ವಿಸ್ತರಣಾವಾದದ ಗುಂಗಿನಿಂದ ಚೀನ ಇನ್ನಾದರೂ ಹೊರಬರಲಿ
Team Udayavani, Dec 14, 2022, 6:00 AM IST
ಭಾರತದ ಪಾಲಿಗೆ ಸದಾ “ಹೊರೆ’ಯೇ ಆಗಿರುವ ನೆರೆಯ ರಾಷ್ಟ್ರ ಚೀನದ ಯೋಧರು ವಾಸ್ತವಿಕ ನಿಯಂತ್ರಣ ರೇಖೆಯ ಸನಿಹ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತದ ಯೋಧರೊಂದಿಗೆ ಪರಸ್ಪರ ತಳ್ಳಾಟ ನಡೆಸುವ ಮೂಲಕ ಕಳೆದ ಮೂರ್‍ನಾಲ್ಕು ತಿಂಗಳುಗಳಿಂದೀಚೆಗೆ ಗಡಿ ಪ್ರದೇಶದಲ್ಲಿ ನೆಲೆಸಿದ್ದ ಸೌಹಾರ್ದ ವಾತಾವರಣವನ್ನು ಮತ್ತೆ ಕದಡಿದ್ದಾರೆ.
ಚೀನದ ಯೋಧರು ಗಡಿ ಕಾವಲಿಗೆ ನಿಯೋಜಿತರಾಗಿದ್ದ ಭಾರತೀಯ ಯೋಧರೊಡನೆ ಮಾತಿನ ಚಕಮಕಿ ನಡೆಸಿದ್ದೇ ಅಲ್ಲದೆ ಕೈ-ಕೈ ಮಿಲಾಯಿಸಿದ್ದರ ಪರಿಣಾಮ ಭಾರತೀಯ ಯೋಧರು ಚೀನಿ ಯೋಧರಿಗೆ ಮರ್ಮಾಘಾತವನ್ನೇ ನೀಡಿದ್ದು ಅವರನ್ನು ಗಡಿ ಪ್ರದೇಶದಿಂದ ಒಧ್ದೋಡಿಸಿದ್ದಾರೆ. ಕಾಲುಕೆರೆದು ಭಾರತೀಯ ಸೇನೆಯೊಂದಿಗೆ ಸೆಣಸಾಡಲು ಬಂದ ಚೀನಿ ಪಡೆಗೆ ಮತ್ತೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಇಡೀ ಘಟನೆ ಚೀನದ ನರಿ ಬುದ್ಧಿಗೆ ಮತ್ತೂಂದು ಸಾಕ್ಷಿ ಒದಗಿಸಿದೆ. 2020ರ ಜೂನ್‌ನಲ್ಲಿ ಗಾಲ್ವಾನ್ ಬಳಿ ಭಾರತ ಮತ್ತು ಚೀನ ಯೋಧರ ನಡುವೆ ನಡೆದ ಬಲುದೊಡ್ಡ ಸಂಘರ್ಷದಲ್ಲಿ ಇತ್ತಂಡಗಳಲ್ಲೂ ಸಾವುನೋವುಗಳು ಸಂಭವಿಸಿದ್ದವು. ಅಲ್ಲಿನ ಗಡಿ ಭಾಗದಲ್ಲಿ ಚೀನ ತನ್ನ ಸೇನೆಯನ್ನು ತಿಂಗಳುಗಳ ಕಾಲ ನಿಯೋಜಿಸಿ ಭಾರತದ ಮೇಲೆ ಪ್ರಬಲ ಒತ್ತಡ ಹೇರಿದರೂ ಚೀನಿ ಯೋಧರನ್ನು ಅವರ ಭೂಪ್ರದೇಶಕ್ಕೆ ಹಿಮ್ಮೆಟ್ಟಿಸುವವರೆಗೆ ಭಾರತೀಯ ಸೇನೆ ಅಲ್ಲಿಂದ ಕದಲಿರಲಿಲ್ಲ. ತಿಂಗಳುಗಳ ಹಿಂದೆಯಷ್ಟೇ ಎರಡೂ ದೇಶಗಳು ಎಲ್‌ಎಸಿಯಿಂದ ತಮ್ಮ ಪಡೆಗಳನ್ನು ವಾಪಸು ಕರೆಸಿಕೊಳ್ಳಲು ನಿರ್ಧರಿಸಿದ್ದವು. ಅದರಂತೆ ಚೀನಿ ಯೋಧರು ಗಡಿ ಪ್ರದೇಶದಿಂದ ವಾಪಸಾದ ಬಳಿಕವಷ್ಟೇ ಭಾರತ ತನ್ನ ಯೋಧರನ್ನು ಕೂಡ ಹಿಂದೆಗೆದುಕೊಂಡಿತ್ತು. ಆದರೂ ಚೀನವನ್ನು ನಂಬದ ಭಾರತ ಎಲ್‌ಎಸಿ ಮತ್ತು ತನ್ನ ಭೂಪ್ರದೇಶದುದ್ದಕ್ಕೂ ಹದ್ದುಗಣ್ಣಿರಿಸಿತ್ತು.
