟ್ ಪೈಪೋಟಿ ನಿಟ್ಟಿನಲ್ಲಿ ವಿಶೇಷವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಪೈಪೋಟಿ ತೀವ್ರಗೊಂಡಿದೆ. ಒಂದು ಕ್ಷೇತ್ರಕ್ಕೆ ಸರಾಸರಿ ನಾಲ್ಕೈದು ಜನ ಪ್ರಬಲ ಆಕಾಂಕ್ಷಿಗಳಿದ್ದು, ಒಂದು ಯತ್ನ ಮಾಡಿ ನೋಡೋಣ ಎಂಬುವವರು ಕೂಡಿದೆ ಒಂದು ಕ್ಷೇತ್ರಕ್ಕೆ ಎಂಟತ್ತು ಜನರಿದ್ದಾರೆ. ಪ್ರಮುಖ ಮೂರು ಪಕ್ಷಗಳಲ್ಲಿ ಬಿಜೆಪಿ-ಕಾಂಗ್ರೆಸ್‌ಗೆ ಹೋಲಿಸಿದರೆ, ಜೆಡಿಎಸ್ ಎರಡು ಪಕ್ಷಗಳ ಅಸಮಾಧಾನಿತರು, ಟಿಕೆಟ್ ವಂಚಿತರು, ಪಕ್ಷ ಬಿಟ್ಟು ಹೋದವರು ಬರುತ್ತಾರೆ ಎಂಬ ನಿರೀಕ್ಷೆಯನ್ನೇ ಹೆಚ್ಚು ನಂಬಿದಂತೆ ಗೋಚರವಾಗುತ್ತಿದೆ. ಆಮ್‌ಆದ್ಮಿ ಪಕ್ಷದಲ್ಲಿಯೂ ಕೆಲವೊಂದು ಟಿಕೆಟ್ ಆಕಾಂಕ್ಷಿಗಳು ತಾವು ಅಭ್ಯರ್ಥಿ ಎಂಬಂತೆ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಓವೈಸಿ ಪಕ್ಷ ಸೇರಿದಂತೆ ವಿವಿಧ ಪಕ್ಷಗಳು ಅಖಾಡಕ್ಕೆ ಸಜ್ಜಾಗುತ್ತಿವೆ. ಈ ಪಕ್ಷಗಳಲ್ಲಿಯೂ ಕೆಲ ಆಕಾಂಕ್ಷಿಗಳು ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಈ ಬಾರಿ ಟಿಕೆಟ್ ಆಕಾಂಕ್ಷಿಗಳು ಮೊದಲೇ ಅರ್ಜಿ ಸಲ್ಲಿಕೆ ಜತೆಗೆ 2 ಲಕ್ಷ ರೂ.ಗಳ ಠೇವಣಿ ಸಂಗ್ರಹಿಸಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಒಂದು ಕ್ಷೇತ್ರಕ್ಕೆ ನಾಲ್ಕೈದು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ದೊರೆಯಲಿದೆ. ಇನ್ನುಳಿದವರು 2 ಲಕ್ಷ ರೂ. ಹಣವನ್ನು ಪಕ್ಷದ ಹುಂಡಿಗೆ ಹಾಕಿದ್ದೇವೆ ಎಂದು ಕೊಳ್ಳಬೇಕಾಗುತ್ತದೆ. ಬಿಜೆಪಿಯಲ್ಲೂ ಆಕಾಂಕ್ಷಿಗಳ ದಂಡು ಟಿಕೆಟ್ ಸಮರಕ್ಕೆ ಸಜ್ಜಾಗಿದೆ.
