ರೈತರು ಕೋರ್ಟ್, ಕಚೇರಿ ಅಲೆಯುವುದ ತಪ್ಪಿಸಿ
Team Udayavani, Dec 18, 2022, 4:46 PM IST
ಭಾರತೀನಗರ: ಅಧಿಕಾರಿಗಳು ರೈತರಿಗೆ ತೊಂದರೆ ಕೊಡದೆ ಸರಿಯಾಗಿ ಕೆಲಸ ನಿರ್ವಹಿಸಿ ಕೋರ್ಟ್, ಕಚೇರಿ ಹತ್ತದಂತೆ ನೋಡಿಕೊಳ್ಳಿ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಇಲ್ಲಿಗೆ ಸಮೀಪದ ಹೊನ್ನಾಯಕನಹಳ್ಳಿ ಗ್ರಾಮದಲ್ಲಿ ತೊರೆಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮುಗ್ಧ ಜನರಿಗೆ ತಿಳಿವಳಿಕೆ ಕಡಿಮೆ ಇರುತ್ತದೆ. ಅಧಿಕಾರಿಗಳು ಅವರಿಗೆ ಸರಿಯಾಗಿ ಸ್ಪಂದಿಸಿ ಅವರ ಸಮಸ್ಯೆ ಯನ್ನು ಬಗೆಹರಿಸುವಲ್ಲಿ ಕ್ರಮಕೈಗೊಳ್ಳಿ ಎಂದುತಿಳಿಸಿದರು.
ಹೋರಾಟ ನಡೆಸುತ್ತಿದ್ದರೂ ಕಿಮ್ಮತ್ತಿಲ್ಲ: ರೈತರು ಸಂಕಷ್ಟದಲ್ಲಿದ್ದಾರೆ. ಅವರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ಪರಿತಪಿಸುತ್ತಿದ್ದಾರೆ. ರೈತರು 2 ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಿಮ್ಮತ್ತು ನೀಡುತ್ತಿಲ್ಲ. ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಲ್ಲಿ ಮುಂದಾಗಬೇಕು ಎಂದು ವಿವರಿಸಿದರು.
ಡೀಸಿ, ಎಡೀಸಿ ಬಗ್ಗೆ ಉತ್ತಮ ಅಭಿಪ್ರಾಯವಿದೆ: ಜನರ ಸಮಸ್ಯೆಗಳನ್ನು ಹಾಲಿಸಲು ಅಧಿಕಾರಿಗಳೇ ಹಳ್ಳಿಗಳಿಗೆ ಬಂದಿದ್ದಾರೆ. ಜಿಲ್ಲಾಧಿಕಾರಿ ಗೋಪಾಲಕೃಷ್ಣ ಮತ್ತು ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜ್ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ, ಬಗೆಹರಿಸುವಲ್ಲಿ ಕ್ರಮಕೈಗೊಳ್ಳುತ್ತಾರೆ ಎಂಬ ನಂಬಿಕೆ ಜನರಲ್ಲಿದೆ ಎಂದು ಹೇಳಿದರು.
14 ಟಿಎಂಸಿ ನೀರು: ರೈತರ ಅನುಕೂಲಕ್ಕಾಗಿ ನನ್ನ ಅವಧಿಯಲ್ಲಿ ಹೆಬ್ಟಾಳ ಚನ್ನಯ್ಯನಾಲೆ, ಹೆಬಕವಾಡಿ ನಾಲೆಯನ್ನು ಅಭಿವೃದ್ಧಿಪಡಿಸಿ ಕೊನೆಯ ಭಾಗಕ್ಕೆನೀರು ಒದಗಿಸಲು ಮುಂದಾಗಿದ್ದೇನೆ. ಮಂಡ್ಯಜಿಲ್ಲೆಯ ರೈತರ ಬೆಳೆಗಳಿಗೆ ನೀರು ಕೊಡಿಸಲು ಮಾಜಿ ಪ್ರಧಾನಿ ದೇವೇಗೌಡರು ಹೋರಾಟ ನಡೆಸಿ 14ಟಿಎಂಸಿ ನೀರು ನೀಡುವಂತೆ ಮಾಡಿದ್ದಾರೆ ಎಂದು ವಿವರಿಸಿದರು.