ಕೇವಲ ಭಾರತ ಮಾತ್ರವಲ್ಲದೆ ಫೆಸಿಫಿಕ್ ವಲಯದ ದೇಶಗಳ ಸಹಿತ ಜಾಗತಿಕ ಸಮುದಾಯದಿಂದ ಚೀನದ ವಿಸ್ತರಣ ನೀತಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಲೇ ಬಂದಿದ್ದರೂ ಚೀನ ಮಾತ್ರ ತನ್ನ ಹಠಮಾರಿತನವನ್ನು ಬಿಡುತ್ತಿಲ್ಲ ಮಾತ್ರವಲ್ಲದೆ ಈ ವಿಚಾರದಲ್ಲಿ ಮಾತ್ರ ಸೋಗಲಾಡಿತನವನ್ನು ಪ್ರದರ್ಶಿಸುತ್ತಲೇ ಬಂದಿದೆ. ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕು ಪ್ರತಿಪಾದಿಸಲು ಇನ್ನಿಲ್ಲದ ಕುತಂತ್ರಗಳನ್ನು ಅನುಸರಿಸುತ್ತ ಬಂದಿರುವ ಚೀನ ಇದರ ಮುಂದಿನ ಭಾಗವಾಗಿ ಗಡಿಯಲ್ಲಿ ಭಾರತೀಯ ಯೋಧರೊಂದಿಗೆ ಸಂಘರ್ಷ ನಡೆಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನು ಇತ್ತ ಸೆಳೆ ಯುವ ಪ್ರಯತ್ನ ಮಾಡಿದೆ. ಭಾರತ ಮತ್ತು ಅಮೆರಿಕದ ಜಂಟಿ ಸಮ ರಾಭ್ಯಾಸ ನಡೆಸುತ್ತಿರುವ ಬೆನ್ನಲ್ಲೇ ಚೀನ ಈ ಪ್ರಯತ್ನ ನಡೆಸಿರುವುದು ಗಡಿಯಲ್ಲಿನ ಸಂಘರ್ಷದ ಉದ್ದೇಶವೇನು ಎಂಬುದು ಸುಸ್ಪಷ್ಟ.
ಚೀನ ಇಂತಹ ಕುಟಿಲ ನೀತಿಗಳನ್ನು ಇನ್ನಾದರೂ ಕೈಬಿಟ್ಟು ನೆರೆ ರಾಷ್ಟ್ರಗಳೊಡನೆ ಸ್ನೇಹ-ಸೌಹಾರ್ದದ ಸಂಬಂಧ ಬೆಸೆಯಲು ಮುಂದಾಗದೇ ಹೋದಲ್ಲಿ ಇಡೀ ಜಾಗತಿಕ ಸಮುದಾಯದ ಅವಗಣನೆಗೆ ತುತ್ತಾಗಲಿರುವುದು ನಿಶ್ಚಿತ. ಭಾರತದೊಂದಿಗಿನ ವಿರಸ ತನ್ನ ಅಸ್ತಿತ್ವಕ್ಕೇ ಕುತ್ತು ತರಲಿದೆ ಎಂಬುದನ್ನು ತನ್ನ ಮಿತ್ರರಾಷ್ಟ್ರ ಪಾಕಿಸ್ಥಾನದಿಂದಲಾದರೂ ಚೀನ ಕಲಿತುಕೊಳ್ಳದೇ ಹೋದಲ್ಲಿ ತನ್ನ ಸ್ವಯಂಕೃತ ಅಪರಾಧಕ್ಕೆ ಪ್ರಾಯಶ್ಚಿತ್ತ ಅನುಭವಿಸಲಿರುವುದಂತೂ ಶತಃಸಿದ್ಧ. ಯುದ್ಧ, ಸಂಘರ್ಷಗಳಿಂದ ಜಗತ್ತನ್ನು ಗೆಲ್ಲಬಹುದೆಂಬ ಹುಂಬತನವನ್ನು ಚೀನ ಇನ್ನಾದರೂ ಬಿಟ್ಟುಬಿಡುವುದು ಒಳಿತು. ಇಲ್ಲವಾದಲ್ಲಿ ಈಗಾಗಲೇ ಸಾಮಾಜಿಕ, ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಚೀನದ ಆಡಳಿತಾರೂಢರು ಸ್ವದೇಶೀಯರ ಆಕ್ರೋಶಕ್ಕೆ ತುತ್ತಾಗುವುದು ನಿಶ್ಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.