ಗಡಿಯಲ್ಲಿ ಎಂಇಎಸ್, ಶಿವಸೇನೆ ಪುಂಡಾಟ; ಮಹಾ ಮೇಳಾವ ವೇದಿಕೆ ತೆರವುಗೊಳಿಸಿದ ಪೊಲೀಸರು
ನಿಪ್ಪಾಣಿ ಸನಿಹದ ಕೊಗನೊಳ್ಳಿ ಚೆಕ್‌ಪೋಸ್ಟ್ ಬಳಿ ಪ್ರತಿಭಟನೆ
Team Udayavani, Dec 20, 2022, 7:00 AM IST
ಬೆಳಗಾವಿ/ಹೊಸದಿಲ್ಲಿ: ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಿ, ಯಾವುದೇ ಪ್ರದೇಶವನ್ನು ತಮ್ಮದು ಎಂದು ಪ್ರತಿಪಾದಿಸಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಕರೆದು ಬುದ್ಧಿ ಹೇಳಿದ್ದರೂ ತಮ್ಮ ಎಂದಿನ ಆಟಾಟೋಪ ಮುಂದುವರಿಸಿರುವ ಮಹಾರಾಷ್ಟ್ರ ನಾಯಕರು ಮತ್ತೆ ಬೆಳಗಾವಿ ಗಡಿಯಲ್ಲಿ ದಾಂಧಲೆ ಎಬ್ಬಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಮತ್ತು ಸಂಸತ್ತಿನಲ್ಲೂ ಕರ್ನಾಟಕದ ವಿರುದ್ಧ ತಗಾದೆ ತೆಗೆದಿದ್ದಾರೆ.
ಸೋಮವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ನಾಯಕರು ಎಂಇಎಸ್‌ನ ಮಹಾಮೇಳಾವದಲ್ಲಿ ಭಾಗವಹಿಸುವ ಸಲುವಾಗಿ ರಾಜ್ಯಕ್ಕೆ ಬರಲು ಯತ್ನಿಸಿದರು. ಅವರ ಬೆಳಗಾವಿ ಪ್ರವೇಶವನ್ನು ನಿರ್ಬಂಧಿಸಲಾಗಿದ್ದರೂ ಗಡಿಯ ವರೆಗೆ ಬಂದು ತಮ್ಮ ಎಂದಿನ ಆಟ ನಡೆಸಿದರು.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಮರಾಠಿ ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಲಾಗಿದೆ. ಇದನ್ನು ಖಂಡಿಸಿ ಮಹಾರಾಷ್ಟ್ರದಿಂದ ಜಿಲ್ಲೆ ಪ್ರವೇಶಿಸುತ್ತಿದ್ದ ಮಹಾ ವಿಕಾಸ ಆಘಾಡಿ ಕಾರ್ಯಕರ್ತರನ್ನು ಗಡಿಯಲ್ಲಿ ತಡೆಹಿಡಿಯಲಾಗಿದ್ದು, ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಹಾಮೇಳಾವ ರದ್ದು
ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಪ್ರಾರಂಭದಂದು ರಾಜ್ಯ ಸರಕಾರಕ್ಕೆ ಸೆಡ್ಡು ಹೊಡೆಯಲು ಎಂಇಎಸ್ ಮಹಾಮೇಳಾವ ಹಮ್ಮಿಕೊಂಡಿತ್ತು. ನಗರದ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮೇಳಾವಕ್ಕೆ ಅನುಮತಿ ನಿರಾಕರಿಸಲಾಯಿತು. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆಲೋಕ್ ಕುಮಾರ್, ಬೆಳಗಾವಿ ನಗರ ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವೇದಿಕೆ ತೆರವುಗೊಳಿಸಿದರು. ಯಾವುದೇ ಸಭೆ ಸಮಾರಂಭ ಆಯೋಜಿಸದಂತೆ ತಾಕೀತು ಮಾಡಿದರು.
2004ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸಲಾಗುತ್ತಿದೆ. ಈ ಅಧಿವೇಶನಕ್ಕೆ ವಿರುದ್ಧವಾಗಿ ಆಗಿನಿಂದಲೂ ಎಂಇಎಸ್ ಮಹಾಮೇಳಾವ ಆಯೋಜಿಸುತ್ತಿದೆ. ಒಮ್ಮೆಯೂ ಮೇಳಾವಕ್ಕೆ ಅನುಮತಿ ನಿರಾಕರಿಸಿರಲಿಲ್ಲ. ಈ ಬಾರಿ ಸರಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಮಾಜಿ ಶಾಸಕ ಉಪವಾಸ ಸತ್ಯಾಗ್ರಹ
ನಗರದ ಹಲವು ಪ್ರದೇಶಗಳಲ್ಲಿ ಕಲಂ 144 ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ. ಮೇಳಾವಕ್ಕೆ ಅನುಮತಿ ನಿರಾಕರಿಸಿದ್ದನ್ನು ಖಂಡಿಸಿ ಮಾಜಿ ಶಾಸಕ ಮನೋಹರ ಕಿಣೇಕರ ಉಪವಾಸ ಸತ್ಯಾಗ್ರಹ ನಡೆಸಿದರು. ಅನೇಕ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಅನಂತರ ಬಿಡುಗಡೆಗೊಳಿಸಿದರು.
