ಸುರತ್ಕಲ್ ಮಧ್ಯದಲ್ಲಿ ಹೊಸ ಲೇಔಟ್
474 ನಿವೇಶನ ಹಂಚಿಕೆಗೆ ಗೃಹ ಮಂಡಳಿ ಚಿಂತನೆ; ಬೇಡಿಕೆ ಸರ್ವೇ ಆರಂಭ
Team Udayavani, Dec 9, 2022, 8:55 AM IST
ಮಹಾನಗರ: ಖಾಸಗಿ ಭೂಮಿ ಪಡೆದು ಅದನ್ನು ಕರ್ನಾಟಕ ಗೃಹ ಮಂಡಳಿಯಿಂದ ಲೇಔಟ್ ಮಾಡಿ ಜನರಿಗೆ ನಿವೇಶನ ಒದಗಿಸುವ ಮಹತ್ವದ ಯೋಜನೆ ಸುರತ್ಕಲ್ ಸಮೀಪದ ಮಧ್ಯ ಗ್ರಾಮದಲ್ಲಿ ಅನುಷ್ಠಾನಕ್ಕೆ ಚಿಂತನೆ ನಡೆಸಲಾಗಿದೆ.
ಇಲ್ಲಿನ ಸುಮಾರು 31.57 ಎಕರೆ ಖಾಸಗಿ ಜಮೀನಿನಲ್ಲಿ 474 ನಿವೇಶನವನ್ನು 50:50 (ಭೂ ಮಾಲಕರಿಗೆ: ಗೃಹ ಮಂಡಳಿಗೆ) ಅನುಪಾತದಲ್ಲಿ ಎಲ್ಲ ಮೂಲ ಸೌಕರ್ಯವನ್ನು ಒಳಗೊಂಡ ವಸತಿ ಯೋಜನೆಗೆ ಕರ್ನಾಟಕ ಗೃಹ ಮಂಡಳಿ ತೀರ್ಮಾನಿಸಿದೆ. ಇದಕ್ಕಾಗಿ ಸಾರ್ವಜನಿಕರಿಂದ “ಬೇಡಿಕೆ ಸರ್ವೇ’ ಆರಂಭಿಸಲಾಗಿದೆ. ನಿವೇಶನ ಬಯಸಿ ಸಾರ್ವಜನಿಕರು ಸಲ್ಲಿಸುವ ಅರ್ಜಿಯ ಆಧಾರದಲ್ಲಿ “ಬೇಡಿಕೆ’ ಬಂದರೆ ಅದರಂತೆ ಗೃಹಮಂಡಳಿಯು ಲೇಔಟ್ ಮಾಡಿ ಫಲಾನುಭವಿಗಳಿಗೆ ನೀಡಲಿದೆ.
ಭೂಮಾಲಕರಿಂದ ಪಡೆದ ಭೂಮಿಗೆ ಗೃಹ ಮಂಡಳಿ ಹಣ ಪಾವತಿಸುವುದಿಲ್ಲ. ಬದಲಿಗೆ ನಿಗದಿತ ಜಮೀನು ದೊರೆತರೆ ಅದನ್ನು ಗೃಹಮಂಡಳಿ ಪಡೆದು ಲೇಔಟ್ ಮಾಡಿ, ಅದಕ್ಕೆ ಪರ್ಮಿಷನ್ ಆಗಿ, ವಿದ್ಯುತ್, ಚರಂಡಿ, ಕುಡಿಯುವ ನೀರು ಸಹಿತ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಬಳಿಕ ಆ ಜಮೀನಿನ ಬಗ್ಗೆ ಮಾರ್ಕೆಟಿಂಗ್ ಕೂಡ ಗೃಹ ಮಂಡಳಿಯೇ ನಡೆಸುತ್ತದೆ. ಹೀಗೆ ಅಭಿವೃದ್ಧಿ ಪಡಿಸಿದ ಒಟ್ಟು ಜಮೀನಿನ ಪೈಕಿ ಶೇ.50ರಷ್ಟು ಭೂಮಿಯನ್ನು ಸಂಬಂಧಪಟ್ಟ ಭೂಮಾಲಕರಿಗೆ ಗೃಹ ಮಂಡಳಿ ನೀಡುತ್ತದೆ.
