ಕೋವಿಡ್ ಸೋಂಕಿನ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚನೆ
ಬೂಸ್ಟರ್ ಡೋಸ್ ತಪ್ಪದೆ ಪಡೆಯುವಂತೆ ಜಿಲ್ಲಾಧಿಕಾರಿ ಮನವಿ
Team Udayavani, Dec 29, 2022, 6:20 AM IST
ಉಡುಪಿ: ಜಿಲ್ಲೆಯ ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಮುಂಜಾಗ್ರತ ಕ್ರಮಗಳನ್ನು ಪಾಲಿಸುವುದರ ಜತೆಗೆ ಬೂಸ್ಟರ್ ಡೋಸ್ ತಪ್ಪದೆ ಪಡೆಯುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸಲಹೆ ನೀಡಿದರು.
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಕೋವಿಡ್ ಮುನ್ನೆಚ್ಚರಿಕೆ ಮತ್ತು ತಾಂತ್ರಿಕ ಸಲಹ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೆರೆಯ ದೇಶಗಳಲ್ಲಿ ಕೋವಿಡ್ ಪ್ರಕರಣ ಮಿತಿಮೀರಿದ್ದು ಭಾರತದಲ್ಲೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಸರಕಾರ ತಿಳಿಸಿರುವ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಾದ ಸಾಮಾಜಿಕ ಅಂತರ ಕಾಪಾಡುವುದು, ಸ್ವತ್ಛತೆಗೆ ಆದ್ಯತೆ ನೀಡುವುದು, ಮಾಸ್ಕ್ ಧರಿಸುವುದನ್ನು ಪಾಲಿಸಬೇಕು. 2ನೇ ಡೋಸ್ ಕೋವಿಡ್ ಲಸಿಕೆ ಪಡೆದಿರುವವರು ಬೂಸ್ಟರ್ ಡೋಸ್ ಪಡೆಯಬೇಕು ಎಂದರು.
ಕೋವಿಡ್ ಪರೀಕ್ಷೆ
ಆಸ್ಪತ್ರೆಗಳಿಗೆ ಬರುವ ಶೀತ, ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳಿರುವ ರೋಗಿಗಳನ್ನು, ಹೊರದೇಶದಿಂದ ಬಂದವರನ್ನು, ಕೋವಿಡ್ ರೋಗಿಗಳ ಸಂಪರ್ಕಿತರನ್ನುಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಪಾಸಿಟಿವ್ ಫಲಿತಾಂಶ ಬಂದವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿಕೊಡಬೇಕು. ಜಿಲ್ಲೆಯಲ್ಲಿ ಈವರೆಗೆ ಶೇ. 30ರಷ್ಟು ಮಂದಿ ಬೂಸ್ಟರ್ ಡೋಸ್ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟವರಲ್ಲಿ ಶೇ. 67ರಷ್ಟು ಬೂಸ್ಟರ್ ಲಸಿಕೆಯನ್ನು ನೀಡಲಾಗಿದೆ. ಇದು ಪ್ರತಿಶತ ಶೇ. 100ರಷ್ಟು ನೀಡಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಪ್ರತೀ ಬುಧವಾರ ತಾಲೂಕು ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಯಾಂಪ್‌ಗ್ಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೆಡ್ ಮೀಸಲಿಡಿ
ಕೋವಿಡ್ ರೋಗಿಗಳ ನಿರ್ವಹಣೆಗೆ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕನಿಷ್ಠ ಸಂಖ್ಯೆಯ ಐಸೊಲೇಶನ್ ಬೆಡ್‌ಗಳನ್ನು ಮೀಸಲಿಡಬೇಕು. ಪ್ರಕರಣಗಳ ಸಂಖ್ಯೆ ಏರಿಕೆಯಾದಲ್ಲಿ ನಿರ್ವಹಣೆಗೆ ಎಲ್ಲ ಹಂತಗಳ ಸರಕಾರಿ, ಖಾಸಗಿ ಆಸ್ಪತ್ರೆಗಳು ಸನ್ನದ್ಧವಾಗಿರುವಂತೆ ನೋಡಿಕೊಳ್ಳಬೇಕು. ಸರಕಾರಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಹಾಗೂ ಆಕ್ಸಿಜನ್ ಪೂರೈಕೆ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ದುರಸ್ತಿ ಅಗತ್ಯವಿದ್ದಲ್ಲಿ ಕೂಡಲೆ ಸರಿಪಡಿಸಬೇಕು ಎಂದು ವೈದ್ಯಕೀಯ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮಾಸ್ಕ್ ಕಡ್ಡಾಯ
ಸಿನೆಮಾ ಹಾಲ್, ಮಾಲ್, ಹೊಟೇಲ್ ಸೇರಿದಂತೆ ಒಳಾಂಗಣ ಪ್ರದೇಶದ ಚಟುವಟಿಕೆಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಹೊರದೇಶದಿಂದ ಬಂದಿರುವವರ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಾಹಿತಿ ಪಡೆದು ಅವರ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು.
