ಮೂಡುಬಿದಿರೆ-ಜಾಂಬೂರಿಗೆ ಭರ್ಜರಿ ಸಿದ್ಧತೆ: 100 ಎಕರೆ ಜಾಗ, 50 ಸಾವಿರ ವಿದ್ಯಾರ್ಥಿಗಳು, 10 ಸಾವಿರ ತರಬೇತುದಾರರು
ಏಕ್ ಭಾರತ್ ಶ್ರೇಷ್ಠ ಭಾರತ್” ಎನ್ನುವ ಧ್ಯೇಯ ವಾಕ್ಯ ಈ ಸಾಂಸ್ಕೃತಿಕ ಜಾಂಬೂರಿಯಿಂದ ಸಾಕ್ಷ್ಯಾತ್ಕಾರಗೊಳ್ಳಲಿದೆ.
ನಾಗೇಂದ್ರ ತ್ರಾಸಿ, Dec 10, 2022, 6:36 PM IST
ಮೂಡುಬಿದಿರೆ:ಸ್ಕೌಟ್ಸ್-ಗೈಡ್ ಸಂಸ್ಥೆಯು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಪಂಚದ 216ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿದೆ. 1907ರಲ್ಲಿ ಬೇಡನ್ ಪೋವೆಲ್ ರವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಸ್ಕೌಟ್ಸ್-ಗೈಡ್ಸ್ ಸಂಸ್ಥೆಗೆ ನಮ್ಮ ಜಿಲ್ಲೆಯಲ್ಲೂ 100 ವರ್ಷಗಳ ಇತಿಹಾಸವನ್ನು ಹೊಂದಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ 24 ಜಾಂಬೂರಿ ಕಾರ್ಯಕ್ರಮ ನಡೆದಿದ್ದು, ದೇಶದಲ್ಲಿ ಪ್ರಪ್ರಥಮ ಬಾರಿಗೆ ಸ್ಕೌಟ್ಸ್-ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮ ನಡೆಸುವ ಸೌಭಾಗ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ದೊರಕಿದೆ ಎನ್ನುವುದು ಸಂತಸದ ಸಂಗತಿಯಾಗಿದೆ…ಇದು ಜಾಂಬೂರಿ ಪ್ರಧಾನ ಕಾರ್ಯದರ್ಶಿ, ದ.ಕ.ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಮುಖ್ಯ ಆಯುಕ್ತ ಡಾ.ಎಂ.ಮೋಹನ ಆಳ್ವ ಅವರು ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಮಾಹಿತಿಯಾಗಿದೆ.
ವಿದ್ಯೆ, ಬುದ್ಧಿ, ಜಾತಿ, ಸ್ವದೇಶ ಪ್ರೇಮ, ಸಹಬಾಳ್ವೆಯೊಂದಿಗೆ ಮನಸ್ಸು ಕಟ್ಟಲು ಸ್ಕೌಟ್ಸ್-ಗೈಡ್ಸ್ ಸಹಾಯಕವಾಗಿದೆ. ನಮ್ಮ ದೇಶದಲ್ಲಿ ಒಟ್ಟು 6 ಲಕ್ಷ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ 60 ಸಾವಿರ ವಿದ್ಯಾರ್ಥಿಗಳಿದ್ದಾರೆ. ಸ್ಕೌಟ್ಸ್ ಗೈಡ್ಸ್ ಕುರಿತು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಜಾಂಬೂರಿ ಕಾರ್ಯಕ್ರಮ ನಡೆಸುತ್ತಿದ್ದು, ಮುಂದೆ ಇದು ಆಂದೋಲನವಾಗಿ ಹಲವಾರು ಸಂದೇಶಗಳನ್ನು ನೀಡಲಿದೆ ಎಂದು ಆಳ್ವರು ತಿಳಿಸಿದ್ದಾರೆ.
100 ಎಕರೆ ಜಾಗ, 50 ಸಾವಿರ ವಿದ್ಯಾರ್ಥಿಗಳು, 10 ಸಾವಿರ ತರಬೇತುದಾರರು:
ಡಿಸೆಂಬರ್ 21ರಿಂದ 27ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸ್ಕೌಟ್ಸ್-ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ಭಾಗವಹಿಸಲು 50, 000 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಸುಮಾರು 10 ಸಾವಿರ ತರಬೇತುದಾರರಿದ್ದು, 3,000 ಸಾವಿರ ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ.
