Rewind 2022: ಚಂದನವನದ ಚಿನ್ನದ ಬೆಳೆ, ಸ್ಯಾಂಡಲ್ ವುಡ್ ನಲ್ಲಿ ಒಂದು ಸುತ್ತು
Team Udayavani, Dec 30, 2022, 12:05 PM IST
2022 ಮುಗಿಯಲು ಕೇವಲ ಒಂದೇ ದಿನ ಬಾಕಿ ಇದೆ. ಇಡೀ ವರ್ಷವನ್ನು ರಿವೈಂಡ್ ಮಾಡಿ ನೋಡಿದಾಗ ಕನ್ನಡ ಚಿತ್ರರಂಗಕ್ಕೆ ಇದು ಅದೃಷ್ಟದ ವರ್ಷವಾಗಿ ಕಾಣುತ್ತದೆ. ಕೊರೊನಾದಿಂದ ನಲುಗಿ ಹೋಗಿದ್ದ ಭಾರತೀಯ ಚಿತ್ರರಂಗದಲ್ಲಿ ಬೇಗನೇ ಚೇತರಿಕೆ ಕಂಡು ಎಲ್ಲರಿಗೂ ಆಶಾದಾಯಕವಾಗಿ ಪರಿಣಮಿಸಿದ್ದು ಕನ್ನಡ ಚಿತ್ರರಂಗ. ಈ ವರ್ಷ ಕೇವಲ ಕರ್ನಾಟಕವಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ್ದು ಕನ್ನಡ ಚಿತ್ರರಂಗದ ಹೆಗ್ಗಳಿಕೆ.
ಕಲೆಕ್ಷನ್‌ನಿಂದ ಹಿಡಿದು ಗುಣಮಟ್ಟದ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್‌ವುಡ್ 2022ರಲ್ಲಿ ಮಿಂಚಿದ್ದು ಸುಳ್ಳಲ್ಲ. “ಕೆಜಿಎಫ್-2’ನಿಂದ ಆರಂಭವಾದ ಕನ್ನಡ ಚಿತ್ರರಂಗದ ಯಶಸ್ಸಿನ ಯಾತ್ರೆ “ಕಾಂತಾರ’ದವರೆಗೆ ಭರ್ಜರಿ ಯಾಗಿ ಸಾಗಿಬರುವ ಮೂಲಕ ಸಿನಿಮಾ ಮಂದಿಯ ವಿಶ್ವಾಸ ಹಾಗೂ ಚಿತ್ರರಂಗದ ಘನತೆ ಹೆಚ್ಚುವಂತಾಯಿತು.
ಇಲ್ಲಿವರೆಗೆ ಬಿಡುಗಡೆಯಾದ ಸಿನಿಮಾಗಳನ್ನು ಲೆಕ್ಕ ಹಾಕಿದರೆ 210 ಪ್ಲಸ್ ಸಿಗುತ್ತದೆ. ಕಳೆದ ವರ್ಷ 106 ಚಿತ್ರಗಳು ಬಿಡುಗಡೆ ಕಂಡಿದ್ದವು. ಆದರೆ, ಈ ವರ್ಷ ಇದು ದುಪ್ಪಟ್ಟಾಗಿದೆ. ಅದಕ್ಕೆ ಕಾರಣ, 2019ರಿಂದ 2021ರವರೆಗೆ ಕಾಡಿದ ಕೊರೊನಾ ಭಯ. ಈ ಕಾರಣದಿಂದಾಗಿ ಚಿತ್ರೀಕರಣ ಆರಂಭವಾಗಿ ಅರ್ಧಕ್ಕೆ ನಿಂತ ಚಿತ್ರಗಳು, ಕೊರೊನಾದಿಂದ ಬಿಡುಗಡೆ ಮುಂದಕ್ಕೆ ಹೋದ ಚಿತ್ರಗಳು… ಹೀಗೆ ನಾನಾ ಸಮಸ್ಯೆಗಳನ್ನು ಎದುರಿಸಿದ ಸಿನಿಮಾಗಳೆಲ್ಲವೂ ಈ ವರ್ಷ ಬಿಡುಗಡೆಯಾಗಿವೆ. ಇದೇ ಕಾರಣದಿಂದ ಈ ವರ್ಷ ಸಿನಿಮಾ ಬಿಡುಗಡೆಯ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಈ ವರ್ಷ ತುಳು ಚಿತ್ರರಂಗದಲ್ಲೂ ಆರು ಚಿತ್ರಗಳು ಬಿಡುಗಡೆ ಕಂಡಿವೆ. ಬಿಡುಗಡೆಯಾದ ಬಹುತೇಕ ಸಿನಿಮಾಗಳು ನಿರ್ಮಾಪಕ, ನಿರ್ದೇಶಕ, ಕಲಾವಿದರಲ್ಲಿ ಮಂದಹಾಸ ಮೂಡಿಸಿದರೆ, ಇನ್ನೊಂದಿಷ್ಟು ಸಿನಿಮಾಗಳು ಹೊಸಬರ ಕನಸು ಭಗ್ನಗೊಳಿಸಿವೆ. ಹಾಗಂತ ಕನ್ನಡ ಚಿತ್ರರಂಗ ಎದೆಗುಂದಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ನಿರ್ಮಾಪಕ, ನಿರ್ದೇಶಕರು ಬರುತ್ತಲೇ ಇದ್ದಾರೆ. ಹೊಸ ಜೋಶ್‌ನೊಂದಿಗೆ ಸಿನಿಮಾ ಮಾಡುತ್ತಿದ್ದಾರೆ.
ಪ್ರತಿ ವರ್ಷ ಸಿನಿಮಾಗಳ ಸೋಲು-ಗೆಲುವಿನ ಲೆಕ್ಕಾಚಾರದೊಂದಿಗೆ ಚಿತ್ರರಂಗ ಹೊಸ ವರ್ಷಕ್ಕೆ ತೆರೆದುಕೊಳ್ಳುತ್ತಿತ್ತು. ಆದರೆ, ಈ ವರ್ಷ ಆ ರೀತಿ ಲೆಕ್ಕಾಚಾರ ಹಾಕೋದು ಕಷ್ಟ. ಏಕೆಂದರೆ ಮೆಚ್ಚುಗೆ ಪಡೆದ ಅದೆಷ್ಟೋ ಸಿನಿಮಾಗಳು ಚಿತ್ರಮಂದಿರದಲ್ಲಿ ಹೆಚ್ಚು ದಿನ ನಿಲ್ಲಲಿಲ್ಲ. ಇನ್ನು ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಓಡದಿದ್ದರೂ ಆ ನಂತರ ಓಟಿಟಿ ಫ್ಲಾಟ್‌ಫಾರಂಗಳಲ್ಲಿ ಸೂಪರ್ ಹಿಟ್ ಆದವು. ಮತ್ತೂಂದಿಷ್ಟು ಸ್ಟಾರ್ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವ ಮುನ್ನವೇ ದೊಡ್ಡ ಮಟ್ಟದಲ್ಲಿ ಬಿಝಿನೆಸ್ ಮಾಡಿ ಸದ್ದು ಮಾಡಿದ್ದವು. ಆದರೆ, ಈ ವರ್ಷ ಕನ್ನಡ ಚಿತ್ರರಂಗಕ್ಕೆ ದೊಡ್ಡ ಗೆಲುವು ತಂದುಕೊಟ್ಟು, ಪರಭಾಷೆ ತಿರುಗಿ ನೋಡುವಂತೆ ಮಾಡಿದ ಸಿನಿಮಾಗಳನ್ನು ಹೆಸರಿಸಲೇಬೇಕು. ಮೊದಲ ಭಾಗ ಹಿಟ್ ಆಗುವ ಮೂಲಕ ಎರಡನೇ ಭಾಗದ ಕುತೂಹಲ ಹೆಚ್ಚಿಸಿ ಬಿಡುಗಡೆಯಾದ ಚಿತ್ರ “ಕೆಜಿಎಫ್-2′ ನಿರೀಕ್ಷೆಯಂತೆಯೇ ದೊಡ್ಡ ಮಟ್ಟದ ಹಿಟ್ ಆಯಿತು. ಸುಮಾರು ಒಂದೂವರೆ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್‌ವುಡ್ ಯಾರಿಗೂ ಕಮ್ಮಿ ಇಲ್ಲ ಎಂಬುದುನ್ನು ಸಾಬೀತುಪಡಿಸಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಒಂದು ಮಾಸ್ ಸಿನಿಮಾವಾಗಿ “ಕೆಜಿಎಫ್-2′ ಇಡೀ ದೇಶದ ಗಮನ ಸೆಳೆದು, ಭಾಷೆಯ ಗಡಿಯನ್ನು ಮೀರಿ ಗೆಲ್ಲುವ ಮೂಲಕ ಸಿನಿಮಾದ ತಾಕತ್ತು ಪ್ರದರ್ಶಿಸಿತು.
