ಕಳಸಾ ಬಂಡೂರಿ: ಉ.ಕರ್ನಾಟಕದ ಹೋರಾಟಕ್ಕೆ ಸಂದ ಜಯ
Team Udayavani, Dec 30, 2022, 6:00 AM IST
ಕಳಸಾ ಬಂಡೂರಿ ನಾಲಾ ವಿಚಾರದಲ್ಲಿ ವಿಸ್ತೃತ ಯೋಜನಾ ವರದಿ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಉತ್ತರ ಕರ್ನಾಟಕದವರ ಬಹು ದಿನಗಳ ಬೇಡಿಕೆ ಈಡೇರುವ ದಿನಗಳು ಹತ್ತಿರಕ್ಕೆ ಬಂದಂತಾಗಿದೆ. ಗೋವಾದವರ ವಿರೋಧದ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಿಂದ ಈ ಕಳಸಾ ಬಂಡೂರಿ ನಾಲಾ ವಿಚಾರವೂ ನ್ಯಾಯಾಧಿಕರಣಕ್ಕೆ ಹೋಗಿ, ಅಲ್ಲಿ ತಾರ್ಕಿಕ ಅಂತ್ಯವೂ ಸಿಕ್ಕಿತ್ತು. ಈಗ ರಾಜ್ಯದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲು ಡಿಪಿಆರ್ ಸಲ್ಲಿಕೆ ಮಾಡಲಾಗಿತ್ತು. ಈಗ ಕೇಂದ್ರದ ಒಪ್ಪಿಗೆಯೂ ಸಿಕ್ಕಿದೆ.
2018ರಲ್ಲಿ ಕಳಸಾ ಡ್ಯಾಂನಿಂದ 1.72 ಟಿಎಂಸಿ ನೀರು, ಬಂಡೂರಿ ಡ್ಯಾಂನಿಂದ 2.18 ಟಿಎಂಸಿ ನೀರು ತಿರುವಳಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಆಧರಿಸಿ ಡಿಪಿಆರ್ ಸಲ್ಲಿಸಲಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದು ಅಂತರರಾಜ್ಯ ದೃಷ್ಟಿಯಿಂದ ಡಿಪಿಆರ್ ಒಪ್ಪಿತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕಳಸಾ ಬಂಡೂರಿ ನಾಲಾ ಹೋರಾಟಕ್ಕೆ ದೊಡ್ಡ ಹೋರಾಟದ ಹಿನ್ನೆಲೆಯೇ ಇದೆ. ಅಂದರೆ, 1976ರಿಂದಲೂ ಗುಳೇದಗುಡ್ಡದ ಆಗಿನ ಶಾಸಕ ಬಿ.ಎಂ.ಹೊರಕೇರಿಯವರು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. 1988ರಲ್ಲಿ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರು ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಗೋವಾ ಸಿಎಂ ಜತೆ ಚರ್ಚಿಸಿ ಒಪ್ಪಂದ ನಿಟ್ಟಿನಲ್ಲಿ ಎರಡು ಕಡೆ ಸಹಮತ ವ್ಯಕ್ತವಾಗಿತ್ತು. ನಂತರ ಗೋವಾ ತನ್ನ ನಿಲುವು ಬದಲಿಸಿತು. 2000ರಲ್ಲಿ ಸಚಿವರಾಗಿದ್ದ ಎಚ್.ಕೆ.ಪಾಟೀಲರು ಮಹದಾಯಿ ಯೋಜನೆ ಸ್ವರೂಪ ಬದಲಿಸಿ, ಕಳಸಾ-ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆ ಹೆಸರಲ್ಲಿ ಹೊಸ ಯೋಜನೆಗೆ ಮುಂದಾಗಿದ್ದರು. ಈ ಹಿಂದೆ ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಗೆ ಒತ್ತಾಯಿಸಿ, ಈಗ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ನಾಯಕರು 253 ಕಿ.ಮೀ. ಪಾದಯಾತ್ರೆಯನ್ನೂ ನಡೆಸಿದ್ದರು.
ಇದಾದ ಬಳಿಕ ಎಚ್.ಡಿ.ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ, ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಗಿತ್ತು. ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಕಳಸಾ ನಾಲಾದ 5.5 ಕಿಮೀ. ಇಂಟರ್ ಲಿಂಕಿಂಗ್ ಕಾಲುವೆಗೆ ಟೆಂಡರ್ ಕರೆದು ಕಾಮಗಾರಿ ಆರಂಭ ಮಾಡಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗಲೇ, ಗೋವಾದ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ನ್ಯಾಯಾಧಿಕರಣವನ್ನೂ ಆರಂಭಿಸಿತ್ತು. ಜತೆಗೆ, ನರಗುಂದ, ನವಲಗುಂದ, ಹುಬ್ಬಳ್ಳಿಗಳಲ್ಲಿ ಸತತ ಎರಡು ವರ್ಷಗಳ ಕಾಲ ಹೋರಾಟವೂ ನಡೆದಿತ್ತು. 2018ರಲ್ಲಿ ನ್ಯಾಯಾಧಿಕರಣ ತನ್ನ ತೀರ್ಪು ನೀಡಿ ನೀರು ಹಂಚಿಕೆ ಮಾಡಿತ್ತು.
ಈ ಎಲ್ಲಾ ಸಂಗತಿಗಳ ತರುವಾಯ, ಈಗ ಕಳಸಾ ಬಂಡೂರಿ ನಾಲಾದ ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಒಂದು ರೀತಿಯಲ್ಲಿ ಇದು ಉತ್ತರ ಕರ್ನಾಟಕದವರ ಹೋರಾಟಕ್ಕೆ ಸಿಕ್ಕಿರುವ ದೊಡ್ಡ ಜಯವಾಗಿದೆ. ಈಗ ರಾಜ್ಯ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿಯೇ ಇದೆ. ತತ್‌ಕ್ಷಣದಲ್ಲಿ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಿ ಕೆಲಸ ಆರಂಭಿಸಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ಈ ನಿರ್ಧಾರವನ್ನು ಚುನಾವಣಾ ಕಾರಣಕ್ಕಾಗಿ ತೆಗೆದುಕೊಳ್ಳಲಾಗಿದೆ ಎಂಬ ಭಾವನೆ ಜನರಲ್ಲಿ ಮೂಡಬಾರದು. ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಮಾತ್ರ ಹೋರಾಟಕ್ಕೆ ಸಾರ್ಥಕ್ಯ ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.