ಹಣದುಬ್ಬರ ಇಳಿಕೆಯಿಂದ ಆರ್ಥಿಕತೆಗೆ ಪುಷ್ಟಿ
Team Udayavani, Dec 26, 2022, 6:20 AM IST
ಹಣದುಬ್ಬರದಲ್ಲಿ ಸ್ಥಿರತೆಯನ್ನು ತರುವುದು ಆರ್‌ಬಿಐನ ಪ್ರಮುಖ ಹೊಣೆಗಾರಿಕೆ. ಪ್ರಸಕ್ತ ಸನ್ನಿವೇಶದಲ್ಲಿ ಹಣದುಬ್ಬರವು ಇಳಿಕೆಯಾಗುವ ಸಾಧ್ಯತೆಗಳಿದ್ದರೂ ಹಣದುಬ್ಬರದ ಮೇಲಿನ ಸಮರ ಕೊನೆಗೊಂಡಿಲ್ಲ ಎಂದು ಆರ್‌ಬಿಐ ಗವರ್ನರ್ ಕಳೆದ ವಾರ ನಡೆದ ಎಂ.ಪಿ.ಸಿ. ಸಭೆಯಲ್ಲಿ ಹೇಳಿದ್ದಾರೆ. ಕಳೆದ ಹತ್ತು ತಿಂಗಳುಗಳಿಂದ ಕಾಡುತ್ತಿರುವ ಹಣದುಬ್ಬರದ ಏರಿಕೆಗೆ ಕಡಿವಾಣ ಹಾಕಲೇಬೇಕು ಎಂಬ ದೃಢ ಸಂಕಲ್ಪ ಹೊಂದಿರುವ ಆರ್‌ಬಿಐ ನಿರೀಕ್ಷೆಯಂತೆ ರೆಪೋ ದರವನ್ನು ಈ ಬಾರಿ ಶೇ. 0.35 ರಷ್ಟು ಹೆಚ್ಚಿಸಿದೆ. ಇದೀಗ ರೆಪೋ ದರ ಶೇ.6.25 ಆಗಿದೆ. ಕಳೆದ ಮೇ ತಿಂಗಳಿನಿಂದ ಸತತ 5 ಹಂತಗಳಲ್ಲಿ ರೆಪೋ ದರಗಳನ್ನು ಒಟ್ಟು ಶೇ. 2.25 ರಷ್ಟು ಹೆಚ್ಚಿಸಿದೆ.
ರೆಪೋ ದರ ಏರಿಕೆಗೂ ಹಣದುಬ್ಬರ ನಿಯಂತ್ರ ಣಕ್ಕೂ ನೇರ ಸಂಬಂಧವಿದೆ. ರೆಪೋ ದರವು ಗರಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ರೆಪೋ ದರ ಹೆಚ್ಚಿಸುವುದು ಒಂದು ಮಾರ್ಗವಾದರೂ ಇದು ಆರ್ಥಿಕ ಪ್ರಗತಿಯ ವೇಗವನ್ನು ಕುಂಠಿತಗೊಳಿಸುತ್ತದೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಅನಿರೀಕ್ಷಿತವಾಗಿ ಶೇ. 6ಕ್ಕಿಂತ ಕಡಿಮೆಯಾಗಿ ಶೇ. 5.88 ಕ್ಕೆ ಇಳಿಕೆಯಾಗಿ ಆರ್‌ಬಿಐನ ಸಹಿಷ್ಣುತಾ ಮಟ್ಟಕ್ಕೆ ತಲುಪಿದೆ. ಇದು ಆಹಾರ ಹಣದುಬ್ಬರ ಮತ್ತು ತರ ಕಾರಿ ಬೆಲೆಗಳ ಇಳಿಕೆಯನ್ನು ಸೂಚಿಸುತ್ತದೆ. ಹಣ ದುಬ್ಬರದ ಪ್ರಮಾಣವು ಮಿತಿ ಮೀರಿದರೆ ಜನರ ಕೊಳ್ಳುವ ಶಕ್ತಿ ಸಹಜವಾಗಿ ಕುಗ್ಗುತ್ತದೆ. ಇದು ಜಿಡಿಪಿ ಬೆಳವಣಿಗೆ ತಗ್ಗುವುದಕ್ಕೆ ಕಾರಣವಾಗದೇ ಇರಲಾರದು. ಹಣದುಬ್ಬರ ಏರಿಕೆ ಹಾಗೂ ಜಿಡಿಪಿ ಕುಸಿತವು ಕೇವಲ ಅಂಕಿಅಂಶಗಳಲ್ಲ. ಅವು ಜನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಹಣದುಬ್ಬರವು ಮಂದಗತಿಯ ಬೆಳವಣಿಗೆಗಿಂತಲೂ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತದೆ.