ಈ ವರ್ಷದ ಮತ್ತೂಂದು ಬಿಗ್ ಹಿಟ್ ಎಂದರೆ ಅದು “ಕಾಂತಾರ’. ರಿಷಭ್ ಶೆಟ್ಟಿ ನಟನೆ, ನಿರ್ದೇಶನದ “ಕಾಂತಾರ’ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದು, ದೊಡ್ಡ ಯಶಸ್ಸು ಕಂಡಿತು. ಇನ್ನು, ರಕ್ಷಿತ್ ಶೆಟ್ಟಿ ನಟನೆಯ “777 ಚಾರ್ಲಿ’, “ವಿಕ್ರಾಂತ್ ರೋಣ’, “ಗಾಳಿಪಟ-2′ ಸೇರಿದಂತೆ ಒಂದಷ್ಟು ಚಿತ್ರಗಳು ಪರಭಾಷಾ ಮಂದಿ ಸ್ಯಾಂಡಲ್ ವುಡ್‌ನತ್ತ ತಿರುಗಿ ನೋಡುವಂತೆ ಮಾಡುವ ಜೊತೆಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾದವು.
2022 ರಲ್ಲಿ ದರ್ಶನ ನೀಡಿದ ನಟರು
2022ರಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಮಾಗಳ ಮೂಲಕ ಬಹುತೇಕ ನಾಯಕ ನಟರು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಆ ನಾಯಕ ನಟರೆಂದರೆ ರವಿಚಂದ್ರನ್, ಜಗ್ಗೇಶ್, ಶರಣ್, ಸತೀಶ್, ನಿರೂಪ್, ಮನೋರಂಜನ್, ಸೃಜನ್ ಲೊಕೇಶ್, ಉಪೇಂದ್ರ, ಧನಂಜಯ್, ಪ್ರಜ್ವಲ್, ಅಜೇಯ್ ರಾವ್, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಶಿವರಾಜ್ ಕುಮಾರ್, ಪುನೀತ್, ಸುದೀಪ್, ಗಣೇಶ್, ಕೃಷ್ಣ, ಅನೀಶ್ ತೇಜೇಶ್ವರ್, ವಿನೋದ್ ಪ್ರಭಾಕರ್, ವಸಿಷ್ಠ ಸಿಂಹ, ಯೋಗಿ, ದಿಗಂತ್, ಪ್ರಮೋದ್ ಸಿನಿಮಾಗಳು ಈ ವರ್ಷ ತೆರೆಕಂಡಿವೆ.
ಐದು ಪ್ಯಾನ್ ಇಂಡಿಯಾ ಸಿನ್ಮಾ
2022ರಲ್ಲಿ ಕನ್ನಡದಿಂದ ಐದು ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಯಾಗಿವೆ. ಈ ಮೂಲಕ ಸ್ಯಾಂಡಲ್‌ವುಡ್ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದೆ. “ಕೆಜಿಎಫ್-2′, “777 ಚಾರ್ಲಿ’, “ಜೇಮ್ಸ್’, “ವಿಕ್ರಾಂತ್ ರೋಣ’ ಹಾಗೂ “ಕಾಂತಾರ’ ಚಿತ್ರಗಳು ಈ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿವೆ.
