ಮೊಹಾನಿಯ ಬಹುಮುಖೀ ಕಹಾನಿ: ಕೃಷ್ಣಭಕ್ತ, ಮುಸ್ಲಿಂ ಕಮ್ಯುನಿಸ್ಟ್ , ಕಾಂಗ್ರೆಸಿಗ
Team Udayavani, Dec 17, 2022, 6:05 AM IST
ಮೆಕ್ಕಾ, ಮಥುರಾ, ಮಾಸ್ಕೋ ಈ ಮೂರು ಮಂತ್ರಗಳನ್ನು ಜೀವನದಲ್ಲಿ ತೋರಿಸಿದ ಅಪೂರ್ವ ವ್ಯಕ್ತಿತ್ವ ಮೌಲಾನಾ ಹಜ್ರತ್ ಮೊಹಾನಿ (1875-1951) ಅವರದು. ಕವಿ, ಪತ್ರಕರ್ತ, ರಾಷ್ಟ್ರೀಯ ಕಾಂಗ್ರೆಸ್- ಮುಸ್ಲಿಂ ಲೀಗ್- ಕಮ್ಯುನಿಸ್ಟ್ ಪಕ್ಷಗಳ ನೇತಾರ, ದೇಶವಿಭಜನೆಗೆ ವಿರೋಧ, ಭಾರತೀಯ ಸಂವಿಧಾನದ ಕರಡು ರಚನ ಸಮಿತಿಯ ಸದಸ್ಯನಾದರೂ ಕರಡು ಪ್ರತಿಗೆ ಸಹಿಮಾಡದೆ ಪ್ರತಿಭಟನೆ, ಗಾಂಧೀ-ಜಿನ್ನಾ ಇಬ್ಬರ ಟೀಕಾಕಾರ ಹೀಗೆ ಬಹುಮುಖದ ಮತ್ತು ತದ್ವಿರುದ್ಧವಾದರೂ ಸಮರಸತೆಯ ಕಾರ್ಯ ಶೈಲಿ ಒಬ್ಬರಲ್ಲಿ ಸಾಧ್ಯವಾದದ್ದು ಜಿಜ್ಞಾಸು ಗಳಿಗೆ ತಣಿಯದ ಕುತೂಹಲವೇ… ಅನಂತರದ ಕಾಲಘಟ್ಟದಲ್ಲಿ ಇಂತಹ ವ್ಯಕ್ತಿತ್ವ ಕಾಣಸಿಗದ್ದೂ ಹೌದು.
ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಮೊಹಾನ್ ನಗರದಲ್ಲಿ ಜನಿಸಿದ ಇವರ ಮೂಲ ಹೆಸರು ಸಯ್ಯದ್ ಫಾಜಿ ಉಲ್ ಹಸನ್. ಹುಟ್ಟೂರಿನ ಕಾರಣ ಬಳಿಕ ಹೆಸರನ್ನು ಹಜ್ರತ್ ಮೊಹಾನಿ ಎಂದಿರಿಸಿಕೊಂಡರು. ಶೃಂಗಾರಭರಿತ ಕವಿತ್ವದಿಂದ ಆಧುನಿಕ ಉರ್ದು ಕಾವ್ಯ ಸಾಹಿತ್ಯದ ಯುಗಕ್ಕೆ ಮೆರುಗು ನೀಡಿದವರು. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಮೊಹಾನಿ ತಾನೇ ಕಲಿತ ಆಲಿಗಢ ಮುಸ್ಲಿಂ ವಿ.ವಿ.ಯಲ್ಲಿ ಪ್ರಾಧ್ಯಾಪಕ ರಾಗಿ ಬಹುಕೃತಿಗಳನ್ನು ರಚಿಸಿದರು. “ಚುಪ್ಕೆ ಚುಪ್ಕೆ ರಾತ್ ದಿನ್’ ಇವರ ಪ್ರಸಿದ್ಧ ಗಜಲ್ .
