ನಮ್ಮ ತಂಟೆಗೆ ಬರಬೇಡಿ: ಮಹಾರಾಷ್ಟ್ರಕ್ಕೆ ಹಾವೇರಿ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸ್ಪಷ್ಟ ಎಚ್ಚರಿಕೆ
Team Udayavani, Jan 6, 2023, 7:00 AM IST
ಬೆಳಗಾವಿಯ ಇಂಚಿಂಚು ನೆಲವೂ ಕನ್ನಡಿಗರದ್ದು. ಬೆಳಗಾವಿ ನಮ್ಮದು ಎಂಬ ಮಹಾರಾಷ್ಟ್ರದವರ ಹೇಳಿಕೆಯನ್ನು ಯಾರೂ ಒಪ್ಪುವುದಿಲ್ಲ. ನಮ್ಮ ತಂಟೆಗೆ ನೀವು ಬರಬೇಡಿ ಅಷ್ಟೆ… – ಇದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ| ದೊಡ್ಡರಂಗೇಗೌಡ ಅವರು “ಉದಯವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಹಾರಾಷ್ಟ್ರಕ್ಕೆ ನೀಡಿರುವ ಸ್ಪಷ್ಟ ಎಚ್ಚರಿಕೆ.
ನೀವು ಅಧ್ಯಕ್ಷರಾಗಿ ಆಯ್ಕೆಯಾದಾಗ ಸಾಹಿತ್ಯ ವಲಯದಲ್ಲಿ ಹಲವರು ಟೀಕೆ ಮಾಡಿದರಲ್ಲ?
ಟೀಕೆಗೆ ಒಳಗಾಗದ ಬದುಕು ಎಲ್ಲಿದೆ? ರಾಮನನ್ನೇ ಬಿಡಲಿಲ್ಲ, ಕೃಷ್ಣ ನನ್ನೂ ಬಿಡಲಿಲ್ಲ. ಹೀಗಾಗಿ ಟೀಕೆಗೆ ಒಳಗಾಗದ ಬದುಕಿಗೆ ಅರ್ಥವಿಲ್ಲ. ಆ ಹಿನ್ನೆಲೆಯಲ್ಲಿ ಟೀಕೆಗೆ ಒಳಗಾಗಬೇಕು. ಆಗದೆ ಇರುವವರು ಪ್ರತೀ ರಂಗದಲ್ಲೂ ಇರುತ್ತಾರೆ. 60ರ ದಶಕದಿಂದಲೂ ನಾನು ಕನ್ನಡ ಆರಾಧನೆಯಲ್ಲಿ ತೊಡಗಿದ್ದೇನೆ. ಟೀಕೆಗೆ ತಲೆಕೆಡಿಸಿಕೊಳ್ಳದೆ ನನ್ನ ಕೆಲಸ ನಾನು ಮಾಡುತ್ತೇನೆ.
ಕನ್ನಡ ವಿಮರ್ಶಾ ಕ್ಷೇತ್ರದಲ್ಲೂ ನಿಮ್ಮ ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿಲ್ಲ ಏಕೆ? ಈ ಬಗ್ಗೆ ನೋವಿದೆಯಾ?