ಓಟಿಟಿಯಲ್ಲಿ 4ಸಿನಿಮಾ
2020ರಲ್ಲಿ ಚಿತ್ರರಂಗದ ಮಂದಿ ಕಂಡುಕೊಂಡು ಮತ್ತು ಮೊರೆಹೋದ ಹೊಸ ವೇದಿಕೆ ಎಂದರೆ ಅದು ಓಟಿಟಿಯಾಗಿತ್ತು. 2021ರಲ್ಲೂ ಕನ್ನಡದ 4 ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾಗಿದ್ದವು. ಅದು 2022ರಲ್ಲೂ ಮುಂದುವರೆಯಿತು. ಈ ವರ್ಷ “ಫ್ಯಾಮಿಲಿ ಪ್ಯಾಕ್’, “ಮ್ಯಾನ್ ಆಫ್ ದಿ ಮ್ಯಾಚ್’, “ಒನ್ ಕಟ್ ಟು ಕಟ್’ ಹಾಗೂ ಸತೀಶ್ ನಟನೆಯ “ಡಿಯರ್ ವಿಕ್ರಮ್’ ಚಿತ್ರಗಳು ನೇರವಾಗಿ ಓಟಿಟಿಯಲ್ಲೇ ಬಿಡುಗಡೆಯಾದವು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಸಾಲು ಸಾಲು ಹೊಸಬರು
2022ರಲ್ಲಿ 210ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಇದರಲ್ಲಿ ಲೆಕ್ಕ ಹಾಕಿ ನೋಡಿದರೆ ಸ್ಟಾರ್‌ಗಳ ಹಾಗೂ ಚಿತ್ರರಂಗ ಪರಿಚಿತ ಮುಖಗಳ ಚಿತ್ರಗಳು ಎಂದು ಸಿಗುವುದು 30 ರಿಂದ 35 ಚಿತ್ರಗಳು. ಉಳಿದಂತೆ ವಾರ ವಾರ ಸ್ಯಾಂಡಲ್‌ವುಡ್ ಅನ್ನು ರಂಗೇರಿಸಿದ್ದು ಹೊಸಬರೇ. ಒಂದು ಹೊಸ ಭರವಸೆಯೊಂದಿಗೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಹೊಸಬರಲ್ಲಿ ಅನೇಕರು ಗೆದ್ದರೆ, ಇನ್ನೊಂದಷ್ಟು ಮಂದಿ ಹೊಸ ಪಾಠ ಕಲಿತಿದ್ದಾರೆ. ಪ್ರತಿ ವಾರ ಸಾಕಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾಗಿ ಅದೃಷ್ಟ ಪರೀಕ್ಷಿಸಿ ಕೊಂಡರೂ, ಹೊಸಬರ ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಹೊಸಬರ ಕೈ ಹಿಡಿದಿಲ್ಲ ಎಂಬುದು ಬೇಸರದ ವಿಚಾರ. “ಕಂಬ್ಳಿಹುಳ’, “ಧರಣಿ ಮಂಡಲ ಮಧ್ಯದೊಳಗೆ’, “ಖಾಸಗಿ ಪುಟಗಳು’ ಸೇರಿದಂತೆ ಅನೇಕ ಸಿನಿಮಾಗಳ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಆದರೆ, ಆರ್ಥಿಕವಾಗಿ ಈ ಚಿತ್ರಗಳು ನಿರ್ಮಾಪಕರಿಗೆದೊಡ್ಡ ಮಟ್ಟದ ಲಾಭ ತಂದುಕೊಡಲಿಲ್ಲ.