ಪೂರ್ಣ ಸ್ವರಾಜ್ಯದ ಮೊದಲ ಘೋಷಣೆ
ಮೊಹಾನಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಬ್ಬ ಧೈರ್ಯಶಾಲಿ ವ್ಯಕ್ತಿ. ಅವರ ಜನಪ್ರಿಯತೆಯ ಕಾರಣದಿಂದ ಹಲವು ಬಾರಿ (1903) ಬ್ರಿಟಿಷರು ಜೈಲಿ ಗಟ್ಟಿದ್ದರು. 1904ರಲ್ಲಿ ಬಾಲಗಂಗಾಧರ ತಿಲಕ್ ನೇತೃತ್ವ ದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರಿದ ಮೊಹಾನಿ, 1921ರಲ್ಲಿ ಅಖೀಲ ಭಾರತ ಮುಸ್ಲಿಂ ಲೀಗ್ ಅಧ್ಯಕ್ಷತೆ ವಹಿಸಿದ್ದರು. 1925ರಲ್ಲಿ ಕಮ್ಯುನಿಸ್ಟ್ ಸಾರಥ್ಯ ವಹಿಸಿದವರು. 1921ರಲ್ಲಿ ಅಹ್ಮದಾಬಾದ್ ಕಾಂಗ್ರೆಸ್ ಅಧಿವೇಶನದಲ್ಲಿ ರಾಮ ಪ್ರಸಾದ್ ಬಿಸ್ಮಿಲ್ ನೇತೃತ್ವದಲ್ಲಿ ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯದ ಹಕ್ಕೊ ತ್ತಾಯ ಮಂಡಿಸಿದ ಮೊದಲ ವ್ಯಕ್ತಿ. ಲಾಹೋರ್‌ನಲ್ಲಿ 1929ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ಘೋಷಣೆಗೆ ರೂಪ ಸಿಕ್ಕಿತು.
ಮೊಹಾನಿ ನಡೆಸುತ್ತಿದ್ದ “ಉರ್ದು- ಇ -ಮೌಲ್ಲಾ’ ನಿಯತಕಾಲಿಕದಲ್ಲಿ ಈಜಿಪ್ಟ್ ನಲ್ಲಿ ಬ್ರಿಟಿಷರು ನಡೆದು ಕೊಳ್ಳುತ್ತಿದ್ದ ರೀತಿಯ ವಿರುದ್ಧ ಲೇಖನ ಬರೆದುದಕ್ಕಾಗಿ ಜೈಲುವಾಸ ಅನುಭವಿಸಿದ್ದರು. ಪತ್ರಕರ್ತರಾಗಿದ್ದ ಮೊಹಾನಿ, ಪ್ರಗತಿಪರ ಲೇಖಕರ ಸಂಘದಲ್ಲಿ ಸಕ್ರಿಯರಾದ್ದರು. ಮುಸ್ಲಿಂ ಲೀಗ್ ಅಧ್ಯಕ್ಷರಾಗಿದ್ದರೂ ದೇಶ ವಿಭಜನೆ ಮತ್ತು ಪಾಕಿಸ್ಥಾನದ ಹುಟ್ಟನ್ನು ವಿರೋಧಿಸಿದ ಇವರು ಇದೇ ಕಾರಣಕ್ಕಾಗಿ ಮುಸ್ಲಿಂ ಲೀಗ್ ಸಖ್ಯ ವನ್ನು ತೊರೆದು, ಭಾರತದಲ್ಲೇ ಉಳಿದರು.
ಮೊಹಾನಿ ಭಾರತ ಕಮ್ಯುನಿಸ್ಟ್ ಪಾರ್ಟಿ ಹುಟ್ಟು ಹಾಕುವಲ್ಲಿ ಪ್ರಧಾನ ಪಾತ್ರ ವಹಿಸಿದರು. 1925ರ ಡಿಸೆಂಬರ್ 25ರಂದು ಮೊದಲ ಕಮ್ಯುನಿಸ್ಟ್ ಸಮ್ಮೇ ಳನ ನಡೆದಾಗ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅದರ ಸಿದ್ಧತೆ ನಡೆದದ್ದು ಅವರ ಕಾನ್ಪುರದ ಮನೆಯಲ್ಲಿ.
“ಇಂಕ್ವಿಲಾಬ್ ಜಿಂದಾಬಾದ್’ ಜನಕ
ವಿವಿಧ ಸಮ್ಮೇಳನಗಳಲ್ಲಿ “ಇಂಕ್ವಿಲಾಬ್ ಜಿಂದಾಬಾದ್’ (ಕ್ರಾಂತಿ ಚಿರಾಯುವಾಗಲಿ) ಘೋಷಣೆ ಯನ್ನು ಕೇಳದೆ ಇರಲಾರಿರಿ. ಇದನ್ನು ಮೊದಲು 1921ರಲ್ಲಿ ಚಲಾವಣೆಗೆ ತಂದದ್ದು ಮೊಹಾನಿ. ಬಳಿಕ ಭಗತ್ ಸಿಂಗ್ ಮತ್ತಿತರರು ಮತ್ತಷ್ಟು ಮುನ್ನೆಲೆಗೆ ತಂದರು. ವಿಚಿತ್ರವೆಂದರೆ ದೇಶವಿಭಜನೆ ಕಾರಣಕ್ಕೆ ಮುಸ್ಲಿಂ ಲೀಗ್‌ನ್ನು ಮೊಹಾನಿ ತೊರೆದರು, ಸಿಪಿಐ ಕೂಡ ಸಂಸ್ಥಾಪಕನನ್ನೇ ವಜಾಗೊಳಿಸಿತ್ತು.
