ಬಾಕ್ಸಿಂಗ್ ಡೇ ಟೆಸ್ಟ್ : ಆಸ್ಟ್ರೇಲಿಯ ಮುನ್ನಡೆಗೆ ಗ್ರೀನ್ ಸಿಗ್ನಲ್
ದ. ಆಫ್ರಿಕಾ 189 ; ಗ್ರೀನ್ 5 ವಿಕೆಟ್ ಬೇಟೆ ; 10 ರನ್ ಅಂತರದಲ್ಲಿ 5 ವಿಕೆಟ್ ಪತನ
Team Udayavani, Dec 26, 2022, 11:39 PM IST
ಮೆಲ್ಬರ್ನ್: ಎಂಸಿಜಿಯಲ್ಲಿ ಆರಂಭಗೊಂಡ ಆಸ್ಟ್ರೇಲಿಯ ಎದುರಿನ “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತೆ ಬ್ಯಾಟಿಂಗ್ ಸಂಕಟಕ್ಕೆ ಸಿಲುಕಿದೆ. ಪೇಸ್ ಬೌಲರ್ ಕ್ಯಾಮರಾನ್ ಗ್ರೀನ್ ದಾಳಿಗೆ ತತ್ತರಿಸಿದ ಹರಿಣಗಳ ಪಡೆ ಮೊದಲ ದಿನವೇ 189ಕ್ಕೆ ಕುಸಿದಿದೆ. ಜವಾಬಿತ್ತ ಆಸೀಸ್ ಗಳಿಕೆ ಒಂದು ವಿಕೆಟಿಗೆ 45 ರನ್.
64,876 ವೀಕ್ಷಕರಿಗೆ ಸಾಕ್ಷಿಯಾದ ಮೊದಲ ದಿನದಾಟ ಭಾರೀ ಏರಿಳಿತ ಕಂಡಿತು. ಒಮ್ಮೆ ಕುಸಿತದಿಂದ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ, ಎರಡನೇ ಹಂತದ ಕುಸಿತದಿಂದ ಮೇಲೇಳಲೇ ಇಲ್ಲ. ಈ ಉರುಳುವಿಕೆ ಎಷ್ಟು ತೀವ್ರವಾಗಿತ್ತೆಂದರೆ, ಅವರ ಕೊನೆಯ 5 ವಿಕೆಟ್ ಬರೀ 10 ರನ್ ಅಂತರದಲ್ಲಿ ಹಾರಿಹೋಯಿತು!
ಟಾಸ್ ಗೆದ್ದ ಆಸ್ಟ್ರೇಲಿಯ ಬೌಲಿಂಗ್ ಆಯ್ದುಕೊಂಡು ಇದರ ಭರಪೂರ ಲಾಭ ಎತ್ತತೊಡಗಿತು. 67 ರನ್ ಆಗುವಷ್ಟರಲ್ಲಿ ಐವರ ಆಟ ಮುಗಿದಾಗಿತ್ತು. ಈ ಹಂತದಲ್ಲಿ ಕೈಲ್ ವೆರೇಯ್ನ ಮತ್ತು ಮಾರ್ಕೊ ಜಾನ್ಸೆನ್ 6ನೇ ವಿಕೆಟಿಗೆ 112 ರನ್ ಪೇರಿಸಿ ತಂಡವನ್ನು ಮೇಲೆತ್ತಿದರು. ಅಷ್ಟೇ, ಈ ಜೋಡಿಯನ್ನು ಬೇರ್ಪಡಿಸಿದ ಗ್ರೀನ್ ಹರಿಣಗಳಿಗೆ ಉಸಿರು ತೆಗೆಯಲಿಕ್ಕೂ ಅವಕಾಶ ಕೊಡಲಿಲ್ಲ. ಮುಂದಿನ ಓವರ್‌ನಲ್ಲಿ ಜಾನ್ಸೆನ್ ಮತ್ತು ರಬಾಡ ವಿಕೆಟ್ ಉರುಳಿಸಿದರು. 179ರ ತನಕ ಐದೇ ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ 189ಕ್ಕೆ ತಲುಪುವಷ್ಟರಲ್ಲಿ ಆಲೌಟ್!