ಖಂಡಿತ. ಈ ವಿಚಾರದಲ್ಲಿ ತುಂಬಾ ನೋವಿದೆ. ನನ್ನ ಕಾವ್ಯ ತಿರಸ್ಕಾರಕ್ಕೆ ಒಳಗಾಗಿರುವ ಬಗ್ಗೆ ದುಃಖವಿದೆ. ವಿಮರ್ಶಕರು ಪೂರ್ವಗ್ರಹ ಪೀಡಿತರು. ನಾನು ಚಲನಚಿತ್ರ ಗೀತೆಗಳನ್ನು ಬರೆದೆ ಎಂದು ಹೇಳಿ ನನ್ನ ಗಂಭೀರ ಕಾವ್ಯವನ್ನು ಓದಲೇ ಇಲ್ಲ. 30 ಸಂಗ್ರಹಗಳು, 25 ವಿಮಶಾì ಕೃತಿಗಳು ಪ್ರಕಟ ವಾಗಿವೆ. ಕಥೆ, ನಾಟಕಗಳನ್ನು ಬರೆದಿದ್ದೇನೆ. ಆದರೆ ಅವುಗಳನ್ನು ಯಾರೂ ಓದಿಯೇ ಇಲ್ಲ. ಕನ್ನಡ ವಿಮರ್ಶಾ ವಲಯದಿಂದ ನನಗೆ ಸಿಗಬೇಕಾಗದ ಮನ್ನಣೆ, ಗೌರವ ಸಿಕ್ಕಿಲ್ಲ. ಆ ಬಗ್ಗೆ ವಿಷಾದವಿದೆ. ಬುದ್ಧಿಜೀವಿಗಳು ಪೂರ್ವಗ್ರಹ ಪೀಡಿತರು. ಅವರು ಹಳದಿ ಕಣ್ಣಿನಿಂದ ನೋಡಿ ತಾವೇ ಸರಿ, ತಾವು ಮಾಡಿದ್ದೇ ಸರಿ ಎಂದು ನಡೆಯುತ್ತಿದ್ದಾರೆ. ಆದರೆ ನಾನು ಆನೆ ನಡೆದದ್ದೇ ಹಾದಿ ಎಂದು ನನ್ನ ಪಾಡಿಗೆ ನಾನು ಬರೆದುಕೊಂಡು ಬಂದಿದ್ದೇನೆ. ಈ ವಿಚಾರದಲ್ಲಿ ನಾನು ಯಾವುದೇ ಗುಂಪಿಗೆ ಸೇರದ ಪದ.
ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದರೂ ಗಡಿಯಲ್ಲಿ ಮಹಾರಾಷ್ಟ್ರ ಆಗಾಗ್ಗೆ ಕ್ಯಾತೆ ತೆಗೆಯುತ್ತಲೇ ಇದೆ. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಹಾರಾಷ್ಟ್ರ ಸರಕಾರಕ್ಕೆ ಏನು ಸಂದೇಶ ರವಾನಿಸುತ್ತೀರಿ?
ಬೆಳಗಾವಿ ಕನ್ನಡಿಗರದ್ದು, ಬೆಳಗಾವಿಯ ಇಂಚಿಂಚೂ ನೆಲವೂ ಕನ್ನಡಿಗರದ್ದು. ಈಗ ಬೆಳಗಾವಿ ನಮ್ಮದು ಎಂದು ಮಹಾರಾಷ್ಟ್ರ ದವರು ಹೇಳಿದರೆ ಯಾರೂ ಒಪ್ಪುವುದಿಲ್ಲ. ನಮ್ಮ ತಂಟೆಗೆ ನೀವು ಬರಬೇಡಿ, ನಾವು ನಿಮ್ಮ ತಂಟೆಗೆ ಬರುವುದಿಲ್ಲ. ಸೊಲ್ಹಾಪುರ, ಜತ್, ಅಕ್ಕಲಕೋಟೆ ಮುಂತಾದ ಪ್ರದೇಶಗಳಲ್ಲಿ ಕನ್ನಡದ ಮನೆಗಳಿವೆ. ನಮ್ಮ ರಾಜ್ಯದ ಗಡಿ ಪ್ರದೇಶವಾದ ಬೆಳಗಾವಿಯನ್ನು ಕಬಳಿಸಲು ಬಂದರೆ ಕಬಳಿಸುವವರಿಗೆ ನಾವು ಪೆಟ್ಟು ನೀಡುತ್ತೇವೆ. ಕನ್ನಡಿಗರಿಗೆ ಆ ಶೌರ್ಯವಿದೆ. ಸುಲಭವಾಗಿ ನಾವು ಯಾವ ನೆಲವನ್ನೂ ಬಿಟ್ಟುಕೊಡುವುದಿಲ್ಲ. ನಾವು ಹೇಡಿತನ ತೋರಿಸುವುದಿಲ್ಲ. ನಮ್ಮದಲ್ಲದ ನೆಲಕ್ಕೆ ಕನ್ನಡಿಗರು ಹೋಗುವುದಿಲ್ಲ, ಕನ್ನಡವನ್ನು ಬಿಟ್ಟು ಕೊಡುವುದಿಲ್ಲ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡಿಗರಿಗೆ ನೀವೇನು ಸಂದೇಶ ಕೊಡುತ್ತೀರಿ?
