ಕಾರ್ಯಕ್ರಮಗಳ ಸುಗ್ಗಿ..ಕಲಾವಿದರಿಗೆ ಹುಗ್ಗಿ!
ಎರಡೇ ತಿಂಗಳಲ್ಲಿ 220 ಕಾರ್ಯಕ್ರಮ ; 31ರವರೆಗೆ ಎಲ್ಲಾ ಸಭಾಂಗಣಗಳು ಬುಕ್; ಧನಸಹಾಯಕ್ಕೆ ಕಾರ್ಯಕ್ರಮ ಕಡ್ಡಾಯ
Team Udayavani, Dec 16, 2022, 3:56 PM IST
ಧಾರವಾಡ: ತುಂಬಿ ತುಳುಕುತ್ತಿರುವ ಧಾರಾನಾಗರಿಯ ಸಭಾಂಗಣಗಳು, ವಿವಿಧ ಕಾರ್ಯಕ್ರಮಗಳಲ್ಲಿ ಮಿಂಚುತ್ತಿರುವ ಕಲಾವಿದರು, ಚಿಮ್ಮುತ್ತಿರುವ ಕಲಾ ಉತ್ಸಾಹ, ಹೊಮ್ಮುತ್ತಿರುವ ಸಾಂಸ್ಕೃತಿಕ ವಾತಾವರಣ. ಒಟ್ಟಿನಲ್ಲಿ ಕಾರ್ಯಕ್ರಮಗಳ ಸುಗ್ಗಿ ಕಲಾವಿದರಿಗೆ ಒಂದಿಷ್ಟು ಹುಗ್ಗಿ.
ಹೌದು. ಕಳೆದೊಂದು ತಿಂಗಳಿಂದ ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಬಿಟ್ಟೂ ಬಿಡದೆ ಕಾರ್ಯಕ್ರಮಗಳು ಎಲ್ಲಾ ಸಭಾ ಭವನಗಳಲ್ಲಿಯೂ ಲಗ್ಗೆ ಹಾಕಿದ್ದು, ಈ ಹಿಂದೆ ಎಂದೂ ಧಾರವಾಡದಲ್ಲಿ ನಡೆಯದಷ್ಟು ಸಾಂಸ್ಕೃತಿ ಕಾರ್ಯಕ್ರಮಗಳು ಡಿಸೆಂಬರ್ ಇಡೀ ತಿಂಗಳಿನಲ್ಲಿ ನಿಗದಿಯಾಗಿವೆ. ಇದಕ್ಕೇನು ಕಾರಣವಿರಬಹುದು ಎಂದು ನೀವು ಕೇಳಬಹುದು. ಇದಕ್ಕೆ ಕಾರಣವಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿರುವ ನೂತನ ಆದೇಶ.
ವರ್ಷಪೂರ್ತಿ ಕಲೆ, ಜಾನಪದ, ಸಾಂಸ್ಕೃತಿಕ ಸೊಗಡಿನ ಕಾರ್ಯಕ್ರಮಗಳನ್ನು ಮಾಡಿ ಅದನ್ನು ಸರ್ಕಾರಕ್ಕೆ ವರದಿ ಮಾಡಿ ಅನುದಾನ ಪಡೆದುಕೊಳುತ್ತಿದ್ದ ಸಂಘ-ಸಂಸ್ಥೆಗಳಿಗೆ ಈ ವರ್ಷ ಇನ್ನು ಅನುದಾನ ಬಿಡುಗಡೆಯಾಗಿಲ್ಲ. ಇದೀಗ ಅನುದಾನ ಬೇಕೆಂದರೆ 2022 ಡಿ.31ರೊಳಗೆ ಕನಿಷ್ಠ ಮೂರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಅದರ ವರದಿಯನ್ನು ಸರ್ಕಾರಕ್ಕೆ ಆನ್‌ಲೈನ್ ಮೂಲಕ ಸಲ್ಲಿಸಬೇಕಿದೆ. ಅಂತಹವರಿಗೆ ಮಾತ್ರ ಸಂಸ್ಕೃತಿ ಇಲಾಖೆ ಅನುದಾನ ನೀಡಲಿದೆಯಂತೆ. ಹೀಗಾಗಿ ಸಾಂಸ್ಕೃತಿ ಕಾರ್ಯಕ್ರಮಗಳ ಸುಗ್ಗಿಯೇ ಆರಂಭಗೊಂಡಿದೆ.