ರೆಪೋ ದರ ಏರಿಕೆಯ ಪರಿಣಾಮದಿಂದ ಗೃಹ, ವಾಹನ, ವೈಯಕ್ತಿಕ, ಶಿಕ್ಷಣ, ವ್ಯಾಪಾರ, ಕೈಗಾರಿಕೆ ಹಾಗೂ ನಾನಾ ವಿಧದ ಸಾಲಗಳ ಬಡ್ಡಿದರಗಳು ಏರಿಕೆಯಾಗಲಿವೆ. ಇದರಿಂದ ಹೊಸ ಸಾಲ ಮತ್ತು ಈಗಾಗಲೇ ಸಾಲ ಪಡೆದುಕೊಂಡವರ ಸಾಲಗಳ ಇಎಂಐ ಹೆಚ್ಚಾಗಲಿದೆ. ಇದರಿಂದಾಗಿ ಜನರ ಮೇಲಿನ ಆರ್ಥಿಕ ಹೊರೆ ಹೆಚ್ಚಲಿದ್ದು ವಿವಿಧ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಾಗಿ ಮಾಸಿಕ ಕಂತಿನ ಸಂಖ್ಯೆ ಅಥವಾ ಮಾಸಿಕ ಕಂತಿನ ಮೊತ್ತ ಹೆಚ್ಚಲಿದೆ. ಬ್ಯಾಂಕ್‌ಗಳು ಸಾಲಗಾರರಿಗೆ ನಿಯಮಾನುಸಾರ ಒಂದೋ ಸಾಲದ ಅವಧಿಯನ್ನು ಹೆಚ್ಚಿಸಬೇಕು ಅಥವಾ ಮಾಸಿಕ ಕಂತನ್ನು ಹೆಚ್ಚಿಸಬೇಕು. ಸಾಲ ಬೇಗ ತೀರಿಸಬೇಕಾದರೆ ನಿಗದಿತ ವಾರ್ಷಿಕ 12 ಕಂತುಗಳಿಗಿಂತ ಹೆಚ್ಚಿನ ಮೊತ್ತ ಅಥವಾ ಕಂತುಗಳನ್ನು ಪಾವತಿಸಿದರೆ ಸಾಲ ಬೇಗನೇ ಮುಗಿಯುತ್ತದೆ.