ಕನ್ನಡಿಗರು ಮನೆಗಳಲ್ಲಿ ಕನ್ನಡ ಮಾತನಾಡುವುದನ್ನು ಬಿಡಬೇಡಿ. ಮಗುವಿಗೆ ಬಲವಂತದ ಇಂಗ್ಲಿಷ್ ಕಲಿಕೆ ಬೇಡ. ಅಪ್ಪ ಅಮ್ಮ ಎನ್ನುವುದನ್ನು ಕನ್ನಡದಲ್ಲೇ ಹೇಳಿ. ನಾವೆಲ್ಲರೂ ಕನ್ನಡದಲ್ಲೇ ಓದಿದ್ದೇವೆ. ನಾವೇನು ಹಾಳಾಗಿ ಹೋಗಿದ್ದೇವಾ? ಬಾಹ್ಯಾಕಾಶ ಕ್ಷೇತ್ರದ ಸಾಧಕ ಸಿ.ಎನ್.ಆರ್. ರಾವ್, ಇನ್ಫೋಸಿಸ್ ನಾರಾಯಣ ಮೂರ್ತಿ ಸಹಿತ ಹಲವು ಸಾಧಕರು ಕನ್ನಡದಲ್ಲೇ ಓದಿದ್ದಾರೆ. ಹಾಗಾಗಿ ಕನ್ನಡಕ್ಕೆ ಮಾನ್ಯತೆ ಕೊಡಿ, ಕನ್ನಡದಲ್ಲೇ ವ್ಯವಹರಿಸಿ
ಕೇಂದ್ರ ಸರಕಾರ ಹಿಂದಿ ಹೇರಿಕೆಗೆ ಮುಂದಾಗುತ್ತಿದೆ ಎಂಬ ಕೂಗಿದೆಯಲ್ಲ.
ಹಿಂದಿ ಹೇರಿಕೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಪ್ರಧಾನಿಗಳು ಹಿಂದಿ ಹೇರಿಕೆ ಬಿಟ್ಟು ಬೇರೆ ಆಲೋಚನೆ ಮಾಡಲಿ. ಸಂವಿಧಾನದಲ್ಲಿ ಏನು ಒಪ್ಪಿತವಾಗಿದೆಯೋ ಆಯಾ ಪ್ರಾದೇಶಿಕ ಭಾಷೆಗಳು ಇರಲಿ. ತಮಿಳುನಾಡಿನಲ್ಲಿ ತಮಿಳು, ಆಂಧ್ರಪ್ರದೇಶದಲ್ಲಿ ತೆಲುಗು, ಕೇರಳದಲ್ಲಿ ಮಲಯಾಳ ಹೀಗೆ, ಆಯಾ ಕ್ಷೇತ್ರಗಳಲ್ಲಿ ಅವರ ಭಾಷೆ ಇರಲಿ. ಇಲ್ಲಿ ಹಿಂದಿ ಹೇರಿಕೆ ಆಗಬಾರದು. ಕಲಿಯುವು ದಾದರೆ ಮಕ್ಕಳು ಎಷ್ಟು ಭಾಷೆ ಬೇಕಾದರೂ ಕಲಿಯಲಿ. ಆದರೆ ಹಿಂದಿ ಅಷ್ಟೇ ಅಲ್ಲ, ಯಾವುದೇ ಭಾಷೆಯ ಹೇರಿಕೆಯನ್ನು ಕೂಡ ನಾನು ವಿರೋಧಿಸುತ್ತೇನೆ.
ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಆಯಾ ಸಮ್ಮೇಳನಕ್ಕಷ್ಟೇ ಸೀಮಿತವಾಗಿವೆ?
ನಿಷ್ಕ್ರಿಯ ಸರಕಾರಗಳು ಇದಕ್ಕೆ ಕಾರಣ. ನಾನು ಸಾಹಿತ್ಯ ಸಮ್ಮೇಳನದ ನಿರ್ಣಯಗಳತ್ತ ಕಣ್ಣಾಡಿಸಿದ್ದೇನೆ. ಸುಮಾರು 20ರಿಂದ 25 ವರ್ಷದ ಹಿಂದೆ ಆದಂತಹ ನಿರ್ಣಯಗಳು ಮತ್ತೆ ಮತ್ತೆ ಮರುಕಳಿಸಿವೆ. ಆ ಹಿನ್ನೆಲೆಯಲ್ಲಿ ಈ ಬಗ್ಗೆ ಸರಕಾರ ಕ್ರಿಯಾತ್ಮಕವಾಗಬೇಕು.
“ಖಡ್ಗವಾಗಲಿ ಕಾವ್ಯ’ ಎಂದು ಕವಿಗಳೆಲ್ಲ ಘೋಷಣೆ ಹೊರಡಿಸಿದರು.ಆ ಕಡೆ ಖಡ್ಗಕ್ಕೂ ಮೊನಚು ಬರಲಿಲ್ಲ, ಇತ್ತ ಗಟ್ಟಿ ಕಾವ್ಯವೂ ಹೆಚ್ಚಾಗಿ ಬರಲಿಲ್ಲ, ಈ ವೈರುಧ್ಯ ಏಕೆ?
ಕವಿ ಸಿದ್ದಲಿಂಗಯ್ಯ ಅವರು ತಮ್ಮ ಮೊದಲ ಸಂಕಲನ ಹೊಲೆಮಾದಿಗರ ಹಾಡಿನಲ್ಲಿ “ಇಕ್ರಲಾ, ವದೀರ್ಲಾ’ ಎಂದು ಶೋಷಕರ ವಿರುದ್ಧ ಹೇಳಿದರು. ಶತ ಶತಮಾನಗಳಿಂದ ಯಾರು ನಮ್ಮನ್ನು ತುಳಿದಿದ್ದಾರೋ ಅಂಥವರ ವಿರುದ್ಧ ನಿಲ್ಲಬೇಕು ಎಂಬ ಹಿನ್ನೆಲೆಯಲ್ಲಿ “ಖಡ್ಗವಾಗಲಿ ಕಾವ್ಯ’ ಎಂದರು. ಮಾಸ್ಕೋದ ಟ್ರೆಫಲ್ಗರ್ ಚೌಕ್‌ನಲ್ಲಿ ಮಾಯಕೋವಸ್ಕಿ ಪದ್ಯ ಓದುವಾಗ ಮೊದಲು ಕೇವಲ ಹತ್ತು-ಹದಿನೈದು ಜನರಿದ್ದರಷ್ಟೇ. ಬರುಬರುತ್ತಾ ಆ ಸಂಖ್ಯೆ ದ್ವಿಗುಣಗೊಳ್ಳುತ್ತಾ ಹೋಯಿತು. ರಷ್ಯನ್ ಕ್ರಾಂತಿಗೆ ಮೂಲ ಬೀಜ ಬಿತ್ತಿದವರು ಒಬ್ಬ ಕವಿ ಎಂಬುದನ್ನು ನಾವು ಮರೆಯಬಾರದು. ಗಟ್ಟಿಕಾವ್ಯದ ವಿಚಾರಕ್ಕೆ ಬಂದರೆ ಸೃಜನಶೀಲ ಸಾಹಿತಿ ದೇವನೂರು ಮಹಾದೇವ, ಚೆನ್ನಣ್ಣ ವಾಲೀಕರ್ ಸಹಿತ ಹಲವು ಸಾಹಿತಿಗಳು ಗಟ್ಟಿ ಸಾಹಿತ್ಯ ರಚಿಸಿದ್ದಾರೆ.
ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಆಗಬೇಕಿತ್ತು. ಆದರೆ ಅಂದುಕೊಂಡಂತೆ ಆಗಲಿಲ್ಲ ಏಕೆ?
ಸಮಾಜದಲ್ಲಿ ಒಮ್ಮೆ ಎಲ್ಲವನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಬದಲಾವಣೆ ಎನ್ನುವುದು ಪ್ರತಿನಿತ್ಯ ಆಗುತ್ತಲೇ ಇರುತ್ತದೆ. ಆದರೆ ಅದು ಎದ್ದು ಕಾಣೋದಿಲ್ಲ. ನಾನು ಜೀವನ ಪೂರ್ತಿ ಸಾಮಾಜಿಕ ಬದಲಾವಣೆಗಾಗಿ ಹಾತೊರೆದವನು. 70ರ ದಶಕದಲ್ಲಿ ಎರಡೂ ಮನೆಗಳ ವಿರೋಧದ ನಡುವೆ ಅಂತರ್‌ಜಾತಿ ವಿವಾಹ ಆದೆ. ಇದು ನನ್ನ ನಿಲುವು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯ ಬಗ್ಗೆ ನಿಮ್ಮ ಮಾತು?
ಕನ್ನಡ ನಾಡಿನಲ್ಲಿ ಕೆಲಸ ಅರಸಿ ಬರುವಂತಹ ಕನ್ನಡೇತರರು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಇಲ್ಲಿಯ ನೆಲವನ್ನು ಬಳಸಿಕೊಳ್ಳುತ್ತೀರಿ, ಜಲವನ್ನು ಬಳಕೆ ಮಾಡುತ್ತೀರಿ. ಸಕಲ ಸಂಪನ್ಮೂಲವನ್ನೂ ಬಳಸಿಕೊಳ್ಳುತ್ತೀರಿ. ಆದರೆ ಏಕೆ ಕನ್ನಡ ಭಾಷೆ ಮಾತನಾಡುವುದಿಲ್ಲ? ರಾಜ್ಯಕ್ಕೆ ಉದ್ಯೋಗಕ್ಕಾಗಿ ಬರುವವರು ಮೊದಲು 3 ತಿಂಗಳು ಕಡ್ಡಾಯವಾಗಿ ಕನ್ನಡ ಕಲಿಯಲಿ. ಈ ನಿಟ್ಟಿನ ಅಂಶಗಳು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯಲ್ಲಿ ಇರಲಿ.
ಕನ್ನಡ ತಂತ್ರಾಂಶಗಳ ಬಳಕೆ ಬಗ್ಗೆ?
ಈಗ ಎಲ್ಲ ಮಾಧ್ಯಮಗಳು ಕೂಡ ತಂತ್ರಾಂಶಗಳನ್ನು ಹೆಚ್ಚು ಬಳಕೆ ಮಾಡುತ್ತಿವೆ. ಹಲವು ತಂತ್ರಜ್ಞಾನ ಸಂಸ್ಥೆಗಳು ಕನ್ನಡ ತಂತ್ರಾಂಶಗಳನ್ನು ಬಳಕೆಗೆ ಇರಿಸಿವೆ. ಹೀಗಾಗಿ ಕನ್ನಡ ಮತ್ತಷ್ಟು ಜೀವಂತವಾಗಿರಬೇಕಾದರೆ ಕನ್ನಡ ತಂತ್ರಾಂಶವನ್ನು ಹೆಚ್ಚು ಹೆಚ್ಚು ಕನ್ನಡಿಗರು ಬಳಕೆ ಮಾಡಬೇಕು.
ನೀವು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪದ್ಯ ಬರೆದಾಗ ಮೋದಿ ಕುರಿತ ಪದ್ಯ ಅಗತ್ಯವಿತ್ತೆ ಎಂದು ಹಲವರು ಪ್ರಶ್ನಿಸಿದರು?