ಗುನುಗಿದ ಹಾಡುಗಳು
ಪ್ರತಿ ವರ್ಷ ಕನ್ನಡ ಚಿತ್ರಗಳ ಕೆಲವು ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿ, ಜನರ ಬಾಯಲ್ಲಿ ನಲಿದಾಡುತ್ತವೆ. ಈ ವರ್ಷವೂ ಒಂದಷ್ಟು ಹಾಡುಗಳು ಹಿಟ್ ಆಗಿವೆ. ಆ ತರಹ ಹಿಟ್ ಆದ ಅನೇಕ ಹಾಡುಗಳು ಸಿಗುತ್ತವೆ. ಅದರಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ. “ಕೆಜಿಎಫ್-2′ ಚಿತ್ರ “ತೂಫಾನ್…’, “ಗಗನ ನೀ..’, “ವಿಕ್ರಾಂತ್ ರೋಣ’ ಚಿತ್ರದ “ರಾ… ರಾ… ರಕ್ಕಮ್ಮ’, “ಕಾಂತಾರ’ ಚಿತ್ರದ “ಸಿಂಗಾರ ಸಿರಿಯೇ…’, “ವರಾಹ ರೂಪಂ…’, “ಏಕ್‌ಲವ್ಯ’ ಚಿತ್ರದ “ಯಾರೇ ಯಾರೇ’, “ಮೀಟ್ ಮಾಡನಾ ಇಲ್ಲ, ಡೇಟ್ ಮಾಡನಾ’, “ಜೇಮ್ಸ್’ ಚಿತ್ರದ “ಸಲಾಂ ಸೋಲ್ಜರ್’, “777 ಚಾರ್ಲಿ’ ಚಿತ್ರದ “ಟಾರ್ಚರ್’, “ಲವ್ 360′ ಚಿತ್ರದ “ಜಗವೇ ನೀನು’, “ಬನಾರಸ್’ ಚಿತ್ರದ “ಮಾಯಗಂಗೆ ಮಾಯಗಂಗೆ’, “ಗಾಳಿಪಟ-2′ ಚಿತ್ರದ “ದೇವ್ಲೆ ದೇವ್ಲೆ’, “ನೀನು ಬಗೆಹರಿಯದ ಹಾಡು’, “ನೀನಾಡದ ಮಾತೆಲ್ಲವ’, “ವೇದ’ ಚಿತ್ರದ “ಗಿಲ್ಲಕ್ಕೋ ಸಿವಾ’ ಸೇರಿದಂತೆ ಇನ್ನೂ ಕೆಲವು ಹಾಡುಗಳು ಈ ವರ್ಷ ಜನರ ಬಾಯಲ್ಲಿ ಹೆಚ್ಚು ನಲಿದಾಡಿವೆ.
ದರ್ಶನ್-ಸುದೀಪ್ ಟ್ವೀಟ್
ಕಳೆದ ಐದು ವರ್ಷಗಳಿಂದ ಮಾತು ಬಿಟ್ಟು ಪರಸ್ಪರ ದೂರವೇ ಇದ್ದ ಸುದೀಪ್ ಹಾಗೂ ದರ್ಶನ್ ಜೋಡಿ ಈ ವರ್ಷ ಟ್ವಿಟರ್ ಮೂಲಕ ಮಾತನಾಡಿಕೊಂಡಿದ್ದಾರೆ. ದರ್ಶನ್ ಮೇಲಿನ ಚಪ್ಪಲಿ ಎಸೆತ ಘಟನೆಯನ್ನು ಖಂಡಿಸಿ ಸುದೀಪ್ ಪತ್ರವೊಂದನ್ನು ಬರೆದರೆ, ಆ ಪತ್ರಕ್ಕೆ ದರ್ಶನ್ ಥ್ಯಾಂಕ್ಸ್ ಹೇಳಿದ್ದಾರೆ. ಇದು ಇಬ್ಬರ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.
ಕಾಂತಾರ ಹವಾ
ಸ್ಯಾಂಡಲ್‌ವುಡ್ 2022ರಲ್ಲಿ ಚಿನ್ನದ ಬೆಳೆ ತೆಗೆದಿರೋದು ಗೊತ್ತೇ ಇದೆ. ಆ ತರಹದಲ್ಲಿ ದೊಡ್ಡ ಮಟ್ಟದ ಫಸಲು ತೆಗೆದಿದ್ದು “ಕಾಂತಾರ’. ಯಾವುದೇ ನಿರೀಕ್ಷೆ ಇಲ್ಲದೇ, ಮೀಡಿಯಂ ಬಜೆಟ್‌ನಲ್ಲಿ ತಯಾರಾಗಿ ಬಿಡುಗಡೆಯಾದ ಚಿತ್ರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಒಂದೆಡೆಯಾದರೆ ಈ ಚಿತ್ರ ಸೃಷ್ಟಿಸಿದ ಹವಾ ಮತ್ತೂಂದೆಡೆ. “ಕೆಜಿಎಫ್-2′ ಕಲೆಕ್ಷನ್ ವಿಚಾರದಲ್ಲಿ ದೊಡ್ಡ ಮೈಲುಗಲ್ಲು ಸೃಷ್ಟಿಸಿತು. ಮಾಸ್ ಹಾಗೂ ಯೂತ್ಸ್ ಮನಸ್ಸನ್ನು ಈ ಸಿನಿಮಾ ಗೆದ್ದರೆ “ಕಾಂತಾರ’ ಎಲ್ಲಾ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಮತ್ತೂಂದು.
20-30 ವರ್ಷಗಳಿಂದ ಚಿತ್ರಮಂದಿರದತ್ತ ತಲೆ ಹಾಕಿಯೂ ಮಲಗಿರದ ಅದೆಷ್ಟೋ ಮಂದಿಯನ್ನು ಚಿತ್ರಮಂದಿರಕ್ಕೆ ಕರೆತಂದಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಇಡೀ ಫ್ಯಾಮಿಲಿ ಆಡಿಯನ್ಸ್ ಜೊತೆಯಾಗಿ ಕುಳಿತು ಎಂಜಾಯ್ ಮಾಡುವಂತೆ ಮಾಡಿದ್ದು “ಕಾಂತಾರ’ ಹೆಗ್ಗಳಿಕೆ. ಇದು ಒಂದಾದರೆ, ಪರಭಾಷೆಯಲ್ಲಿ ಬಿಡುಗಡೆಯಾಗಿ ಅಲ್ಲೂ ಸೂಪರ್ ಹಿಟ್ ಆಗಿ, ಅಲ್ಲಿನ ಸಿನಿಮಾ ಮೇಕರ್‌ಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದು ಕನ್ನಡದ “ಕಾಂತಾರ’. ಹಾಗಾಗಿ, 2022 ರಲ್ಲಿ”ಕಾಂತಾರ’ ಸೃಷ್ಟಿಸಿದ ದಾಖಲೆಗಳನ್ನು ಮರೆಯುವಂತಿಲ.
ನಿರ್ಮಾಣಕ್ಕೆ ಶಿವಣ್ಣ
ಕನ್ನಡ ಚಿತ್ರರಂಗದಲ್ಲಿ 36 ವರ್ಷಗಳಿಂದ ನಾಯಕ ನಟರಾಗಿ ನಟಿಸುತ್ತಿರುವ ಶಿವರಾಜ್‌ಕುಮಾರ್ ಮೊದಲ ಬಾರಿಗೆ ತಮ್ಮದೇ ಬ್ಯಾನರ್ ಮೂಲಕ ನಿರ್ಮಾಪಕರಾಗಿದ್ದು 2022ರಲ್ಲಿ. ಗೀತಾ ಪಿಕ್ಚರ್ ಎಂಬ ಬ್ಯಾನರ್ ತೆರೆದು ತಮ್ಮ 125ನೇ ಚಿತ್ರ “ವೇದ’ವನ್ನು ನಿರ್ಮಿಸಿದರು. ಈ ಹಿಂದೆ ತಮ್ಮ 100ನೇ ಚಿತ್ರ “ಜೋಗಯ್ಯ’ವನ್ನು ತಮ್ಮದೇ ಬ್ಯಾನರ್ ಮೂಲಕ ನಿರ್ಮಿಸಲು ಮುಂದಾಗಿದ್ದರು. ಆದರೆ, ಈಗ 125ನೇ ಸಿನಿಮಾ ನಿರ್ಮಿಸಿದ್ದಾರೆ.