ತಿಂಗಳಲ್ಲಿ 220 ಕಾರ್ಯಕ್ರಮ: ಧಾರವಾಡದಲ್ಲಿ ವರ್ಷಪೂರ್ತಿ ಕನಿಷ್ಠ 500ಕ್ಕೂ ಅಧಿಕ ಕಾರ್ಯಕ್ರಮಗಳು ನಡೆಯುತ್ತವೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಯೇ 200ಕ್ಕೂ ಅಧಿಕ ಕಾರ್ಯಕ್ರಮಗಳು ಪ್ರತಿವರ್ಷ ಪೂರ್ವ ನಿಯೋಜನೆಗೊಂಡಿರುತ್ತವೆ. ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೂ 200ಕ್ಕೂ ಅಧಿಕ ಕಾರ್ಯಕ್ರಮ ಇದ್ದೇ ಇರುತ್ತವೆ. ಆದರೆ ಇದೀಗ ಕೇವಲ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿಯೇ ಬರೋಬ್ಬರಿ 200ಕ್ಕೂ ಅಧಿಕ ಕಾರ್ಯಕ್ರಮಗಳು ವಿವಿಧ ಸಂಘ ಸಂಸ್ಥೆಗಳಿಂದ ಜಿಲ್ಲೆಯಲ್ಲಿ ನಿಯೋಜನೆಗೊಂಡಿವೆ.
ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆಯಲು ಯೋಗ್ಯ ಇರುವ ಒಟ್ಟು 78 ಸಂಘ ಸಂಸ್ಥೆಗಳಿವೆ. ಇವುಗಳ ಕಾರ್ಯವೈಖರಿಯನ್ನು ಪರಿಶೀಲನೆ ಮಾಡಿ ಸರ್ಕಾರವೇ ಅಧಿಕೃತವಾಗಿ ಈ ಸಂಘ- ಸಂಸ್ಥೆಗಳಿಗೆ ಅನುದಾನ ನೀಡಲು ಒಪ್ಪಿದೆ. ಇಂತಹ ಸಂಘ- ಸಂಸ್ಥೆಗಳಿಗೆ ಇದೀಗ 2022ನೇ ಸಾಲಿನಲ್ಲಿ ಕನಿಷ್ಠ ಮೂರು ಕಾರ್ಯಕ್ರಮ ಆಯೋಜಿಸಬೇಕಿದೆ. ಇನ್ನು ಕೆಲವು ಸಂಸ್ಥೆಗಳು 5-8 ಕಾರ್ಯಕ್ರಮ ಮಾಡಿದ್ದು, ಅದರ ಪತ್ರಿಕಾ ವರದಿಯನ್ನು ಸರ್ಕಾರಕ್ಕೆ ಆನ್‌ಲೈನ್ ಮೂಲಕ ವರದಿ ಮಾಡುವಂತೆ ಸೂಚಿಸಲಾಗಿದೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ರಾ.ಹ.ದೇಶಪಾಂಡೆ, ಪಾಟೀಲ ಸಭಾಂಗಣ, ರಂಗಾಯಣ, ಕನ್ನಡ ಸಾಹಿತ್ಯ ಪರಿಷತ್ತು, ಆಲೂರು ವೆಂಕಟರಾವ್ ಭವನ, ಸೃಜನಾ ರಂಗಮಂದಿರಗಳು ಡಿ.31ರವರೆಗೂ ಹೆಚ್ಚು ಕಡಿಮೆ ಕಾರ್ಯಕ್ರಮಗಳಿಂದ ಬುಕ್ ಆಗಿವೆ. ಅಷ್ಟೇಯಲ್ಲ, ಪ್ರತಿದಿನ ಬೆಳಗ್ಗೆ-ಸಂಜೆ ಎರಡೂ ಹೊತ್ತು ಕಾರ್ಯಕ್ರಮಗಳು ನಿಯೋಜನೆಗೊಂಡಿರುವುದು ವಿಶೇಷ.
ಏನೇನು ಕಾರ್ಯಕ್ರಮ?
ಸಾಮಾನ್ಯವಾಗಿ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಳಗೊಂಡಿರುತ್ತದೆ. ಜಾನಪದ ಕಲೆಗಳ ಪ್ರದರ್ಶನ, ಸಂಗೀತ, ನೃತ್ಯ, ದೇಸಿ ಕಲೆಗಳು, ಪ್ರಶಸ್ತಿ ಪ್ರದಾನ, ಗೀತ ಗಾಯನ, ನಾಟಕಗಳು, ದೊಡ್ಡಾಟ, ಸಣ್ಣಾಟ, ಕೃಷ್ಣ ಪಾರಿಜಾತ, ಗೀತ ರೂಪಕಗಳು ಸೇರಿದಂತೆ ನಾನಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ವಿವಿಧ ಸಾಧಕರನ್ನು ಕರೆಯಿಸಿ ಕಾರ್ಯಕ್ರಮ ಆಯೋಜಿಸುತ್ತಿವೆ. ಅಷ್ಟೇಯಲ್ಲ ಕೆಲವು ಸಂಘಟನೆಗಳು ಕಲಾ ಶ್ರೇಷ್ಠರಿಗೆ ತಮ್ಮ ಸಂಸ್ಥೆಗಳ ಹೆಸರಿನಲ್ಲಿ ಪ್ರಶಸ್ತಿ, ಗೌರವ ಸನ್ಮಾನ ಏರ್ಪಡಿಸುತ್ತಿವೆ.
