ಕನ್ನಡ ಸಾಹಿತ್ಯ ಸಮ್ಮೇಳನ ಹೇಗಿರಬೇಕು?
Team Udayavani, Jan 6, 2023, 6:15 AM IST
ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ಇಂದಿನಿಂದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. “ಸಾಮರಸ್ಯದ ಭಾವ ಕನ್ನಡದ ಜೀವ’ಧ್ಯೇಯ ವಾಕ್ಯದ ಅಕ್ಷರ ಜಾತ್ರೆ ಸಾಹಿತ್ಯಾಸಕ್ತರಿಗೆ ಹಬ್ಬವೇ ಸರಿ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹೇಗಿರಬೇಕು, ಸಮ್ಮೇಳನದಲ್ಲಿ ಚರ್ಚೆಯಾಗುವ ವಿಷಯಗಳು ಹಾಗೂ ಕೈಗೊಳ್ಳುವ ನಿರ್ಣಯಗಳ ದಿಕ್ಕುದೆಸೆ ಏನು ಎಂಬ ಕುರಿತು ಕನ್ನಡದ ಮನಸ್ಸುಗಳು ಇಲ್ಲಿ ಅಭಿಪ್ರಾಯ ದಾಖಲಿಸಿದ್ದಾರೆ.
ಮನೆಮನೆಯಲ್ಲಿ ಕನ್ನಡದ ಹಬ್ಬ ನಡೆಯಲಿ
“ಅಖಿಲ ಭಾರತ ‘ಎಂದರೆ ನಿಜವಾದ ಅರ್ಥದಲ್ಲಿ ರಾಜ್ಯದ ರಾಷ್ಟ್ರದ ಹೊರಗಿ ರುವ ಕನ್ನಡಿಗರಿಗೂ ನಮ್ಮೂರಿನ ಉತ್ಸವ ಎಂಬ ಭಾವದಿಂದ ಸಮ್ಮೇಳನದಲ್ಲಿ ಭಾಗವಹಿಸುವಂತಿರಬೇಕು. ಇದು ಕನ್ನಡ ಸಾಹಿತ್ಯ ಪರಿಷತ್ತಿನ ಅಥವಾ ಕರ್ನಾಟಕ ಸರಕಾರದ ಸಾಹಿತ್ಯ ಸಮ್ಮೇಳನ ಮಾತ್ರವಲ್ಲ. ಇದು ಕನ್ನಡಿಗರ ಸಮಸ್ತ ಹಬ್ಬ ಎಂಬ ಭಾವವನ್ನು ಮೂಡಿಸುವಂತಿರಬೇಕು. ಸಮ್ಮೇಳನಕ್ಕೆ ಹೋಗುವ ಸಾಧ್ಯವಾಗದ ಕನ್ನಡಿಗರು ಆ ಮೂರೂ ದಿನಗಳು ತಮ್ಮ ತಮ್ಮ ಮನೆಗಳಲ್ಲಿ ಕನ್ನಡ ಕುರಿತಂತೆ ಏನಾದರೂಂದು ಚಟುವಟಿಕೆಯನ್ನು ಆಚರಿಸುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನ ಯುಗಾದಿ ಹಬ್ಬದಂತೆ ಮನೆ ಮನೆಗಳಲ್ಲಿ ಮನಮನಗಳಲ್ಲಿ ಆಚರಿಸುವಂತಾಗಬೇಕು.ಅದು ಕೇವಲ ಕನ್ನಡ ಸಾಹಿತ್ಯ ಸಮ್ಮೇಳನವಲ್ಲ ಕನ್ನಡಿಗರ ಸಮ್ಮೇಳನ. ಕನ್ನಡಿಗರೆಲ್ಲರನ್ನೂ ಒಂದು ಭಾವದಲ್ಲಿ ಬೆಸೆಯುವ ಸೂತ್ರವೆ ಸಾಹಿತ್ಯ. ಹಾಗಾಗಿ ಇದು ಸಾಹಿತ್ಯದ ಮೂಲಕ ಭಾಷೆಯ ಮೂಲಕ ಕನ್ನಡಿಗರನ್ನು ತಮ್ಮ ಭೂತ-ವರ್ತಮಾನ-ಭವಿಷ್ಯದೊಡನೆ ಜೋಡಿಸುವ ಏಕತೆಯೇ ಸಾಹಿತ್ಯ ಸಮ್ಮೇಳನದ ಉಸಿರಾಗಬೇಕು. ಕುವೆಂಪು ಅವರ ರಾಷ್ಟ್ರೀಯ ಐಕ್ಯತೆಯನ್ನು ಹೇಳುವ ಸಾಹಿತ್ಯವನ್ನು ದೈವಿಕ ಸಾಹಿತ್ಯ ವಿಭಜನೆಯನ್ನು ಅಸಹಿಷ್ಣುತೆಯನ್ನು ಬಿತ್ತುವ ಸಾಹಿತ್ಯ ರಾಕ್ಷಸೀ ಸಾಹಿತ್ಯವೆಂದು ಕರೆದಿದ್ದಾರೆ. ಅದೇ ಮಾತು ಎಲ್ಲ ಸಮ್ಮೇಳನಕ್ಕೂ ಸಲ್ಲಬೇಕು.
-ಡಾ| ಬಿ.ವಿ.ವಸಂತಕುಮಾರ್,
ನಿಟಕಪೂರ್ವ ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ
ಸಂವಾದಗಳು ನಡೆಯಲಿ…
ಹಿರಿಯ ಸಾಹಿತಿಗಳೊಟ್ಟಿಗೆ ಉದಯೋನ್ಮುಖ ಲೇಖಕರನ್ನು ಬೆಸೆಯುವ ಗೋಷ್ಠಿಗಳ ಆಯೋಜನೆ ಮಾಡುವ ನಿಟ್ಟಿನಲ್ಲಿ ಯೋಚಿಸುವುದು ಸೂಕ್ತ. ಉದಯೋನ್ಮುಖ ಲೇಖಕರು ಅನುಭವಿಸುತ್ತಿರುವ “ಹೇಗೆ ಮತ್ತು ಎಲ್ಲಿಗೆ ತಲುಪಬೇಕು’ ಎನ್ನುವ ಮುಜುಗರದ ನಿರ್ವಾತವನ್ನು ಮುಚ್ಚುವ ಕಾರ್ಯ, ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಾದರೆ ನವ ಬರಹಗಾರರಿಗೆ ಒಂದೊಳ್ಳೆಯ ವೇದಿಕೆ ಸಿಕ್ಕಂತಾದೀತು.
ಉದಯೋನ್ಮುಖ ಲೇಖಕರ ಸಾಹಿತ್ಯ ಸಂವಾದ ಕಮ್ಮಟಗಳನ್ನು ಹೆಚ್ಚೆಚ್ಚು ಏರ್ಪಡಿಸುವ ಬಗ್ಗೆ ಯೋಜನೆ ಮತ್ತು ಯೋಚನೆಗಳು ಹರಿಯಲಿ. ಸಾಹಿತ್ಯ ವಿದ್ಯಾರ್ಥಿಗಳಲ್ಲದ ಅಸಂಖ್ಯಾತ ಕನ್ನಡ ಬರಹಗಾರರು ತಮ್ಮದೇ ಆದ ಶೈಲಿಯ ಸೃಜನಶೀಲ ಸಾಹಿತ್ಯ ಸೃಷ್ಟಿಯಲ್ಲಿ ತೆರೆಮರೆಯಲ್ಲಿಯೋ ಅಥವಾ ಸಾಮಾಜಿಕ ಮಾಧ್ಯಮದ ವೇದಿಕೆಗಳಷ್ಟರಲ್ಲಿಯೋ ಸೀಮಿತವಾಗಲು ಬಿಡದೆ ಮುಖ್ಯವಾಹಿನಿಗೆ ಕರೆತರುವ ಗುರುತರ ಜವಾಬ್ದಾರಿ ಕನ್ನಡ ಸಾಹಿತ್ಯ ಸಮ್ಮೇಳನಾದ್ದಾಗಲಿ. ಇದರಿಂದ ಈಗಾಗಲೇ ಇರುವ ಏಕತಾನತಾ ಸಾಹಿತ್ಯಶೈಲಿಯ ಹೊರತಾಗಿ ಹೊಸಬಗೆಯ ಸಾಹಿತ್ಯಸೃಷ್ಟಿಯ ಪ್ರಯತ್ನಗಳಿಗೆ ಇಂಬುಕೊಡುವ ಪ್ರಯೋಗಾತ್ಮಕ ಕಾರ್ಯವೂ ಆದೀತು. ಉದಯೋನ್ಮುಖ ಲೇಖಕರಿಗಾಗಿ ಈಗಾಗಲೇ ಪ್ರತಿಷ್ಠಿತ ಪತ್ರಿಕೆಗಳು ಮತ್ತು ಪ್ರಕಾಶನಗಳು ನಡೆಸುತ್ತಿರುವ ಎಲ್ಲ ಸಾಹಿತ್ಯ ಪ್ರಕಾರದ ಸ್ಪರ್ಧೆಗಳನ್ನು ಗುರುತಿಸಿವುದು ಮತ್ತು ಪ್ರೋತ್ಸಾಹಿಸುವ ಕಾರ್ಯಗಳು ಸಾಹಿತ್ಯ ಸಮ್ಮೇಳನದ ಭಾಗವಾಗಲಿ. ಸಾಹಿತ್ಯ ಪರಿಷತ್ತೂ ಸಹ ಉದಯೋನ್ಮುಖ ಲೇಖಕರಿಗೆ ವೇದಿಕೆ ಸೃಷ್ಟಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿ ಆಯ್ಕೆಯಾದ ಬರಹಗಾರರೊಟ್ಟಿಗೆ ಸಾಹಿತ್ಯ ಸಮ್ಮೇಳನದ ಸಂವಾದ ಗೋಷ್ಠಿಯಲ್ಲಿ ಚರ್ಚಿಸುವ ಕಾರ್ಯಕ್ರಮವೂ ಆಗಲಿ.
