ಹುಬ್ಬಳ್ಳಿ-ಧಾರವಾಡದಲ್ಲಿ ಯುವಜನೋತ್ಸವ ರಂಗು; ಪ್ರಧಾನಿ ಆಗಮನಕ್ಕೆ ವಾಣಿಜ್ಯನಗರಿ ಪುಳಕ

ಝಗಮಗಿಸುತ್ತಿದೆ ಅವಳಿನಗರ

Team Udayavani, Jan 12, 2023, 7:25 AM IST

ಹುಬ್ಬಳ್ಳಿ-ಧಾರವಾಡದಲ್ಲಿ ಯುವಜನೋತ್ಸವ ರಂಗು; ಪ್ರಧಾನಿ ಆಗಮನಕ್ಕೆ ವಾಣಿಜ್ಯನಗರಿ ಪುಳಕ

ಹುಬ್ಬಳ್ಳಿ: ಭಾರತೀಯ ಸಂಸ್ಕೃತಿ, ಪರಂಪರೆ, ಆಚರಣೆ, ಕಲೆ ಹಾಗೂ ಸಾಂಸ್ಕೃತಿಕ ಸಿರಿವಂತಿಕೆ ಲೋಕದ ಅನಾವರಣ, ವಿವಿಧತೆಯಲ್ಲಿ ಏಕತೆ ಭಾವದ ಯುವಶಕ್ತಿ ಸಂಗಮ, ದೇಶದ ಸಾಂಸ್ಕೃತಿಕ ರಾಯಭಾರಿಗಳಂತಿರುವ ಯುವ ಪ್ರತಿಭೆಗಳ ದಿಗ್ದರ್ಶನಕ್ಕೆ ವೇದಿಕೆಯಾಗಲು ಹಾಗೂ ಪ್ರೀತಿಯ ಆತಿಥ್ಯ ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಸಜ್ಜಾಗಿದೆ.

ರಾಷ್ಟ್ರೀಯ ಯುವಜನೋತ್ಸವ ಸಂಭ್ರಮ ಒಂದು ಕಡೆಯಾದರೆ, ಉತ್ಸವಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವಿಕೆ ಮಹಾನಗರವನ್ನು ಪುಳಕಿತಗೊಳ್ಳುವಂತೆ ಮಾಡಿದೆ. ದೇಶದ ಯುವ ಸಾಂಸ್ಕೃತಿಕ ಜಗತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಮೈದಳೆಯಲಿದ್ದು, ರಾಜ್ಯದ ಎರಡನೇ ಹಾಗೂ ಉತ್ತರ ಕರ್ನಾಟಕದ ಮೊದಲ ರಾಷ್ಟ್ರೀಯ ಯುಜನೋತ್ಸವಕ್ಕಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಹಬ್ಬದ ಸಡಗರ ಸೃಷ್ಟಿಯಾಗಿದೆ. ಉತ್ಸವ ಉದ್ಘಾಟನೆಗೆ ಸ್ವತಃ ಪ್ರಧಾನಿ ಮೋದಿ ಪಾಲ್ಗೊಳ್ಳುವಿಕೆ ಸಂಭ್ರಮ-ಸಂತಸ ದುಪ್ಪಟ್ಟುಗೊಳಿಸಿದೆ.

ಅವಳಿ ನಗರದೆಲ್ಲೆಡೆ ಸ್ವಾಗತ ಕೋರುವ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿವೆ. ವಿವಿಧ ಪ್ರಮುಖ ವೃತ್ತಗಳು, ಹಲವು ಕಟ್ಟಡಗಳು ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿವೆ.

ಜ.12-16ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕಾಗಿ ದೇಶ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಕೃತಿಕ ಯುವ ರಾಯಭಾರಿಗಳು ತಂಡಗಳ ರೂಪದಲ್ಲಿ ಅವಳಿನಗರಕ್ಕೆ ಬಂದಿದ್ದು, ಪ್ರತಿಭೆ ಅನಾವರಣಕ್ಕೆ, ನಾಡು, ದೇಶದ ಸಾಂಸ್ಕೃತಿಕ ಹಿರಿಮೆ ಪ್ರದರ್ಶನಕ್ಕೆ ತಾಲೀಮಿನಲ್ಲಿ ತೊಡಗಿದ್ದಾರೆ.

ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಜನ್ಮದಿನ ಅಂಗವಾಗಿ 1995ರಿಂದ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಇಲಾಖೆಯಿಂದ ಪ್ರತಿ ವರ್ಷ ಜ.12-16ರವರೆಗೆ ರಾಷ್ಟ್ರೀಯ ಏಕತಾ ದಿನವಾಗಿ ಯುವಜನೋತ್ಸವ ಆಯೋಜಿಸುತ್ತ ಬಂದಿದೆ. ಆಯಾ ರಾಜ್ಯಗಳು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಉತ್ಸವ ಕೈಗೊಳ್ಳುತ್ತಿವೆ. 2012ರಲ್ಲಿ ಮಂಗಳೂರಿನಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವ ನಡೆದಿತ್ತು. ಸುಮಾರು 5,000ಕ್ಕೂ ಅಧಿಕ ಯುವ ಪ್ರತಿಭೆಗಳು ಪಾಲ್ಗೊಂಡಿದ್ದವು. ಸುಮಾರು ಒಂದು ದಶಕದ ಬಳಿಕ ಇದೀಗ ಜ.12-16ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿದೆ.

ಹುಬ್ಬಳ್ಳಿಯಲ್ಲಿ ಚಾಲನೆ-ಧಾರವಾಡದಲ್ಲಿ ಅನಾವರಣ: 26ನೇ ರಾಷ್ಟ್ರೀಯ ಯುವಜನೋತ್ಸವ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಚಾಲನೆ ಪಡೆಯಲಿದ್ದು, ದೇಶ ಯುವ ಸಾಂಸ್ಕೃತಿಕಲೋಕ ವಿದ್ಯಾನಗರಿ ಧಾರವಾಡದಲ್ಲಿ ಅನಾವರಣಗೊಳ್ಳಲಿದೆ.

ಜ.12ರಂದು ಸಂಜೆ 4 ಗಂಟೆಗೆ ಇಲ್ಲಿನ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಪ್ರತಿ ವರ್ಷದ ರಾಷ್ಟ್ರೀಯ ಯುವಜನೋತ್ಸವ ಒಂದೊಂದು ಧ್ಯೇಯದೊಂದಿಗೆ ಆಚರಣೆಗೊಳ್ಳಲಿದೆ.

ಸಮಾರಂಭಕ್ಕೆ ರೈಲ್ವೆ ಮೈದಾನ ಸಜ್ಜುಗೊಂಡಿದ್ದು, ಸಮಾರಂಭದಲ್ಲಿ ಯುವಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಬೇಕಿದೆ. ಈಗಾಗಲೇ ಸುಮಾರು 40-45 ಸಾವಿರದಷ್ಟು ಯುವಕರು ನೋಂದಣಿ ಮಾಡಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಜಿಲ್ಲಾಡಳಿತ 25 ಸಾವಿರ ಯುವಕರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ. ಪ್ರವೇಶ ಅದೃಷ್ಟ ಪಡೆದವರು ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಪ್ರಧಾನಿಗೆ ಬಿದಿರು ಕಲೆ ಮೂರ್ತಿ ನೀಡಿ ಸನ್ಮಾನ
ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ರಾಷ್ಟ್ರಧ್ವಜ ಸ್ಮರಣಿಕೆ, ಏಲಕ್ಕಿಹಾರ, ಬೀದರ ಬಿದರುಕಲೆ ಮೂರ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದೆ. ಹುಬ್ಬಳ್ಳಿಯ ಬೆಂಗೇರಿ ಹಾಗೂ ಗರಗದಲ್ಲಿ ತಯಾರಿಸಲಾದ ಟೀಕ್‌ವುಡ್‌ ಚೌಕಟ್ಟು ಹೊಂದಿದ ರಾಷ್ಟ್ರಧ್ವಜ ಇರುವ ಸ್ಮರಣಿಕೆ ನೀಡಲಾಗುತ್ತಿದ್ದು, ಹಾವೇರಿಯಲ್ಲಿ ತಯಾರಿಸುವ ಏಲಕ್ಕಿ ಹಾರ ಹಾಕಲಾಗುತ್ತಿದೆ. ಧಾರವಾಡದ ವಿಶೇಷ ಕಸೂತಿ ಕಲೆ ಹೊಂದಿದ ಕೈಮಗ್ಗದ ಶಾಲು, ಬೀದರನ ಬಿದಿರು ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮೂರ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಧಾನಿ ಮೋದಿ ಜ.12ರಂದು ಮಧ್ಯಾಹ್ನ ಹುಬ್ಬಳ್ಳಿಗೆ ಆಗಮಿಸಲಿದ್ದು, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ಸುಮಾರು 8 ಕಿಮೀವರೆಗೆ ರಸ್ತೆಯ ಎರಡೂ ಇಕ್ಕೆಲುಗಳಲ್ಲಿ ನಿಲ್ಲಲಿರುವ ಜನರತ್ತ ಕೈಬೀಸುತ್ತ ಬರಲಿದ್ದು, 2-3 ಕಡೆ ವಾಹನದಿಂದ ಕೆಳಗಿಳಿದು ಜನರ ಬಳಿ ಹೋಗುವ ಸಾಧ್ಯತೆ ಇದೆ.