ಡಿಸೆಂಬರ್ 15ರಿಂದ ವಿವಿಧ ರಾಜ್ಯಗಳಿಂದ ತಂಡಗಳು ಮೂಡುಬಿದಿರೆಗೆ ಆಗಮಿಸಲಿವೆ. ಡಿ.20ರೊಳಗೆ ಎಲ್ಲರು ಆಗಮಿಸಲಿದ್ದಾರೆ. ಜಾಂಬೂರಿಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ವಾಸ್ತವ್ಯದ ವ್ಯವಸ್ಥೆ, ಸ್ನಾನ, ಶೌಚಾಲಯ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.
ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳ ಕಸರತ್ತಿಗೆ ಭರ್ಜರಿ ಸಿದ್ಧತೆ:
ಮೂಡುಬಿದಿರೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಜಾಂಬೂರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ರಾಜ್ಯ ಮತ್ತು ವಿದೇಶಗಳಿಂದ ಸೇರಿ 50,000 ಸಾವಿರ ಮಂದಿ ಭಾಗವಹಿಸುತ್ತಿದ್ದಾರೆ. ಅವರ ಕೌಶಲ್ಯಗಳ ಪ್ರದರ್ಶನಕ್ಕಾಗಿ ಮೂಡುಬಿದಿರೆಯಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ.
ಕೌಶಲ್ಯ ಪ್ರದರ್ಶನ, ಜಂಗಲ್ ಟ್ರಯಲ್, ಜಿಪ್ ಲೈನ್ ಸಾಹಸ ಕ್ರೀಡೆ, ಅಂಡರ್ ವಾಟರ್ ಸಾಹಸ ಸೇರಿದಂತೆ ವಿವಿಧ ಕೌಶಲ್ಯಗಳು ಇಲ್ಲಿ ಅನಾವರಣಗೊಳ್ಳಲಿದೆ.
ಸ್ವಾತಂತ್ರ್ಯೋತ್ಸವ ಅಮೃತ್ ಮಹೋತ್ಸವದ ಸಂದರ್ಭದಲ್ಲಿ “ಏಕ್ ಭಾರತ್ ಶ್ರೇಷ್ಠ ಭಾರತ್” ಎನ್ನುವ ಧ್ಯೇಯ ವಾಕ್ಯ ಈ ಸಾಂಸ್ಕೃತಿಕ ಜಾಂಬೂರಿಯಿಂದ ಸಾಕ್ಷ್ಯಾತ್ಕಾರಗೊಳ್ಳಲಿದೆ.
ಪ್ರತಿನಿತ್ಯ ಅಂದಾಜು 2 ಲಕ್ಷ ಮಂದಿಗೆ ಊಟೋಪಾಚಾರ:
50 ಸಾವಿರ ವಿದ್ಯಾರ್ಥಿಗಳು, 10 ಸಾವಿರ ತರಬೇತುದಾರರು, 3 ಸಾವಿರ ಸ್ವಯಂ ಸೇವಕರು, ವೈದ್ಯಕೀಯ ತಂಡ ಎಲ್ಲಾ ಸೇರಿ ಪ್ರತಿದಿನ ಅಂದಾಜು ಎರಡು ಲಕ್ಷ ಮಂದಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಂಜೆ ಉಪಹಾರ, ರಾತ್ರಿ ಊಟ ಹಾಗೂ ವಿದ್ಯಾರ್ಥಿಗಳಿಗೆ ಹಾಲು, ಹಣ್ಣು ಕೊಡಲು ನಿರ್ಧರಿಸಿರುವುದಾಗಿ ಡಾ.ಆಳ್ವ ತಿಳಿಸಿದ್ದಾರೆ.