-ಮಂಜುನಾಥ ಕುಣಿಗಲ್, ಎಂಜಿನಿಯರ್ ಮತ್ತು ಲೇಖಕ, ಮೈಸೂರು
ಕೋಟಿ ವೆಚ್ಚದ ಚಪ್ಪರ ಎರಡೂ¾ರು ದಿನದಲ್ಲಿ ಕಳಚುವಂತಾಗುವುದು ಸರಿಯಲ್ಲ
ಮೊದಲನೆಯದಾಗಿ ಸಾಹಿತ್ಯ ಸಮ್ಮೇಳನ ಎನ್ನುವ ಹೆಸರಿಗೆ ತಕ್ಕಂತೆ ಸಾಹಿತ್ಯಕ್ಕೆ ಅಲ್ಲಿ ಮಹತ್ವ ಇರಬೇಕು. ನಾಡು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನೂ ಸಾಹಿತ್ಯ ಸಮ್ಮೇಳನವು ಪರಿಹರಿಸಬೇಕೆಂಬ ಮಹತ್ವಾಕಾಂಕ್ಷೆ ಅಗತ್ಯವಿಲ್ಲ. ಸಾಹಿತ್ಯ ಮತ್ತು ಅದರ ಮೂಲಧಾತುವಾದ ಭಾಷೆಗೆ ಗೋಷ್ಠಿಗಳಲ್ಲಿ ಆದ್ಯತೆ ಇರಬೇಕು. ಸಾಮಾಜಿಕ ಸಮಸ್ಯೆ, ಪರಿಸರ, ಕೃಷಿ ಇತ್ಯಾದಿ ಸಂಗತಿಗಳ ಬಗೆಗಿನ ಚರ್ಚೆಗಳೆಲ್ಲ ಸಾಹಿತ್ಯದ ಪರಿಪ್ರೇಕ್ಷ್ಯದ ಒಳಗೆಯೇ ಬರಬೇಕು.
ಅಖಿಲ ಭಾರತ ಸಮ್ಮೇಳನ ಎಂದಿದ್ದರೂ ಈಗ ಕನ್ನಡಿಗರು ವಿಶ್ವದೆಲ್ಲೆಡೆ ಇರುವುದರಿಂದ ಇದು ಜಾಗತಿಕ ಮಟ್ಟದ್ದೇ ಹೌದು. ಹೀಗಾಗಿ ಹೊರನಾಡು ಮತ್ತು ಹೊರ ದೇಶಗಳಲ್ಲಿ ಇರುವ ವಿದ್ವಾಂಸರು ಕೂಡ ಸಂಪನ್ಮೂಲ ವ್ಯಕ್ತಿಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಾಗಬೇಕು. ಕನ್ನಡೇತರ ಭಾಷೆಗಳ ಸಾಹಿತಿಗಳು, ವಿಮರ್ಶಕರು ಕನ್ನಡ ಸಾಹಿತ್ಯವನ್ನು ಅನುವಾದಗಳಲ್ಲಿ ಓದಿರುತ್ತಾರೆ. ಅಂತಹ ಕೆಲವು ಸಾಹಿತಿ, ವಿಮರ್ಶಕರನ್ನು ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡಲು ಕರೆಯಬೇಕು. ಪ್ರಾತಿನಿಧ್ಯ ನೀಡಬೇಕು ನಿಜ. ಆದರೆ ಜಿಲ್ಲಾವಾರು ಮತ್ತಿತರ ಪ್ರಾತಿನಿಧ್ಯದ ಹೆಸರಿನಲ್ಲಿ ತೀರಾ ಕಳಪೆ ಗೋಷ್ಠಿಗಳಾಗದಂತೆ ನೋಡಿಕೊಳ್ಳಬೇಕು. ಆಯಾ ವರ್ಷ ಬಂದ ಮುಖ್ಯ ಕೃತಿಗಳ ಬಗ್ಗೆ ಚರ್ಚೆಗಳಿಗೆ ಅವಕಾಶ ಇರಬೇಕು. ಬದಲಾಗುತ್ತಿರುವ ಸಾಹಿತ್ಯದ ಸ್ವರೂಪದ ಬಗ್ಗೆ ಚಿಂತನ ಮಂಥನಗಳಿರಬೇಕು.