ಜಿ.ಪಂ. ಸಿಇಒ ಪ್ರಸನ್ನ ಎಚ್., ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಡಿಎಚ್‌ಒ ಡಾ| ಎಚ್. ನಾಗಭೂಷಣ ಉಡುಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನಾಗರತ್ನ, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಹಾಯವಾಣಿ
ತಾಲೂಕು, ಗ್ರಾ.ಪಂ. ಮಟ್ಟಗಳ ಸಮಿತಿಗಳು ಕೂಡಲೇ ಕಾರ್ಯ ಪ್ರವೃತ್ತವಾಗಬೇಕು. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಜತೆಗೆ ಟೆಲಿ ಮೆಡಿಸನ್ ಮೂಲಕ ಸಲಹೆ ನೀಡಲು ಕೋವಿಡ್ ಸಂಬಂಧ 24×7 ಸಹಾಯವಾಣಿ ಸಂಖ್ಯೆ 9663950222, 9663957222 ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೂರ್ಮಾರಾವ್ ತಿಳಿಸಿದರು.
ಹೊಸ ಕೋವಿಡ್ ಪ್ರಕರಣಗಳಿಲ್ಲ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಯಾವುದೇ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ.
ಸೌದಿ ಅರೇಬಿಯಾದಿಂದ ಬೆಂಗಳೂರು ಮೂಲಕ ಆಗಮಿಸಿದ ಮಂಗಳೂರಿನ ವ್ಯಕ್ತಿಗೆ ಸಂಬಂಧಿಸಿದಂತೆ ಸದ್ಯ ಒಂದು ಸ್ರಕಿಯ ಪ್ರಕರಣ ಇದೆ. ಈ ಪ್ರಕರಣದಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ಪ್ರಯೋಗಾಲಯಕ್ಕೆ ಗಂಟಲ ದ್ರವ ಮಾದರಿ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿ ಸಿಗಲು ಇನ್ನೂ ಎರಡು-ಮೂರು ದಿನ ಬೇಕಾಗಬಹುದು. ಸದ್ಯ ವ್ಯಕ್ತಿ ಗೃಹ ನಿಗಾವಣೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಬುಧವಾರ ಸುಮಾರು ಜಿಲ್ಲೆಯಲ್ಲಿ ಸುಮಾರು 550 ಮಂದಿಯನ್ನು ಕೋವಿಡ್ ಟೆಸ್ಟಿಂಗ್‌ಗೆ ಒಳಪಡಿಸಲಾಗಿದೆ. ಯಾವುದೇ ಸೋಂಕಿತರು ಪತ್ತೆಯಾಗಿಲ್ಲ. ದಿನಕ್ಕೆ 400 ಮಂದಿಯನ್ನು ತಪಾಸಣೆಗೆ ಒಳಪಡಿಸುವ ಗುರಿಯಿದ್ದು, ಜಿಲ್ಲೆಯಲ್ಲಿ ಈ ಸಂಖ್ಯೆಯನ್ನು ಮೀರಿ ಟೆಸ್ಟಿಂಗ್ ನಡೆಯುತ್ತಿದೆ.
ವಿಮಾನ ನಿಲ್ದಾಣದಲ್ಲಿಯೂ ಶೇ. 2ರಷ್ಟು ಮಂದಿಯನ್ನು ರ್‍ಯಾಂಡಮ್ ತಪಾಸಣೆಗೆ ಒಳಪಡಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಕಳೆದ ಆಗಸ್ಟ್ ತಿಂಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಕೋವಿಡ್ ಟೆಸ್ಟಿಂಗ್‌ನಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಶೇ. 2ರಷ್ಟು ಟೆಸ್ಟಿಂಗ್ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಉಡುಪಿಯಲ್ಲೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಆದರೆ ಒಂದು ಪ್ರಕರಣ ಸಕ್ರಿಯವಾಗಿದೆ.
ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ. ಕೊವಿಶೀಲ್ಡ್ ಲಸಿಕೆಯ ದಾಸ್ತಾನು ಇರುವುದಿಲ್ಲ. ಅಗತ್ಯವಿರುವವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಗದಿತ ಮೊತ್ತ ಪಾವತಿಸಿ ಪಡೆಯಬಹುದು.
– ಕೂರ್ಮಾ ರಾವ್ ಎಂ.,
ಜಿಲ್ಲಾಧಿಕಾರಿ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.