ಬೆಳಗಾವಿ: ಸಾರಥಿ ನಗರದಲ್ಲಿ ಮಸೀದಿ ತೆರವು ವಿವಾದ
ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳಲ್ಲಿ ಬಂದು ಬೆದರಿಸುತ್ತಿದ್ದಾರೆ.
Team Udayavani, Jan 11, 2023, 6:21 PM IST
ಬೆಳಗಾವಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಬೆಳಗಾವಿಯಲ್ಲಿಯೂ ಧರ್ಮ ದಂಗಲ್ ಶುರುವಾಗಿದ್ದು, ಇಲ್ಲಿಯ ಸಾರಥಿ ನಗರದಲ್ಲಿ ವಸತಿ ನಿವೇಶನಕ್ಕೆ ಅನುಮತಿ ಪಡೆದು ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಅನ ಧಿಕೃತ ಮಸೀದಿ ತೆರವಿಗೆ ಪಟ್ಟು ಹಿಡಿದಿವೆ.
ಬೆಳಗಾವಿ ಗ್ರಾಮಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಾರಥಿ ನಗರದಲ್ಲಿ ಕರ್ನಾಟಕ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಖಾಸಗಿ ಲೇಔಟ್ ನಿರ್ಮಿಸಲಾಗಿದೆ. ನಿವೇಶನ ಸಂಖ್ಯೆ 19ನ್ನು ಮೂಲ ಮಾಲೀಕರು ಮೌಲಾನಾ ಅಬ್ದುಲ್ ಕಲಾಂ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಸೊಸೈಟಿಗೆ ಕೊಡುಗೆಯಾಗಿ ನೀಡಿದ್ದು, ಇಲ್ಲಿ ಫಾತಿಮಾ ಮಸೀದಿ ನಿರ್ಮಿಸಲಾಗಿದೆ.
ನಿವೇಶನ ಸ್ಥಳದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಸ್ಥಳೀಯರು ಕೆಲ ತಿಂಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರಿಗೂ ದೂರು ನೀಡಿದ್ದಾರೆ. ಅಕ್ರಮವಾಗಿರುವ ಮಸೀದಿಯನ್ನು ತೆರವುಗೊಳಿಸುವುದಾಗಿ ಆಯುಕ್ತರು ಮೌಖಿಕವಾಗಿ ಭರವಸೆ ನೀಡಿ ಕಳುಹಿಸಿದ್ದರು.
ಹೊಸ ವಿವಾದ ಸೃಷ್ಟಿ: ದಿನದಿಂದ ದಿನಕ್ಕೆ ಈ ವಿವಾದ ಬೆಳಗಾವಿಯಲ್ಲಿ ತಾರಕಕ್ಕೇರುತ್ತಿದ್ದು, ಜಿಲ್ಲಾಡಳಿತ ಮಸೀದಿ ತೆರವುಗೊಳಿಸದಿದ್ದರೆ ನಾವೇ ಸ್ವತಃ ಅಲ್ಲಿಗೆ ನುಗ್ಗಿ ನೆಲಸಮಗೊಳಿಸುವುದಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬೆಳಗಾವಿಯಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ.
ಸಾರಥಿ ನಗರದಲ್ಲಿ ಮಸಿದಿ ವಿವಾದ ವಿವಾದ ಗರಿಗೆದರುತ್ತಿದ್ದಂತೆ ಹಿಂದೂ ಸಂಘಟನೆಗಳ ಮುಖಂಡರು ಸಭೆ ನಡೆಸಿದ್ದಾರೆ. ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ, ಮುಖಂಡರಾದ ದೀಪಾ ಕುಡಚಿ, ಉಜ್ವಲಾ ಬಡವನ್ನಾಚೆ ಸೇರಿದಂತೆ ಅನೇಕರು ಸಭೆ ನಡೆಸಿ ತೀವ್ರ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಸಾರಥಿ ನಗರದಲ್ಲಿ ಮನೆ ನಿರ್ಮಾಣಕ್ಕಾಗಿ
ಅನುಮತಿ ಪಡೆಯಲಾಗಿತ್ತು. ಅದರಂತೆ ಮೊದಲ ಅಂತಸ್ತು ಮನೆಯಾಗಿಯೇ ನಿರ್ಮಾಣಗೊಂಡಿದೆ.