ಪುನೀತ್ ಕೊನೆಯ ಕನಸು ಬಿಡುಗಡೆ
ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಕನಸು ಬಿಡುಗಡೆಯಾಗಿದ್ದು 2022ರಲ್ಲಿ. ಪ್ರಕೃತಿ ಕುರಿತು ಪುನೀತ್ ರಾಜ್‌ಕುಮಾರ್ ತಮ್ಮ ಪಿಆರ್‌ಕೆ ಮೂಲಕ ನಿರ್ಮಿಸಿದ “ಗಂಧದ ಗುಡಿ’ ಡಾಕ್ಯುಮೆಂಟರಿ ಚಿತ್ರ 2022 ಅಕ್ಟೋಬರ್‌ನಲ್ಲಿ ತೆರೆಕಂಡಿತು. ಇಲ್ಲಿ ಪುನೀತ್ ರಾಜ್‌ಕುಮಾರ್ ನಮ್ಮ ನಾಡಿನ ಪ್ರಕೃತಿ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ.
ಅತಿ ಹೆಚ್ಚು ಕಲೆಕ್ಷನ್ ಕಂಡ ವರ್ಷ
ಕನ್ನಡ ಸಿನಿಮಾಗಳು ಹೊರರಾಜ್ಯ, ಹೊರದೇಶಗಳಲ್ಲಿ ಸದ್ದು ಮಾಡಿದ್ದು ಒಂದಾದರೆ, ಕನ್ನಡ ಸಿನಿಮಾಗಳು ಈ ಮಟ್ಟಕ್ಕೆ ಕಲೆಕ್ಷನ್ ಮಾಡಬಲ್ಲವು ಎಂದು ತೋರಿಸಿದ್ದು ಈ ವರ್ಷದ ಹೆಗ್ಗಳಿಕೆ. “ಕೆಜಿಎಫ್-2′, “ಕಾಂತಾರ’, “777 ಚಾರ್ಲಿ’, “ವಿಕ್ರಾಂತ್ ರೋಣ’ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಕನ್ನಡದ ತಾಕತ್ತು ತೋರಿಸಿವೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾವ ವರ್ಷವೂ ಇಷ್ಟೊಂದು ಮಟ್ಟದ ಬಿಝಿನೆಸ್ ಆಗಿರಲಿಲ್ಲ. “ಕಾಂತಾರ’ ಚಿತ್ರದ ಕನ್ನಡ ಅವತರಣಿಕೆ ಕರ್ನಾಟಕವೊಂದರದಲ್ಲೇ 172 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ, ಮೊದಲ ಸ್ಥಾನದಲ್ಲಿದ್ದರೆ, ವರ್ಲ್ಡ್ ವೈಡ್ 1500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಯಶ್ ನಟನೆಯ “ಕೆಜಿಎಫ್-2′ ಚಿತ್ರದ ಕನ್ನಡ ಅವತರಣಿಕೆ 162 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ವಿಶೇಷವೆಂದರೆ ಈ ಎರಡೂ ಚಿತ್ರಗಳನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ತನ್ನ ದಾಖಲೆಯನ್ನು ತಾನೇ ಮುರಿದಿದೆ.
ಕಳೆದುಕೊಂಡ ನೋವು
ಕನ್ನಡ ಚಿತ್ರರಂಗ 2022ರಲ್ಲಿ ಒಂದಷ್ಟು ಮಂದಿಯನ್ನು ಕಳೆದುಕೊಂಡು ನೋವು ಕೂಡಾ ಅನುಭವಿಸಿದೆ. ಹಿರಿಯ ನಟ ಲೋಹಿತಾಶ್ವ, ರಾಜೇಶ್, ಭಾರ್ಗವಿ ನಾರಾಯಣ್, ಆನೇಕಲ್ ಬಾಲರಾಜ್, ಮೋಹನ್ ಜುನೇಜಾ, ಅಶೋಕ್ ರಾವ್ ಸೇರಿದಂತೆ ಇನ್ನು ಕೆಲವು ಕಲಾವಿದರು, ತಂತ್ರಜ್ಞರು ಈ ವರ್ಷ ನಮ್ಮನ್ನು ಅಗಲಿದ್ದಾರೆ.
