ಕುಂದಾಪುರ: ಒಂದು ವರ್ಷದಲ್ಲಿ 256 ಮಂದಿ ಆತ್ಮಹತ್ಯೆ
ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ಪ್ರಕರಣ ದಾಖಲಾಗಿತ್ತು
Team Udayavani, Jan 4, 2023, 3:24 PM IST
ಕುಂದಾಪುರ: ಕಳೆದ 2-3 ವರ್ಷಗಳಲ್ಲಿ ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ಕಡಿಮೆಯಿದ್ದ ಅಪರಾಧ, ಅಪಘಾತ ಪ್ರಕರಣಗಳ ಸಂಖ್ಯೆ 2022 ರಲ್ಲಿ ಮತ್ತೆ ಹೆಚ್ಚಾಗಿದೆ. ಅದರಲ್ಲೂ ಆತ್ಮಹತ್ಯೆ ಹಾಗೂ ಅಪಘಾತ ಪ್ರಕರಣ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದ ವರ್ಷ ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ಕುಂದಾಪುರ ನಗರ, ಗ್ರಾಮಾಂತರ, ಬೈಂದೂರು, ಗಂಗೊಳ್ಳಿ, ಕೊಲ್ಲೂರು, ಶಂಕರನಾರಾಯಣ ಹಾಗೂ ಅಮಾಸೆಬೈಲು ಠಾಣಾ ವ್ಯಾಪ್ತಿಗಳಲ್ಲಿ ಬರೋಬ್ಬರಿ 256 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಹೆಚ್ಚಿನ ಚಿಂತಿಸಬೇಕಾದ ಸಂಗತಿಯಾಗಿದೆ.
11 ಮಂದಿ ರೈಲಿನಡಿಗೆ…
ಆತ್ಮಹತ್ಯೆ ಮಾಡಿಕೊಂಡ 256 ಮಂದಿಯ ಪೈಕಿ 43 ಮಂದಿ ನೀರಿಗೆ ಬಿದ್ದು, 69 ಮಂದಿ ನೇಣು, 15 ಮಂದಿ ವಿಷ, 25 ಮಂದಿ ಬಾವಿಗೆ ಹಾರಿ, 11 ಮಂದಿ ರೈಲಿಗೆ ದೇಹ ಕೊಟ್ಟು ಸಾವನ್ನಪ್ಪಿದ್ದಾರೆ.
5 ವರ್ಷದಲ್ಲಿ 287 ಬಲಿ
ಕಳೆದ 2022 ರಲ್ಲಿ ಕುಂದಾಪುರ ವಿಭಾಗ ವ್ಯಾಪ್ತಿಯಲ್ಲಿ 329 ರಸ್ತೆ ಅಪಘಾತಗಳು ಸಂಭವಿಸಿದ್ದು, 65 ಮಂದಿ ಸಾವನ್ನಪ್ಪಿದ್ದರು. 2021ರಲ್ಲಿ 259 ಅಪಘಾತ 49 ಸಾವು, 2020ರಲ್ಲಿ 262 ಅಪಘಾತ 48 ಸಾವು, 2019ರಲ್ಲಿ 339 ಅಪಘಾತ 63 ಸಾವು ಹಾಗೂ 2018ರಲ್ಲಿ 354 ರಸ್ತೆ ಅಪಘಾತಗಳು ಸಂಭವಿಸಿದ್ದು, 62 ಮಂದಿ ಸಾವನ್ನಪ್ಪಿದ್ದರು.ಒಟ್ಟಾರೆ ಕಳೆದ 5 ವರ್ಷಗಳಲ್ಲಿ ರಸ್ತೆ ಅಪಘಾತಕ್ಕೆ 287 ಮಂದಿ ಬಲಿಯಾಗಿರುವುದು ಆತಂಕ ಹುಟ್ಟಿಸಿದೆ.
6 ಕೊಲೆ ಪ್ರಕರಣ
* ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮದ ನರಸಿಂಹ ಮರಕಾಲ (74) ಅವರನ್ನು ಪುತ್ರ ರಾಘವೇಂದ್ರ ಎಂಬಾತ ಕೊಲೆಗೈದ ಘಟನೆ ಮಾರ್ಚ್ 19 ರಂದು ಸಂಭವಿಸಿತ್ತು.
*ಹಂಗಳೂರಿನ ನಿವಾಸಿ ವಿನಯ್ ಪೂಜಾರಿ (26) ಮಾ.28 ರಂದು ನಾಪತ್ತೆಯಾಗಿದ್ದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎ.4 ರಂದು ಶಂಕರನಾರಾಯಣ ಠಾಣಾ ವ್ಯಾಪ್ತಿಯ ಅಂಪಾರು ಸಮೀಪದ ವಾರಾಹಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ಪ್ರಕರಣ ದಾಖಲಾಗಿತ್ತು. ಸ್ನೇಹಿತರೇ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ.