2 ಲಕ್ಷ ಊಟ, ಉಪಹಾರಕ್ಕಾಗಿ ಪ್ರತಿದಿನ 1,500 ಕ್ವಿಂಟಾಲ್ ಅಕ್ಕಿ, ಲಕ್ಷಗಟ್ಟಲೇ ತೆಂಗಿನ ಕಾಯಿ, ಸಕ್ಕರೆ, ಬೆಲ್ಲ, ತರಕಾರಿಗಳ ಅಗತ್ಯವಿದೆ.ಕೆಲವು ರಾಜ್ಯಗಳ ವಿದ್ಯಾರ್ಥಿಗಳಿಗೆ ಚಪಾತಿ, ರೊಟ್ಟಿಯ ವ್ಯವಸ್ಥೆಯನ್ನೂ ಮಾಡಲಿದ್ದೇವೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಎಲ್ಲರಿಗೂ ಕಾರ್ಯಕ್ರಮಕ್ಕೆ ಮುಕ್ತ, ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಜಾಂಬೂರಿ ವಿಶೇಷತೆಗಳು:
ಕೃಷಿ ಮೇಳ: ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಹೆಸರಿನ ಆವರಣದಲ್ಲಿ ಬೃಹತ್ ಕೃಷಿ ಮೇಳ ನಡೆಯಲಿದ್ದು, 100 ಬಗೆಯ ತರಕಾರಿಗಳ ಅತ್ಯಾಕರ್ಷಕ ನೈಜತೋಟ ಮೈತಳೆದಿದೆ. ಫಲ-ಪುಷ್ಪ ಪ್ರದರ್ಶನ, ವಿವಿಧ ಮಳಿಗೆಗಳು, ಪುಷ್ಪಾಲಂಕಾರ, ಕೃಷಿಕರಿಗೆ ಮಾಹಿತಿ ನೀಡುವ ಕಾರ್ಯ ಕೃಷಿ ಮೇಳದಲ್ಲಿ ನಡೆಯಲಿದೆ.
ದೇಶ-ವಿದೇಶಗಳ ಬಾಳೆ, ತೆಂಗು, ಧಾನ್ಯ, ವಿವಿಧ ಜಾತಿಯ ಭತ್ತ, ಆಯುರ್ವೇದ ಮಹತ್ವದ ಹಣ್ಣು-ಹಂಪಲುಗಳ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.
ಪುಸ್ತಕ ಮೇಳ: ಸ್ಕೌಟ್ಸ್ ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೃಹತ್ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ, ದೇಶಗಳ ಪುಸ್ತಕ ಮಾರಾಟ ಮಳಿಗೆ, ಪುಸ್ತಕ ಪ್ರದರ್ಶನ ನಡೆಯಲಿದೆ.
ವಿಜ್ಞಾನ ಮೇಳ: ಪ್ರಾಥಮಿಕ, ಪ್ರೌಢಶಾಲೆ, ಪದವಿ ತರಗತಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ವಿಜ್ಞಾನ ಮೇಳ ನಡೆಸುತ್ತಿದ್ದು, ವಿಜ್ಞಾನಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಇಲ್ಲಿ ಪಡೆಯಬಹುದಾಗಿದೆ.
ಆಹಾರ ಮೇಳ: ದೇಶೀಯ ಆಹಾರಕ್ಕೆ ಸಂಬಂಧಪಟ್ಟ ಎಲ್ಲಾ ತಿಂಡಿ, ತಿನಿಸುಗಳು, ಆಯಾ ಪ್ರದೇಶಕ್ಕೆ ಸಂಬಂಧಪಟ್ಟ ವಿಶಿಷ್ಟ ಆಹಾರಗಳ ಆಹಾರೋತ್ಸವ ಮೇಳ ಏರ್ಪಡಿಸಲಾಗಿದೆ.
ಕಲಾಮೇಳ: ಕಲೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸಾಂಪ್ರದಾಯಿಕ, ಬುಡಕಟ್ಟು, ಬೇರೆ, ಬೇರೆ ರಾಜ್ಯದ ಕಲೆಗಳಿಗೆ ಕಲಾಮೇಳದಲ್ಲಿ ಆದ್ಯತೆ ನೀಡಲಾಗಿದೆ. ಟೆರ್ರಾಕೋಟ, ಶಿಲ್ಪಕಲೆ ಪ್ರದರ್ಶನ, ಕಾರ್ಟೂನ್ಸ್, ಛಾಯಾಗ್ರಹಣಕ್ಕೆ ಒತ್ತು ನೀಡಲಾಗಿದೆ. ಕೃಪಾಕರ-ಸೇನಾನಿ ಅವರು ಸೆರೆಹಿಡಿದ ಫೋಟೋ ಸೇರಿದಂತೆ ದೇಶ-ವಿದೇಶದ ಸುಮಾರು 300 ಆಯ್ದ ಫೋಟೋಗಳನ್ನು ಪ್ರದರ್ಶಿಸಲಾಗುವುದು.
