ಇಂದು ರಾಷ್ಟ್ರೀಯ ರೈತರ ದಿನ : ವಿದ್ಯಾವಂತ ಯುವಕರ ನಿರೀಕ್ಷೆಯಲ್ಲಿ ಕೃಷಿ ಕ್ಷೇತ್ರ
Team Udayavani, Dec 23, 2022, 6:25 AM IST
ದೇಶದ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರು ಕೃಷಿ ಮತ್ತು ರೈತರ ಬಗೆಗೆ ಅಪಾರ ಒಲವನ್ನು ಹೊಂದಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಕೃಷಿ ರಂಗದ ಏಳಿಗೆಗಾಗಿ ಹಲವಾರು ಮಹತ್ತರ ಯೋಜನೆ, ಉಪಕ್ರಮಗಳಿಗೆ ಚಾಲನೆ ನೀಡಿದ್ದರು. ಈ ಹಿನ್ನೆಲೆ ಯಲ್ಲಿ ಚರಣ್ ಸಿಂಗ್ ಅವರ ಜನ್ಮದಿನವಾದ ಡಿಸೆಂಬರ್ 23ರಂದು ದೇಶಾದ್ಯಂತ ರಾಷ್ಟ್ರೀಯ ಕಿಸಾನ್ ದಿವಸ್ ಅಥವಾ ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಯಾವುದೇ ಅಬ್ಬರ, ಆಡಂಬರ ಗಳಿಲ್ಲದೇ ಆಚರಿಸಲ್ಪಡುವ ಈ ದಿನವು ಕೃಷಿ ಹಾಗೂ ಕೃಷಿಕರ ಕುರಿತ ಚಿಂತನೆಗೆ ಸಕಾಲ ಎನ್ನಬಹುದು.
ಭಾರತ ಕೃಷಿ ಪ್ರಧಾನವಾದ ದೇಶ. ದೇಶದ ಆರ್ಥಿಕತೆಯ ಜೀವಾಳವಾಗಿ ರುವ ಈ ಕ್ಷೇತ್ರದಲ್ಲಿ ದುಡಿಯುವ ರೈತರು ದೇಶದ ಬೆನ್ನೆಲುಬು. ಈ ಕಾರಣ ಕ್ಕಾಗಿಯೇ ಪ್ರತಿಯೊಂದು ಸರಕಾರಕ್ಕೂ ಕೃಷಿ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ. ಪ್ರತೀ ಆಯವ್ಯಯ ಪತ್ರದಲ್ಲೂ ಕೃಷಿಕರಿಗೆ ಕೆಲವಾದರೂ ಕೊಡುಗೆಗಳು ಇದ್ದೇ ಇರುತ್ತವೆ. ಇಷ್ಟೆಲ್ಲ ಆದರೂ ವರ್ಷಗಳು ರುಳಿದಂತೆಯೇ ದೇಶದ ಕೃಷಿರಂಗ ಸೊರಗುತ್ತಿದೆ. ಕೃಷಿಯತ್ತ ಒಲವು ತೋರಿಸುವ ವಿದ್ಯಾವಂತ ಯುವಕರ ಸಂಖ್ಯೆ ನಿರಾಶಾದಾಯಕ. ಇದೊಂದು ಗೌರವದ ಉದ್ಯೋಗವಲ್ಲ ಎಂಬ ಭಾವನೆ ಯುವಕ ರಲ್ಲಿ ಬೆಳೆದು ಬರುತ್ತಿದೆ. ಸರಕಾರಿ ಅಥವಾ ಖಾಸಗಿ ನೌಕರರಿಗಿರುವಂತೆ ಕೃಷಿ ಕೆಲಸಕ್ಕೆ ಸುಸಜ್ಜಿತ ಕಚೇರಿ ಗಳಿಲ್ಲ. ಹೊಲಗದ್ದೆ, ತೋಟಗಳೇ ಕೃಷಿಕರ ಶ್ರಮದ ತಾಣ. ಮಣ್ಣು, ಕೆಸರು, ಹಸುರು, ಪ್ರಾಣಿಪಕ್ಷಿಗಳ ನಡುವೆ ಇವರ ದುಡಿಮೆ. ಕೃಷಿ ಕುಟುಂಬದ ಯುವಕರೂ ವಿದ್ಯಾವಂತರಾದ ತತ್‌ಕ್ಷಣ ಅನ್ಯ ಕೆಲಸವನ್ನರಸಿ ನಗರದ ಕಡೆಗೆ ವಲಸೆ ಹೋಗಲು ಇದೂ ಒಂದು ಕಾರಣ ಎನ್ನಬಹುದು. ಕೃಷಿಯನ್ನೇ ನಂಬಿಕೊಂಡು ಬಂದ ಕುಟುಂಬದ ಹಿರಿಯರೂ ತಮ್ಮ ಮಕ್ಕಳು ಬೇರೆ ಯಾವುದಾದರೂ ಗೌರವದ ಕೆಲಸಕ್ಕೆ ಸೇರಿ ಸುಖ ಪಡಲಿ ಎಂದು ಅಪೇಕ್ಷಿಸುತ್ತಾರೆ. ಬೇರೆ ಎಲ್ಲ ಉದ್ಯೋಗದವರೂ ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೆ, ಕೃಷಿಕನೋರ್ವ ತಾನು ಕೃಷಿಕ ಎಂದು ಹೇಳಿಕೊಳ್ಳಲೂ ಹಿಂಜರಿಯುತ್ತಾನೆ. ಬೇರೆ ಕೆಲಸಗಳಿಗೆ ಇದ್ದಷ್ಟು ಗೌರವ, ಭದ್ರತೆ, ನಿಗದಿತ ಆದಾಯ ಕೃಷಿ ಕೆಲಸಕ್ಕಿಲ್ಲ. ಹಾಗಾಗಿ ಮದುವೆಯಾಗುವ ಯುವತಿಯರು ಕೃಷಿ ಕ್ಷೇತ್ರದ ಯುವಕರನ್ನು ಆಯ್ಕೆ ಮಾಡಲು ಹಿಂಜರಿಯುತ್ತಾರೆ.
ಇದೀಗ ಎಲ್ಲ ವೃತ್ತಿಗಳಲ್ಲೂ ಕೌಶಲಕ್ಕೆ ವಿಶೇಷ ಮಹತ್ವ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ತಮ್ಮ ನೌಕರರ ಸಾಮರ್ಥ್ಯವನ್ನು ಹೆಚ್ಚಿಸಲು ಆಗಾಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಇದರಿಂದ ನೌಕರರ ಸಾಮರ್ಥ್ಯ ಹೆಚ್ಚುವುದರೊಂದಿಗೆ ಆ ಕ್ಷೇತ್ರವೂ ಸುಧಾರಣೆಗಳತ್ತ ಹೆಜ್ಜೆ ಇಡುತ್ತದೆ. ಆದರೆ ಕೃಷಿಯನ್ನು ಕೈಗೆತ್ತಿಕೊಂಡ ವಿದ್ಯಾವಂತ ಯುವ ಕೃಷಿಕರಿಗೆ ಈ ಕೌಶಲಾಭಿವೃದ್ಧಿಯ ಯೋಜನೆಗಳಿ ವೆಯೇ? ಇವರ ಪಾಲಿಗೆ ಇಂಥ ತರಬೇತಿಗಳು ಕಡಿಮೆ ಎಂದೇ ಹೇಳಬಹುದು. ಇಂತಹ ತರಬೇತಿ ಕಾರ್ಯಕ್ರಮಗಳು ನಡೆದರೂ ಅದು ಬೆರಳೆಣಿಕೆಯ ಕೃಷಿಕರನ್ನಷ್ಟೇ ತಲುಪುತ್ತವೆ.
ಕೃಷಿಯಲ್ಲಿ ಬಳಸಬಹುದಾದ ತಂತ್ರಜ್ಞಾನ, ಕೃಷಿ ಯಲ್ಲಿನ ಸುಧಾರಣೆ, ಅದನ್ನು ಲಾಭದಾಯಕ ವಾಗಿರಿಸುವತ್ತ ಸೂಕ್ತ ಮಾರ್ಗದರ್ಶನ ಮೊದಲಾದ ವಿಷಯಗಳಲ್ಲಿ ವಿದ್ಯಾವಂತ ಯುವಕರಿಗೆ ಆಗಾಗ ತರಬೇತಿಯನ್ನು ಸರಕಾರ ಅಥವಾ ಇತರ ಸಂಸ್ಥೆಗಳು ಆಯೋಜಿಸಿದರೆ ಕೃಷಿ ಕ್ಷೇತ್ರವೂ ಸ್ವಲ್ಪ ಕಳೆಗಟ್ಟಬಹುದು. ತಾಲೂಕು ಅಥವಾ ಗ್ರಾಮ ಮಟ್ಟಗಳಲ್ಲಿ ಆಗಾಗ ಇಂಥ ತರಬೇತಿ, ತಜ್ಞರ ಉಪನ್ಯಾಸ ಹಾಗೂ ಸಂವಾದಗಳನ್ನು ಆಯೋಜಿಸಿದರೆ ಕೃಷಿ ಕ್ಷೇತ್ರದ ಸಮಸ್ಯೆಗಳಿಗೂ ಪರಿಹಾರ ಸಿಗಬಹುದು. ಆದರೆ ಇಂತಹ ತರಬೇತಿ, ವಿಚಾರಸಂಕಿರಣ, ಉಪನ್ಯಾಸ ಕಾರ್ಯಕ್ರಮಗಳ ಬಗೆಗೆ ರೈತರಲ್ಲಿ ಆಸಕ್ತಿ ಮೂಡಿಸುವ ಕಾರ್ಯವೂ ಆಗಬೇಕಿದೆ. ಕಾಟಾಚಾರಕ್ಕೆ ಎಂಬಂತೆ ಈ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಅವುಗಳ ನೈಜ ಉದ್ದೇಶ ಈಡೇರಲಾರದು.
