ದೇವಾಲಯಗಳ ಸಮಗ್ರ ಸಮೀಕ್ಷೆ ಕಾಟಾಚಾರವಾಗದಿರಲಿ
Team Udayavani, Dec 29, 2022, 6:00 AM IST
ರಾಜ್ಯದ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಅಧೀನದಲ್ಲಿರುವ ಎಲ್ಲ ದೇವಸ್ಥಾನಗಳ ಸಮಗ್ರ ಸಮೀಕ್ಷೆ ನಡೆಸಲು ಇಲಾಖೆ ತೀರ್ಮಾನಿಸಿದೆ. ಈ ದೇವಸ್ಥಾನಗಳ ಆಸ್ತಿ ಸಂರಕ್ಷಣೆಯ ಜತೆಯಲ್ಲಿ ಇವುಗಳ ಬಗೆಗಿನ ಸಮಗ್ರ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ವಾಸ್ತವಿಕ ಸಮೀಕ್ಷೆಯನ್ನು ನಡೆಸಲು ರಾಜ್ಯ ಧಾರ್ಮಿಕ ಪರಿಷತ್‌ನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಇಲಾಖೆಯ ಅಧೀನದಲ್ಲಿ ಎ, ಬಿ ಮತ್ತು ಸಿ ದರ್ಜೆ ಸಹಿತ 35,000ಕ್ಕೂ ಅಧಿಕ ದೇವಸ್ಥಾನಗಳಿವೆ. ಈ ಪೈಕಿ ಬಹುತೇಕ ದೇವಸ್ಥಾನಗಳ ಆಸ್ತಿ ಸಹಿತ ಅವುಗಳ ಸ್ಥಿತಿಗತಿಯ ಕುರಿತಂತೆ ಕನಿಷ್ಠ ಮಾಹಿತಿಯೂ ಇಲಾಖೆಗೆ ಇಲ್ಲವಾಗಿದೆ. ಈ ದೇವಸ್ಥಾನಗಳಿಗೆ ಸೇರಿದ ಆಸ್ತಿಗಳು ಅತಿಕ್ರಮಣಗೊಂಡಿರುವ ಅಥವಾ ಪರಾಭಾರೆಯಾಗಿರುವ ಆರೋಪಗಳೂ ಇವೆ. ಅಷ್ಟು ಮಾತ್ರವಲ್ಲದೆ ಈ ದೇವಸ್ಥಾನಗಳ ಮೇಲೆ ಹಕ್ಕು ಸ್ಥಾಪಿಸಲು ವೈಯಕ್ತಿಕವಾಗಿ ಪ್ರಯತ್ನಗಳೂ ನಡೆಯುತ್ತಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ದೇವಸ್ಥಾನಗಳ ವಾಸ್ತವಿಕ ಸಮೀಕ್ಷೆ ನಡೆಸಲು ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ.
ಇದೇ ವೇಳೆ ಈ ದೇವಸ್ಥಾನಗಳ ಸಮೀಕ್ಷೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪರಿಷತ್ ಚಿಂತನೆ ನಡೆಸಿದೆ. ಇಲಾಖೆಯ ಅಡಿಯಲ್ಲಿ ಬರುವ ಪ್ರತಿಯೊಂದೂ ದೇವಸ್ಥಾನಗಳ ಬಗೆಗಿನ ಮಾಹಿತಿಯನ್ನು ಕಲೆಹಾಕಲಾಗುವುದು, ದೇವಸ್ಥಾನಕ್ಕೆ ಸೇರಿದ ಆಸ್ತಿ, ಅದರ ಫೋಟೋ, ಹಾಲಿ ಸ್ಥಿತಿಗತಿ, ನಿರ್ವಹಣ ವ್ಯವಸ್ಥೆ, ದೇಗುಲಕ್ಕೆ ಬರುವ ಆದಾಯ ಸಹಿತ ಪ್ರತಿಯೊಂದೂ ಮಾಹಿತಿಯನ್ನು ಕ್ರೋಡೀಕರಿಸಿ ಎಲ್ಲವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗುವುದು. ಈ ದಾಖಲೆಗಳು ಸಾರ್ವಜನಿಕರಿಗೂ ಲಭಿಸುವ ವ್ಯವಸ್ಥೆಯನ್ನು ಮಾಡುವ ಪ್ರಸ್ತಾವವನ್ನು ಕೂಡ ಧಾರ್ಮಿಕ ಪರಿಷತ್ ಇಲಾಖೆಯ ಮುಂದಿಟ್ಟಿದೆ. ಸಮೀಕ್ಷೆಗಾಗಿ ಸೂಕ್ತ ಅನುದಾನ ನೀಡುವಂತೆ ಸಿ ಎಂಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಧಾರ್ಮಿಕ ಪರಿಷತ್ ಕೈಗೊಂಡಿರುವ ಈ ನಿರ್ಧಾರಕ್ಕೆ ಸರಕಾರದಿಂದ ಒಪ್ಪಿಗೆ ಲಭಿಸುವ ನಿರೀಕ್ಷೆಯನ್ನು ಇಲಾಖೆಯ ಸಚಿವರು ವ್ಯಕ್ತಪಡಿಸಿದ್ದಾರೆ.