* ಶಂಕರನಾರಾಯಣ ಠಾಣಾ ವ್ಯಾಪ್ತಿಯ ವಂಡಾರು ಕಟ್ಟೆಕೊಡ್ಲುವಿನಲ್ಲಿ ಮೇ 17ರಂದು ಪತಿ ಸುರೇಂದ್ರ ಎಂಬಾತ ಪತ್ನಿ ಅನಿತಾ ಎಂಬುವರನ್ನು ಕೊಲೆಗೈದ ಘಟನೆ ನಡೆದಿತ್ತು.
*ಬೈಂದೂರಿನ ಒತ್ತಿನೆಣೆಯಲ್ಲಿ ಕುರುಪ್ ಸಿನೆಮಾ ಮಾದರಿಯಲ್ಲಿ ಕಾರ್ಕಳದ ಆನಂದ ದೇವಾಡಿಗ (60) ಅವರನ್ನು ಜು. 13 ರಂದು ಕಾರಿನಲ್ಲಿ ಜೀವಂತ ಸುಟ್ಟು ಹಾಕಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದು, ಈ ಪೈಕಿ ಹಿರಿಯಡಕ ಜೈಲಿನಲ್ಲಿದ್ದ ಸದಾನಂದ ಶೇರೆಗಾರ್ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನುಳಿದ ಮೂವರು ಜೈಲಲಿದ್ದಾರೆ.
*ಹೆಮ್ಮಾಡಿ ಸಮೀಪದ ಕಟ್‌ಬೆಲ್ತೂರಿನ ದೇವಲ್ಕುಂದ ಗ್ರಾಮದಲ್ಲಿ ಆ. 22 ರಂದು ಟಿಪ್ಪರ್ ಚಾಲಕ ರವಿ ಆಚಾರ್ ಪತ್ನಿ ಪೂರ್ಣಿಮಾ ಆಚಾರ್ ಎಂಬುವರನ್ನು ಹತ್ಯೆ ಮಾಡಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದರು.
*ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹಾಲಾಡಿ ಗ್ರಾಮದ ಕಾಸಾಡಿಯಲ್ಲಿ ತಾಯಿ ಪಾರ್ವತಿ ಅವರನ್ನು ಪುತ್ರ ಕೃಷ್ಣ ನಾಯ್ಕ ಎಂಬಾತ ಕೊಲೆ ಮಾಡಿರುವ ಘಟನೆ ಸೆ.19 ರಂದು ನಡೆದಿತ್ತು.
62 ಕಳ್ಳತನ ಪ್ರಕರಣ
ಕುಂದಾಪುರ ಉಪ ವಿಭಾಗ ವ್ಯಾಪ್ತಿಯ 7 ಠಾಣೆಗಳಲ್ಲಿ ಉಳಿದಂತೆ 62 ಕಳ್ಳತನ ಪ್ರಕರಣಗಳು ನಡೆದಿದೆ. ಹಿಂದಿಗಿಂತ ಹೆಚ್ಚಿನ ಅಂದರೆ ಈ ಬಾರಿ 51 ಗಾಂಜಾ ಸೇವನೆ ಹಾಗೂ ಮಾರಾಟ ಪ್ರಕರಣ ದಾಖಲಾಗಿದೆ. 70 ಮಂದಿ ನಾಪತ್ತೆಯಾಗಿರುವುದು ಸಹ ಗಂಭೀರವಾಗಿ ಪರಿಗಣಿಸಬೇಕಿದೆ. ಮಟ್ಕಾ, ಜುಗಾರಿ, ಇಸ್ಪೀಟು 35 ಪ್ರಕರಣ, 9 ಅಕ್ರಮ ಮದ್ಯ ಮಾರಾಟ ಪ್ರಕರಣ ವರದಿಯಾಗಿದೆ.
ಮಹಿಳಾ-ಮಕ್ಕಳ ದೌರ್ಜನ್ಯ: 41 ಕೇಸು
ಕುಂದಾಪುರ ಉಪ ವಿಭಾಗದ ಸಂಚಾರಿ ಪೊಲೀಸ್ ಠಾಣೆ ಹೊರತುಪಡಿಸಿ ಉಳಿದ 7 ಠಾಣೆಗಳಲ್ಲಿ 41 ಮಹಿಳಾ ಮತ್ತು ಮಕ್ಕಳ ದೌರ್ಜನ್ಯದಡಿ ಕೇಸು ದಾಖಲಾಗಿದೆ. ಲೈಂಗಿಕ ದೌರ್ಜನ್ಯ, ಹಲ್ಲೆ, ಜೀವ ಬೆದರಿಕೆ, ಕಿರುಕುಳ, ಪೋಕ್ಸೊ, ವರದಕ್ಷಿಣೆ ಪ್ರಕರಣಗಳು ಇದರಲ್ಲಿ ಸೇರಿವೆ.
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.