ವೇದಿಕೆ ಹೇಗಿದೆ?:
ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಸಮಾರಂಭಕ್ಕಾಗಿ ರೈಲ್ವೆ ಮೈದಾನದಲ್ಲಿ 50/40 ಅಡಿ ವಿಸ್ತೀರ್ಣದಲ್ಲಿ ಮುಖ್ಯ ವೇದಿಕೆ ಸಿದ್ಧಪಡಿಸಿದ್ದು, ಪ್ರಧಾನಿ, ಕೇಂದ್ರ ಸಚಿವರು ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಒಟ್ಟು 25 ಜನ ಗಣ್ಯರಿಗೆ ಆಸೀನ ವ್ಯವಸ್ಥೆ ಕಲ್ಪಿಸಲಾಗಿದೆ. ಯುವಕರು ಆಸೀನರಾಗಲು 100/100 ಅಡಿ ವಿಸ್ತೀರ್ಣದ ಐದು ಪೆಂಡಾಲ್‌ ಹಾಕಲಾಗಿದ್ದು, ಸುಮಾರು 5,700ಕ್ಕೂ ಅಧಿಕ ವಿವಿಧ ರಾಜ್ಯಗಳ ಯುವಕರು ಆಸೀನರಾಗಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಸುಮಾರು 25,000 ಯುವಕರಿಗೆ ಅವಕಾಶ ನೀಡಲಾಗುತ್ತಿದ್ದು, ಸಮಾರಂಭಕ್ಕೆ ತೆರಳಲು ಮೂರು ದ್ವಾರಗಳನ್ನು ನಿರ್ಮಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಮೊಳಗಿಸಿದರೆ, ಧಾರವಾಡ ಕಲಕೇರಿಯ ದುರ್ಗಾದೇವಿ ಜಾನಪದ ಜಗ್ಗಲಗಿ ಮೇಳ, ಸಾಗರದ ಬೂದಿಯಪ್ಪ ಡೊಳ್ಳಿನ ತಂಡ, ಶರೇವಾಡದ ವೆಂಕಪ್ಪ ಭಜಂತ್ರಿ ಕರಡಿ ಮಜಲು, ಶಹನಾಯಿ, ಮಲ್ಲಗಂಭ ಪ್ರದರ್ಶನ, ಮಹಾರಾಷ್ಟ್ರದ ಅಹ್ಮದ್‌ ನಗರದ ವಿದ್ಯಾರ್ಥಿಗಳಿಂದ ನೃತ್ಯ-ಯೋಗ, ಉಡುಪಿಯ ಲಕ್ಷ್ಮೀನಾರಾಯಣರಿಂದ ಚಂಡೆ ಮದ್ದಳೆ, ಮೈಸೂರು ತಂಡದ ನಗಾರಿ ಬಡಿತ ಇನ್ನಿತರೆ ಸಾಂಸ್ಕತಿಕ ಕಾರ್ಯಕ್ರಮಗಳು ಪ್ರಧಾನಿ ಎದುರು ಕೆಲವೇ ನಿಮಿಷಗಳವರೆಗೆ ಪ್ರದರ್ಶಗೊಳ್ಳಲಿವೆ.

ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿರುವ ವಿವಿಧ ಯುವ ತಂಡಗಳ ಸಾಂಸ್ಕೃತಿಕ, ಕ್ರೀಡಾ ಪ್ರದರ್ಶನ ಧಾರವಾಡದ ವಿವಿಧ ಕಡೆಗಳಲ್ಲಿ ನಡೆಯಲಿದೆ. ಇದಕ್ಕಾಗಿ ನಾಲ್ಕೈದು ಕಡೆಗಳಲ್ಲಿ ವೇದಿಕೆ ಸಜ್ಜುಗೊಳಿಸಲಾಗಿದೆ. ಒಟ್ಟಾರೆ ಹುಬ್ಬಳ್ಳಿ-ಧಾರವಾಡದಲ್ಲಿ ಐದು ದಿನಗಳವರೆಗೆ ದೇಶದ ಯುವ ಸಾಂಸ್ಕೃತಿಕ ಲೋಕ ತನ್ನದೇ ಪ್ರತಿಭೆಯೊಂದಿಗೆ ನೋಡುಗರನ್ನು ಆಕರ್ಷಿಸಲಿದೆ. ಸಾಂಸ್ಕೃತಿಕ-ಪರಂಪರೆಯ ವಿನಿಮಯವಾಗಲಿದೆ. ದೇಶದ ವಿವಿಧ ಕಡೆಗಳಿಂದ ಬಂದಿರುವ ಅತಿಥಿಗಳಿಗೆ ಉತ್ತರ ಕರ್ನಾಟಕದ ಸವಿಭರಿತ ಊಟೋಪಹಾರದ ಆತಿಥ್ಯಕ್ಕೆ ಪೇಡೆ ಖ್ಯಾತಿಯ ಧಾರವಾಡ ಸಜ್ಜಾಗಿದೆ.

ಎಲ್ಲೆಲ್ಲಿ, ಯಾವ ಕಾರ್ಯಕ್ರಮ?
ಧಾರವಾಡದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವಕ್ಕೆ ವಿವಿಧ ಕಡೆ ವೇದಿಕೆಗಳು ಸಜ್ಜುಗೊಂಡಿವೆ. ಜಾನಪದ ನೃತ್ಯ ಕಾರ್ಯಕ್ರಮ ಸೃಜನಾ ರಂಗಮಂದಿರದಲ್ಲಿ ಜ.13-15ರವರೆಗೆ ನಡೆಯಲಿದ್ದು, ಕೃಷಿ ವಿಶ್ವವಿದ್ಯಾಲಯದಲ್ಲಿ ಜ.12-15ರವರೆಗೆ ಯುವ ಸಮ್ಮೇಳನ, ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣ ಜ.13-15ರವರೆಗೆ ದೇಶಿಯ ಕ್ರೀಡೆಗಳು, ಕೆಸಿಡಿ ಕಾಲೇಜು ಮೈದಾನ ಜ.12-16ರವರೆಗೆ ಆಹಾರ ಮೇಳ, ಕೃಷಿ ವಿಶ್ವವಿದ್ಯಾಲಯ ಜ.13-15ರವರೆಗೆ ಜಾನಪದ ಹಾಡುಗಳು, ಕೆಲಕೇರಿ ಕೆರೆ ಜ.12-16ರವರೆಗೆ ಜಲ-ಸಾಹಸ ಕ್ರೀಡೆಗಳು, ಕರ್ನಾಟಕ ವಿಶ್ವವಿದ್ಯಾಲಯ ಗ್ರೀನ್‌ ಗಾರ್ಡನ್‌ ಜ.12-16ರವರೆಗೆ ಯುವ ಆರ್ಟಿಸ್ಟ್‌ ಶಿಬಿರ, ಕೆಸಿಡಿ ಫುಟ್‌ಬಾಲ್‌ ಮೈದಾನ ಜ.12-16ರವರೆಗೆ ಯುವಕೃತಿ, ಧಾರವಾಡದ ವಿವಿಧ ಕಡೆ ಜ.15ರಂದು ಯೋಗಥಾನ್‌, ವಿವಿಧ ಕಡೆ ಜ.12-16ರವರೆಗೆ ಸಾಹಸಕ್ರೀಡೆ ಕಾರ್ಯಾಗಾರ ಮತ್ತು ಚಟುವಟಿಕೆಗಳು , ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಜ.16ರಂದು ಕೆಸಿಡಿ ಕಾಲೇಜು ಮೈದಾನದಲ್ಲಿ ನಡೆಯಲಿದೆ.

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.