ರಮ್ಯಾ ರೀ ಎಂಟ್ರಿ
ನಟಿ ರಮ್ಯಾ 2022ರಲ್ಲಿ ನಟಿ ಹಾಗೂ ನಿರ್ಮಾಪಕಿಯಾಗಿ ಬರುವ ಮೂಲಕ ಅವರ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಧನಂಜಯ್ ನಟನೆಯ “ಉತ್ತರಕಾಂಡ’ ಚಿತ್ರದಲ್ಲಿ ನಾಯಕಿಯಾದರೆ, “ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ನಿರ್ಮಾಪಕಿಯಾಗಿದ್ದಾರೆ
ವರ್ಷಪೂರ್ತಿ ದರ್ಶನ ನೀಡಿದ ನಾಯಕ-ನಾಯಕಿ
ಪ್ರತಿ ವರ್ಷ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ನಾಯಕ- ನಾಯಕಿ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿ, ವರ್ಷದ ನಾಯಕ- ನಾಯಕಿ ಎಂಬ ಬಿರುದು ಪಡೆಯುತ್ತಾರೆ. ಈ ವರ್ಷ ಆ ಬಿರುದು ಧನಂಜಯ್ ಹಾಗೂ ಅದಿತಿ ಪ್ರಭುದೇವ ಅವರ ಪಾಲಾಗಿದೆ. ಧನಂಜಯ್ ನಟನೆಯ ಆರು ಸಿನಿಮಾಗಳ ಮೂಲಕ 2022ರಲ್ಲಿ ಪ್ರೇಕ್ಷಕರಿಗೆ ದರ್ಶನ ನೀಡಿದ್ದಾರೆ. “ಟ್ವೆಂಟಿ ಒನ್ ಅವರ್’, “ಬೈರಾಗಿ’, “ಮಾನ್ಸೂನ್ ರಾಗ’, “ತೋತಾಪುರಿ’, “ಹೆಡ್‌ಬುಷ್’, “ಜಮಾಲಿಗುಡ್ಡ’ ಚಿತ್ರಗಳು ಈಗಾಗಲೇ ತೆರೆಕಂಡಿವೆ. ಪ್ರತಿ ವರ್ಷ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆ ಯಾಗುವ ಮೂಲಕ ಒಬ್ಬೊಬ್ಬ ನಾಯಕಿಯರು ಮಿಂಚುತ್ತಿರುತ್ತಾರೆ.
ಹಾಗಾದರೆ, 2022ರಲ್ಲಿ ಅತಿ ಹೆಚ್ಚು ಸಿನಿಮಾ ರಿಲೀಸ್ ಆಗಿ ಮಿಂಚಿರುವ ನಟಿ ಯಾರೆಂದು ನೀವು ಕೇಳಬಹುದು. ಅದಕ್ಕೆ ಅದಿತಿ ಪ್ರಭುದೇವ. 2022ರ ರಿಲೀಸ್ ವಿಷಯಕ್ಕೆ ಬರುವುದಾದರೆ ಅದಿತಿ ನಟಿಸಿರುವ ಎಂಟು ಸಿನಿಮಾಗಳು ತೆರೆಕಂಡಿವೆ. ಈ ಮೂಲಕ 2022ರಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ತೆರೆಮೇಲೆ ಕಾಣಿಸಿಕೊಂಡಿರುವ ನಟಿಯಾಗಿ ಅದಿತಿ ಹೊರಹೊಮ್ಮಿದ್ದಾರೆ. ಅದಿತಿ ನಾಯಕಿಯಾಗಿ ತೆರೆಮೇಲೆ ಬಂದಿರುವ ಸಿನಿಮಾಗಳ ಪಟ್ಟಿ ನೋಡುವುದಾದರೆ, “ಒಂಭತ್ತನೇ ದಿಕ್ಕು’, “ಓಲ್ಡ್ ಮಾಂಕ್’, “ಗಜಾನನ ಅಂಡ್ ಗ್ಯಾಂಗ್’, “ತೋತಾಪುರಿ’, “ಚಾಂಪಿಯನ್’, “ತ್ರಿಬಲ್ ರೈಡಿಂಗ್’, “ಜಮಾಲಿ ಗುಡ್ಡ’, “ಪದವಿ ಪೂರ್ವ’ ಚಿತ್ರಗಳಲ್ಲಿ ಅದಿತಿ ಮಿಂಚಿದ್ದಾರೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.