ತಾಲೂಕು ಕೇಂದ್ರ, ಗ್ರಾಮಗಳಲ್ಲೂ ಕಲರವ
ಧಾರವಾಡ-ಹುಬ್ಬಳ್ಳಿ ಹೊರತುಪಡಿಸಿ ವಿವಿಧ ತಾಲೂಕು ಕೇಂದ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಆಗಿವೆ. ಕುಂದಗೋಳ, ನವಲಗುಂದ, ಕಲಘಟಗಿ, ಅಳ್ನಾವರ, ಅಣ್ಣಿಗೇರಿಯಲ್ಲೂ ತಾಲೂಕು ಮಟ್ಟದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಆಯೋಜಿಸಿವೆ. ಸಾಲದಕ್ಕೆ ಗ್ರಾಮಗಳ ಅಂಗಳಕ್ಕೂ ಕಾಲಿಟ್ಟಿದ್ದು, ಅಲ್ಲಿಯೂ ಹಳ್ಳಿ ಸಂಪ್ರದಾಯ, ಕಲಾ ಪ್ರಕಾರಗಳನ್ನು ಉಳಿಸಿ-ಬೆಳೆಸುವುದಕ್ಕೆ ಪೂರಕವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೊದಲು ಕಾರ್ಯಕ್ರಮ ನಂತರ ಧನ ಸಹಾಯ
ಕೊರೊನಾ ಮಹಾಮಾರಿ ಹೊಡೆತ ಸೇರಿ ಕಳೆದ ಮೂರು ವರ್ಷಗಳಿಂದ ಸರ್ಕಾರ ಸಾಂಸ್ಕೃತಿಕ ಸಂಘ- ಸಂಸ್ಥೆಗಳಿಗೆ ಸರಿಯಾಗಿ ಅನುದಾನ ನೀಡಿಲ್ಲ. ಇನ್ನು ನೀಡಿದ ಅನುದಾನವನ್ನು ಸಂಘ-ಸಂಸ್ಥೆಗಳು ಸರಿಯಾಗಿ ಬಳಸಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ಮಾಡಿಲ್ಲ. ಕೆಲವು ಪಟ್ಟಭದ್ರರು ಬರೀ ಅನುದಾನ ಪಡೆದು ನಾಮಕಾವಾಸ್ತೆ ಕಾರ್ಯಕ್ರಮ ಮಾಡಿ ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ತಪ್ಪಿಸಲು ಇದೀಗ ಸರ್ಕಾರ ಕಠಿಣ ನಿಲುವು ತಳೆದಿದೆ. ಮೊದಲು ಹಣ ನೀಡಿ ಕಾರ್ಯಕ್ರಮ ಮಾಡಲು ಹೇಳುತ್ತಿದ್ದ ಸರ್ಕಾರ, ಇದೀಗ ಕಾರ್ಯಕ್ರಮ ಮಾಡಿ ದಾಖಲೆ ಕೊಟ್ಟ ನಂತರ ಹಣ ನೀಡುವ ನಿಯಮ ಜಾರಿಗೊಳಿಸಿದೆ. ಇದು ಅನೇಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸತತ 20 ವರ್ಷಗಳಿಂದ ನಾವು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಆದರೆ ಕಳೆದ ಎರಡು ವರ್ಷ ನಮ್ಮ ಸಂಸ್ಥೆಗೆ ಅನುದಾನವನ್ನೇ ನೀಡಿಲ್ಲ. ನಕಲಿ ಸಂಘಟನೆಗಳೇ ರಾರಾಜಿಸುತ್ತಿದ್ದು, ನಿಜವಾದ ಕಲಾ ಆರಾಧಕರಿಗೆ ಸರ್ಕಾರ ಧನಸಹಾಯ ನೀಡಿ ಬೆಂಬಲಿಸಬೇಕು. ಮಲ್ಲೇಶ ಹುಲಿಗೌಡರ ಜಾನಪದ ಕಲಾವಿದ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅರ್ಹ ಸಂಘ-ಸಂಸ್ಥೆಗಳಿಗೆ ಸೂಚಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಅನುದಾನ ಪಡೆದು ಕಾರ್ಯಕ್ರಮ ಮಾಡದೇ ಗೋಲ್‌ಮಾಲ್ ಮಾಡಿದ ಹಿನ್ನೆಲೆಯಲ್ಲಿ ಈ ಬಾರಿ ಇಲಾಖೆ ಕಟ್ಟುನಿಟ್ಟಾಗಿ ಸಂಘ-ಸಂಸ್ಥೆಗಳ ಕಾರ್ಯವೈಖರಿಯನ್ನು ವರೆಗೆ ಹಚ್ಚಬೇಕಿದೆ. –ಕುಮಾರ್ ಬೆಕ್ಕೇರಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಧಾರವಾಡ.
-ಡಾ|ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.