ಬಹಿರಂಗ ಟೀಕೆ, ಸರಳತೆ
ಮೊಹಾನಿಯವರನ್ನು ಸಂವಿಧಾನ ರಚನೆ ಕರಡು ಸಮಿತಿಗೆ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಸಮಿತಿಯಲ್ಲಿ ಬಹಿರಂಗವಾಗಿ ಟೀಕಿಸುತ್ತಿದ್ದವರು ಮೊಹಾನಿ. ಜಾತಿ ಆಧಾರದಲ್ಲಿ ಸಂವಿಧಾನ ರಚನ ಸಮಿತಿಗೆ ನೇಮಕಗೊಳಿಸಿದ್ದನ್ನು ವಿರೋಧಿಸಿದ್ದರು. ಜಮೀನಾರಿ ಪದ್ಧತಿಯನ್ನು ಕಟುವಾಗಿ ವಿರೋಧಿಸಿದ್ದರು. “ಈ ಸಂವಿಧಾನದಲ್ಲಿ ಏನೂ ಹೊಸತಿಲ್ಲ. ಅಲ್ಲಿಂದ ಒಂದಿಷ್ಟು, ಇಲ್ಲಿಂದ ಒಂದಿಷ್ಟನ್ನು ಸೇರಿಸಿ ರಚಿಸಿದ್ದಾಗಿದೆ’ ಎಂದು ಟೀಕಿಸಿದ್ದರು. ಅವರು ಸೋವಿಯತ್ ಸಂವಿಧಾನವನ್ನು ಅಂಗೀಕರಿಸ ಬೇಕೆಂದು ಆಗ್ರಹಿಸುತ್ತಿದ್ದರು. ಕೊನೆಗೂ ಅವರು ಕರಡು ಪ್ರತಿಗೆ ಸಹಿ ಹಾಕದ ಏಕೈಕ ಸದಸ್ಯರಾದರು. ಈ ಅವಧಿಯಲ್ಲಿ ಸರಕಾರದ ಬಂಗೆೆಯಲ್ಲಿರಲು ಬಯ ಸದ ಮೊಹಾನಿ, ಮಸೀದಿಯಲ್ಲಿ ಮಲಗಿ ಟಾಂಗಾದಲ್ಲಿ ಸಂಸತ್ತಿಗೆ ಬರುತ್ತಿದ್ದರು. ಸಂವಿಧಾನ ರಚನ ಸಮಿತಿ ಸದಸ್ಯರಾಗಿ ದಿನಕ್ಕೆ 75 ರೂ. ಭತ್ತೆ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರೈಲಿನ ಮೂರನೆಯ ದರ್ಜೆಯಲ್ಲಿ ಪ್ರಯಾ ಣಿಸುತ್ತಿದ್ದರು. ಇವರ ಪತ್ನಿ ಬೇಗಂ ಮೊಹಾನಿಯವರೂ (ನಿಶಾತ್ ಅಲ್-ನಿಸಾ ಬೇಗಮ್, 1885-1937) ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ಲೆನಿನ್ ಮಾದರಿಗೆ ಒಲವು
ಕಮ್ಯುನಿಸಂ ಕುರಿತು ತಪ್ಪು ತಿಳಿವಳಿಕೆ ಇರುವುದನ್ನು ಹೋಗಲಾಡಿಸಲು ಮೊಹಾನಿ ಪ್ರಯತ್ನಿಸಿದ್ದರು. ತನ್ನನ್ನು ಸೂಫಿ ಸಂತನೆಂದೂ, ಮುಸ್ಲಿಂ ಕಮ್ಯುನಿಸ್ಟ್‌ನೆಂದೂ, ನನ್ನ ದಾರಿ ಸಂತತ್ವ ಮತ್ತು ಕ್ರಾಂತಿಕಾರತ್ವ ಎಂದು ಹೇಳುತ್ತಿದ್ದರು. ಒಂದು ಹಂತದಲ್ಲಿ “ನಾವೇಕೆ ಗಾಂಧಿಯಂತೆ ಚರಕ ನೂಲುತ್ತ ಇರಬೇಕು? ಲೆನಿನ್ ರೀತಿಯಲ್ಲಿ ಜಗತ್ತನ್ನೇ ನಡುಗಿಸಬೇಕು’ ಎಂದೂ ಕರೆ ಕೊಟ್ಟಿದ್ದರು. ರಷ್ಯಾದ ಕಮ್ಯುನಿಸ್ಟ್ ನಾಯಕ ಲೆನಿನ್ ಭೇಟಿ ಮಾಡಿದ್ದರೆನ್ನಲಾಗಿದೆ. “ಬಂಡವಾಳಶಾಹಿತ್ವಕ್ಕೆ ಕಮ್ಯುನಿಸಂಗಿಂತ ಇಸ್ಲಾಂ ಕಟ್ಟಾ ವಿರೋಧಿ’ ಎನ್ನುತ್ತಿದ್ದರು.