ಇಂತಹ ಒಂದು ಪ್ರಸ್ತಾವ ಕಳೆದ ಕೆಲವಾರು ವರ್ಷಗಳಿಂದ ಇಲಾಖೆಯ ಮುಂದಿತ್ತಾದರೂ ಈ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಇಲಾಖೆಗಾಗಲೀ ಸರಕಾರಕ್ಕಾಗಲೀ ಸಾಧ್ಯವಾಗಿರಲಿಲ್ಲ. ಇದೀಗ ಧಾರ್ಮಿಕ ಪರಿಷತ್ ದೇವಸ್ಥಾನಗಳ ಸಮಗ್ರ ಮತ್ತು ವಾಸ್ತವಿಕ ಸಮೀಕ್ಷೆಗೆ ನಿರ್ಣಯ ಕೈಗೊಂಡಿರುವುದರಿಂದ ಇದನ್ನು ಕಾರ್ಯರೂಪಕ್ಕೆ ತರಲು ಸರಕಾರಕ್ಕೆ ಕಷ್ಟಸಾಧ್ಯವಾಗಲಾರದು. ಕೆಲವೊಂದಿಷ್ಟು ದೇವ ಸ್ಥಾನಗಳಲ್ಲಿ ದಿನನಿತ್ಯದ ಪೂಜೆಯೂ ನಡೆಯುತ್ತಿಲ್ಲ. ಮತ್ತೆ ಕೆಲವೆಡೆ ಅರ್ಚಕರನ್ನು ನೇಮಿಸಲಾಗಿದ್ದರೂ ಸಮರ್ಪಕವಾಗಿ ಪೂಜೆಗಳು ನಡೆಯುತ್ತಿಲ್ಲ. ಇವೆಲ್ಲವನ್ನು ಗಮನಿಸಿದಾಗ ಸರಕಾರ ದೇವಸ್ಥಾನಗಳ ಸಮಗ್ರ ಸಮೀಕ್ಷೆಗೆ ಮುಂದಾಗಿರುವುದು ಸೂಕ್ತವೇ. ಆದರೆ ಸಮೀಕ್ಷೆ ಕಾಟಾಚಾರಕ್ಕೆ ಸೀಮಿತವಾಗದೆ ಬಲು ಪುರಾತನ ದೇವಾಲಯಗಳ ಸಂರಕ್ಷಣೆಯ ತನ್ನ ಉದ್ದೇಶವನ್ನು ಈಡೇರಿಸುವಂತಿರಬೇಕು. ಸಮೀಕ್ಷೆಯ ವೇಳೆ ದೇಗುಲದ ಪರಿಸರ, ವಿನ್ಯಾಸಕ್ಕೆ ಯಾವುದೇ ಭಂಗ ಬಾರದಂತೆ ಮತ್ತು ಅದೆಷ್ಟೋ ದಶಕಗಳಿಂದ ಆಯಾಯ ಊರಿನ ಭಕ್ತರು ಶ್ರದ್ಧಾಭಕ್ತಿಗಳಿಂದ ಆರಾಧಿಸಿಕೊಂಡು ಬಂದ ದೇಗುಲಗಳ ಪಾವಿತ್ರ್ಯತೆಗೆ ಚ್ಯುತಿಯಾಗದಂತೆಯೂ ಸರಕಾರ ಎಚ್ಚರಿಕೆ ವಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.