ಪ್ರಧಾನಿ ಚೆನ್ನಾಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ನಾನು ಅವರನ್ನು ಮೆಚ್ಚಿ ನಾಲ್ಕು ಮಾತು ಬರೆದೆ. ಅದರಲ್ಲಿ ಏನಿದೆ ತಪ್ಪು? ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪದ್ಯ ಬರೆಯೋದು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಗುಣಗಾನ ಮಾಡುವುದು ನನಗೇನೂ ಕೀಳು ಅಂತ ಅನಿಸಿಲ್ಲ. ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಆದ ಮೇಲೆ ಹಲವು ಬದಲಾವಣೆ ಆಗಿವೆ. ಅವರ ಕಾರ್ಯವೈಖರಿ, ವಿದೇಶಾಂಗ ನೀತಿ ಜನರಲ್ಲಿ ವಿಶ್ವಾಸ ಮೂಡಿಸುವುದನ್ನು ಕಂಡು ಪದ್ಯ ರಚಿಸಿದೆ. ಹಾಗಾಗಿ ಅವರನ್ನು ವೈಭವೀಕರಿಸಿ ಪದ್ಯ ಬರೆದೆ. ಬರೆಯೋದು ನನ್ನ ಹಕ್ಕು ,ಟೀಕೆ ಅವರ ಹಕ್ಕು, ಅಷ್ಟೇ.
ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ರಾಜಕೀಯದವರ ಕಪಿಮುಷ್ಟಿಗೆ ಸಿಲುಕುತ್ತಿದೆ ಎಂಬ ಆತಂಕವಿದೆ?
ಯಾರೂ ಕೂಡ ಯಾವುದೇ ಸ್ಥಾನದಲ್ಲಿ ಸರ್ವಾಧಿಕಾರ ಆಗಬಾರದು, ಜನಪರವಾಗಿರಬೇಕು. ಸಾಹಿತ್ಯ ಪರಿಷತ್ತು ಇರುವುದು ಜನತೆಗಾಗಿ. ಹೀಗಾಗಿ ಜನಪರವಾಗಿ ಆಲೋಚನೆ ಮಾಡಬೇಕು. ನಾನು ಹೆಚ್ಚು, ನಾನು ಮಾಡಿದ್ದೇ ಸರಿ, ಹೀಗೇ ಹೋಗಿ, ಹೀಗೇ ಮಾಡಿ ಎಂದು ಹೇಳಿದರೆ ಯಾರೂ ಒಪ್ಪಲು ಸಾಧ್ಯವಿಲ್ಲ.
ಕನ್ನಡಿಗರಿಗೆ ಕಿವಿಮಾತು
1.ಮನೆಗಳಲ್ಲಿ ಕನ್ನಡ ಮಾತ ನಾಡುವುದನ್ನು ಬಿಡಬೇಡಿ.
2.ಇಂಗ್ಲಿಷ್ ಮತ್ತು ಹಿಂದಿಯನ್ನು ಭಾಷೆಯಾಗಿ ಕಲಿಯಿರಿ ಸಾಕು.
3.ಈ ನಾಡಿನಲ್ಲಿ ಶಿಕ್ಷಣಪಡೆದು ವಿದೇಶಗಳತ್ತ ಮುಖ ಮಾಡಬೇಡಿ.
4.ಕನ್ನಡದ ಸಾಫ್ಟ್ವೇರ್ ಎಂಜಿನಿಯರ್‌ಗಳು ತಂತ್ರ ಜ್ಞಾನದ ಮೂಲಕ ಕನ್ನಡಕ್ಕೆ ಕೊಡುಗೆ ನೀಡಿ.
5.ಕನ್ನಡ ತಂತ್ರಾಂಶಗಳನ್ನು ಹೆಚ್ಚು ಹೆಚ್ಚು ಕನ್ನಡಿಗರು ಬಳಕೆ ಮಾಡಿ.
- ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.