75 ದಿನಗಳ ನೀಲ ನಕ್ಷೆ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ “ಕಣ’ಕಹಳೆ
ಬಿಜೆಪಿಗೆ ಪ್ರತಿತಂತ್ರ ಹೆಣೆಯಲು ಖರ್ಗೆ ತಂತ್ರಗಾರಿಕೆ
Team Udayavani, Dec 13, 2022, 6:35 AM IST
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ದಿಲ್ಲಿಯಿಂದ ರಣಕಹಳೆ ಮೊಳಗಿಸಿದ್ದು, 75 ದಿನಗಳ “ವಿಸ್ತೃತ ನೀಲ ನಕ್ಷೆ’ (ರೋಡ್ ಮ್ಯಾಪ್) ಸಿದ್ಧಪಡಿಸಿದೆ. ಗುಜರಾತ್ ಫಲಿತಾಂಶದ ಬಳಿಕ ಬಿಜೆಪಿ ರಣತಂತ್ರ ವೇಗ ಪಡೆದುಕೊಂಡ ಬೆನ್ನಲ್ಲೇ ಪ್ರತಿತಂತ್ರ ಹೆಣೆಯಲು ಕಾಂಗ್ರೆಸ್ ಸಜ್ಜಾಗಿದೆ. ಅಷ್ಟೇ ಅಲ್ಲ, ಸಿಎಂ ಚರ್ಚೆಗೆ ಬ್ರೇಕ್ ಹಾಕುವಂತೆಯೂ ಹೈಕಮಾಂಡ್ ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದೆ.
ತವರು ರಾಜ್ಯ ಕರ್ನಾಟಕವನ್ನು ತೆಕ್ಕೆಗೆ ತೆಗೆದು ಕೊಳ್ಳಲು ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಂಗಪ್ರವೇಶ ಮಾಡಿದ್ದಾರೆ. ಅವರ ಸಾರಥ್ಯದಲ್ಲಿ ದಿಲ್ಲಿಯಲ್ಲಿ ಸೋಮವಾರ ನಡೆದ ರಾಜ್ಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ಯಲ್ಲಿ ರೋಡ್ ಮ್ಯಾಪ್ ತೀರ್ಮಾನ ತೆಗೆದು ಕೊಳ್ಳಲಾಗಿದೆ. ಇದರಂತೆ ನಾಲ್ಕು ಬೃಹತ್ ಸಮಾವೇಶಗಳು ಮತ್ತು ಸಾಮೂಹಿಕವಾಗಿ ಬಸ್ ಯಾತ್ರೆ ಕೈಗೊಳ್ಳಲು ನಿರ್ಧರಿಸಲಾಗಿದೆ.
ಏನಿದು ವಿಸ್ತೃತ ನೀಲ ನಕ್ಷೆ?
ಬೊಮ್ಮಾಯಿ ನೇತೃತ್ವದ 40 ಪರ್ಸೆಂಟ್ ಭ್ರಷ್ಟ ಸರಕಾರದ ವಿರುದ್ಧ ಹೋರಾಟ ನಡೆಸಲು ಹಾಗೂ ಜನರಿಗೆ ಅಭಿವೃದ್ಧಿಯ ವಿಚಾರಗಳನ್ನು ತಿಳಿಸಲು, ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ದಿಕ್ಸೂಚಿ ತೋರಿಸಲು 75 ದಿನಗಳ ವಿಸ್ತೃತ ನೀಲ ನಕ್ಷೆ ರೂಪಿಸಲಾಗಿದೆ. ಬೆಳಗಾವಿ ಅಧಿವೇಶನದ ಬಳಿಕ ಯೋಜನಾಬದ್ಧ ರೀತಿಯಲ್ಲಿ ಕಾರ್ಯ ರಂಗಕ್ಕಿಳಿಯಲು ಪಣ ತೊಡಲಾಗಿದೆ ಎಂದು ರಣದೀಪ್ ಸುಜೇìವಾಲ ತಿಳಿಸಿದ್ದಾರೆ.
ಯಾರೆಲ್ಲ ಸಭೆಯಲ್ಲಿ ಭಾಗಿ?
ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಹಲವು ನಾಯಕರು ಭಾಗವಹಿಸಿದ್ದರು.
ಜಂಟಿ ಬಸ್ ಯಾತ್ರೆ
ಮೊದಲ ಹಂತದಲ್ಲಿ 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಮಾಡಲಿದ್ದೇವೆ ಎಂದು ಸಭೆ ಅನಂತರ ಸಿದ್ದರಾಮಯ್ಯ ಹೇಳಿದ್ದಾರೆ. ಇದರಲ್ಲಿ ನಾನು, ಕೆಪಿಸಿಸಿ ಅಧ್ಯಕ್ಷರು ಸೇರಿ ಎಲ್ಲರೂ ಪಾಲ್ಗೊಳ್ಳುತ್ತೇವೆ. ಇದಾದ ಬಳಿಕ ಎರಡು ತಂಡಗಳನ್ನು ಮಾಡಿ, ಪ್ರತ್ಯೇಕವಾಗಿ ವಿಧಾನಸಭಾ ಕ್ಷೇತ್ರದ ಯಾತ್ರೆ ನಡೆಸುತ್ತೇವೆ ಎಂದು ಹೇಳಿದರು.
ಸಿಎಂ ಮಾತು ಬೇಡ
ಮುಂದಿನ ಸಿಎಂ ಕುರಿತ ಹೇಳಿಕೆಗಳಿಗೆ ತಡೆ ಹಾಕಿರುವ ಹೈಕಮಾಂಡ್, ಎಲ್ಲರೂ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಮೊದಲ ಆದ್ಯತೆ ಯಾಗಬೇಕು. ಈ ಸಂಬಂಧ ನಾಯಕರು ತಮ್ಮ ಬೆಂಬಲಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಏನೇ ಸಮಸ್ಯೆ ಬಂದರೂ ಹಿರಿಯ ನಾಯಕರ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ ಎನ್ನಲಾಗಿದೆ.
ನಾಲ್ಕು ಬೃಹತ್ ಸಮಾವೇಶಗಳು
01 ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಬಿಜೆಪಿ ಸರಕಾರದ ಸುಳ್ಳುಗಳು, ಕಾಂಗ್ರೆಸ್ ಬದ್ಧತೆ ತಿಳಿಸುವ ಸಮಾವೇಶ
ಸ್ಥಳ: ವಿಜಯಪುರ lದಿನಾಂಕ: ಡಿ. 30
02. ಮಹದಾಯಿ ವಿಚಾರ
ಸ್ಥಳ: ಹುಬ್ಬಳ್ಳಿ l ದಿನಾಂಕ: ಜ. 02
03.ಮೀಸಲಾತಿ ವಿಚಾರದಲ್ಲಿ ಬಿಜೆಪಿ ದಾರಿ ತಪ್ಪಿಸುತ್ತಿರುವ ಬಗ್ಗೆ ಅರಿವು ಮೂಡಿಸಲು ಎಸ್‌ಸಿ-ಎಸ್‌ಟಿ ಸಮಾವೇಶ
ಸ್ಥಳ: ಚಿತ್ರದುರ್ಗ l ದಿನಾಂಕ: ಜ. 08
04. ಒಬಿಸಿ ಸಮಾವೇಶ
ಸ್ಥಳ, ದಿನಾಂಕ l ನಿಗದಿಯಾಗಿಲ್ಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.