ಗೃಹ ಮಂಡಳಿಯ ಅಧಿಕಾರಿಗಳು “ಸುದಿನ’ ಜತೆಗೆ ಮಾತನಾಡಿ, “ಜಮೀನು ನೀಡುವ ಪಾಲಿಕೆ, ಇತರ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಗೆ ಬರುವ ಮಾಲಕರಿಗೆ ಅಭಿವೃದ್ಧಿಪಡಿಸಿದ ನಿವೇಶನವನ್ನು ಸಮಾನ ಮಾದರಿಯಲ್ಲಿ ಹಂಚಿಕೆ ಮಾಡಲಾಗುತ್ತದೆ. ಎಲ್ಲ ಸೌಲಭ್ಯವನ್ನು ಆ ಜಮೀನಿಗೆ ಗೃಹ ಮಂಡಳಿಯು ನಡೆಸಿಕೊಡಲಿದೆ. ನಗದು ಪರಿಹಾರದ ಬದಲು ಅಭಿವೃದ್ಧಿ ಪಡಿಸಿದ ಜಮೀನನ್ನೇ ಭೂಮಾಲಕರಿಗೆ ನೀಡುವ ಹಿನ್ನೆಲೆಯಲ್ಲಿ ಭೂಮಾಲಕರಿಗೂ ಮುಂದೆ ಉಪಯೋಗಕ್ಕೆ ಬರಲಿದೆ. ಹೀಗಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಈ ರೀತಿ ಭೂಮಿ ದೊರಕಿದರೆ ಇನ್ನಷ್ಟು ನಿವೇಶನ ನೀಡಲು ಸಾಧ್ಯವಾಗಲಿದೆ’ ಎನ್ನುತ್ತಾರೆ.
ಏನಿದು ಯೋಜನೆ?
ಭೂಮಾಲಕರಿಂದ ಉಚಿತವಾಗಿ ಭೂಮಿ ಪಡೆದು ಗೃಹ ಮಂಡಳಿಯು ಅದನ್ನು ಸಂಪೂರ್ಣ ಲೇಔಟ್ ಮಾಡುತ್ತದೆ. ಅಭಿವೃದ್ಧಿಪಡಿಸಿದ ಅನಂತರ ಒಟ್ಟು ಭೂಮಿಯ ಅರ್ಧದಷ್ಟು ಗೃಹ ಮಂಡಳಿ ಹಾಗೂ ಉಳಿದ ಅರ್ಧವನ್ನು ಭೂಮಾಲಕರಿಗೆ ನೀಡಲಾಗುತ್ತದೆ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಾದರೆ ಶೇ.50:50 ಇದ್ದರೆ ಗ್ರಾಮಾಂತರ ಭಾಗದಲ್ಲಾದರೆ ಶೇ.60 ಗೃಹ ಮಂಡಳಿ ಹಾಗೂ ಶೇ. 40 ಭೂಮಾಲಕರಿಗೆ ಅಭಿವೃದ್ಧಿಪಡಿಸಿದ ಲೇಔಟ್ ದೊರೆಯಲಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಇಂತಹ ಪರಿಕಲ್ಪನೆ ಜಾರಿಗೆ ಗೃಹ ಮಂಡಳಿ ನಿರ್ಧರಿಸಿದೆ.
ನಿವೇಶನ ನೀಡಲು ಕ್ರಮ: ಮಧ್ಯ ಗ್ರಾಮದಲ್ಲಿ 31.57 ಎಕರೆ ಖಾಸಗಿ ಜಮೀನಿನಲ್ಲಿ 474 ನಿವೇಶನ ಮಾಡುವ ಯೋಜನೆಗೆ ಗೃಹ ಮಂಡಳಿ ತೀರ್ಮಾನಿಸಿದೆ. ಇದರಂತೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅವರ ಬೇಡಿಕೆಯ ಆಧಾರದಂತೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಭೂಮಾಲಕರು, ಗೃಹಮಂಡಳಿ 50:50 ಅನುಪಾತದೊಂದಿಗೆ ಹಂಚಿಕೆ ಮಾಡುತ್ತದೆ. ಗೃಹಮಂಡಳಿ ನಿವೇಶನ ಫಲಾನುಭವಿಗಳಿಗೆ ನೀಡಲಾಗುತ್ತದೆ. –ವಿಜಯ್ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತ, ಕರ್ನಾಟಕ ಗೃಹ ಮಂಡಳಿ, ಮಂಗಳೂರು
-ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.