ಮೊನ್ನೆಯ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಬೆಲೆಗೆ ಮಾರಾಟಗೊಂಡಿದ್ದ ಕ್ಯಾಮರಾನ್ ಗ್ರೀನ್ ಸಾಧನೆ 27ಕ್ಕೆ 5 ವಿಕೆಟ್. ಇದು ಅವರ ಜೀವನಶ್ರೇಷ್ಠ ಬೌಲಿಂಗ್. ಗ್ರೀನ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 5 ವಿಕೆಟ್ ಕೆಡವಿದ ಮೊದಲ ನಿದರ್ಶನ ಇದಾಗಿದೆ. ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಿತ್ತರು. ನಾಯಕ ಡೀನ್ ಎಲ್ಗರ್ ರನೌಟ್ ಆದರು.
59 ರನ್ ಮಾಡಿದ ಮಾರ್ಕೊ ಜಾನ್ಸೆನ್ ದಕ್ಷಿಣ ಆಫ್ರಿಕಾದ ಟಾಪ್ ಸ್ಕೋರರ್. ಇದಕ್ಕೆ 136 ಎಸೆತ ಎದುರಿಸಿದರು. 10 ಬೌಂಡರಿಗಳನ್ನು ಇದು ಒಳಗೊಂಡಿತ್ತು. ಕೀಪರ್ ಕೈಲ್ ವೆರೇಯ್ನ 99 ಎಸೆತ ನಿಭಾಯಿಸಿ 52 ರನ್ ಮಾಡಿದರು. ಹೊಡೆದದ್ದು ಕೇವಲ ಮೂರೇ ಬೌಂಡರಿ.
ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯ ಉಸ್ಮಾನ್ ಖ್ವಾಜಾ (1) ಅವರನ್ನು ಬೇಗನೇ ಕಳೆದುಕೊಂಡಿತು. 100ನೇ ಟೆಸ್ಟ್ ಆಡುತ್ತಿರುವ ಡೇವಿಡ್ ವಾರ್ನರ್ 32 ರನ್ ಹಾಗೂ ಮಾರ್ನಸ್ ಲಬುಶೇನ್ 5 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಡೇವಿಡ್ ವಾರ್ನರ್
“ಟೆಸ್ಟ್ ಶತಕ’
ಆಸ್ಟ್ರೇಲಿಯದ ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಪಾಲಿಗೆ “ಬಾಕ್ಸಿಂಗ್ ಡೇ ಟೆಸ್ಟ್’ ಅತ್ಯಂತ ವಿಶೇಷವಾಗಿತ್ತು. ಇದು ಅವರ ಟೆಸ್ಟ್ ಬಾಳ್ವೆಯ 100ನೇ ಪಂದ್ಯವಾಗಿತ್ತು. ಅವರು ಆಸ್ಟ್ರೇಲಿಯ ಪರ 100 ಟೆಸ್ಟ್ ಆಡಿದ 14ನೇ ಆಟಗಾರ ಹಾಗೂ 3ನೇ ಓಪನರ್ ಎನಿಸಿದರು. 7,922 ರನ್, 24 ಶತಕ ಇವರ ಸಾಧನೆಯಾಗಿದೆ.
ಈ ವಿಶೇಷ ಸಂದರ್ಭದಲ್ಲಿ ಡೇವಿಡ್ ವಾರ್ನರ್ ತಂಡವನ್ನು ಮೈದಾನಕ್ಕೆ ಕರೆತರುವ ಅಪೂರ್ವ ಅವಕಾಶ ಪಡೆದರು. ಜತೆಯಲ್ಲಿ ಅವರ ಮೂವರು ಪುತ್ರಿಯರೂ ಇದ್ದರು.
ವಾರ್ನ್ ಹೆಸರಲ್ಲಿ ಕ್ರಿಕೆಟ್ ಪ್ರಶಸ್ತಿ
1,001 ಅಂತಾರಾಷ್ಟ್ರೀಯ ವಿಕೆಟ್ ಉರುಳಿಸಿದ ಲೆಜೆಂಡ್ರಿ ಸ್ಪಿನ್ನರ್ ಶೇನ್ ವಾರ್ನ್ ಹೆಸರಲ್ಲಿ “ಕ್ರಿಕೆಟ್ ಆಸ್ಟ್ರೇಲಿಯ’ ಪ್ರಶಸ್ತಿಯೊಂದನ್ನು ಘೋಷಿಸಿದೆ. ವರ್ಷದ ಶ್ರೇಷ್ಠ ಟೆಸ್ಟ್ ಆಟಗಾರನಿಗೆ ಈ ಪ್ರಶಸ್ತಿ ಒಲಿಯಲಿದೆ.
“ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಕ್ರಿಕೆಟ್ ಆಸ್ಟ್ರೇಲಿಯದ ಅಧ್ಯಕ್ಷ ನಿಕ್ ಹಾಕ್‌ಲೀ ಇದನ್ನು ಘೋಷಿಸಿದರು. ಮೆಲ್ಬರ್ನ್ ಅಂಗಳ ವಾರ್ನ್ ಅವರ ಹೋಮ್ ಗ್ರೌಂಡ್ ಆಗಿದ್ದು, ಇಲ್ಲಿಯೇ ಅವರು 700ನೇ ಟೆಸ್ಟ್ ವಿಕೆಟ್ ಉರುಳಿಸುವ ಜತೆಗೆ ಆ್ಯಶಸ್ ಹ್ಯಾಟ್ರಿಕ್ ಕೂಡ ಸಾಧಿಸಿದ್ದರು. ಇದರೊಂದಿಗೆ ಆಸ್ಟ್ರೇಲಿಯದ ಕ್ರಿಕೆಟ್ ಪ್ರಶಸ್ತಿಗಳ ಸಂಖ್ಯೆ ಎರಡಕ್ಕೇರಿತು. ಅಲ್ಲಿ ಈಗಾಗಲೇ, ಎಲ್ಲ ಮಾದರಿಯ ಕ್ರಿಕೆಟಿಗೆ ಅನ್ವಯಿಸುವಂತೆ “ಅಲನ್ ಬೋರ್ಡರ್ ಮೆಡಲ್’ ನೀಡಲಾಗುತ್ತದೆ. ಪುರುಷರ ಹಾಗೂ ವನಿತಾ ಸಾಧಕರಿಬ್ಬರನ್ನೂ ಇದಕ್ಕೆ ಪರಿಗಣಿಸಲಾಗುತ್ತದೆ.
ಶೇನ್ ವಾರ್ನ್ಗೆ ಗೌರವ
ಕಳೆದ ಮಾರ್ಚ್‌ನಲ್ಲಿ ಅಕಾಲಿಕವಾಗಿ ಅಗಲಿದ ವಿಶ್ವವಿಖ್ಯಾತ ಸ್ಪಿನ್ನರ್ ಶೇನ್ ವಾರ್ನ್ ಅಲೆ ಮೆಲ್ಬರ್ನ್ ಸ್ಟೇಡಿಯಂನಲ್ಲಿ ಬಲವಾಗಿಯೇ ಬೀಸಿತು. ವಾರ್ನ್ ನಿಧನ ಹೊಂದಿದ ಕೂಡಲೇ ಎಂಸಿಜಿಯ “ಗ್ರೇಟ್ ಸದರ್ನ್ ಸ್ಟಾಂಡ್’ಗೆ ಶೇನ್ ವಾರ್ನ್ ಸ್ಟಾಂಡ್ ಎಂದು ಪುನರ್ ನಾಮಕರಣ ಮಾಡಲಾಗಿತ್ತು. ಇಲ್ಲಿ ನೆರೆದ ವೀಕ್ಷಕರು “ಫ್ಲಾಪಿ ಹ್ಯಾಟ್’ ಧರಿಸಿ ವಾರ್ನ್ ಅವರನ್ನು ನೆನಪಿಸುವಂತೆ ಮಾಡಿದರು.
ಇದಕ್ಕೂ ಮೊದಲು ರಾಷ್ಟ್ರಗೀತೆ ಹಾಡಲು ಅಂಗಳಕ್ಕಿಳಿದ ವೇಳೆ ಎರಡೂ ತಂಡಗಳ ಆಟಗಾರರು ಫ್ಲಾಪಿ ಕ್ಯಾಪ್ ಧರಿಸಿ ಗಮನ ಸೆಳೆದರು. ಶೇನ್ ವಾರ್ನ್ ತಮ್ಮ ಕ್ರಿಕೆಟ್ ಬಾಳ್ವೆಯ ವೇಳೆ ಅಗಲವಾದ ಇಂಥ ಟೋಪಿ ಧರಿಸುತ್ತಿದ್ದರು. ವಾರ್ನ್ ಅಗಲಿಕೆಯ ಬಳಿಕ ಅವರ ತವರಿನ ಮೆಲ್ಬರ್ನ್ ಅಂಗಳದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.