ಈಗ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ ಯೆಂದರೆ ಬಹಳ ಸುಲಭ. ಯಾವ ತಯಾರಿಯೂ ಇಲ್ಲದೆ ಏನನ್ನಾದರೂ ಹೇಳಿ ಹೋಗಬಹುದು!. ಹತ್ತು ಹದಿ ನೈದು ನಿಮಿಷಗಳಲ್ಲಿ ಪ್ರಬಂಧ ಮಂಡನೆ ಮಾಡಿ ಮುಗಿಸಿ ಸ್ಮರಣಿಕೆ ಪಡೆದು ಹೋಗುವ ಪರಿಪಾಠ ತೊಲಗಬೇಕು.
ಪ್ರಬಂಧ ಮಂಡನೆಯ ಬಳಿಕ ಆ ಪ್ರಬಂಧದ ಬಗ್ಗೆ ಕನಿಷ್ಠ ಐದು-ಹತ್ತು ನಿಮಿಷಗಳ ವಿಮರ್ಶೆ ಮಾಡಲು ಒಂದಿಬ ºರನ್ನಾದರೂ ಗೊತ್ತು ಮಾಡ ಬೇಕು. ಇದಕ್ಕೆಲ್ಲ ಅವಕಾಶ ವಾಗುವಂತೆ ಸಮ್ಮೇಳನ ಒಂದು ವಾರ ನಡೆದರೂ ಉತ್ತಮವೇ.ಯಾಕೆಂದರೆ ಕೋಟಿಗಟ್ಟಲೆ ವೆಚ್ಚದಲ್ಲಿ ಚಪ್ಪರ ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸಿ ಎರಡು ಮೂರು ದಿನಗಳಲ್ಲಿ ಕಳಚುವಂತಾಗುವುದು ಸರಿಯಲ್ಲ. ವೆಚ್ಚ ಕಡಿಮೆ ಮಾಡಲು ಊಟತಿಂಡಿಯ ಹೊರೆಯನ್ನು ಪರಿಷತ್ತು ಕಡಿಮೆ ಮಾಡಿಕೊಳ್ಳಬಹುದು.
-ಡಾ| ಅಜಕ್ಕಳ ಗಿರೀಶ ಭಟ್,
ನಿಕಟಪೂರ್ವ ಅಧ್ಯಕ್ಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಸಾಹಿತ್ಯಿಕ ಚರ್ಚೆ, ಕಮ್ಮಟಗಳು ನಡೆಯಲಿ
ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಿದ್ದ ಮಾದರಿಯನ್ನು ಬಿಟ್ಟು ಹೊಸತಿಗೆ, ಈಗಿನ ಟ್ರೆಂಡಿಗೆ ಬದಲಾಗಬೇಕಿದೆ. ಸಾಹಿತ್ಯಾಸಕ್ತರನ್ನಷ್ಟೇ ಅಲ್ಲದೇ ಜನಸಾಮಾನ್ಯರನ್ನೂ ಕೂಡ ಒಳಗೊಳ್ಳಬೇಕು. ಅಧ್ಯಕ್ಷರ ಆಯ್ಕೆ ಜನರಿಂದಲೇ ಆಗಲಿ. ಎಷ್ಟೋ ಜನಕ್ಕೆ ಅಧ್ಯಕ್ಷರ ಬಗ್ಗೆಯೇ ಗೊತ್ತಿರುವುದಿಲ್ಲ. ಕವಿಗೋಷ್ಠಿಗಳಲ್ಲಿ ಅದದೇ ಕವಿಗಳು ಓದುವುದನ್ನು ಬಿಟ್ಟು ಆ ವರ್ಷ ಮುಖ್ಯ ಧಾರೆಗೆ ಬಂದ, ಅಲ್ಲಿಯವರೆಗೂ ಕಾಣಿಸಿಕೊಳ್ಳದ ಯುವ ಸಾಹಿತಿಗಳಿಗೆ ವೇದಿಕೆ ಸಿಗಲಿ. ಕಥೆ, ಕಾವ್ಯ, ಕಾದಂಬರಿ ಹೊರತಾಗಿ ಕಥನೇತರದ ಬಗ್ಗೆ ವಿಸ್ತಾರವಾದ ಚರ್ಚೆ ಆಗಲಿ. ಮುಖ್ಯವಾಗಿ ಮಕ್ಕಳು ಒಳಗೊಂಡು ಮಕ್ಕಳ ಸಾಹಿತ್ಯದ ಬಗ್ಗೆ ಜಾಸ್ತಿ ಚರ್ಚೆ, ಕಮ್ಮಟಗಳು ಆಗಬೇಕು.ಸಮ್ಮೇಳನದ ಹೈಲೈಟ್ಸ್ ಪ್ರತೀ ದಿನವೂ ಸಿಗಬೇಕು. ಆ ವರ್ಷ ಪ್ರವರ್ಧಮಾನಕ್ಕೆ ಬಂದ ಕನಿಷ್ಠ ಇಪ್ಪತ್ತು ಪುಸ್ತಕಗಳ ವಿಸ್ತೃತ ಚರ್ಚೆ ಆ ಪುಸ್ತಕಗಳ ಲೇಖಕರ ಜತೆ ನಡೆಯಬೇಕು. ಸಮ್ಮೇಳನದಲ್ಲಿ ಸಿಗುವ ಎಲ್ಲ ಪುಸ್ತಕಗಳು, ಕಾರ್ಯಕ್ರಮಗಳು, ಊಟ-ಉಪಾಹಾರ ಮತ್ತಿತರ ಮಾಹಿತಿಗಳೆ ಲ್ಲವೂ ಅಂಗೈಯಲ್ಲೇ ಸಿಗುವಂತ ಒಂದು ಬೇಸಿಕ್ ಆ್ಯಪ್ ಬೇಕೇ ಬೇಕು.
-ಜಯರಾಮಚಾರಿ, ಯುವ ಕಥೆಗಾರ, ಎಂಜಿನಿಯರ್
ಎಲ್ಲರನ್ನೂ ಒಳಗೊಳ್ಳಲಿ…
ಸಮ್ಮೇಳನ ಎಂದರೆ ಅದು ಏಕತೆಯ ಪ್ರಶ್ನೆಯೇ ಹೊರತು ಒಡಕಿನ ತೋರಿಕೆ ಅಲ್ಲ. ಸರ್ವಜನಾಂಗದ ತೋಟದಿಂದ ಆಯ್ದ ಬಗೆಬಗೆಯ ಘಮಲಿನ ಸ್ವಾದ ಉಣಬಡಿಸುವ ಬಗೆ ಅದು. ಮುಳ್ಳಲಿ ಅರಳಿದ ಹೂವಿರಲಿ, ಕೆಸರಿನಲಿ ತಲೆ ಎತ್ತಿದ ತಾವರೆ ಇರಲಿ, ಅದಕೆ ಅದರದ್ದೇ ಆದ ಚಹರೆ ಇದೆ, ತಾಕತ್ತಿದೆ. ವೈಚಾರಿಕತೆ ಎನ್ನುವುದು ಮನುಷ್ಯನ ಮೂಲ ಗುಣ. ಇದರಲ್ಲಿನ ಭಿನ್ನತೆ ಸಮಾಜದ ಸೊಬಗು ಆಗಿರುತ್ತದೆ ಹೊರತು ಒಡಕಿನ ದನಿ ಅಲ್ಲ. ಇದನ್ನು ಗುರುತಿಸಿ ಗೌರವಿಸಬೇಕಾದುದು ಸಂಘಟನೆಯ ಆದ್ಯತೆ ಆಗಬೇಕು.