ಬೃಹತ್ ವೇದಿಕೆ, ಮಕ್ಕಳಿಗೆ ಅರಣ್ಯದ ಬಗ್ಗೆ ಅರಿವು ಮೂಡಿಸಲು ಪ್ರಯತ್ನ:
ಜಾಂಬೂರಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕಾಗಿ ಆರು ವೇದಿಕೆಗಳ ಜೊತೆಗೆ ಬೃಹತ್ ವೇದಿಕೆಯನ್ನೂ ನಿರ್ಮಿಸಲಾಗಿದೆ. ಇಲ್ಲಿ 150 ಹುಲಿ ವೇಷಗಳು, ನವದುರ್ಗೆಯರು ಒಟ್ಟಿಗೆ ಕುಣಿಯುವ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಐದಾರು ತಂಡಗಳು ಮಾತ್ರ ವೇದಿಕೆಯಲ್ಲಿ ಪ್ರದರ್ಶನ ನೀಡಬಹುದಾಗಿತ್ತು.. ಆದರೆ ಜಾಂಬೂರಿಯಲ್ಲಿ ಅದಕ್ಕಿಂತ ಐದಾರು ಪಟ್ಟು ಹೆಚ್ಚು ಜನ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಲಾಗಿದೆ.
ಎಲ್.ಸಿ ಸೋನ್ಸ್ ಅವರ ಜಾಗದಲ್ಲಿರುವ ಸುಮಾರು ಹತ್ತು ಎಕರೆ ಕಾಡಿನ ಪ್ರದೇಶದಲ್ಲಿ ಕಾಡಿನ ವಾತಾವರಣ ಸೃಷ್ಟಿ ಮಾಡಿ ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸುವ ಕೆಲಸ ಕೈಗೊಂಡಿದ್ದೇವೆ ಎಂದು ಡಾ.ಮೋಹನ ಆಳ್ವ ವಿವರಿಸಿದ್ದಾರೆ.
165 ಕಿಲೋ ಮೀಟರ್ ಸ್ವಚ್ಛತಾ ಆಂದೋಲನಾ:
“ನಮ್ಮ ಸಂಸ್ಕೃತಿ, ಸ್ವಚ್ಛ ಸಂಸ್ಕೃತಿ” ಎಂಬ ಹೆಸರಿನಲ್ಲಿ ಈ ಬಾರಿ 165 ಕಿಲೋ ಮೀಟರ್ ದೂರದವರೆಗೆ ಸ್ವಚ್ಛತಾ ಆಂದೋಲನಾ ನಡೆಸುವ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದೇವೆ. ಒಟ್ಟು 8 ಮಾರ್ಗಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಅಂದಾಜು 35 ಕೋಟಿ ಖರ್ಚು…ದೇಣಿಗೆ ನೀಡಿ ಸಹಕರಿಸಿ…
ಈ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಅಂದಾಜು 35 ಕೋಟಿ ರೂಪಾಯಿ ವ್ಯಯಿಸಬೇಕಾಗಿದೆ. ಜಾಂಬೂರಿಯನ್ನು ಯಶಸ್ವಿಗೊಳಿಸಲು ದೊಡ್ಡ ಮೊತ್ತದ ಅಗತ್ಯವಿದೆ. ಈಗಾಗಲೇ ಕರ್ನಾಟಕ ಸರ್ಕಾರ 10 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ. ಇನ್ನುಳಿದಂತೆ ಸಾರ್ವಜನಿಕರು, ಆಸಕ್ತರು, ದಾನಿಗಳು ದೇಣಿಗೆಯನ್ನು ನೀಡಿ ಸಹಕರಿಸಬೇಕಾಗಿದೆ. ಜನರು ವಸ್ತು ಮತ್ತು ಹೊರೆಕಾಣಿಕೆ ರೂಪದಲ್ಲಿ ನಮ್ಮನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಡಾ.ಮೋಹನ್ ಆಳ್ವ ವಿನಂತಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.