ಎರಡನೇ ಅಂತಸ್ತು ಮಸೀದಿಯಾಗಿ ನಿರ್ಮಾಣಗೊಂಡಿದ್ದರಿಂದ ಸ್ಥಳೀಯ ನಿವಾಸಿಗಳು ತಕರಾರು ತೆಗೆದಿದ್ದಾರೆ. ಆದರೆ ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. 2020ರ ಲಾಕ್ ಡೌನ್ ಸಮಯದಲ್ಲಿ ಸರ್ಕಾರಿ ಕಚೇರಿಗಳು ಬಂದ್ ಆಗಿದ್ದಾಗಲೂ ಇದಕ್ಕೆ ಅನುಮತಿ ಪಡೆದುಕೊಳ್ಳಲಾಗಿದೆ. ವಕ್ಫ್ ಬೋರ್ಡ್‌ಗೆ ಇದನ್ನು ಕೊಡುಗೆಯಾಗಿ ನೀಡಲಾಗಿದೆ. ಇದು ಹೇಗೆ ಸಾಧ್ಯವಾಗಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕೂಡಲೇ ಈ ಅನಧಿಕೃತ ಮಸೀದಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ಮನವಿ ಆಲಿಸಿದ ಜಿಲ್ಲಾ ಧಿಕಾರಿ ಡಾ|ನಿತೇಶ ಪಾಟೀಲ, ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದುಕೊಳ್ಳಲಾಗುವುದು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು.ಎರಡು ದಿನಗಳಲ್ಲಿ ಸೂಕ್ತ ತೀರ್ಮಾನ
ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ನಿವೇಶನ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದೆ.
ಮೂಲ ಮಾಲೀಕರಿಂದ ಮೌಲಾನಾ ಅಬ್ದುಲ್ ಕಲಾಂ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಸೊಸೈಟಿಗೆ ಕೊಡುಗೆಯಾಗಿ ನೀಡಲಾಗಿದ್ದು, ಇಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಮುಸ್ಲಿಂ ಮುಖಂಡರ ವಾದವಾಗಿದೆ. ಮಸೀದಿ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಸ್ಥಳಿಯರ ಮನೆಗೆ ನುಗ್ಗಿ ಕೆಲವು ಕಿಡಿಗೇಡಿಗಳು ಬೆದರಿಕೆ ಹಾಕುತ್ತಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳಲ್ಲಿ ಬಂದು ಬೆದರಿಸುತ್ತಿದ್ದಾರೆ. ಹಲವು ಸಲ ಈ ಭಾಗದ ಅನೇಕರಿಗೆ ಬೆದರಿಕೆಗಳು ಬಂದಿವೆ. ಇಂತ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಜಿಲ್ಲಾಧ್ಯಕ್ಷ ಭಾವುಕಣ್ಣ ಲೋಹಾರ ತಿಳಿಸಿದ್ದಾರೆ.
ಏನಿದು ಫಾತಿಮಾ ನಿವೇಶನ ವಿವಾದ?
ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ 2011ರಲ್ಲಿ ಖಾಸಗಿ ಲೇಔಟ್ ನಿರ್ಮಾಣಗೊಂಡಿದೆ. 2013ರಲ್ಲಿ ನಿಂಗಪ್ಪ ದನವಾಡೆ ಎಂಬವರು ಪ್ಲಾಟ್ ನಂ.19ನ್ನು ಖರೀದಿಸುತ್ತಾರೆ. 2018ರಲ್ಲಿ ಅಬ್ದುಲ್ ಅಜೀಜ್ ಕಮದೋಡ ಎಂಬವರಿಗೆ ಈ ನಿವೇಶನ ಮಾರಾಟ ಮಾಡುತ್ತಾರೆ. 2018ರಲ್ಲಿ ಅಬ್ದುಲ್ ಅಜೀಜ್ ಅವರು ಮೌಲಾನಾ ಅಬ್ದುಲ್ ಕಲಾಂ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಸೊಸೈಟಿಗೆ ದಾನವಾಗಿ ನೀಡುತ್ತಾರೆ. ದಾನ ಪಡೆದ ಜಾಗದಲ್ಲಿ 2020ರಲ್ಲಿ ಈ ಟ್ರಸ್ಟ್‌ನವರು ಮಸೀದಿ ನಿರ್ಮಿಸುತ್ತಾರೆ. ಇದು ವಕ್ಫ್ ಬೋರ್ಡ್ ಆಸ್ತಿ ಎಂಬುದಾಗಿ ಮುಸ್ಲಿಂ ಮುಖಂಡರ ವಾದವಾಗಿದೆ. 2022, ಜ.17ರಂದು ಸ್ಥಳೀಯರು ಮಹಾನಗರ ಪಾಲಿಕೆಗೆ ದೂರು ನೀಡುತ್ತಾರೆ. 2022, ಏ.25ರಂದು ಪಾಲಿಕೆ ಆಯುಕ್ತರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. 7 ದಿನಗಳ ಒಳಗಾಗಿ ಮಸೀದಿ ತೆರವುಗೊಳಿಸಲು ನೋಟಿಸ್ ನೀಡಲಾಗಿತ್ತು. ವಸತಿ ಉದ್ದೇಶಿತ ನಿವೇಶನದಲ್ಲಿ ಭೂಬಳಕೆ ಮಾರ್ಗಸೂಚಿ ಉಲ್ಲಂಘನೆ ಆರೋಪ ಕೇಳಿ ಬಂತು.
ಸಾರಥಿ ನಗರದಲ್ಲಿ ನಿವೇಶನಕ್ಕೆಂದು ಅನುಮತಿ ಪಡೆದು ಅನಧಿಕೃತವಾಗಿ ಮಸೀದಿ ನಿರ್ಮಿಸಲಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರ ಗಮನಕ್ಕೂ ತರಲಾಗಿದೆ. ಕಾನೂನು ರೀತಿಯಲ್ಲಿ ಇದನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸೇರಿ ಅದನ್ನು ತೆರವುಗೊಳಿಸುತ್ತೇವೆ.
*ಧನಂಜಯ ಜಾಧವ,
ಅಧ್ಯಕ್ಷರು, ಬಿಜೆಪಿ ಗ್ರಾಮೀಣ ಮಂಡಳ
ಖಾಸಗಿ ಲೇಔಟ್‌ನಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದೆ. ನಂತರ ಮೇಲ್ಮಹಡಿಯಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಿಸಿ ಪ್ರಾರ್ಥನೆ ನಡೆಸಲಾಗುತ್ತಿದೆ. ಈ ಬಗ್ಗೆ ದಾಖಲೆಗಳನ್ನು ಸ್ಥಳೀಯರು ಸಂಗ್ರಹಿಸಿದಾಗ ಅನಧಿಕೃತ ಎಂಬುದಾಗಿ ದೃಢವಾಗಿದೆ. ಸ್ಥಳೀಯ ಶಾಸಕರ ಒತ್ತಡದಿಂದ ಪಾಲಿಕೆ ಆಯುಕ್ತರು ಕಟ್ಟಡ ತೆರವು ಮಾಡುತ್ತಿಲ್ಲ. ವಿಎಚ್‌ಪಿ, ಬಜರಂಗ ದಳ ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ.
*ಸಂಜಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷರು
*ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.