ಎಡ ಇರದೆ ಬಲ ಇಲ್ಲ, ಬಲ ಇರದೆ ಎಡ ಇಲ್ಲ! ಒಂದು ಮತ್ತೂಂದನ್ನು ಇನ್ನೂ ಬೆಳಗಿಸಿ ಶಕ್ತಗೊಳಿಸಬೇಕು. ಇಂಥದನ್ನು ಕಾಪಿಡುವುದೂ ಸಮ್ಮೇಳನದ ಗುರಿ ಆಗಬೇಕು.ಸಾಹಿತ್ಯ ಸಮ್ಮೇಳನ ಎಂದರೆ ಅದು ಭಾಷೆ ಮತ್ತು ಸಂಸ್ಕೃತಿಗಳ ಕುರಿತ ಅಭಿಮಾನದ ತೇರೆಳೆವ ಕ್ರಿಯೆ. ಪೂರ್ವಾಗ್ರಹ, ವಶೀಲಿ, ಜಾತಿ, ಮತ, ಹಣ, ಲಿಂಗ ತಾರತಮ್ಯ, ಧಾರ್ಮಿಕ ಅಸಹಿಷ್ಣುತೆ ಯಾವುದೂ ಅಲ್ಲಿ ಹೆಡೆಯಾಡಬಾರದು.
ನಾಡು ನುಡಿಗಾಗಿ ಶ್ರಮಿಸುವ ಜೀವಪರ ದನಿ ಯಾರದ್ದೇ ಇರಲಿ ಅದು ಅಲ್ಲಿ ಗರಿಗೆದರಬೇಕು. ಪ್ರಾದೇಶಿಕ ಸಮಾನತೆ ಎಂಬ ಮಾಪನದಲಿ, ನಮ್ಮವರು ಎಂಬ ಹುಂಬತನದಲಿ, ಯಾವುದಾವುದೋ ಮುಲಾಜುಗಳಲ್ಲಿ ಜೊಳ್ಳುಗಳು ಮಾತಾಡಬಾರದು.ಕಸಾಪ ದ ಅಧ್ಯಕ್ಷರಾದವರು ಇಡೀ ನಾಡು ನುಡಿಯ ಸಂಭ್ರಮಕ್ಕೆ ಪ್ರತಿನಿಧಿಯಾಗಿ ರೂಪಿಸಬೇಕಾದ ಸನ್ನಿವೇಶ ಇದು. ಸೃಜನಶೀಲ ಮತ್ತು ಗುಪ್ತಗಾಮಿನಿಯಂತೆ ಓದು, ಬರಹ, ಸಾಹಿತ್ಯ ಪರಿಚಾರಿಕೆ ಯಲ್ಲಿ ತೊಡಗಿಸಿಕೊಂಡವರನ್ನು”ಹುಡುಕಿ’ ವೇದಿಕೆಯಲ್ಲಿ ನಿಲ್ಲಿಸಬೇಕೇ ಹೊರತು “ಹುಡುಕಿ ಬಂದವರ” ಆಡುಂಬೊಲ ಆಗಬಾರದು. ಆ ಸ್ಥಾನಕ್ಕೆ ಒಂದು ಘನತೆ ಇದೆ, ಗೌರವ ಇದೆ. ಆ ಸಾಮಾನ್ಯ ಜ್ಞಾನ ಇದ್ದರೆ ಸಾಕು,” ಪರ್ಯಾಯ” ಮಾತೇ ಬರುವುದಿಲ್ಲ.