ಅಖಂಡ ಭಾರತದ ಒಕ್ಕೂಟ ಕಲ್ಪನೆ
ಭಾರತವನ್ನು ಯೂನಿಯನ್ ಆಫ್ ಸೋವಿಯತ್ ಸೋಶಿಯಲಿಸ್ಟ್ ರಿಪಬ್ಲಿಕ್ (ಯುಎಸ್‌ಎಸ್‌ಆರ್-ಮಾಸ್ಕೋ) ಮಾದರಿಯಲ್ಲಿ ರೂಪಿಸಬೇಕೆಂದು ಕೊಂಡಿದ್ದರು. ಅ.ಭಾ.ಒಕ್ಕೂಟದ ಕಲ್ಪನೆ ಹೀಗಿತ್ತು: 1. ಪೂರ್ವ ಪಾಕಿಸ್ಥಾನ, 2. ಪಶ್ಚಿಮ ಪಾಕಿಸ್ಥಾನ, 3. ಮಧ್ಯ ಭಾರತ, 4. ಆಗ್ನೇಯ ಭಾರತ, 5. ನೈಋತ್ಯ ಭಾರತ, 6. ಹೈದರಾಬಾದ್ ದಕ್ಕಣ. ಈ ಮಾದರಿ ಒಕ್ಕೂಟದ ಕಲ್ಪನೆ ಜಾರಿಯಾಗಿದ್ದರೆ ಮುಂದೇನಾಗುತ್ತಿತ್ತು ಎನ್ನುವುದನ್ನು ಹೇಳಲಾಗದು. ಕಾಲಕ್ರಮೇಣ ರಷ್ಯಾದಲ್ಲಿ ಈ ಕಲ್ಪನೆ ವಿಫಲವಾಯಿತು. ಜನರ ಬುದ್ಧಿ ನೆಟ್ಟಗಿದ್ದರೆ ನರಕವೂ ಸ್ವರ್ಗವಾದೀತು, ಇಲ್ಲವಾದರೆ ಸ್ವರ್ಗವೂ ನರಕವಾದೀತು.
ಉಭಯ ರಾಷ್ಟ್ರಗಳಲ್ಲಿ ಸ್ಮಾರಕ
ಮೊಹಾನಿಯವರ ಸ್ಮಾರಕ ಭಾರತ ಮತ್ತು ಪಾಕಿಸ್ಥಾನ ಎರಡೂ ದೇಶಗಳಲ್ಲಿರುವುದು ವಿಶೇಷ. ಕರಾಚಿಯಲ್ಲಿ ಮೊಹಾನಿ ಸ್ಮಾರಕ ಗ್ರಂಥಾಲಯ, ಹಾಲ್, ಹಜ್ರತ್ ಮೊಹಾನಿ ಕಾಲನಿ ಇದೆ. ಥಾಣೆಯ ಮುಂಬ್ರಾದಲ್ಲಿ ಮೊಹಾನಿ ಹೆಸರಿನ ರಸೆೆ¤, ಕಾನಪುರದಲ್ಲಿ ಇವರ ಹೆಸರಿನ ಆಸ್ಪತ್ರೆ, ಒಂದು ರಸ್ತೆ, ಕಾನ್ಪುರ ಸಮೀಪದ ಬಿತೂರ್‌ನಲ್ಲಿ ಗ್ಯಾಲರಿ ಇದೆ. 2014ರಲ್ಲಿ ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತ್ತು.
ಮೆಕ್ಕಾ-ಮಥುರಾ ಯಾತ್ರೆ
11 ಬಾರಿ (4 ಬಾರಿ ಪತ್ನಿ ಜತೆ) ಮೆಕ್ಕಾ ಯಾತ್ರೆ ಮಾಡಿದ್ದ ಮೊಹಾನಿ, ಮಥುರಾಕ್ಕೆ ಪ್ರತೀ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಭೇಟಿ ಕೊಡುತ್ತಿದ್ದರು. “ಕೃಷ್ಣನನ್ನು ಪ್ರೀತಿಸಿದ ಮೌಲಾನಾ’ ಎಂಬ ಕವನವನ್ನೂ ರಚಿಸಿದ್ದರು.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.