72 ಗಂಟೆಯೊಳಗೆ ಪರಿಶೀಲಿಸಿ: ಜಿಲ್ಲಾಧಿಕಾರಿ ಡಾ. ಎಚ್.ಎಸ್.ಗೋಪಾಲಕೃಷ್ಣ ಅವರು ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿ, ಹಳ್ಳಿಯ ಜನರ ಸಮಸ್ಯೆಗಳ ನಿವಾರಣೆಗಾಗಿ ಅಧಿಕಾರಿಗಳ ಸಭೆ ಮಾಡಲಾಗುತ್ತಿದೆ. ಈ ಗ್ರಾಮದಲ್ಲಿ 157 ಅರ್ಜಿ ಬಂದಿವೆ. ಈ ಅರ್ಜಿಯವಿಚಾರಣೆಯನ್ನು 72 ಗಂಟೆಯೊಳಗೆ ಪರಿಶೀಲಿಸಿ ಆದೇಶ ಹೊರಡಿಸುತ್ತೇವೆ ಎಂದು ವಿವರಿಸಿದರು.
ಆಧಾರ್ ಜೋಡಣೆ ಮಾಡಿಸಿ: ಜ.5ರಂದು ಮತದಾರರ ಪಟ್ಟಿ ಬಿಡುಗಡೆಗೊಳ್ಳುತ್ತದೆ. ಅದರಲ್ಲಿ ಮತದಾರರ ಹೆಸರೇನಾದರೂ, ಕೈಬಿಟ್ಟಿದ್ದಲ್ಲಿ ಆಧಾರ್ ನಂಬರ್ ಜೋಡಣೆ ಮಾಡಿ ಸರಿಪಡಿಸಿಕೊಳ್ಳಿ. ಮದ್ದೂರು ತಾಲೂಕಿನಲ್ಲಿ 30 ಸಾವಿರಕ್ಕೂ ಹೆಚ್ಚು ಮತದಾರರ ಪಟ್ಟಿಗೆ ಆಧಾರ್ ಜೋಡಣೆ ಮಾಡಿಸಿಲ್ಲ, ಅದನ್ನು ಕೂಡಲೇ ಮಾಡಿಸಿಕೊಳ್ಳಿ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜ್ ಮಾತನಾಡಿ, ಕಂದಾಯ ಇಲಾಖೆಯ ಮಾಸಾಶನ, ವಿಧವಾ ವೇತನ, ವೃದ್ಧಾಪ್ಯ ವೇತನದಂತಹ ಸೇವೆಗಳನ್ನು ಕೇವಲ 3 ದಿನಗಳೊಳಗೆ ಕಲ್ಪಿಸಲು “ಹಲೋ ಕಂದಾಯ’ 155245ಕ್ಕೆ ಕರೆ ಮಾಡಿ ಎಂದು ಹೇಳಿದರು.
ಜನ ಸಾಮಾನ್ಯರು ಮಧ್ಯವರ್ತಿಗಳ ಹತ್ತಿರ ಹೊಗದೇ ನೇರವಾಗಿ ಅಧಿಕಾರಿಗಳ ಬಳಿ ಅರ್ಜಿ ಸಲ್ಲಿಸಿ, ಸಮಸ್ಯೆಗಳಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ವಿವರಿಸಿದರು.
ಸಸಿ ವಿತರಣೆ: ಆರೋಗ್ಯ ಇಲಾಖೆಯವರು ಆಯುಷ್ಮಾನ್ ಕಾರ್ಡ್ ಅನ್ನು ನೀಡಲು ಅರ್ಜಿ ಸಲ್ಲಿಸಲಾಯಿತು. ಸಾಮಾಜಿಕ ಭದ್ರತೆ ಯೋಜನೆಯಡಿ ಅರ್ಹರಿಗೆ ಆದೇಶ ಪ್ರತಿ ವಿತರಿಸಲಾಯಿತು. ತೋಟಗಾರಿಕೆ ಇಲಾಖೆಯಿಂದ ಸಸಿ ವಿತರಿಸಲಾಯಿತು.
ಈ ವೇಳೆ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ, ಕಟ್ಟಡ ಕಾರ್ಮಿಕರ ನೋಂದಣಿ ಮಾಡಲಾಯಿತು. ಉಪವಿಭಾಗಾಧಿಕಾರಿ ಕೀರ್ತನ, ಮದ್ದೂರು ತಹಶೀಲ್ದಾರ್ ಟಿ.ಎನ್. ನರಸಿಂಹ ಮೂರ್ತಿ, ಭೂದಾಖಲೆಗಳ ಉಪ ನಿರ್ದೇಶಕ ಉಮೇಶ್, ಇಒ ಸಂದೀಪ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗಲಕ್ಷ್ಮೀ, ತೋಟ ಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿರೂಪಾ, ಉಪತಹಶೀಲ್ದಾರ್ ಶಿವಲಿಂಗಯ್ಯ, ಆರ್‌ಐರೇವಣ್ಣ, ವಿ.ಎ.ರವಿ, ಪಿಡಿಒ ನಂಜುಂಡಸ್ವಾಮಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಎಚ್.ಎನ್.ಪ್ರಕಾಶ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.