-ವಾಸುದೇವ ನಾಡಿಗ್,
ಕವಿ- ಶಿಕ್ಷಕ
ಪ್ರತಿಭೆ ಇರುವವರಿಗೆಲ್ಲ ಅವಕಾಶ ಸಿಗಲಿ…
ಸಮ್ಮೇಳನದ ಬಹುತೇಕ ಗೋಷ್ಠಿಗಳು ಬೌದ್ಧಿಕ ವಲಯದವರಿಗೆ ಮಾತ್ರ ಸೀಮಿತ ಅನ್ನುವ ಹಾಗೆ ರೂಪುಗೊಳ್ಳುತ್ತವೆ. ಇದು ಜನಸಾಮಾನ್ಯನನ್ನ ಅದರಿಂದ ವಿಮುಖವಾಗುವಂತೆ ಮಾಡುತ್ತವೆ. ಈ ಕಾರಣಗಳಿಂದ ಹತ್ತಾರು ಜನ ಮಾತ್ರ ಸಭೆಯ ಗೋಷ್ಠಿಯಲ್ಲಿ ಕುಳಿತಿದ್ದರೆ, ಉಳಿದವರು ಊಟದ ಹಾಲ್‌ನಲ್ಲೋ ಅಥವಾ ಪುಸ್ತಕದ ಅಂಗಡಿಗಳಲ್ಲೋ ಕಾಲ ಕಳೆಯುತ್ತಿರುತ್ತಾರೆ. ಮೊದಲಿಗೆ ಈ ಪರಿಸ್ಥಿತಿಯನ್ನ ಅವಲೋಕಿಸಿ, ಸಾಮಾನ್ಯ ಕನ್ನಡಿಗನಿಗೂ ಆಸಕ್ತಿ ಉಂಟಾಗಿ ಅದರಲ್ಲಿ ಭಾಗವಹಿಸುವಂತಹ ಕಾರ್ಯಕ್ರಮ ಗಳನ್ನ ಕಡ್ಡಾಯವಾಗಿ ರೂಪಿಸಬೇಕು. ಎರಡನೆಯದಾಗಿ ಈ ಸಮ್ಮೇಳನದ ನೆಪದಲ್ಲಿ 5 ದಿನ ಗಳ ಕಾಲ ರಜೆ ಪಡೆದು ಹಾಜರಾತಿ ಹಾಕಿಸಿ, ಟ್ರಿಪ್ ಹೊರಟು ಬಿಡುವ ಸರಕಾರಿ ನೌಕರರು (ಎಲ್ಲರೂ ಅಲ್ಲ) ಸಮ್ಮೇಳನದಲ್ಲೇ ಉಳಿದುಕೊಂಡು ಎಲ್ಲ ಕಾರ್ಯಕ್ರಮಗಳ ರಸಸ್ವಾದನೆ ಮಾಡುವಂತಹ ವ್ಯವಸ್ಥೆಯನ್ನು ರೂಪಿಸಬೇಕು.ಮೂರನೆಯದಾಗಿ ಜಿಲ್ಲಾ ಹಂತದಿಂದ ಕವಿಗೋಷ್ಠಿಗೆ ಅಥವಾ ಸಂವಾದ ವಿಚಾರಗೋಷ್ಠಿ ಮುಂತಾದವುಗಳಿಗೆ ಆಯ್ಕೆ ಮಾಡುವಾಗ ಕೇವಲ ಪುಸ್ತಕಗಳ ಸಂಖ್ಯೆಯನ್ನು ಇಟ್ಟುಕೊಂಡು ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಆಗಬಾರದು.
ಒಂದೂ ಪುಸ್ತಕ ಪ್ರಕಟವಾದದಿದ್ದರೂ ಕೂಡ ಪ್ರತಿಭೆ ಇದ್ದರೆ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೆ ಅನುವು ಮಾಡಿಕೊಡಬೇಕು.ಮುಖ್ಯವಾಗಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಯಾವುದೇ ಒತ್ತಡಕ್ಕೆ ಒಳಗಾಗದೆ ಆಯ್ಕೆ ಮಾಡುವಂತಿರಬೇಕು. ಮುಕ್ತವಾಗಿ ಸರಳವಾಗಿರಬೇಕು. ಪ್ರತಿ ವರ್ಷ ಭಾಗವಹಿಸುವ ರಿಪಿಟೇಶನ್ ಕವಿಗಳಿಗಿಂತ ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಈ ಕನ್ನಡ ಜಾತ್ರೆ, ದುಡ್ಡು ಮಾಡಿಕೊಳ್ಳುವ ದಂಧೆ ಆಗಬಾರದು. ಇದೊಂದು ಬದಲಾದರೆ ಬಹುಶಃ ಉಳಿದಿದ್ದೆಲ್ಲವೂ ತಂತಾನೆ ಬದಲಾಗುತ್ತದೆ.