ಇದರ ಜತೆಗೆ ಇರುವ ಪಕ್ಷದಲ್ಲಿ ತಮಗೆ ಟಿಕೆಟ್ ಅಸಾಧ್ಯ ಎನ್ನುವವರಲ್ಲಿ ಕೆಲವು ಈಗಾಗಲೇ ಇನ್ನೊಂದು ಪಕ್ಷಕ್ಕೆ ಜಿಗಿದಿದ್ದು, ಇನ್ನು ಕೆಲವರು ಇನ್ನಷ್ಟು ದಿನ ಕಾಯ್ದು ನೋಡೋಣ ಎಂಬ ಚಿಂತನೆಯಲ್ಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪ್ರಮುಖ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಇನ್ನಷ್ಟು ಜೋರಾಗಲಿದೆ. ಹಾಲಿ ಶಾಸಕರಲ್ಲಿ ಕೆಲವರಿಗೆ ಟಿಕೆಟ್ ತಪ್ಪುವ ಭೀತಿ ಇದೆ ಎನ್ನಲಾಗುತ್ತಿದ್ದು, ಅವರು ಸಹ ಮುಂದಿನ ರಾಜಕೀಯ ಭವಿಷ್ಯಕ್ಕೆ ವೇದಿಕೆ ಸಜ್ಜುಗೊಳಿಸಿಕೊಳ್ಳಲು ಆರಂಭಿಸಿದ್ದಾರೆ ಎನ್ನಲಾಗಿದೆ. ಕೆಲವರು ಪಕ್ಷೇತರವಾಗಿಯಾದರೂ ಸ್ಪರ್ಧೆಗಿಳಿಯೋಣ ಎಂಬ ತಯಾರಿಯಲ್ಲಿ ತೊಡಗಿದ್ದಾರೆ.
ಸೀರೆ, ಕುಕ್ಕರ್, ಕ್ಯಾಲೆಂಡರ್: ಚುನಾವಣೆ ಪ್ರಕ್ರಿಯೆ ಆರಂಭವಾಗಿಲ್ಲ. ಆದರೆ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚುನಾವಣೆ ಬಂದೆ ಬಿಟ್ಟಿದೆಯೇ ಎನ್ನುವಂತೆ ಸನ್ನಿವೇಶಗಳು ಸೃಷ್ಟಿಯಾಗತೊಡಗಿದೆ. ಇದಕ್ಕೆ ಕಾರಣ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಹಾಗೂ ಮತದಾರರಿಗೆ ತೋರುವ ಆಮಿಷವಾಗಿದೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಜನ್ಮದಿನಾಚರಣೆ, ಜಾತ್ರೆ, ಉತ್ಸವದ ನೆಪದಲ್ಲಿ ಸೀರೆ, ಸ್ಟೀಲ್ ಟಿಫಿನ್ ಬಾಕ್ಸ್, ಕುಕ್ಕರ್, ಆಹಾರ ಧಾನ್ಯಗಳ ಕಿಟ್ ಇನ್ನಿತರವುಗಳನ್ನು ಹಂಚಲಾಗುತ್ತಿದೆ. 100, 200, 500 ರೂ. ಒಳಗಿನ ಈ ಸಾಮಗ್ರಿಗಳನ್ನು ಪಡೆದುಕೊಳ್ಳಲು ಜನರು ಮುಗಿಬೀಳುತ್ತಿದ್ದು, ಕೆಲವು ಕಡೆ ನೂಕುನುಗ್ಗಲು ಉಂಟಾಗಿದ್ದು ಇದೆ. ಇನ್ನು ಕೆಲವರು 2023ರ ಹೊಸ ವರ್ಷ ಆಗಮನವನ್ನು ಬಳಸಿಕೊಂಡು, ತಮ್ಮ ಭಾವಚಿತ್ರ ಇರುವ ಕ್ಯಾಲೆಂಡರ್‌ಗಳನ್ನು ಮುದ್ರಿಸಿ ಮನೆ ಮನೆಗೆ ತೆರಳಿ ಅವುಗಳನ್ನು ನೀಡುತ್ತಿದ್ದಾರೆ. ಕೆಲವರು ಸೀರೆ ಜತೆಗೆ ಮಹಿಳಾ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲು ಅರಿಶಿಣ-ಕುಂಕುಮ, ಬಳೆಗಳು ಇನ್ನಿತರ ಸಾಮಗ್ರಿಗಳಿರುವ ಬ್ಯಾಗ್ ವಿತರಿಸುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗುತ್ತಿದ್ದು, ಟಿಕೆಟ್ ಆಕಾಂಕ್ಷಿಗಳು ಇಲ್ಲವೆ ಶಾಸಕರಾಗಿದ್ದವರು ಅದರ ವೆಚ್ಚ ನೋಡಿಕೊಳ್ಳುವ ಮೂಲಕ ಪ್ರಭಾವ ಬೀರುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಾತ್ರೆ, ಉತ್ಸವ, ಮದುವೆ ಇನ್ನಿತರ ಸಮಾರಂಭಗಳಿಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಟಿಕೆಟ್ ಆಕಾಂಕ್ಷಿಗಳು ಅಲ್ಲಿನ ವೆಚ್ಚದಲ್ಲಿ ಪಾಲು ಪಡೆದುಕೊಂಡು ಇದು ತಮ್ಮ ಸೇವೆ ಎಂದು ಬಿಂಬಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಇನ್ನು ಕೆಲವರು ಗ್ರಾಮಗಳನ್ನು ಸುತ್ತುವ ಕಾರ್ಯಕ್ಕೆ ಮುಂದಾಗಿದ್ದು, ಗ್ರಾಮದಲ್ಲಿನ ಹಿರಿಯರ ಪಾದಕ್ಕೆರುಗುವುದು, ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವುದಲ್ಲದೆ, ತಾವು ಆಯ್ಕೆಯಾದರೆ ಇದಕ್ಕೆಲ್ಲ ಪರಿಹಾರ ದೊರಕಿಸುವ ಭರವಸೆ ನೀಡುತ್ತಿದ್ದಾರೆ.
ವೇದಿಕೆಯಾದ ಸಾಮಾಜಿಕ ಜಾಲತಾಣ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದ ವಿವಿಧ ಟಿಕೆಟ್ ಆಕಾಂಕ್ಷಿಗಳು ತಮ್ಮ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರ ಇನ್ನಿತರ ಮಾಹಿತಿಗಳಿಗೆ ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರೊಂದಿಗೆ ಭೇಟಿ, ಸಂವಾದ, ಜಾತ್ರೆ-ಉತ್ಸವ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಭಾಗಿಯಾಗಿದ್ದನ್ನು ವೀಡಿಯೊ, ಫೋಟೋಗಳ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಚಲನಚಿತ್ರಗಳ ಜನಪ್ರಿಯ ಹಾಡುಗಳನ್ನು ಬಳಸಿಕೊಂಡು ನಮ್ಮ ನಾಯಕ ಇವರು ಎಂಬಂತೆ ಪ್ರಚಾರದ ತಂತ್ರ ಬಳಸುತ್ತಿದ್ದಾರೆ.
ಹೆಚ್ಚಿದ ಜನರ ಆರೋಗ್ಯ ಕಾಳಜಿ!
ಆಕಾಂಕ್ಷಿಗಳು ವಿವಿಧ ಸಂಘ-ಸಂಸ್ಥೆ, ಪಕ್ಷವನ್ನು ಬಳಸಿಕೊಂಡು ಸರಣಿ ರೂಪದಲ್ಲಿ ಆರೋಗ್ಯ-ನೇತ್ರ ತಪಾಸಣೆ ಶಿಬಿರ ಆಯೋಜಿಸುವುದು, ರಕ್ತದಾನ ಶಿಬಿರ ಆಯೋಜನೆ, ಆಯುಷ್ಮಾನ್ ಕಾರ್ಡ್ ನೋಂದಣಿ ಇನ್ನಿತರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಜನರು ತಪಾಸಣಾ ಕೇಂದ್ರಗಳಿಗೆ ಬರುವ ಬದಲು ತಪಾಸಣಾ ಕೇಂದ್ರವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ತಪಾಸಣೆ ನಂತರ ವಿವಿಧ ಕಂಪನಿಗಳು ಪ್ರಚಾರಾರ್ಥವಾಗಿ ನೀಡುವ ಹಲವು ಔಷಧಿಗಳನ್ನು ಜನರಿಗೆ ಉಚಿತವಾಗಿ ನೀಡುವ ಮೂಲಕ ಪ್ರಭಾವ ಬೀರುವ ಯತ್ನ ತೋರುತ್ತಿದ್ದಾರೆ.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.