ಸೀಮೆಎಣ್ಣೆ ವಿತರಣೆ ಸದ್ದಿಲ್ಲದೆ ಸ್ತಬ್ಧ : ಉತ್ಪಾದನೆಯೂ ಕಡಿಮೆಯಾಗಿದೆ
Team Udayavani, Dec 8, 2022, 6:25 AM IST
ಉಡುಪಿ : ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿಯ ಜತೆಗೆ ಸೀಮೆ ಎಣ್ಣೆಯನ್ನು ನೀಡಲಾಗುತ್ತಿತ್ತು. 2022ರ ಎಪ್ರಿಲ್‌ನಿಂದ ಸೀಮೆಎಣ್ಣೆ ವಿತರಣೆ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ಸರಕಾರ ಇದನ್ನು ರದ್ದು ಮಾಡಿಲ್ಲ. ಸರಕಾರಿ ವ್ಯವಸ್ಥೆಯಲ್ಲಿ ಸೀಮೆಎಣ್ಣೆ ವಿತರಣೆ ಪ್ರಸ್ತುತ ಚಾಲ್ತಿಯಲ್ಲಿದೆ. ಆದರೆ ಎತ್ತುವಳಿಯಾಗದೇ ಇರುವುದಿಂದ ಅರ್ಹ ಕಾರ್ಡ್ ದಾರರಿಗೆ ಸೀಮೆಎಣ್ಣೆ ವಿತರಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.
ಉಡುಪಿ ಜಿಲ್ಲೆಯಲ್ಲಿ 3,06,355 ಪಡಿತರ ಚೀಟಿಗಳಿದ್ದು 1.65 ಲಕ್ಷಕ್ಕೂ ಅಧಿಕ ಪಡಿತರ ಚೀಟಿದಾರರು ಸೀಮೆಎಣ್ಣೆ ಪಡೆಯಲು ಅರ್ಹ ರಿದ್ದಾರೆ. ಆದರೆ ನ್ಯಾಯಬೆಲೆ ಅಂಗಡಿಗಳಿಗೆ ಸರಿಯಾಗಿ ಪೂರೈಕೆ ಯಾಗದೇ ಇರುವುದರಿಂದ ಸೀಮೆಎಣ್ಣೆ ವಿತರಣೆ ಆಗುತ್ತಿಲ್ಲ.
ಸಮಸ್ಯೆಯೇನು?: ಸೀಮೆಎಣ್ಣೆ ಪೂರೈಕೆದಾರರು ಖಾಸಗಿಯಾಗಿ ಸೀಮೆಎಣ್ಣೆಯನ್ನು ಮೂಲ ಬೆಲೆಗೆ ಖರೀದಿಸಿ (ಎತ್ತುವಳಿ ಮಾಡಿ) ಅದನ್ನು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಮೂಲಕ ನಿರ್ದಿಷ್ಟ ನ್ಯಾಯಬೆಲೆ ಅಂಗಡಿಗಳಿಗೆ ಅವರೇ ಪೂರೈಕೆ ಮಾಡಬೇಕು. ಇಲಾಖೆಯಿಂದ ಅನಂತರದಲ್ಲಿ ಅದರ ಹಣ ಪಾವತಿ ಮಾಡ