ಮೇ ತಿಂಗಳಿನಿಂದ ಅಕ್ಟೋಬರ್ ಅಂತ್ಯದ ವೇಳೆಗೆ 32 ಬ್ಯಾಂಕ್‌ಗಳ ಪೈಕಿ 29 ಬ್ಯಾಂಕ್‌ಗಳು ತಮ್ಮ ಇಬಿಎಲ್‌ಆರ್ ಬಡ್ಡಿದರವನ್ನು ರೆಪೋ ದರಕ್ಕೆ ಅನುಗುಣವಾಗಿ ಶೇ. 1.9ರಷ್ಟು ಹೆಚ್ಚಿಸಿವೆ. ಆದರೆ ಠೇವಣಿ ದರವನ್ನು ಶೇ. 48 ರಷ್ಟು ಮಾತ್ರ ಹೆಚ್ಚಿಸಿವೆ. ಆದರೆ ಮುಂದಿನ ತ್ತೈಮಾಸಿಕದ ವೇಳೆಗೆ ಹಣದುಬ್ಬರ ನಿಯಂತ್ರಣಕ್ಕೆ ಬಂದು ಆರ್‌ಬಿಐ ರೆಪೋ ದರ ಇಳಿಕೆಯತ್ತ ಮುಖ ಮಾಡಿದ್ದೇ ಆದಲ್ಲಿ ಸಾಲಗಾರರ ಮೇಲಿನ ಹೊರೆ ಒಂದಿಷ್ಟು ಕಡಿಮೆಯಾಗಲಿದೆ. ಹಣಕಾಸು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಕೇಂದ್ರ ಸರಕಾ ರವೂ ಕೂಡ ಸೂಕ್ತ ಮಾರ್ಗ ಹುಡುಕುವುದು ಅವಶ್ಯ. ಕನಿಷ್ಠ ಸರಕು ಮತ್ತು ಸೇವೆಗಳ ದರವನ್ನು ತಗ್ಗಿಸಿ ಬೆಲೆಯೇರಿಕೆಯನ್ನು ನಿಯಂತ್ರಿಸಿ ಜನಸಾಮಾನ್ಯರ ಹಿತ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಅಗೋಚರ ತೆರಿಗೆಯಂತಿರುವ ಹಣದುಬ್ಬರವು ಬಡವರು ಮತ್ತು ಮಧ್ಯಮ ಆದಾಯದವರ ಬದುಕನ್ನು ದುಸ್ತರ ಗೊಳಿಸುತ್ತದೆ.
ಇದೀಗ ಆರ್‌ಬಿಐ ಮಾರ್ಚ್‌ಗೆ ಕೊನೆಗೊಳ್ಳುವ ಈ ಆರ್ಥಿಕ ವರ್ಷದಲ್ಲಿ ಹಣದುಬ್ಬರ ಶೇ. 6.7 ರಷ್ಟು ಇರಲಿದೆ ಎಂದು ಅಂದಾಜಿಸಿದೆ. ಎಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ. 7.79 ಇದ್ದುದು ಅಕ್ಟೋಬರ್ ನಲ್ಲಿ ಶೇ. 6.77 ಆಗಿ ನವೆಂಬರ್‌ಗೆ ಶೇ. 5.88 ಕ್ಕೆ ಇಳಿದಿದೆ. ಮುಂದಿನ ಮಾರ್ಚ್ ಹೊತ್ತಿಗೆ ಶೇ. 6 ರ ಒಳಗೆ ಬರಲಿದೆ ಮತ್ತು ಮುಂದಿನ 12 ತಿಂಗಳಲ್ಲಿ ತೃಪ್ತಿಕರವಾದ ಶೇ. 4 ರ ಮಿತಿಯೊಳಗೆ ಇರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇದೇ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆ ದರವು ಶೇ. 7 ರಿಂದ ಶೇ. 6.8 ಕ್ಕೆ ಇಳಿಕೆಯಾಗಲಿದೆಯೆಂದು ಪ್ರಕಟಿಸಿದೆ. ವಿಶ್ವಬ್ಯಾಂಕ್ ಶೇ. 6.9 ದರವನ್ನು ಅಂದಾಜಿಸಿದೆ. ಜಿಡಿಪಿ ಇಳಿಕೆ ಆರ್ಥಿಕತೆಗೆ ಇನ್ನಷ್ಟು ಬಲ ಬೇಕೆಂಬುದರ ಸೂಚನೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕತೆ ಮಂಕಾಗಿದೆ. ಹಣದುಬ್ಬರ ದರ ತೀವ್ರ ಹೆಚ್ಚಳವಾದ ಕಾರಣ ಜಗತ್ತಿನ ಕೆಲವು ದೇಶಗಳು ಆರ್ಥಿಕ ಹಿಂಜ ರಿತದ ಭೀತಿ ಎದುರಿಸುತ್ತಿವೆ. ಬ್ರಿಟನ್ ಈಗಾಗಲೇ ತಾನು ಆರ್ಥಿಕ ಹಿಂಜರಿತದ ಸ್ಥಿತಿಯಲ್ಲಿರುವುದಾಗಿ ಹೇಳಿಕೊಂಡಿದೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಎದುರಾಗುವ ಎಲ್ಲ ಸಾಧ್ಯತೆಗಳಿವೆ. ಜಗತ್ತಿನೆÇÉೆಡೆ ಅದರಲ್ಲೂ ಮುಖ್ಯವಾಗಿ ಐರೋಪ್ಯ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆಯ ಬೇರುಗಳು ಎಷ್ಟೇ ಸದೃಢ ವಾಗಿದ್ದರೂ ಜಾಗತಿಕ ವಿದ್ಯಮಾನದ ತರಂಗಗಳು ನಮ್ಮ ಆರ್ಥಿಕತೆಯ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳನ್ನು ಬೀರದೇ ಇರಲಾರವು.