ಇನ್ನು ನಮ್ಮ ಶಿಕ್ಷಣದ ಬಗ್ಗೆ ಬಂದರೆ ಅಲ್ಲಿಯೂ ಕೃಷಿ ಕುರಿತ ವಿಚಾರಗಳು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಸಸ್ಯಶಾಸ್ತ್ರ ಎಂಬ ವಿಜ್ಞಾನದ ವಿಭಾಗವೊಂದಿದ್ದರೂ ಅಲ್ಲಿ ವೈಜ್ಞಾನಿಕ ಹೆಸರುಗಳಿಂದ ಸಸ್ಯಗಳ ಗುರುತಿಸು ವಿಕೆ. ಸ್ವದೇಶಿ ಹೆಸರುಗಳ ಮೂಲಕ ಸಸ್ಯಗಳನ್ನು ಗುರು ತಿಸುವ ಕ್ರಮವೇ ಮರೆತು ಹೋಗುತ್ತಿದೆ. ಶೈಕ್ಷಣಿಕ ಪ್ರವಾಸವನ್ನು ಗಮನಿಸಿದರೂ ಕೃಷಿ ಕೊನೆಯ ಆಯ್ಕೆ.
ಕಾಡು, ನದಿ, ಬೆಟ್ಟ ಹಾಗೂ ವನ್ಯಜೀವಿಗಳ ನಡುವಿನ ಗ್ರಾಮೀಣ ಪರಿಸರವೇ ಕೃಷಿಕರ ಬದುಕಿನ ತಾಣ. ಕೃಷಿಕರು ಬೆಳೆದ ಬೆಳೆಗಳಿಗೆ ಕಾಡುಪ್ರಾಣಿಗಳ ಉಪಟಳ. ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವುದೂ ಕೃಷಿಕರಿಗೊಂದು ಸವಾಲು. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಕೆಲವು ಸುರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವ ಮಾರ್ಗದಲ್ಲಿ ಕೃಷಿಕರು ಹಾಗೂ ಕೃಷಿ ಕಾರ್ಮಿಕರು ತಮ್ಮ ವಾಹನಗಳಲ್ಲಿ ಸಂಚರಿಸು ತ್ತಿರುತ್ತಾರೆ. ಆಕಸ್ಮಿಕ ಅವಘಡಗಳ ಸಂದರ್ಭದಲ್ಲಿ ಕೃಷಿಕ ಹಾಗೂ ಕೃಷಿ ಕಾರ್ಮಿಕರ ಹಿತರಕ್ಷಣೆಯತ್ತ ಸರಕಾರ ಗಮನ ಹರಿಸಲೇಬೇಕು.
ಕುಮಾರವ್ಯಾಸನು ಕೃಷಿ ಮೊದಲು ಸರ್ವಕ್ಕೆ ಎಂದನು. ಸರ್ವಜ್ಞನು ಕೋಟಿ ವಿದ್ಯೆಗಳಲಿ ನಾಟಿ ವಿದ್ಯೆಯೇ ಮೇಲು ಎಂದನು. ಕೃಷಿ ಕ್ಷೇತ್ರದ ಸಮಸ್ಯೆ ಗಳನ್ನು ಪರಿಹರಿಸಿ ವಿದ್ಯಾವಂತ ಯುವಕರು ಈ ಕ್ಷೇತ್ರದತ್ತ ಹೆಚ್ಚಿನ ಒಲವು ತೋರಿಸುವಂತೆ ಸರಕಾರವು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
– ಡಾ| ಶ್ರೀಕಾಂತ್ ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.