ಲಾಗುತ್ತದೆ. ಆದರೆ ಇತ್ತೀಚಿನ ದಿನ ಗಳಲ್ಲಿ ಸೀಮೆ ಎಣ್ಣೆ ದರವೂ ಹೆಚ್ಚಾಗಿರುವುದರಿಂದ ಪೂರೈಕೆದಾರರಿಗೆ ಖರೀ ದಿಯೂ ಸಾಧ್ಯವಾಗುತ್ತಿಲ್ಲ. ಸದ್ಯ ಸೀಮೆಎಣ್ಣೆ ಲೀಟರ್‌ಗೆ 74 ರೂ. ಇದೆ. ಇಲಾಖೆಯಿಂದ ಆರಂಭದಲ್ಲಿ ಲೀಟರ್‌ಗೆ 32 ರೂ. ಮಾತ್ರ ನೀಡಲಾಗುತ್ತದೆ (ಉಳಿದ ಹಣ ತಿಂಗಳ ಅನಂತರ ಸಂದಾಯ ಮಾಡಲಾಗುತ್ತದೆ). ಪೂರೈಕೆದಾರರು ತಮ್ಮ ಕೈಯಿಂದ ಹಣ ಹಾಕಿ ಪೂರೈಕೆ ಮಾಡಬೇಕಾಗಿದೆ. ಖರೀದಿ ಮತ್ತು ಪೂರೈಕೆ ಬೆಲೆಯಲ್ಲಿ ಹೆಚ್ಚು ವಿತರಣೆ ಇರುವುದರಿಂದ ಪೂರೈಕೆದಾರರು ಆರಂಭಿಕ ನಷ್ಟ ಭರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳ ಸಭೆಯಲ್ಲೇ ತಿಳಿಸಿರುವುದರಿಂದ ಸೀಮೆ ಎಣ್ಣೆ ವಿತರಣೆ ಸದ್ಯಕ್ಕೆ ಸ್ಥಗಿತವಾಗಿದೆ.
ಉತ್ಪಾದನೆಯೂ ಕಡಿಮೆಯಾಗಿದೆ
ಉಡುಪಿ ಜಿಲ್ಲೆಯಲ್ಲಿ ತಿಂಗಳಿಗೆ 165ರಿಂದ 168 ಕೆಎಲ್‌ನಷ್ಟು ಸೀಮೆಎಣ್ಣೆ ಪಡಿತರ ವ್ಯವಸ್ಥೆಯಡಿ ವಿತರಣೆಗೆ ಅಗತ್ಯವಿದೆ. ನಾಡದೋಣಿಗಳಿಗೆ ಸೀಮೆಎಣ್ಣೆ ವಿತರಣೆಯೇ ಸರಕಾರಕ್ಕೆ ಸದ್ಯ ಸವಾಲಾಗಿದೆ. ಪಡಿತರ ಚೀಟಿ ಹಾಗೂ ನಾಡದೋಣಿ ಎಂಜಿನ್‌ಗಳಿಗೆ ಬೇಕಾದಷ್ಟು ಸೀಮೆಎಣ್ಣೆಯನ್ನು ಏಕಕಾಲದಲ್ಲಿ ಉತ್ಪಾದನೆ ಮಾಡಿಕೊಡುವ ಸಂಸ್ಥೆಗಳ ಸಂಖ್ಯೆಯೂ ಕಡಿಮೆಯಿದೆ. ಉತ್ಪಾದನೆಯ ಕೊರತೆಯು ಎತ್ತುವಳಿಗೆ ಸಮಸ್ಯೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸೀಮೆಎಣ್ಣೆ ಬೆಲೆ ಹೆಚ್ಚಾಗಿರುವುದರಿಂದ ಎತ್ತುವಳಿಗೆ ಯಾರೂ ಮುಂದೆ ಬರುತ್ತಿಲ್ಲ. ಈಗಾಗಲೇ ಪೂರೈಕೆದಾರರ ಸಭೆಯನ್ನು ನಡೆಸಿದ್ದು, ಈಗಿನ ಬೆಲೆಯಲ್ಲಿ ಪೂರೈಕೆ ಮಾಡಲು ಅಸಾಧ್ಯ ಎಂಬುದನ್ನು ತಿಳಿಸಿದ್ದಾರೆ. ಹೀಗಾಗಿ ಅರ್ಹ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ವಿತರಣೆ ಸಾಧ್ಯವಾಗುತ್ತಿಲ್ಲ.
– ಮೊಹಮ್ಮದ್ ಇಸಾಕ್, ಉಪ ನಿರ್ದೇಶಕ, ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.