ಭಾರತ ಜಗತ್ತಿನ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಅರ್ಥ ವ್ಯವಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಜಿಡಿಪಿ ಬೆಳವಣಿಗೆ ತಗ್ಗಿರುವುದನ್ನು ಯಾವ ಕಾರಣಕ್ಕೂ ಸಹಜವೆಂದು ಸ್ವೀಕರಿಸದೆ ಬಂಡವಾಳ ವೆಚ್ಚ, ಉದ್ಯೋಗ ಸೃಷ್ಟಿಯಂತಹ ಕಾರ್ಯಗಳಿಗೆ ಆದ್ಯತೆ ನೀಡಬೇಕು. ನವೆಂಬರ್‌ನಲ್ಲಿ ಸೇವಾ ವಲಯ ಮತ್ತು ತಯಾರಿಕ ವಲಯದ ಚಟುವಟಿಕೆಗಳು ಕಳೆದ ಮೂರು ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿರುವುದು, ರಫ್ತು ಪ್ರಮಾಣ ಹೆಚ್ಚಾಗಿ ಮಾರುಕಟ್ಟೆಯಲ್ಲಿನ ಬೇಡಿಕೆ ಸ್ಥಿರವಾಗಿರುವುದು, ನೇಮಕಾತಿಯಲ್ಲಿ ಮೂರು ವರ್ಷಗಳಲ್ಲಿಯೇ ವೇಗದ ಬೆಳವಣಿಗೆ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆಗಳು. ಈ ನಿಟ್ಟಿನಲ್ಲಿ ಆರ್‌ಬಿಐ ರೆಪೋ ದರ ಹೆಚ್ಚಿಸಿದರೆ ಕೇಂದ್ರ ಸರಕಾರವು ಪೂರೈಕೆ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಸೂಚಿಸಿದೆ. ಅದಲ್ಲದೆ ಡಾಲರ್ ಎದುರು ರೂಪಾಯಿ ಪುನರ್ ಚೇತರಿಕೆ ಮತ್ತು ಸ್ಥಿರತೆಗೆ ಬದ್ಧವಾಗಿರುವುದು, ವಿದೇಶೀ ವಿನಿಮಯ ಮೀಸಲು ಅಕ್ಟೋಬರ್‌ನಲ್ಲಿ 36.7 ಬಿಲಿಯನ್ ಡಾಲರ್‌ಗಳಿಂದ ಡಿಸೆಂಬರ್ 2 ಕ್ಕೆ 561.2 ಬಿಲಿಯನ್ ಡಾಲರ್‌ಗೆàರಿರುವುದು ಮತ್ತು ಬೆಲೆಯೇರಿಕೆಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮುಂಬರುವ ದಿನಗಳಲ್ಲಿ ಗ್ರಾಹಕರ ಅನುಭವಕ್ಕೆ ಬರಲಿದೆ ಮತ್ತು ಭಾರತವು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುವ ಪ್ರಮುಖ ಆರ್ಥಿಕತೆಯಾಗಿಯೇ ಮುಂದುವರಿಯಲಿದೆ ಎಂಬುದರಲ್ಲಿ ಸಂದೇಹವಿಲ್ಲ.
-ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.