-ಸ್ವಾಮಿ ಪೊನ್ನಾಚಿ, ಯುವ ಕಥೆಗಾರ- ಶಿಕ್ಷಕ
ರಾಜಕೀಯ ವೇದಿಕೆಗಳಾಗದಿರಲಿ
ಸಮ್ಮೇಳನಗಳು ರಾಜಕೀಯ ವೇದಿಕೆಗಳಾಗುವುದು ಬೇಡ. ರಾಜಕೀಯ ನಾಯಕರು ಸ್ವತಃ ವೇದಿಕೆಗಳಿಂದ ದೂರವಿದ್ದು ಗೋಷ್ಠಿಗಳನ್ನು ಆಲಿಸುವ ಮನಸ್ಸು ಮಾಡಬೇಕು. ಪ್ರತಿಭಾವಂತ ಕವಿ-ಲೇಖಕರಿಗೆ ಜಾತ್ಯತೀತ ಪ್ರಾಂತತೀತವಾಗಿ ಅವಕಾಶ ಕಲ್ಪಿಸಬೇಕು. ಸಮ್ಮೇಳನ ನಡೆಯುವ ಪರಿಸರದ ಕುರಿತು ವಿಶೇಷ ಗೋಷ್ಠಿಗಳಿಗೆ ಅವಕಾಶ ಮಾಡಿಕೊಡಬೇಕು. ಆಮಂತ್ರಣ ಪತ್ರಿಕೆಗಳಲ್ಲಿ ಹೇರಳವಾಗಿ ಕಂಡು ಬರುವ ಸಾವಿರಾರು ಹೆಸರುಗಳು ಕಡಿಮೆಯಾಗಬೇಕು. ಪುಸ್ತಕ ಮಳಿಗೆಗೆಳನ್ನು ತಿಂಡಿ-ತಿನಿಸು, ಆಟಿಕೆ ಸಾಮಾನುಗಳಂತಹ ಮಳಿಗೆಗಳಿಂದ ಬೇರ್ಪಡಿಸುವ ಕ್ರಮ ಕೈಗೊಳ್ಳಬೇಕು.
-ನದೀಮ ಸನದಿ, ಸಿವಿಲ್ ಎಂಜಿನಿಯರ್ ಬೆಳಗಾವಿ
ಕನ್ನಡ ಶಾಲೆಗಳ
ಅಭಿವೃದ್ಧಿಯೂ ಆಗಲಿ…
ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆಯ ಹಿರಿಮೆ ಗರಿಮೆಯ ಕನ್ನಡಿಗರ ಐಕ್ಯತೆಯ ಕನ್ನಡದ ಅಳಿವು ಉಳಿವಿನ ಕೋಟಿ ಲೆಕ್ಕದ ವೇದಿಕೆ. ಭಾಷೆಯೊಂದಕ್ಕೆ ಇಂತಹ ಅತೀ ದೊಡ್ಡ ಮನ್ನಣೆ ಸಿಗುತ್ತಿರುವಾಗ ಅದೊಂದು ಜಾತ್ರೆಯಂತಾಗಿದ್ದು ಬೇಸರ.
ಪುಸ್ತಕದ ಅಂಗಡಿಗಳಲ್ಲಿ ಕನ್ನಡ ಪುಸ್ತಕಗಳ ಮಾರಾಟ ಅಷ್ಟೇ ಇರಲಿ. ಪುಸ್ತಕದಂಗಡಿಗಳ ಸಾಲಿನಲ್ಲಿ ಎಂತದೋ ತಿಂಡಿ ತಿನಿಸು, ಏನೇನೋ ಡಿಸೈನ್‌ನ ಬಟ್ಟೆ ಅಂಗಡಿ ಯಾಕೆ ಬೇಕು? ನಿಜವಾಗಿಯೂ ಕನ್ನಡ ಭಾಷೆಯ ಅಳಿವು ಉಳಿವಿನ ಬೆಳವಣಿಗೆಯ ವಿಚಾರದಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪಾತ್ರ ಅತೀ ಶ್ರೇಷ್ಠವಾದದ್ದು. ಮೂರು ದಿನದ ಸಾಹಿತ್ಯ ಜಾತ್ರೆಯ ಬದಲಾಗಿ ಕೋಟಿಗಟ್ಟಲೆ ಹಣ ಸರಕಾರಿ ಶಾಲೆಗಳ ಅಭಿವೃದ್ಧಿಗೆ ವಿನಿಯೋಗವಾಗಲಿ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಯಾಕೆ ಎಂಬುದು ಜಿಜ್ಞಾಸೆ. ಅವರನ್ನು ಉತ್ಸವ ಮೂರ್ತಿಯನ್ನಾಗಿ ಮಾಡಿ ಗೌರವಿಸುವ ಪರಿಗಿಂತ, ಅವರ ಪುಸ್ತಕಗಳು ಅವರ ಬರಹ- ಬದುಕು ಜನರ ಮನಸ್ಸಿನಲ್ಲಿ ಸ್ವಯಂ ಗೌರವ ಮೂಡಿಸಿರಬೇಕು. ಗೌರವ ಕೊಡುವುದಲ್ಲ, ಅದು ತಾನೇ ಬರುವಂಥದ್ದು.
-ಸೋಮು ಕುದರಿಹಾಳ,
ಯುವಕವಿ, ಶಿಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.