ಕೊಲ್ಲಾಪುರದಿಂದ ಮಹಾ ವಿಕಾಸ ಆಘಾಡಿ ಕಾರ್ಯಕರ್ತರು ನಿಪ್ಪಾಣಿ ಸಮೀಪದ ಕೊಗನೊಳ್ಳಿ ಚೆಕ್‌ಪೋಸ್ಟ್ ಬಳಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸಿದರು. ಅವರನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಮಹಾರಾಷ್ಟ್ರ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಮಹಾರಾಷ್ಟ್ರದ ಚಂದಗಢ ತಾಲೂಕಿನ ಶಿನೋಳಿಯಲ್ಲಿಯೂ ಎನ್‌ಸಿಪಿ, ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರ್ನಾಟಕ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಮೇಳಾವಕ್ಕೆ ಅನುಮತಿ ನಿರಾಕರಿಸುವ ಮೂಲಕ ಸರಕಾರ ಜನರ ಪ್ರಜಾಪ್ರಭುತ್ವದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಬೆಳಗಾವಿ ನಗರ ಮತ್ತು ಜಿಲ್ಲೆಯ ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ನಿಗಾ ಇರಿಸಲಾಗಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕ್ರಮ: ಆಲೋಕ್ ಕುಮಾರ್
ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ತಡೆಯಲು ಮೇಳಾವಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಎಡಿಜಿಪಿ ಆಲೋಕ್ ಕುಮಾರ್ ತಿಳಿಸಿದರು. ಮೇಳಾವಕ್ಕೆ ಅನುಮತಿ ಕೋರಿ ಎಂಇಎಸ್ ಮುಖಂಡರು ಟಿಳಕವಾಡಿ ಠಾಣೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಒಂದು ವೇಳೆ ಬೆಳಗಾವಿಯಲ್ಲಿ ಇಂಥ ಸಂದರ್ಭದಲ್ಲಿ ಮೇಳಾವ ನಡೆಸಿದರೆ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಎಚ್ಚರಿಕೆ ನೀಡಿದರು.
ಕರ್ನಾಟಕ ಸರಕಾರದ ವಿರುದ್ಧ ಎಂಇಎಸ್ ಕಿಡಿ
ಮರಾಠಿ ಮಹಾ ಮೇಳಾವಕ್ಕೆ ಅನುಮತಿ ನಿರಾಕರಿಸಿ ವೇದಿಕೆ ತೆರವುಗೊಳಿಸಿದ್ದರಿಂದ ಎಂಇಎಸ್ ಮುಖಂಡರು ಸರಕಾರದ ವಿರುದ್ಧ ಕೆಂಡ ಕಾರಿದ್ದಾರೆ. ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಎಂಇಎಸ್, ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರ್ನಾಟಕ ಸರಕಾರ ತೆಗೆದುಕೊಂಡಿರುವ ನಿರ್ಧಾರ ಪ್ರಜಾಪ್ರಭುತ್ವದ ವಿರುದ್ಧವಾಗಿದೆ. ನಮ್ಮ ಹಕ್ಕು ಕಸಿದುಕೊಳ್ಳುವ ಮೂಲಕ ದಬ್ಟಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದರು.
ನಾವು ಮರಾಠಿ ಭಾಷಿಕರ ಪರ
ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ಮರಾಠಿ ಭಾಷಿಕರ ಪರವಾಗಿ ಮಹಾರಾಷ್ಟ್ರ ಸರಕಾರ ಇದೆ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಣೆ ಮಾಡಿದ್ದಾರೆ.
ಬೆಳಗಾವಿ ಪ್ರವೇಶಿಸದಂತೆ ಶಿವಸೇನೆಯ ಸಂಸದ ಧೈರ್ಯಶೀಲ ಮಾನೆ ಅವರಿಗೆ ತಡೆಯೊಡ್ಡಿದ ಕರ್ನಾಟಕ ಸರಕಾರದ ಕ್ರಮದ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಅಜಿತ್ ಪವಾರ್ ಮತ್ತು ವಿಧಾನಪರಿಷತ್‌ನಲ್ಲಿ ವಿಪಕ್ಷ ನಾಯಕ ಅಂಬಾದಾಸ್ ದನ್ವೆ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೆ ಪ್ರಸ್ತಾವ
ಲೋಕಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಬಣದ ಸಂಸದ ಅರವಿಂದ ಸಾವಂತ್ ಕರ್ನಾಟಕದ ಮುಖ್ಯಮಂತ್ರಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಲಹೆಯನ್ನು ಪಾಲಿಸದೆ, ಉಲ್ಲಂಘಿಸುತ್ತಿದ್ದಾರೆ. ಅವರ ನಿಲುವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು. ಮಹಾರಾಷ್ಟ್ರದ ಮುಖಂಡರು ಬೆಳಗಾವಿಗೆ ಭೇಟಿ ನೀಡಬಾರದು ಎಂದತಡೆಯೊಡ್ಡಿರುವುದು ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.